ನವದೆಹಲಿ, ಆ. 30– ಕೃಷ್ಣಾ ನೀರಿನ ಹಂಚಿಕೆಯ ವಿವಾದದ ಬಗ್ಗೆ ಪಂಚಾಯ್ತಿ ನೀಡುವ ಅಂತಿಮ ತೀರ್ಪನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಂಗೀಕರಿಸಬೇಕು ಎಂದು ನೀರಾವರಿ ಮತ್ತು ವಿದ್ಯುತ್ ಸಚಿವ ಕೆ.ಸಿ. ಪಂತ್ ಇಂದು ರಾಜ್ಯಸಭೆಯಲ್ಲಿ ಸೂಚಿಸಿದ್ದಾರೆ.
ಪಂಚಾಯ್ತಿಯ ತೀರ್ಪನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವಂತೆ ಅಗತ್ಯ ವಾತಾವರಣವನ್ನು ಉಂಟು ಮಾಡುವಂತೆ ಅವರು ಮೂರು ರಾಜ್ಯಗಳ ಸಂಸತ್ ಸದಸ್ಯರನ್ನು ಕೋರಿದರು.
ಪಂಚಾಯ್ತಿಯ ಕಲಾಪದಿಂದ ಕರ್ನಾಟಕದ ಪ್ರತಿನಿಧಿಗಳು ಹೊರ ಹೋದರೆಂಬ ವರದಿಗಳ ಬಗ್ಗೆ ಗಮನ ಸೆಳೆವ ಮಂಡನೆಯ ಚರ್ಚೆಗೆ ಉತ್ತರಿಸುತ್ತಿದ್ದ ಸಚಿವ ಪಂತ್, ತಾವು ಶೀಘ್ರವೇ ಸಂಬಂಧಪಟ್ಟ ರಾಜ್ಯಗಳ ಸಂಸತ್ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.
ಶಿಕ್ಷಕರ ನಿವೃತ್ತಿ ವಯಸ್ಸು ಇಳಿಸುವ ಸರ್ಕಾರದ ಅಧಿಕಾರಕ್ಕೆ ಹೈಕೋರ್ಟ್ ಬಹುಮತದ ಸಮರ್ಥನೆ
ಬೆಂಗಳೂರು, ಆ. 30– ಶಿಕ್ಷಕರ ನಿವೃತ್ತಿ ವಯಸ್ಸನ್ನು 58ರಿಂದ 55ಕ್ಕೆ ಇಳಿಸಲು ರಾಜ್ಯ ಸರ್ಕಾರಕ್ಕೆ ಇರುವ ಹಕ್ಕನ್ನು ಕರ್ನಾಟಕ ಹೈಕೋರ್ಟ್ ಸಮರ್ಥಿಸಿದೆ.
ಹೈಕೋರ್ಟಿನ ಪೂರ್ಣ ಪೀಠದ ನ್ಯಾಯಾಧೀಶರು ಈ ಬಹುಮತದ ತೀರ್ಪನ್ನು ನೀಡಿದ್ದಾರೆ.
ರಾಜ್ಯ ಪುನರ್‌ರಚನಾ ಶಾಸನದನ್ವಯ ಶಿಕ್ಷಕರ ನಿವೃತ್ತಿ ವಯಸ್ಸನ್ನು ಇಳಿಸಲು ರಾಜ್ಯ ಸರ್ಕಾರಕ್ಕೆ ಇರುವ ಹಕ್ಕನ್ನು ಸಮರ್ಥಿಸಿ ನ್ಯಾಯ ಮೂರ್ತಿಗಳಾದ ಬಿ. ವೆಂಕಟಸ್ವಾಮಿ ಮತ್ತು ಕೆ. ಜಗನ್ನಾಥ ಶೆಟ್ಟಿ ತೀರ್ಪು ನೀಡಿದ್ದಾರೆ.