ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವ್ಯಕ್ತಿ ಚಿತ್ರ: ‘ಶಾಸನರತ್ನಾಕರ’ ದೇವರಕೊಂಡಾರೆಡ್ಡಿ

Published 9 ಜೂನ್ 2024, 0:56 IST
Last Updated 9 ಜೂನ್ 2024, 0:56 IST
ಅಕ್ಷರ ಗಾತ್ರ

ದೇವರಕೊಂಡಾರೆಡ್ಡಿ, ಶಾಸನಾಧ್ಯಯನ ಕ್ಷೇತ್ರದಲ್ಲಿ ಪದೇ ಪದೇ ನಮಗೆ ಎದುರಾಗುವ ಹೆಸರು. ಲಿಪಿಶಾಸ್ತ್ರ, ಹಸ್ತಪ್ರತಿಶಾಸ್ತ್ರ, ವಾಸ್ತು ಮತ್ತು ಮೂರ್ತಿಶಿಲ್ಪ, ಪ್ರಾಚೀನ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ, ಸಾಂಸ್ಕೃತಿಕ ಅಂಶಗಳ ಬಗ್ಗೆ ನಿಖರವಾಗಿ ಮಾತಾಡಬಲ್ಲವರು; ತಮ್ಮ ಅಧ್ಯಯನದ ಫಲಿತಗಳನ್ನು ಆಲೋಚನೆಗಳನ್ನು ನೇರವಾಗಿ ದಾಖಲಿಸಿದವರು. ಸಂಶೋಧನೆ ಎಂಬುದು ಅಭಿಪ್ರಾಯಗಳ ಮೊತ್ತವಲ್ಲ. ಮೂಲ ದಾಖಲೆಗಳನ್ನು ಅಧ್ಯಯನ ಮಾಡಿದ ಫಲಿತ ಎಂಬುದನ್ನು ಇವರ ಲೇಖನಗಳಲ್ಲಿ ಕಾಣಬಹುದು.

ಅಧ್ಯಯನಾಸಕ್ತರನ್ನು ಹುರಿದುಂಬಿಸಿ, ಅವರಲ್ಲಿನ ಸುಪ್ತಪ್ರತಿಭೆಗೆ ಮೆರಗನ್ನು ನೀಡಬಲ್ಲ ಔದಾರ್ಯಶೀಲಿ ದೇವರಕೊಂಡಾರೆಡ್ಡಿ. ಜಿ.ಎಸ್. ದೀಕ್ಷಿತ್, ಸೂರ್ಯನಾಥ ಕಾಮತ್, ಎಂ.ಬಿ. ಪಾಟೀಲ್ ಮುಂತಾದವರು ನೆಲೆಗೊಳಿಸಿದ ಕರ್ನಾಟಕ ಇತಿಹಾಸ ಅಕಾಡೆಮಿಯನ್ನು ಈಗ ಸಮರ್ಥವಾಗಿ ಮುನ್ನಡೆಸುತ್ತಿರುವ ಸಾರಥಿ. ಕರೊನಾ ಕಾಲದಲ್ಲಿಯೂ ಇತಿಹಾಸ ಅಕಾಡೆಮಿಯನ್ನು ಜೀವಂತವಾಗಿಟ್ಟರು ರೆಡ್ಡಿ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶಾಸನ ಮತ್ತು ಕರ್ನಾಟಕ ಇತಿಹಾಸ ಕ್ಷೇತ್ರದಲ್ಲಿ ಕೃಷಿ ಮಾಡಿದ ಹಿರಿಯರ ಜೀವನ ಮತ್ತು ಅವರ ಸಾಧನೆಗಳ ಬಗ್ಗೆ ನಿರಂತರವಾಗಿ ಆನ್‌ಲೈನ್‌ ಉಪನ್ಯಾಸಗಳನ್ನು ಏರ್ಪಡಿಸಿದರು. ಇಂದಿನ ಸಂಶೋಧಕರಿಗೆ ಹಿಂದಿನವರ ಕೃಷಿ, ಸಾಧನೆಗಳ ಪರಿಚಯವಿರಬೇಕು ಎಂಬುದಾಗಿ ಬಲವಾಗಿ ನಂಬಿದವರು.
ದೇವರಕೊಂಡಾರೆಡ್ಡಿ ನಡೆದು ಬಂದ ದಾರಿ ನೇರವಾದುದು; ದಿಟ್ಟವಾದುದು, ಯಾವ ವಿಷಯದಲ್ಲಿಯೂ ‘ರಾಜಿ’ ಎಂಬ ಪ್ರಶ್ನೆಯೇ ಇಲ್ಲ. ತನ್ನ ಕೆಲಸದ ಬಗ್ಗೆ ಅಷ್ಟರಮಟ್ಟಿಗೆ ತಾದಾತ್ಮ್ಯ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎ.ಎಂ. ಅಣ್ಣಿಗೇರಿಯವರ ನಂತರ ಶಾಸನ ತರಗತಿಗಳನ್ನು ನಡೆಸಿದರು. ಅಪಾರವಾದ ಸಂಖ್ಯೆಯಲ್ಲಿ ಶಾಸನತಜ್ಞರನ್ನು ತಯಾರು ಮಾಡಿದ ಅಧ್ಯಾಪಕ. ಅಲ್ಲಿನ ಸಂಶೋಧನಾ ವಿಭಾಗಕ್ಕೆ ಲಕ್ಷ್ಮಣ ತೆಲಗಾವಿ ಮುಂತಾದವರೊಡನೆ ವಿಶೇಷ ಸ್ಥಾನ ದೊರೆಯುವಂತೆ ಮಾಡಿದರು.

