ಅಧ್ಯಾಪಕ ವೃತ್ತಿಯನ್ನು ಹಿಡಿದಾಗ ನನ್ನಂತಹವರ ಮುಂದೆ ಇದ್ದ ಆದರ್ಶ ಭಾಸ್ಕರ ಹೆಗಡೆಯವರು: ಸಾಧ್ಯವಿದ್ದರೆ ಅವರಂತಹ ಮೇಷ್ಟ್ರಾಗಬೇಕು ಎಂಬ ಆದರ್ಶವದು. ಇಷ್ಟು ವರ್ಷಗಳಲ್ಲಿ ಅರ್ಥವಾದದ್ದು ಏನೆಂದರೆ ಎಷ್ಟೇ ಪ್ರಯತ್ನಪಟ್ಟರೂ ನಾವು ಅವರಾಗಲು ಸಾಧ್ಯವಿಲ್ಲ, ಅವರು ನಡೆದ ಹಾದಿಯಲ್ಲಿ ಅವರನ್ನನುಸರಿಸಿಕೊಂಡು ಒಂದಷ್ಟು ದೂರ ನಡೆಯಬಹುದು ಎಂದು. ಏಕೆಂದರೆ ಇನ್ನೊಬ್ಬ ಭಾಸ್ಕರ ಹೆಗಡೆ ಇರಲು ಸಾಧ್ಯವಿಲ್ಲ. ಅವರು ಅವರೇ.

‘ಒಬ್ಬ ದುರ್ಬಲ ಅಧ್ಯಾಪಕ ದೂರುತ್ತಾನೆ; ಸಾಮಾನ್ಯ ಅಧ್ಯಾಪಕ ವಿವರಿಸುತ್ತಾನೆ; ಒಳ್ಳೆಯ ಅಧ್ಯಾಪಕ ಪಾಠ ಮಾಡುತ್ತಾನೆ; ಒಬ್ಬ ಶ್ರೇಷ್ಠ ಅಧ್ಯಾಪಕ ಸ್ವತಃ ಸ್ಫೂರ್ತಿಯಾಗುತ್ತಾನೆ‘ ಎಂಬ ಮಾತು ಪ್ರಸಿದ್ಧವಾದದ್ದು. ಭಾಸ್ಕರ ಹೆಗಡೆಯವರು ಕೊನೆಯ ವರ್ಗಕ್ಕೆ ಸೇರುವವರು. ಅವರು ಸಂಬಳಕ್ಕಾಗಿಯೋ ಕಾಲಯಾಪನೆಗಾಗಿಯೋ ಉಪನ್ಯಾಸಕ ವೃತ್ತಿ ಹಿಡಿಯಲಿಲ್ಲ. ಅದು ಅವರಿಗೆ ಕೇವಲ ಕರ್ತವ್ಯವಷ್ಟೇ ಆಗಿರಲಿಲ್ಲ. ವೃತ್ತಿ ಮತ್ತು ವಿದ್ಯಾರ್ಥಿಗಳೊಂದಿಗಿನ ಸಂಬಂಧ ಪ್ರತ್ಯೇಕ ಆಗಿರಲಿಲ್ಲ. ಆ ಕಾರಣಕ್ಕಾಗಿಯೇ ಅವರು ನೂರಾರು ಶಿಷ್ಯರ ಬದುಕಿಗೆ ಪ್ರೇರಣೆಯಾಗಿದ್ದಾರೆ.

ಎಲ್ಲ ವಿದ್ಯಾರ್ಥಿಗಳನ್ನೂ ಸಮಾನವಾಗಿ ಕಾಣಬಲ್ಲ ಒಂದು ಅಪರೂಪದ ವ್ಯಕ್ತಿತ್ವ ಅರದ್ದು. ಮುಂದಿನ ಸಾಲಿನವರು, ಹಿಂದಿನ ಬೆಂಚಿನವರು, ಚೆನ್ನಾಗಿ ಓದುವವರು, ಸಾಧಾರಣ ವಿದ್ಯಾರ್ಥಿಗಳು ಎಂಬ ವ್ಯತ್ಯಾಸ ಅವರಲ್ಲಿ ಎಂದೂ ಇರಲಿಲ್ಲ. ಅವರ ಮಟ್ಟಿಗೆ ಎಲ್ಲರೂ ಪತ್ರಿಕೋದ್ಯಮ ಓದಲು ಬಂದವರು, ನಾಳೆ ಒಂದಲ್ಲ ಒಂದು ಮಾಧ್ಯಮಗಳಲ್ಲಿ ಕೆಲಸ ಮಾಡಬೇಕಾದವರು- ಅಷ್ಟೇ.

