ಪ್ರಜಾವಾಣಿ 25 ವರ್ಷಗಳ ಹಿಂದೆ| ಬುಧವಾರ, 28–1–1998

ವಿಶ್ವಾಸಮತ ಗಳಿಸಿದ ಪಟೇಲ್; ಕಾಂಗ್ರೆಸ್, ಬಿಜೆಪಿ ಸಭಾತ್ಯಾಗ
ಬೆಂಗಳೂರು, ಜ. 27– ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ 20 ತಿಂಗಳ ಜೆ.ಎಚ್. ಪಟೇಲ್ ನೇತೃತ್ವದ ರಾಜ್ಯ ಜನತಾ ದಳ ಸರ್ಕಾರ ಇಂದು ವಿಧಾನಸಭೆಯಲ್ಲಿ 135–0 ಮತಗಳಿಂದ ವಿಶ್ವಾಸ ಮತ ಗಳಿಸಿತು.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ವಿಶ್ವಾಸಮತ ಕೋರಿ ಮುಖ್ಯಮಂತ್ರಿ ಪಟೇಲ್ ಅವರು ಮಂಡಿಸಿದ ನಿರ್ಣಯವನ್ನು ಸಭಾಧ್ಯಕ್ಷ ರಮೇಶ್ ಕುಮಾರ್ ಮತಕ್ಕೆ ಹಾಕಿದಾಗ 135 ಸದಸ್ಯರು ಎದ್ದು ನಿಂತು ನಿರ್ಣಯಕ್ಕೆ ಬೆಂಬಲ ಸೂಚಿಸಿದರು. ಸಭಾಧ್ಯಕ್ಷರು ಫಲಿತಾಂಶ ಪ್ರಕಟಿಸುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಆದರೆ, ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನವೇ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು, ‘ಆಡಳಿತ ಪಕ್ಷದೊಳಗೆ ನಡೆದಿರುವ ರಾಜಕೀಯ ಗೊಂದಲಗಳನ್ನು ನಿವಾರಿಸಿಕೊಳ್ಳಲು ಹಾಗೂ ಚುನಾವಣೆಯ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಅಧಿವೇಶನ ಕರೆದು ಸದನವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.
ಸಚಿವ ಎಸ್.ಡಿ. ಜಯರಾಂ ನಿಧನ
ಬೆಂಗಳೂರು, ಜ. 27– ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಎಸ್.ಡಿ. ಜಯರಾಂ ಅವರು ಹೃದಯಾಘಾತದಿಂದ ಇಂದು ಬೆಳಗಿನ ಜಾವ ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.