ಅನಂತರ ಕೆಲವು ಕಾಲ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ರೆಡ್ಡಿಯವರ ಸಾಮರ್ಥ್ಯವನ್ನು ಗುರುತಿಸಿದ್ದ ಸೂರ್ಯನಾಥ ಕಾಮತರು ಗೆಝಿಟಿಯರ್‌ಗೆ ದೇವರಕೊಂಡಾರೆಡ್ಡಿ ಅವರ ಎರವಲು ಸೇವೆಯನ್ನು ಪಡೆದರು. ಅಲ್ಲಿ ಅವರು ಗಳಿಸಿದ ಅನುಭವ ಅವರನ್ನು ಉತ್ತಮ ಸಂಶೋಧಕನನ್ನಾಗಿ ರೂಪಿಸಿತು. ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ ನಂತರ ಕುರ್ಚಿ ಮೇಜಿನ ಸಂಶೋಧನೆಗಿಂತ ಕ್ಷೇತ್ರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಸಹೋದ್ಯೋಗಿಗಳನ್ನು ಕಾರ್ಯಪ್ರವೃತ್ತರನ್ನಾಗಿ ಮಾಡಿದರು. ಇದರ ಫಲವೇ ಕನ್ನಡ ವಿಶ್ವವಿದ್ಯಾಲಯದ ಶಾಸನ ಸಂಪುಟಗಳು.

ಶಾಸನ ಸಂಪುಟಗಳ ಪರಿಕಲ್ಪನೆ ರೆಡ್ಡಿ ಅವರದ್ದು, ಸಂಪುಟದಿಂದ ಸಂಪುಟಕ್ಕೆ ಆ ಪರಿಕಲ್ಪನೆ ಗಟ್ಟಿಯಾಯಿತು. ಪ್ರತಿ ಸಂಪುಟಕ್ಕೂ ಅವರು ದೀರ್ಘವಾದ ಪ್ರಸ್ತಾವನೆಯನ್ನು ಬರೆದಿದ್ದಾರೆ. ಈ ಪ್ರಸ್ತಾವನೆಗಳು ಆಯಾ ಸಂಪುಟಗಳಲ್ಲಿ ಪ್ರಕಟವಾದ ಶಾಸನಗಳ ನಿಶಿತ ವಿಶ್ಲೇಷಣೆಯಾಗಿದೆ. ಮಿಗಿಲಾಗಿ ಆಯಾ ಜಿಲ್ಲೆಗಳ ಸಮಗ್ರ ಇತಿಹಾಸವನ್ನು ಕಟ್ಟಿಕೊಟ್ಟಿವೆ. ಕನ್ನಡ ಶಾಸನಗಳ ಸಮಗ್ರ ಸಂಕಲನವಾಗಬೇಕಾದರೆ ಹೊರ ರಾಜ್ಯಗಳಲ್ಲಿನ ಶಾಸನಗಳ ಸಂಕಲನವೂ ಆಗಬೇಕು ಎಂಬುದನ್ನು ಗುರುತಿಸಿದರು. ಈ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯದ ಹೊರಗಿನ ವಿದ್ವಾಂಸರಿಂದ ತಮಿಳುನಾಡಿನ ಕನ್ನಡ ಶಾಸನಗಳು, ಆಂಧ್ರಪ್ರದೇಶದ ಕನ್ನಡ ಶಾಸನಗಳು ಮತ್ತು ಮಹಾರಾಷ್ಟ್ರದ ಕನ್ನಡ ಶಾಸನಗಳು ಎಂಬ ಶಾಸನ ಸಂಪುಟಗಳನ್ನು ಕನ್ನಡ ವಿಶ್ವವಿದ್ಯಾಲಯದ ಮೂಲಕ ಹೊರತಂದರು.