ತಾಯಿಯ ಮಮತೆ

ಪ್ರತಿಯೊಬ್ಬರಿಗೂ ತಾಯಿಯಂತಹ ಮಮತೆ ತೋರಿಸಬಲ್ಲ ಶಕ್ತಿ ಅವರಿಗಿತ್ತು. ದಿನಕ್ಕೊಂದು ಬಾರಿಯಾದರೂ ಪತ್ರಿಕೋದ್ಯಮ ವಿಭಾಗಕ್ಕೆ ಭೇಟಿ ನೀಡದಿದ್ದರೆ, ಭಾಸ್ಕರ ಹೆಗಡೆಯವರ ಮುಖ ನೋಡದಿದ್ದರೆ ವಿದ್ಯಾರ್ಥಿಗಳಿಗೆ ತೃಪ್ತಿ ಇರಲಿಲ್ಲ. ಒಂದಿಷ್ಟು ಬಿಡುವಿನ ವೇಳೆ ಸಿಕ್ಕರೂ ಅದನ್ನು ವಿಭಾಗದಲ್ಲಿ ಕಳೆಯುತ್ತಿದ್ದೆವು. ಪಾಠ-ಪ್ರವಚನಕ್ಕೆ ಸಂಬಂಧಪಟ್ಟ ವಿಷಯ ಅಂತ ಅಲ್ಲ, ಅನಾರೋಗ್ಯವೇ ಮೊದಲ್ಗೊಂಡು ಯಾವುದೇ ವೈಯಕ್ತಿಕ ಸಮಸ್ಯೆ ಇದ್ದರೂ ಅವರ ಬಳಿ ಹೋಗಿ ಹೇಳಿಕೊಳ್ಳುವುದು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿತ್ತು.

ಅವರಿವರ ದೂರುಗಳನ್ನು ಸ್ವೀಕರಿಸುವ ದೊಡ್ಡ ದೂರುಪೆಟ್ಟಿಗೆಯೂ ಅವರಾಗಿದ್ದರು. ಆ ದೂರುದುಮ್ಮಾನಗಳನ್ನು ಹೊರಗೆ ಗೊತ್ತಾಗದಂತೆ ಪರಿಹರಿಸುವ ವಿಶಿಷ್ಟ ಕಲೆಯೂ ಅವರಿಗಿತ್ತು. ಯಾವ ದೂರೂ ಒಂದು ಸಾರ್ವಜನಿಕ ಪ್ರಕರಣವಾಗದಂತೆ, ಯಾರಿಗೂ ಬೇಸರವಾಗದಂತೆ ಸಾಮರಸ್ಯದಿಂದ ಮುಗಿಸುವ ಒಂದು ಅಸದೃಶ ಕೌಶಲ ಅವರದ್ದು. ಅದಕ್ಕೇ ಅವರು ಎಲ್ಲರಿಗೂ ಪ್ರೀತಿಪಾತ್ರರು.

ಕಡಲಿನ ತಾಳ್ಮೆ

ತಮ್ಮ ಮಾತನ್ನೇ ಎಲ್ಲರೂ ಕೇಳಬೇಕೆಂಬ ಅಧಿಕಾರ ಪ್ರವೃತ್ತಿಯನ್ನು ಅವರಲ್ಲಿ ಎಂದೂ ಕಂಡದ್ದಿಲ್ಲ. ಎಲ್ಲರ ಅಭಿಪ್ರಾಯಗಳನ್ನೂ ಕೇಳುವ ಕಡಲಿನಂತಹ ತಾಳ್ಮೆ ಅವರಿಗಿತ್ತು. ಯಾವ ಪ್ರಕರಣದಲ್ಲಾದರೂ ಅವರು ತುಂಬಾ ಸಿಟ್ಟಾಗಿದ್ದದ್ದನ್ನೋ, ತಾಳ್ಮೆ ಕಳೆದುಕೊಂಡು ವರ್ತಿಸಿದ್ದನ್ನೋ ನೋಡಿದ್ದು ನೆನಪಿಲ್ಲ. ಅತ್ಯುತ್ತಮ ಸಂವಹನಕಾರ ಉತ್ತಮ ಕೇಳುಗನಾಗಿರಬೇಕು ಎಂಬ ಮಾತಿಗೆ ಸಂವಹನವನ್ನು ಪಾಠ ಮಾಡಿದ ಅವರೇ ಸ್ವತಃ ಸಮರ್ಪಕ ಉದಾಹರಣೆಯಾಗಿದ್ದರು.

