ನಾಲ್ಕು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ: 19ಕ್ಕೂ ಹೆಚ್ಚು ಮಂದಿಯ ಸಾವು
ಬೆಂಗಳೂರು, ಅ. 15– ವಿಜಾಪುರ, ಕಲ್ಬುರ್ಗಿ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆ ಕಳೆದ ಎರಡು ದಿನಗಳಲ್ಲಿ 19ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಅನೇಕ ಕಡೆಗಳಲ್ಲಿ ಮನೆಗಳು ಕುಸಿದಿವೆ. ಬೆಟ್ಟದ ಕಲ್ಲುಗಳು ಜರಿದುಬಿದ್ದು ಸಕಲೇಶಪುರದ ಬಳಿ ರಾಷ್ಟ್ರೀಯ ಹೆದ್ದಾರಿಯ ಸಂಚಾರವೂ ಅಸ್ತವ್ಯಸ್ತವಾಗಿದೆ.
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏರುತ್ತಿದೆ. ಬೀದರ್ ಜಿಲ್ಲೆಯ ಮಾಂಜ್ರಾ ನದಿಯಲ್ಲಿ ಮತ್ತೆ ಪ್ರವಾಹ ಕಾಣಿಸಿಕೊಂಡಿದೆ.
ಕಲ್ಬುರ್ಗಿ ಜಿಲ್ಲೆಯಾದ್ಯಂತ ಮಳೆ ಸತತವಾಗಿ ಮೂರನೆಯ ದಿನಕ್ಕೆ ಮುಂದುವರಿದಿದ್ದು, ಜನರನ್ನು ರಕ್ಷಿಸಲು ಹೆಲಿಕಾಪ್ಟರ್ ಒದಗಿಸುವಂತೆ ಜಿಲ್ಲಾಧಿಕಾರಿ ಸರ್ಕಾರವನ್ನು ಕೋರಿದ್ದಾರೆ.
ಶಾಸಕರನ್ನು ಸೆಳೆಯಲು ದಳದ ಉಭಯ ಬಣಗಳ ಪೈಪೋಟಿ
ಬೆಂಗಳೂರು, ಅ. 15– ರಾಜ್ಯದಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ನಾಯಕತ್ವ ಬದಲಾವಣೆ ಆಗಬೇಕೆಂದು ಭಿನ್ನರು, ಆಗಬಾರದೆಂದು ನಿಷ್ಠರು ಹೀಗೆ ಆಡಳಿತಾರೂಢ ಜನತಾದಳದ ಎರಡೂ ಬಣಗಳು ತಮ್ಮತ್ತ ಶಾಸಕರ ಮನವೊಲಿಸಲು ತೀವ್ರ ಪೈಪೋಟಿ ನಡೆಸಿವೆ.
ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿರುವ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಅವರ ಗುಂಪಿನೊಂದಿಗೆ ಗುರುತಿಸಿ ಕೊಂಡಿರುವ ದಳದ ಶಾಸಕರನ್ನು ಸಂಪರ್ಕಿಸಿ ಅವರ ಮನವೊಲಿಸಿರುವುದಾಗಿ ಜೆ.ಎಚ್.ಪಟೇಲ್ ನಿಷ್ಠರ ಗುಂಪಿನ ವಕ್ತಾರರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.