ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಾತಶತ್ರುವಿನ ಹೆಜ್ಜೆ ಗುರುತುಗಳು

ವಾಜಪೇಯಿ ನಡೆದು ಬಂದ ಹಾದಿ
Last Updated 16 ಆಗಸ್ಟ್ 2018, 16:27 IST
ಅಕ್ಷರ ಗಾತ್ರ

ಐದು ದಶಕಗಳ ಕಾಲ ಸಂಸತ್ತನ್ನು ಪ್ರತಿನಿಧಿಸಿರುವ ಹೆಗ್ಗಳಿಕೆ ಅವರದು. ಭಾರತೀಯ ರಾಜಕಾರಣದ ಭೀಷ್ಮ, ಅಜಾತಶತ್ರು, ಅಪ್ಪಟ ರಾಷ್ಟ್ರಪ್ರೇಮಿ, ಅತ್ಯುತ್ತಮ ಸಂಸದೀಯಪಟು, ವಿಶ್ವ ಕಂಡ ಅತ್ಯುತ್ತಮ ನಾಯಕ, ವಾಗ್ಮಿ, ಕವಿ, ಶಾಂತಿಧೂತ, ಅಂತಃಕರಣದ ಹೃದಯವಂತ....ಹೀಗೆ ನಾನಾ ಬಗೆಯಲ್ಲಿ ಬಣ್ಣಿಸಲ್ಪಡುವ ಅಟಲ್‌ ಬಿಹಾರಿ ವಾಜಪೇಯಿ ಅವರ ಬುದುಕಿನ ಮೈಲುಗಲ್ಲಿನ ಕಿರು ನೋಟ.

ದೇಶದಲ್ಲಿ ಮೂರು ಬಾರಿ ಪ್ರಧಾನಿ ಹುದ್ದೆಗೆ ಏರಿದ ಕೀರ್ತಿ ಅಟಲ್‌ ಬಿಹಾರಿ ವಾಜಪೇಯಿ ಅವರದ್ದು. ಒಮ್ಮೆ 13 ದಿನಕ್ಕೆ ಅಧಿಕಾರ ಕಳೆದುಕೊಂಡರೆ, ಇನ್ನೊಮ್ಮೆ 13 ತಿಂಗಳಿಗೆ ಅಧಿಕಾರ ಕಳೆದುಕೊಂಡರು. 3ನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿದ ಅವರು, ಐದು ವರ್ಷ ಪೂರ್ಣ ಅಧಿಕಾರ ನಡೆಸಿದರು. ಭಾರತವನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

1996ರ ಮೇನಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ವಾಜಪೇಯಿ ಅವರಿಗೆ ಅಂದಿನ ರಾಷ್ಟ್ರಪತಿ ಎಸ್.ಡಿ.ಶರ್ಮಾ ಅವರು ಪ್ರಮಾಣ ವಚನ ಬೋಧಿಸಿದ್ದರು
1996ರ ಮೇನಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ವಾಜಪೇಯಿ ಅವರಿಗೆ ಅಂದಿನ ರಾಷ್ಟ್ರಪತಿ ಎಸ್.ಡಿ.ಶರ್ಮಾ ಅವರು ಪ್ರಮಾಣ ವಚನ ಬೋಧಿಸಿದ್ದರು

ಸಂಘಪರಿವಾರದ ನೆಲೆಯಿಂದ ಬಂದಿದ್ದರೂ, ಹಿಂದುತ್ವವನ್ನೇ ಜಪಿಸುವ ಬಿಜೆಪಿಯ ನಿಷ್ಠಾವಂತ ಹುರಿಯಾಳು ಆಗಿದ್ದರೂ ಅವರು ಬದುಕಿನ ಉದ್ದಕ್ಕೂ ಜಾತ್ಯತೀತ ಮತ್ತು ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದರು.