ವಿದ್ಯಾರ್ಥಿಗಳ ಕಷ್ಟಕ್ಕೆ ಮಿಡಿಯುವ ಅನುಕಂಪ, ಅದರ ಪರಿಹಾರಕ್ಕೆ ತಮ್ಮಿಂದಾದ ಸಹಾಯ ಮಾಡುವ ಸಹಾನುಭೂತಿ ಎರಡೂ ಅವರಲ್ಲಿತ್ತು. ಒಮ್ಮೆ ವಿದ್ಯಾರ್ಥಿಗಳಾಗಿ ಅವರ ಕಾಳಜಿಯ ಪರಿಧಿ ಸೇರಿಕೊಂಡರೆ ಅವರಿಗೆ ಶಾಶ್ವತ ರಕ್ಷಾಕವಚವಾಗುವ ಶಕ್ತಿ ಭಾಸ್ಕರ ಹೆಗಡೆಯವರಿಗಿತ್ತು. ವಿದ್ಯಾರ್ಥಿಗಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳಬಲ್ಲ ವ್ಯಕ್ತಿತ್ವ ಎಲ್ಲ ಅಧ್ಯಾಪಕರಿಗೂ ಸಿದ್ಧಿಸುವುದು ಕಷ್ಟ. ಆದರೆ ಅಂತಹ ವ್ಯಕ್ತಿತ್ವ ಭಾಸ್ಕರ ಹೆಗಡೆವರಿಗಿತ್ತು. ಅವರ ಮನೆಯೂಟ ಉಣ್ಣದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ.

ನಿಷ್ಕಪಟ ಉತ್ತೇಜನ

ವಿದ್ಯಾರ್ಥಿಗಳ ಬರವಣಿಗೆಗೆ ಭಾಸ್ಕರ ಹೆಗಡೆಯವರು ಕೊಡುತ್ತಿದ್ದ ಉತ್ತೇಜನವಂತೂ ಅಸದೃಶವಾದದ್ದು. ವಿದ್ಯಾರ್ಥಿಗಳು ಬರೆದ ನಾಲ್ಕು ಸಾಲು ಪತ್ರಿಕೆಯಲ್ಲಿ ಬಂದರೂ ಅದನ್ನೊಂದು ದೊಡ್ಡ ಸಾಧನೆಯೆಂಬಂತೆ ತರಗತಿಗಳಲ್ಲಿ ಪ್ರಸ್ತಾಪಿಸಿ ಇನ್ನಷ್ಟು ಬರೆಯುವ ಹುರುಪು ತುಂಬುತ್ತಿದ್ದರು. ಪ್ರತಿ ತರಗತಿಯ ಮೊದಲ ಐದು ಹತ್ತು ನಿಮಿಷವಂತೂ ಅಂದು ಯರ್ಯಾರ ಲೇಖನ ಯಾವ್ಯಾವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬುದನ್ನು ಬಿತ್ತರಿಸುವುದಕ್ಕೆ ಮೀಸಲಾಗಿರುತ್ತಿತ್ತು. ಯಾರದ್ದಾದರೂ ಮೊದಲ ಲೇಖನ ಪ್ರಕಟವಾದಾಗಲಂತೂ ‘ಇವತ್ತು ಇಂಥವರ ಅಕೌಂಟ್ ಓಪನಾಗಿದೆ‘ ಎನ್ನುತ್ತ ಹಬ್ಬದ ವಾತಾವರಣ ಸೃಷ್ಟಿಸಿಬಿಡುತ್ತಿದ್ದರು. ಅವರ ಬಾಯಿಯಿಂದ ‘ಅಕೌಂಟ್ ಓಪನಾಗಿದೆ’ ಎಂದು ಹೇಳಿಸಿಕೊಳ್ಳುವುದಕ್ಕಾದರೂ ಸಾಕಷ್ಟು ಮಂದಿ ಬರೆಯುವ ಪ್ರಯತ್ನ ಮಾಡುತ್ತಿದ್ದುದುಂಟು.