‘ದಕ್ಷಿಣ ಕರ್ನಾಟಕದಲ್ಲಿ ಶಾಸನಗಳನ್ನು ಹೊರತಂದ ಬಿ.ಎಲ್. ರೈಸ್ ಅವರಂತೆ ಉತ್ತರ ಕರ್ನಾಟಕದ ಶಾಸನಗಳನ್ನು ಹೊರತಂದ  ಕೀರ್ತಿ ದೇವರಕೊಂಡಾರೆಡ್ಡಿ ಅವರಿಗೆ ಸಲ್ಲುತ್ತದೆ. ರೈಸ್ ಅವರ ಎಪಿಗ್ರಾಫಿಯ ಕರ್ನಾಟಕ ಸಂಪುಟಗಳಂತೆ ಇವರ ಕನ್ನಡ ಯೂನಿವರ್ಸಿಟಿ ಎಪಿಗ್ರಾಫಿಕಲ್ ಸೀರೀಸ್ ಮೈಲಿಗಲ್ಲು ಎನಿಸಿದೆ. ಶಾಸನ ಪ್ರಕಟಣೆಗೆ ಸಂಬಂಧಿಸಿದಂತೆ ಇವರದು ಬಿ.ಎಲ್. ರೈಸ್ ಮಾದರಿಯ ಕೆಲಸವೆಂದು ಮನವರಿಕೆಯಾಗುತ್ತದೆ’ ಎಂಬುದಾಗಿ ದೇವರಕೊಂಡಾರೆಡ್ಡಿ ಅವರ ಸಾಧನೆಯನ್ನು ಎಂ.ಎಂ. ಕಲಬುರ್ಗಿ ಪ್ರಶಂಸೆ ಮಾಡಿದ್ದಾರೆ.

ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೆ.ಆರ್. ಗಣೇಶ್ ಅವರೊಂದಿಗೆ ಸಂಪಾದಿಸಿ ಪ್ರಕಟಿಸಿರುವ ‘ಶಾಸನ ಪದ್ಯಸಿರಿ’ ಎಂಬ ಶಾಸನಗಳ ಸಂಕಲನ ಆರ್. ನರಸಿಂಹಾಚಾರ್ಯರ ಕನ್ನಡ ಶಾಸನ ಪದ್ಯಮಂಜರಿಯ ನಂತರ ಬಂದ ಮಹತ್ವದ ಸಂಕಲನ. ಇತ್ತೀಚೆಗೆ ಕರ್ನಾಟಕದ ಜೈನಶಾಸನಗಳನ್ನು ಐದು ಸಂಪುಟಗಳಲ್ಲಿ ಸಂಪಾದಿಸಿದ್ದಾರೆ.
ಈ ಎಲ್ಲಾ ಕೆಲಸಗಳನ್ನು ಮಾಡುವಲ್ಲಿ ಸಹೋದ್ಯೋಗಿಗಳ, ಇತರ ಸಂಶೋಧಕರ ನೆರವನ್ನು ರೆಡ್ಡಿಯವರು ಪಡೆದಿದ್ದಾರೆ. ಯಾರ ಶ್ರಮವನ್ನು ತನ್ನದೆಂದು ಬಿಂಬಿಸಿಲ್ಲ. ‘ಕ್ರೆಡಿಟ್’ ಯಾರಿಗೆ ಸಲ್ಲಬೇಕೋ ಅವರಿಗೆ ಸಲ್ಲಿಸಿದ್ದಾರೆ.

ಗಂಗರ ರಾಜಕೀಯ, ಸಾಮಾಜಿಕ, ಮೂರ್ತಿ ಮತ್ತು ವಾಸ್ತುಶಿಲ್ಪಗಳ ಬಗೆಗಿನ ಇವರ ಅಧ್ಯಯನ ಒಂದು ಮೈಲುಗಲ್ಲು. ಹಾಗೆಯೇ ‘ಲಿಪಿಯ ಹುಟ್ಟು ಮತ್ತು ಬೆಳವಣಿಗೆ’ ಎಂಬ ಇವರ ಕೃತಿ ಸಮಗ್ರವಾಗಿದ್ದು ಲಿಪಿಯ ಬಗ್ಗೆ ಒಳನೋಟಗಳನ್ನು ಹೊಂದಿದೆ. ಕನ್ನಡ ಶಾಸನಗಳಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥಕೋಶವನ್ನು ಇವರು ರಚಿಸಿದ್ದು, ಅದು ಪ್ರಕಟವಾಗಬೇಕಾಗಿದೆ. ಈ ಪುಸ್ತಕ ರಚನೆಯ ಸಂದರ್ಭದಲ್ಲಿ ತಾವು ಬಳಸಿಕೊಂಡ ಮುಖ್ಯ ಆಕರ ಗ್ರಂಥಗಳ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ.