ಕಾರ್ಯಕ್ರಮವೊಂದರಲ್ಲಿ ವಾಜಪೇಯಿ
ಕಾರ್ಯಕ್ರಮವೊಂದರಲ್ಲಿ ವಾಜಪೇಯಿ

ವಾಜಪೇಯಿ ನೇರನಡೆ ನುಡಿಗೂ ಹೆಸರಾಗಿದ್ದರು. ಗುಜರಾತ್‌ ಕೋಮುಗಲಭೆ ವೇಳೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ‘ರಾಜಧರ್ಮದ ಪಾಠ’ ಹೇಳಿದ್ದು ಇಡೀ ದೇಶದಾದ್ಯಂತ ಚರ್ಚೆಗೂ, ಮೆಚ್ಚುಗೆಗೂ ಕಾರಣವಾಗಿತ್ತು. ಬ್ರಹ್ಮಚರ್ಯದ ಬಗ್ಗೆ ಮಾತು ಬಂದಾಗ, ‘ನಾನು ಬ್ರಹ್ಮಚಾರಿಯಲ್ಲ, ಅವಿವಾಹಿತ ಅಷ್ಟೆ’ ಎಂದು ವಾಯಪೇಯಿ ಹೇಳಿದ್ದೂ ಜನರ ಮನಸಿನಲ್ಲಿ ಇನ್ನೂ ಹಚ್ಚಹಸಿರಾಗಿದೆ. ಇದಕ್ಕಾಗಿಯೇ ಅವರ ಬಗ್ಗೆ ಅವರ ಸಮಕಾಲಿನ ರಾಜಕಾರಣಿಗಳು ‘ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ’ ಎಂದು ಪದೇ ಪದೇ ಹೇಳಿದ್ದೂ ಉಂಟು.

1996ರಲ್ಲಿ ಸಂಸತ್‌ನಲ್ಲಿ ಪಕ್ಷಕ್ಕೆ ಸಂಪೂರ್ಣ ಬಹುಮತ ಇಲ್ಲ ಎನ್ನುವುದು ಗೊತ್ತಾಗಿ, 13 ದಿನಕ್ಕೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾದ ಸನ್ನಿವೇಶದಲ್ಲಿ ಅವರು ಸಂಸತ್‌ನಲ್ಲಿ ಮಾಡಿದ ಭಾವನಾತ್ಮಕವಾದ ಸುಧೀರ್ಘ ಭಾಷಣವನ್ನು ಇಡೀ ದೇಶ ಕಿವಿಗೊಟ್ಟು ಆಲಿಸಿತ್ತು.

ಕವಿ–ಪತ್ರಕರ್ತ–ರಾಜಕಾರಣಿ

ಡಿಸೆಂಬರ್‌ 25, 1924:ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ದಂಪತಿ ಮಗನಾಗಿ ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ 'ಶಿಂಧೆ ಕಿ ಚವ್ವಾಣಿ' ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶಾಲಾ ಶಿಕ್ಷಕ ಮತ್ತು ಕವಿಯಾಗಿದ್ದರು. ಅವರದು ಮಧ್ಯಮ ವರ್ಗದ ಕುಟುಂಬ.

ವಿದ್ಯಾರ್ಹತೆ:ಬಾಲ್ಯದ ಶಿಕ್ಷಣ ಸರಸ್ವತಿ ಶಿಶು ಮಂದಿರದಲ್ಲಿ ಮತ್ತು ಕಾಲೇಜು ಶಿಕ್ಷಣವನ್ನು ವಿಕ್ಟೋರಿಯಾ ಕಾಲೇಜಿನಲ್ಲಿ ಪಡೆದುಕೊಂಡರು. ಪದವಿ ಶಿಕ್ಷಣದಲ್ಲಿ ಹಿಂದಿ, ಇಂಗ್ಲಿಷ್‌ ಹಾಗೂ ಸಂಸ್ಕೃತದಲ್ಲಿ ಅವರು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು.

ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಿಂದಿ ಸುದ್ದಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭ; ಹಿಂದಿ ಭಾಷೆಯಲ್ಲಿ ಅಪಾರ ಪಾಂಡಿತ್ಯ, ಪ್ರೇಮ ಹೊಂದಿದ್ದ ಅವರು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಲವು ಕವಿತೆಗಳನ್ನು ಬರೆದಿದ್ದಾರೆ. ಶಾಯಿರಿಗಳನ್ನು ರಸವತ್ತಾಗಿ ಹೇಳುತ್ತಿದ್ದರು.

ವಾಜಪೇಯಿ 1969ರಲ್ಲಿ ಹೀಗಿದ್ದರು.
ವಾಜಪೇಯಿ 1969ರಲ್ಲಿ ಹೀಗಿದ್ದರು.

