ಲೋಕಸಭೆಯಲ್ಲಿ ಭಾರಿ ಕೋಲಾಹಲ ವೇದಿಕೆಗೆ ವಿರೋಧಿಗಳ ಮುತ್ತಿಗೆ
ನವದೆಹಲಿ, ಸೆ. 5– ಆಮದು ಲೈಸೆನ್ಸ್ ಹಗರಣದ ಸಂಬಂಧದಲ್ಲಿ ಸ್ವತಂತ್ರ ಪಕ್ಷದ ನಾಯಕ ಪಿಲೂಮೋದಿ ಅವರು ಮಂಡಿಸಿದ್ದ ನಿರ್ಣಯವನ್ನು ಲೋಕಸಭೆ ತಿರಸ್ಕರಿಸಿತು.
ನಿರ್ಣಯ ತಿರಸ್ಕೃತವಾದ ಬಳಿಕ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಕೋಪೋದ್ರಿಕ್ತರಾದ ವಿರೋಧ ಪಕ್ಷದ ಸದಸ್ಯರು ವೇದಿಕೆಯತ್ತ ಧಾವಿಸಿದರು. ಅಧ್ಯಕ್ಷರನ್ನು ಸುತ್ತುವರಿಯಲು ಪ್ರಯತ್ನಿಸಿದರು.
ಸಂಸತ್ ಸದಸ್ಯರನ್ನು ಟೀಕಿಸಿದ ಹಿಂದಿ ವಾರಪತ್ರಿಕೆ ‘ಪ್ರತಿಪಕ್ಷ’ದ ವಿರುದ್ಧ ಕಾಂಗ್ರೆಸ್ ಸದಸ್ಯ ವಸಂತ ಎಸ್. ಅವರು ನಿರ್ಣಯವನ್ನು ಮಂಡಿಸುವುದಕ್ಕೆ ವಿರೋಧ ಪಕ್ಷದವರು ವಿರೋಧ ಮಾಡಿದರು. ಸಂಜೆ 6 ಗಂಟೆಯಾಗಿದ್ದರಿಂದ ಸಭೆಯನ್ನು ಮುಂದೂಡುವಂತೆಯೂ ಅವರು ಒತ್ತಾಯಿಸಿದರು.
ಸಿಮೆಂಟ್, ಉಕ್ಕು ಅಕ್ರಮ ಮಾರಾಟ ಕಂಟ್ರಾಕ್ಟರ್ ವಿರುದ್ಧ ಕ್ರಮ
ಬೆಂಗಳೂರು, ಸೆ. 5– ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡು ಹರಿಜನ ವಿದ್ಯಾರ್ಥಿ ನಿಲಯಗಳಿಗೆ ಸೇರಿದ ಸಿಮೆಂಟ್ ಮತ್ತು ಉಕ್ಕು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಕಂಟ್ರಾಕ್ಟರ್ ವಿರುದ್ಧ ವಿಶ್ವಾಸದ್ರೋಹ ಆಪಾದನೆಯ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ.
ದಾಸ್ತಾನು ಮಳಿಗೆಯಲ್ಲಿ 11 ಟನ್‌ಗಳಷ್ಟು ಉಕ್ಕು ಮತ್ತು 2,902 ಚೀಲ ಸಿಮೆಂಟ್ ಕೊರತೆ ಇದ್ದುದು ಜಾಗೃತ ಆಯೋಗದವರು ನಡೆಸಿದ ತನಿಖೆಯಿಂದ ಗೊತ್ತಾಗಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಎಚ್.ಎಂ. ಚನ್ನಬಸಪ್ಪ ಅವರು ಇಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಅವರಿಗೆ ತಿಳಿಸಿದರು.