ಶಾಸನ ಕ್ಷೇತ್ರದಲ್ಲಿ ಮಾತ್ರವಲ್ಲ ಹಸ್ತಪ್ರತಿಶಾಸ್ತ್ರದಲ್ಲಿಯೂ ಇವರ ಸಾಧನೆ ಗಣನೀಯವಾದುದು. ಶಾಸನಗಳ ಕ್ಷೇತ್ರಕಾರ್ಯ ಮಾಡುವಾಗ ಇವರು ಸಂಪಾದಿಸಿದ ಅಪರೂಪದ ಕೃತಿ ಕೆಳದಿಯ ದೊರೆ ಬಸವರಾಜನ ‘ಕಾಳಿಕಾ ಪುರಾಣ’. ಇದು ಇನ್ನೂ ಬೆಳಕಿಗೆ ಬರಬೇಕಾಗಿದೆ. ಈ ಕೃತಿಯಲ್ಲಿ ಕರ್ನಾ ಟಕದ ಜನಜೀವನದ ಬಗ್ಗೆ ದೊರೆಯುವ ಐತಿಹಾಸಿಕ ಅಂಶಗಳನ್ನು ವಿಶ್ಲೇಷಿಸಿ ಸಂಪ್ರಬಂಧ ಬರೆದಿದ್ದಾರೆ.

ಇವರು ಬರೆದಿರುವ ಸಂಪ್ರಬಂಧಗಳು ಅನೇಕ ಪ್ರತಿಯೊಂದು ಸಂಪ್ರಬಂಧವೂ ವಿಶಿಷ್ಟವಾದದು. ಈ ಎಲ್ಲವೂಗಳಲ್ಲಿ ರೆಡ್ಡಿಯವರ ವ್ಯಾಪಕವಾದ ನಿಶಿತವಾದ ಅಧ್ಯಯನದ ಛಾಪು ಎದ್ದುಕಾಣುತ್ತದೆ.
ತಮ್ಮ ಸಂಪ್ರಬಂಧಗಳ ಬಗ್ಗೆ ಎಷ್ಟು ಮುತುವರ್ಜಿ ವಹಿಸುತ್ತಾರೆಯೋ, ಅಷ್ಟೇ ಮುತುವರ್ಜಿಯಿಂದ ವಿದ್ಯಾರ್ಥಿ ಸಂಶೋಧಕರ ಲೇಖನಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ.

ನಿರೂಪಿಸುವ ವಿಷಯದ ಎಲ್ಲ ಮಗ್ಗುಲುಗಳನ್ನು ಖಚಿತವಾಗಿ ನಿರೂಪಿಸುವ ರೆಡ್ಡಿಯವರ ಗಮನ ಕೇವಲ ಸತ್ಯದ ಕಡೆಗೆ. ಪ್ರತಿಯೊಂದನ್ನು ತನ್ನ ಮೂಗಿನ ನೇರಕ್ಕೆ ನೋಡುವ ಹಠವಾದಿಯಲ್ಲ. ಮುಕ್ತ ಮನಸ್ಸಿನ ಸಗಟು ವ್ಯಕ್ತಿ. ಗೆಳೆಯರ, ವಿದ್ಯಾರ್ಥಿಗಳ ಅಗತ್ಯಗಳನ್ನು ತಾನೇ ಅರಿತು ಸಹಾಯ ಮಾಡಿ ಅದು ತೀರಾ ಸಹಜಕ್ರಿಯೆ ಎಂಬಂತೆ ಕೈಕೊಡವಿಗೊಂಡು ಮುನ್ನೆಡೆಯುವ ನಿರ್ಲಿಪ್ತ. ಈ ಗುಣಗಳೇ ಆತನ ಸಾನ್ನಿಧ್ಯವನ್ನು ಮಧುರವಾಗಿಸುತ್ತದೆ.

ದೇವರಕೊಂಡಾರೆಡ್ಡಿ ನಿತ್ಯ ವಿದ್ಯಾರ್ಥಿ. ಅಂದಿನಿಂದ ಇಂದಿನವರೆಗೆ ಅವರ ಅಧ್ಯಯನ ನಿಷ್ಠೆ ಹಸಿರಾಗಿಯೇ ಉಳಿದಿದೆ. ಎಪ್ಪತ್ತೈದು ವಸಂತಗಳನ್ನು ಕಂಡ ಈ ಗುಣಮಧುರ ಈಗ ಶಾಸನರತ್ನಾಕರನಾಗಿದ್ದಾನೆ. ಆತನ ಜ್ಞಾನಯಜ್ಞ ಅವಿರತವಾಗಿ ಸಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT