ಅಸ್ಸಾಂನಲ್ಲಿ ಹಸಿವಿಗೆ ನೂರು ಮಂದಿ ಬಲಿ
ಗೌಹಾಟಿ, ಆ. 13– ಈ ವರ್ಷ ಗೋಲ್ಟಾರ ಜಿಲ್ಲೆಯ ಧುಬ್ರಿ ಸಬ್ ಡಿವಿಜನ್ನಿನಲ್ಲಿ ಕನಿಷ್ಠಪಕ್ಷ ನೂರು ಮಂದಿ ಹೊಟ್ಟೆಗೆ ಅನ್ನವಿಲ್ಲದೆ ಉಪವಾಸದಿಂದ ಸತ್ತಿದ್ದಾರೆಂದು ಅಸ್ಸಾಂ ವಿಧಾನಸಭೆಯ ಪಕ್ಷೇತರ ಸದಸ್ಯ ಗೌಸುದ್ದೀನ್ ಅಹ್ಮದ್ ತಿಳಿಸಿದ್ದಾರೆ.
ಈ ಪ್ರದೇಶವನ್ನು ತತ್‌ಕ್ಷಣ ಕ್ಷಾಮಪೀಡಿತ ಪ್ರದೇಶವೆಂದು ಘೋಷಿಸಿ ಯುದ್ಧ ಸಿದ್ಧತೆಯೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅವರು ಮುಖ್ಯಮಂತ್ರಿ ಎಸ್.ಸಿ. ಸಿನ್ಹಾ ಅವರಿಗೆ ಇಂದು ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಪಡಿಸಿದ್ದಾರೆ.
ಮದುವೆ, ಚುನಾವಣೆ ಪ್ರಚಾರದಲ್ಲಿ ಡೀಸೆಲ್ ಬಳಕೆಗೆ ನಿರ್ಬಂಧ?
ನವದೆಹಲಿ, ಆ. 13– ಮದುವೆ ಸಮಾರಂಭ, ಚುನಾವಣೆ ಪ್ರಚಾರ ಮುಂತಾದ ಅನವಶ್ಯ ಸಂದರ್ಭಗಳಲ್ಲಿ ವಿದ್ಯುತ್ ಉತ್ಪಾದನೆಗಾಗಿ ಡೀಸೆಲ್ ಎಣ್ಣೆ ಬಳಸುವುದನ್ನು ನಿರ್ಬಂಧಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರ್ಕಾರ ಆಲೋಚಿಸುತ್ತಿರುವುದಾಗಿ ಲೋಕಸಭೆಯಲ್ಲಿ ಇಂದು ಪ್ರಶ್ನೋತ್ತರ ಕಾಲದಲ್ಲಿ ಪೆಟ್ರೋಲಿಯಂ ಮತ್ತು ರಾಸಾಯನಿಕ ವಸ್ತುಗಳ ಖಾತೆ ಸಚಿವ ಡಿ.ಕೆ. ಬರೂವಾ ಅವರು ತಿಳಿಸಿದರು.