ಸಂಘದಿಂದ ಸಂಸತ್‌ವರೆಗೆ
1939–1957:1939ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರ್ಪಡೆಯಾದರು. 1942ರಲ್ಲಿ ಕ್ವಿಟ್ ಇಂಡಿಯಾ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) ಚಳವಳಿಯಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸಿದರು. 1951ರಲ್ಲಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರೊಂದಿಗೆ ಸೇರಿಕೊಂಡು ಭಾರತೀಯ ಜನಸಂಘ ಸ್ಥಾಪಿಸಿದರು. ಮುಖರ್ಜಿ ಅವರು ಕಾಶ್ಮೀರದ ಬಗ್ಗೆ ನಡೆಸುತ್ತಿದ್ದ ಹೋರಾಟದಲ್ಲಿ ಕೈಜೋಡಿಸಿದರು. 1957ರಲ್ಲಿ ಮೊದಲ ಬಾರಿಗೆ ಲೋಕಸಭೆಯ ಸದಸ್ಯರಾಗಿ ಉತ್ತರಪ್ರದೇಶದ ಬಲರಾಮಪುರ ಕ್ಷೇತ್ರದಿಂದ ಆಯ್ಕೆಯಾದರು. ಸಂಸತ್‌ನಲ್ಲಿ ಉತ್ತಮ ವಾಕ್ಪಟುತ್ವದಿಂದ ದೇಶದ ಗಮನ ಸೆಳೆದರು.

ಪ್ರತಿಭಟನಾ ರ‍್ಯಾಲಿವೊಂದರಲ್ಲಿ ವಾಜಪೇಯಿ ಮತ್ತು ಎಲ್‌.ಕೆ.ಅಡ್ವಾನಿ
ಪ್ರತಿಭಟನಾ ರ‍್ಯಾಲಿವೊಂದರಲ್ಲಿ ವಾಜಪೇಯಿ ಮತ್ತು ಎಲ್‌.ಕೆ.ಅಡ್ವಾನಿ

ಅಧಿಕಾರಕ್ಕೆ ಒಂದೊಂದೆ ಮೆಟ್ಟಿಲು
1968–1979:
ದೀನ್‌ ದಯಾಳ್‌ ಉಪಾಧ್ಯಾಯ ಅವರ ನಿಧನದ ನಂತರ ವಾಜಪೇಯಿ ಅವರು ಜನಸಂಘದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದರು. 1975ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಾಜಕೀಯ ಕೈದಿಯಾಗಿ ಸೆರೆವಾಸ ಅನುಭವಿಸಿದರು. 1977ರಲ್ಲಿ ಭಾರತೀಯ ಜನ ಸಂಘವನ್ನು ಭಾರತೀಯ ಲೋಕದಳ ಮತ್ತು ಸೋಷಿಯಲಿಸ್ಟ್‌ ಪಾರ್ಟಿಯ ಜತೆಗೆ ಒಂದುಗೂಡಿಸಿ, ಜನತಾ ಪಾರ್ಟಿ ರಚನೆ ಮಾಡಲಾಯಿತು. 1977ರ ಚುನಾವಣೆಯಲ್ಲಿ ಜನತಾ ಪಕ್ಷ ಗೆಲುವು ಸಾಧಿಸಿ ಮೊರಾರ್ಜಿ ದೇಸಾಯಿ ಪ್ರಧಾನಿಯಾದರೆ, ಅವರ ಸಂಪುಟದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾದರು. ಅದೇ ವರ್ಷ ಅಮೆರಿಕಕ್ಕೆ ಭೇಟಿ ನೀಡಿ ಅಲ್ಲಿನ ಅಸೆಂಬ್ಲಿ ಉದ್ದೇಶಿಸಿ ಭಾಷಣ ಮಾಡಿದರು. 1979ರಲ್ಲಿ ಸರ್ಕಾರ ಪತನಗೊಂಡು ಮೊರಾರ್ಜಿ ದೇಸಾಯಿ ರಾಜೀನಾಮೆ ನೀಡಿದಾಗ, ಜನತಾ ಪಾರ್ಟಿಯನ್ನು ವಿಸರ್ಜನೆ ಮಾಡಲಾಯಿತು.