ವಿದ್ಯಾರ್ಥಿಗಳ ಪ್ರಗತಿಯಲ್ಲಿ ತಮ್ಮ ಯಶಸ್ಸನ್ನು ಕಾಣುವುದು ಶ್ರೇಷ್ಠ ಗುರುವಿನ ಲಕ್ಷಣವಂತೆ. ಅಂತಹದೊಂದು ಗುಣ ಭಾಸ್ಕರ ಹೆಗಡೆಯವರಲ್ಲಿದೆ. ತಮ್ಮ ವಿದ್ಯಾರ್ಥಿಗಳ ಲೇಖನಗಳು ದೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾದಾಗ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಬಹುಮಾನ ಪಡೆದರೆ, ಒಳ್ಳೆಯ ಕಡೆ ಉದ್ಯೋಗ ಪಡೆದಾಗ, ಅಲ್ಲಿ ಸಾಧನೆಗಳನ್ನು ಮಾಡಿದಾಗ, ಅದು ತಮ್ಮದೇ ಸಾಧನೆಯೋ ಎಂಬ ಹಾಗೆ ಸಂಭ್ರಮಿಸುವ ಅಪರೂಪದ ವ್ಯಕ್ತಿ ಅವರು. ಎಂದೂ ಯಾರ ಬಗ್ಗೆಯೂ ಅವರು ಕರುಬಿದ್ದು ನಮ್ಮ ಗಮನಕ್ಕೆ ಬಂದುದಿಲ್ಲ.

ಕಷ್ಟ-ಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞತೆಯೂ ಭಾಸ್ಕರ ಹೆಗಡೆಯವರಿಗೆ ಸ್ವಭಾವತಃ ಬಂದಿದೆ. ಕೌಟುಂಬಿಕವಾಗಿಯೋ, ವೃತ್ತಿ ಸಂಬಂಧವಾಗಿಯೋ ಅವರು ಸಾಕಷ್ಟು ಒತ್ತಡ, ಕಷ್ಟನಷ್ಟಗಳನ್ನು ಅನುಭವಿಸಿದ್ದಿದೆ. ಆದರೆ ಎಂದೂ ಅತಿಯಾದ ಭಾವಾತಿರೇಕಕ್ಕೆ ಅವರು ಒಳಗಾದವರಲ್ಲ. ಸಮಚಿತ್ತ ಏನೆಂದರೆ ಅವರನ್ನು ನೆನಪಿಸಿಕೊಳ್ಳಬೇಕು ಎಂಬ ಹಾಗಿದ್ದವರು. ಅತ್ಯಂತ ಹೆಚ್ಚು ಸಂತೋಷವಾದಾಗಲೂ, ಅತ್ಯಂತ ಹೆಚ್ಚು ದುಃಖವಾದಾಗಲೂ ಅವರು ಅದನ್ನು ಒಂದು ಮಿತಿಯಿಂದಾಚೆ ತೋರಿಸಿಕೊಂಡವರಲ್ಲ. ಎಲ್ಲರಿಗೂ ಒದಗುವ ಸಿದ್ಧಿಯಲ್ಲ ಇದು.

ಮೂರು ದಶಕಗಳ ಸೇವೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳ್ಕೋಡ್ ಭಾಸ್ಕರ ಹೆಗಡೆಯವರ ತವರು ನೆಲ. ಹೊನ್ನಾವರದಲ್ಲೇ ಎಸ್.ಡಿ.ಎಂ. ಕಾಲೇಜಿನಲ್ಲಿ ಅವರು ಪದವಿ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಬಳಿಕ 1993ಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಇದಕ್ಕೂ ಮೊದಲು ಕೆಲವು ವರ್ಷ ಅವರು ಪತ್ರಕರ್ತರಾಗಿ ದುಡಿದದ್ದೂ ಇದೆ. ಹೀಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಏನನ್ನು ಕಲಿಸಿಕೊಡಬೇಕು ಎಂಬ ಸ್ಪಷ್ಟ ಕಲ್ಪನೆ ಅವರಲ್ಲಿತ್ತು.

ಮೂರು ದಶಕಗಳಲ್ಲಿ ಮುದ್ರಣದಿಂದ ವಿದ್ಯುನ್ಮಾನ ಮಾಧ್ಯಮಕ್ಕೆ, ಅಲ್ಲಿಂದ ಡಿಜಿಟಲ್ ಮಾಧ್ಯಮಕ್ಕೆ ಜಗತ್ತಿನ ಆದ್ಯತೆ ಬದಲಾದದ್ದನ್ನು ಅವರು ಗಮನಿಸದೆ ಇರಲಿಲ್ಲ. ಆ ಕಾರಣದಿಂದಲೇ ಅವರು ಕಳೆದ 33 ವರ್ಷಗಳಲ್ಲಿ ವಿಭಾಗವನ್ನು ವಿಸ್ತಾರವಾಗಿ ಬೆಳೆಸಿದರು. ಹೊಸ ಕಾಲದ ಅಗತ್ಯಗಳಿಗೆ ಸ್ಪಂದಿಸಿದರು. ಆಡಳಿತ ಮಂಡಳಿಯ ಮನವೊಲಿಸಿ ಶ್ರೇಷ್ಠ ಮಟ್ಟದ ಸ್ಟುಡಿಯೋ ಸ್ಥಾಪಿಸಿದರು. ಸಮುದಾಯ ಬಾನುಲಿ ತಂದರು. ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲವಾಗಿಟ್ಟರು.

ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗ ಹಿಡಿದಾಗ ಹೆತ್ತವರಿಗಿಂತಲೂ ಹೆಚ್ಚು ಸಂತಸಪಟ್ಟರು. ಇಂದು ಕರ್ನಾಟಕದಲ್ಲಷ್ಟೇ ಅಲ್ಲ, ದೇಶದ ಮೂಲೆಮೂಲೆಗಳಲ್ಲಿ, ಮಾಧ್ಯಮರಂಗದ ವಿವಿಧ ಸ್ತರಗಳಲ್ಲಿ ಭಾಸ್ಕರ ಹೆಗಡೆಯವರ ಶಿಷ್ಯಬಳಗವಿದೆ.

ಮನೆಗೂ ವಿಭಾಗಕ್ಕೂ ವ್ಯತ್ಯಾಸವಿಲ್ಲದಂತೆ, ಗಡಿಯಾರವನ್ನೆಂದೂ ಗಮನಿಸದೆ ಮೂರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಡಾ. ಭಾಸ್ಕರ ಹೆಗಡೆ ಜನವರಿ 31ರಂದು ಸೇವಾನಿವೃತ್ತಿ ಹೊಂದುತ್ತಿದ್ದಾರೆ. ಅದು ವಯೋನಿವೃತ್ತಿ ಅಷ್ಟೆ. ಅವರ ಪ್ರವೃತ್ತಿಗೂ, ಅಪೂರ್ವ ಅಂತಃಕರಣಕ್ಕೂ ನಿವೃತ್ತಿ ಇಲ್ಲ.

‘ತನ್ನ ಶಿಷ್ಯರಿಗೆ ಒಳ್ಳೆಯದಾಗಲಿ’ ಎಂದು ಗುರು ಮನಸಾರೆ ಭಾವಿಸುವುದೇ ಶಿಷ್ಯರಿಗೆ ಒದಗುವ ಅತಿದೊಡ್ಡ ಪ್ರಾಪ್ತಿ. ಅಂತಹ ನಿಷ್ಕಲ್ಮಶ ಹೃದಯವೊಂದು ಭಾಸ್ಕರ ಹೆಗಡೆಯವರಲ್ಲಿರುವುದರಿಂದಲೇ ವಿದ್ಯಾರ್ಥಿಗಳಿಗೆ ಒಳಿತಾಗಿದೆ. ಅವರು ಇನ್ನೂ ಹತ್ತಾರು ವರ್ಷ ಸಂತೋಷ, ನೆಮ್ಮದಿ ಮತ್ತು ಆರೋಗ್ಯದಿಂದ ಬಾಳಲಿ.

ಲೇಖಕರು: ಸಹಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.