ಬೆಂಗಳೂರು, ಆ. 16– ಬೆಂಗಳೂರು ಕಾಲೇಜು ವಿದ್ಯಾರ್ಥಿ ವೃಂದದಲ್ಲಿ ಭಯಾನಕ ವಾತಾವರಣ ಉಂಟಾಗಿ ವಿದ್ಯಾರ್ಥಿ ಮಂಡಲಿಯ ಚುನಾವಣೆ ಸಂಬಂಧದಲ್ಲಿ ಕೆಲವು ವಿದ್ಯಾರ್ಥಿಗಳನ್ನು ಜಜ್ಜಿ, ಪ್ರಜ್ಞಾಹೀನ ಮಾಡಲಾಗಿದ್ದರೂ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಪಕ್ಷೇತರ ಸದಸ್ಯ ಶ್ರೀ ಎಂ.ಸತ್ಯನಾರಾಯಣರಾವ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ಆಪಾದಿಸಿದರು.
‘ಮಹದೇವ ಎಂಬ ನಿಮ್ನವರ್ಗದ ವಿದ್ಯಾರ್ಥಿ ಪ್ರಜ್ಞೆ ಕಳೆದುಕೊಂಡ ಪರಿಸ್ಥಿತಿಯಲ್ಲಿ ಸಿಕ್ಕಿದ. ಕಳೆದ ಶುಕ್ರವಾರ ವೀರಭದ್ರ ಎನ್ನುವ ವಿದ್ಯಾರ್ಥಿಯೂ ಅದೇ ಅವಸ್ಥೆಯಲ್ಲಿ ಬಿದ್ದಿದ್ದ. ದೂರು ಕೊಡುವುದಕ್ಕೂ ವಿದ್ಯಾರ್ಥಿಗಳು ಹೆದರಬೇಕಾದ ಪರಿಸ್ಥಿತಿ ಇದೆ. ಗೂಂಡಾಗಳು ಭಯಾನಕ ವಾತಾವರಣ ಮೂಡಿಸಿದ್ದಾರೆ. ಯಾವ ವಿದ್ಯಾರ್ಥಿ ಚುನಾವಣೆಗೆ ನಿಲ್ಲುತ್ತಾನೆ ಅವನಿಗೆ ಕಷ್ಟ. ಸರ್ಕಾರ ಏನು ಮಾಡುತ್ತಿದೆ?’ ಎಂದು ಪ್ರಶ್ನಿಸಿದರು.
ಕದನ ವಿರಾಮಕ್ಕೆ ಟರ್ಕಿ ಆಜ್ಞೆ
ಅಂಕಾರಾ, ಆ. 16– ಸೈಪ್ರಸ್‌ನಲ್ಲಿ ಕದನ ವಿರಾಮಕ್ಕೆ ಟರ್ಕಿ ಸರ್ಕಾರ ಆಜ್ಞೆ ಮಾಡಿದೆ ಎಂದು ಪ್ರಧಾನಿ ಬುಲೆಂಟ್ ಇಸಿವಿಟ್ ಅವರು ಇಂದು ಇಲ್ಲಿ ಪ್ರಕಟಿಸಿದರು.
ಕದನ ವಿರಾಮವು ಗ್ರೀನ್‌ವಿಚ್ ವೇಳೆ 4.00 ಗಂಟೆಗೆ (ಭಾರತೀಯ ಕಾಲಮಾನ 9.30 ಗಂಟೆ) ಜಾರಿಗೆ ಬರುವುದು.
ಸೈಪ್ರಸ್‌ನಲ್ಲಿ ಟರ್ಕಿ ಪಡೆಗಳು ಮತ್ತಷ್ಟು ಜಯ ಗಳಿಸಿವೆ ಎಂಬ ಸುದ್ದಿ ಹೊರ
ಬೀಳುತ್ತಿದ್ದಂತೆಯೇ ಕದನ ವಿರಾಮದ ನಿರ್ಧಾರ ಕೈಗೊಳ್ಳಲಾಯಿತೆಂದು ಟರ್ಕಿ ಪ್ರಧಾನಿ ತಿಳಿಸಿದರು.