1996ರಲ್ಲಿ ಪ್ರಧಾನಿಯಾಗಿ ವಾಜಪೇಯಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಕ್ಷಣ
1996ರಲ್ಲಿ ಪ್ರಧಾನಿಯಾಗಿ ವಾಜಪೇಯಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಕ್ಷಣ

ಬಿಜೆಪಿ ಕಟ್ಟಿದ ಕಟ್ಟಾಳು

1980–1991: ಎಲ್‌.ಕೆ.ಅಡ್ವಾಣಿ, ಭೈರೋನ್‌ ಸಿಂಗ್‌ ಶೆಖಾವತ್‌ ಜತೆ ಸೇರಿ ಭಾರತೀಯ ಜನತಾ ಪಾರ್ಟಿಯನ್ನು(ಬಿಜೆಪಿ) 1980ರಲ್ಲಿ ಸ್ಥಾಪಿಸಿದರು. ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. 1984ರ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 2 ಲೋಕಸಭಾ ಕ್ಷೇತ್ರಗಳಲ್ಲಿ ಜಯ ಸಿಕ್ಕಿತು. ವಾಜಪೇಯಿ ಅವರ ಅವಿರತ ಶ್ರಮದಿಂದ 1989ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ 88 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. 1991ರ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗಳಿಸಿ, ಮೊದಲ ಬಾರಿಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆಯಿತು.

ಪಟನಾದಲ್ಲಿ 1997ರಲ್ಲಿ ನಡೆದ ಸಮಾವೇಶದಲ್ಲಿನ ಬೃಹತ್‌ ಜನಸಮೂಹವನ್ನು ಉದ್ದೇಶಿಸಿ ವಾಜಪೇಯಿ ಮಾತನಾಡುತ್ತಿರುವುದು. ಚಿತ್ರದಲ್ಲಿ ಶತ್ರುಘ್ನ ಸಿನ್ಹಾ ಇದ್ದಾರೆ
ಪಟನಾದಲ್ಲಿ 1997ರಲ್ಲಿ ನಡೆದ ಸಮಾವೇಶದಲ್ಲಿನ ಬೃಹತ್‌ ಜನಸಮೂಹವನ್ನು ಉದ್ದೇಶಿಸಿ ವಾಜಪೇಯಿ ಮಾತನಾಡುತ್ತಿರುವುದು. ಚಿತ್ರದಲ್ಲಿ ಶತ್ರುಘ್ನ ಸಿನ್ಹಾ ಇದ್ದಾರೆ

ಅಗ್ನಿ ಪರೀಕ್ಷೆ ಒಡ್ಡಿದ ಬಾಬರಿ ಮಸೀದಿ
1992: ಡಿಸೆಂಬರ್ 6ರಂದು ಆಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ವಾಜಪೇಯಿ ಅವರಿಗೆ ಅಗ್ನಿ ಪರೀಕ್ಷೆ ಒಡ್ಡಿತು. ಅವರು ಆಗ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ಎಲ್.ಕೆ.ಅಡ್ವಾಣಿ ಮತ್ತು ಬಿಜೆಪಿಯ ಇತರ ನಾಯಕರು ಈ ಪ್ರಕರಣ ಸಮರ್ಥಿಸಿಕೊಂಡಿದ್ದರು. ಆದರೆ ವಾಜಪೇಯಿ ಇದನ್ನು ಖಂಡಿಸಿ ತಮ್ಮ ಧರ್ಮ ನಿರಪೇಕ್ಷ ನಿಲುವಿಗೆ ಅಂಟಿಕೊಂಡು, ರಾಜಕೀಯ ಮುತ್ಸದ್ದಿ ಎನಿಸಿಕೊಂಡರು.

ವಾಜಪೇಯಿ ಬದುಕಿನ ಘಟ್ಟಗಳು

* 1924, ಡಿಸೆಂಬರ್‌ 25: ಗ್ವಾಲಿಯರ್‌ನಲ್ಲಿ ಕೃಷ್ಣಾದೇವಿ ಮತ್ತು ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಅಟಲ್ ಜನನ.

* 1939: ಹದಿನೈದನೆಯ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದರು. ಇದಕ್ಕೂ ಮೊದಲು ಆರ್ಯ ಸಮಾಜದ ತರುಣ ವಿಭಾಗ ‘ಆರ್ಯ ಕುಮಾರ ಸಭಾ’ ಜೊತೆ ಗುರುತಿಸಿಕೊಂಡಿದ್ದರು.

* 1942: ‘ಬ್ರಿಟಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 23 ದಿನಗಳ ಜೈಲುವಾಸ.

* 1951: 1947ರಿಂದಲೂ ಆರ್‌ಎಸ್‌ಎಸ್‌ನ ಪ್ರಚಾರಕ ಆಗಿ ಕೆಲಸ ಮಾಡುತ್ತಿದ್ದ ವಾಜಪೇಯಿ ಅವರನ್ನು ಭಾರತೀಯ ಜನಸಂಘ ಪಕ್ಷದ ಕೆಲಸಗಳಿಗೆ ನಿಯೋಜಿಸಲಾಯಿತು.

* 1957: ಉತ್ತರ ಪ್ರದೇಶದ ಬಲರಾಮಪುರ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶ.

* 1968: ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾದ ವಾಜಪೇಯಿ. ನಾನಾಜಿ ದೇಶಮುಖ್, ಬಲರಾಜ್ ಮುಧೋಕ್ ಮತ್ತು ಎಲ್.ಕೆ. ಅಡ್ವಾಣಿ ಜೊತೆ ಸೇರಿ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಮುನ್ನೆಲೆಗೆ ತಂದ ಹಿರಿಮೆ.

ಆಪ್ತಮಿತ್ರ ಎಲ್‌.ಕೆ.ಅಡ್ವಾನಿ ಅವರೊಂದಿಗೆ ವಾಜಪೇಯಿ
ಆಪ್ತಮಿತ್ರ ಎಲ್‌.ಕೆ.ಅಡ್ವಾನಿ ಅವರೊಂದಿಗೆ ವಾಜಪೇಯಿ

* 1975-77: ದೇಶದಲ್ಲಿ ತುರ್ತು ಪರಿಸ್ಥಿತಿ, ಜೈಲು ವಾಸ ಅನುಭವಿಸಿದ ವಾಜಪೇಯಿ.

* 1977: ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಿದೇಶಾಂಗ ಸಚಿವ. ಅದಕ್ಕಿಂತ ಹೆಚ್ಚಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲಿಗರಾದರು ವಾಜಪೇಯಿ.

* 1980: ರಾಷ್ಟ್ರ ರಾಜಕಾರಣದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉದಯ; ಈ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾದ ವಾಜಪೇಯಿ.

* 1996: ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ. ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಲಾಗದೆ ಹದಿಮೂರು ದಿನಗಳ ನಂತರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ.

* 1998: ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ, ಪ್ರಧಾನಿಯಾಗಿ ಎರಡನೆಯ ಬಾರಿಗೆ ಅಧಿಕಾರ ಸ್ವೀಕಾರ. ಹದಿಮೂರು ತಿಂಗಳುಗಳ ಕಾಲ ಆಡಳಿತ.

ದೇಶ ಕಂಡ ಪ್ರಮುಖ ನಾಯಕರೊಂದಿಗೆ ವಾಜಪೇಯಿ
ದೇಶ ಕಂಡ ಪ್ರಮುಖ ನಾಯಕರೊಂದಿಗೆ ವಾಜಪೇಯಿ

* 1998 ಮೇ: ವಾಜಪೇಯಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ನಂತರ, ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಭಾರತ.

ಅಣ್ವಸ್ತ್ರ ಪರೀಕ್ಷೆಗಳ ನಂತರ ಉಂಟಾಗಿದ್ದ ಕುಳಿ (ಮೊದಲ ಚಿತ್ರ). ಪರೀಕ್ಷೆಗೆ ಅಣ್ವಸ್ತ್ರವನ್ನು ಅಣಿಗೊಳಿಸುತ್ತಿರುವುದು (ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಟ್ವಿಟರ್ ಖಾತೆಯೆಂದ ತೆಗೆದುಕೊಂಡ ಚಿತ್ರಗಳು)
ಅಣ್ವಸ್ತ್ರ ಪರೀಕ್ಷೆಗಳ ನಂತರ ಉಂಟಾಗಿದ್ದ ಕುಳಿ (ಮೊದಲ ಚಿತ್ರ). ಪರೀಕ್ಷೆಗೆ ಅಣ್ವಸ್ತ್ರವನ್ನು ಅಣಿಗೊಳಿಸುತ್ತಿರುವುದು (ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಟ್ವಿಟರ್ ಖಾತೆಯೆಂದ ತೆಗೆದುಕೊಂಡ ಚಿತ್ರಗಳು)

* 1999, ಫೆಬ್ರುವರಿ: ಪಾಕಿಸ್ತಾನದ ಜೊತೆ ಸೌಹಾರ್ದ ಸಂಬಂಧ ಹೊಂದುವ ಉದ್ದೇಶದಿಂದ ದೆಹಲಿ – ಲಾಹೋರ್ ಬಸ್ ಯಾನಕ್ಕೆ ಚಾಲನೆ.

* 1999, ಜೂನ್‌: ಪಾಕಿಸ್ತಾನದಿಂದ ಬಂದ ನುಸುಳುಕೋರರನ್ನು ಓಡಿಸಲು ಕಾರ್ಗಿಲ್‌ ವಲಯದಲ್ಲಿ ‘ಆಪರೇಷನ್ ವಿಜಯ್‌’ ಕಾರ್ಯಾಚರಣೆ. ಈ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾರತ ಸಾಧಿಸಿದ ವಿಜಯ, ವಾಜಪೇಯಿ ಅವರ ಜನಪ್ರೀತಿಯನ್ನು ಹೆಚ್ಚಿಸಿತು ಎಂಬ ವಿಶ್ಲೇಷಣೆ ರಾಜಕೀಯ ಪಂಡಿತರಿಂದ ಬಂದಿದೆ.

* 1999: ಪ್ರಧಾನಿಯಾಗಿ ಮೂರನೆಯ ಬಾರಿಗೆ ಅಧಿಕಾರ ಸ್ವೀಕರಿಸಿದ ವಾಜಪೇಯಿ.

* 2001, ಜುಲೈ: ಪಾಕಿಸ್ತಾನದ ಜೊತೆ ಶಾಂತಿ ಸ್ಥಾಪನೆಗಾಗಿ ಆಗ್ರಾದಲ್ಲಿ ಶೃಂಗಸಭೆ. ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್‌ ಭಾಗಿ.

ನವದೆಹಲಿಯಲ್ಲಿ 2005ರಲ್ಲಿ ವಾಜಪೇಯಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಭೇಟಿಯಾದ ಕ್ಷಣ
ನವದೆಹಲಿಯಲ್ಲಿ 2005ರಲ್ಲಿ ವಾಜಪೇಯಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಭೇಟಿಯಾದ ಕ್ಷಣ

* 2004, ಮೇ: ಎನ್‌ಡಿಎ ಮೈತ್ರಿಕೂಟಕ್ಕೆ ಲೋಕಸಭಾ ಚುನಾವಣೆಯಲ್ಲಿ ಸೋಲು. ವಾಜಪೇಯಿ ಆಡಳಿತ ಅಂತ್ಯ.

ಕಾಂಗ್ರೆಸ್‌ನ ಸೋನಿಯಾ ಗಾಂಧಿ, ಶೀಲಾ ದೀಕ್ಷಿತ್‌ ಅವರೊಂದಿಗೆ ವಾಜಪೇಯಿ
ಕಾಂಗ್ರೆಸ್‌ನ ಸೋನಿಯಾ ಗಾಂಧಿ, ಶೀಲಾ ದೀಕ್ಷಿತ್‌ ಅವರೊಂದಿಗೆ ವಾಜಪೇಯಿ

* 2005, ಡಿಸೆಂಬರ್‌: ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ ಕವಿ ಹೃದಯಿ.

* 2009 : ಪಾರ್ಶ್ವವಾಯುವಿಗೆ ಒಳಗಾದ ಬಳಿಕ ಮರೆಗುಳಿ ಮತ್ತು ಮಧುಮೇಹದಿಂದ ಹಾಸಿಗೆ ಹಿಡಿದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ನಿಲ್ಲಿಸಿದ್ದರು.

* 2018: ದೀರ್ಘಕಾಲದಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ಗೆಜೂನ್‌ 11ರಂದು ದಾಖಲಾಗಿದ್ದರು

*ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ದೆಹಲಿ ಹೀಗೆ ನಾಲ್ಕು ರಾಜ್ಯಗಳಿಂದ ಬೇರೆ ಬೇರೆ ಅವಧಿಯಲ್ಲಿ ಲೋಕಸಭೆಗೆ ಆಯ್ಕೆಯಾದ ದೇಶದ ಏಕೈಕ ನಾಯಕ ಎನ್ನುವ ಶ್ರೇಯ ಅವರದ್ದು

* ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ

ಪುರಸ್ಕಾರಗಳು

1992: ಪದ್ಮ ವಿಭೂಷಣ

1994: ಲೋಕಮಾನ್ಯ ತಿಲಕ್‌ ಪ್ರಶಸ್ತಿ

1994: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ

1994: ಭಾರತ ರತ್ನ ಪಂಡಿತ್‌ ಗೋವಿಂದ್‌ ವಲ್ಲಭ ಪಂತ್ ಪ್ರಶಸ್ತಿ

2014: ಭಾರತ ರತ್ನ

ಇನ್ನಷ್ಟು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT