ಮೂರು ದಶಕಗಳ ಹಿಂದೆ ‘ಸುಧಾ’ ವಾರಪತ್ರಿಕೆಯಲ್ಲಿ ನನ್ನ ಅನುಭವ ಕಥನ ‘ಹಸಿರುಹಾದಿ’ ಧಾರಾವಾಹಿಯಾಗಿ ಪ್ರಕಟವಾಯಿತು. ಅದರಲ್ಲಿ ‘ದೆಹಲಿಗೆ ಹೊರಟ ವನದೇವತೆ’ ಎಂಬ ಬರಹವೂ ತುಳಸಿಗೌಡ ಕುರಿತಾದದ್ದು. ಅದೊಂದು ಬಗೆಯಲ್ಲಿ ಪ್ರೇರಣಾದಾಯಕವಾಗಿಯೂ ಹೊರಹೊಮ್ಮಿತು.

ನನ್ನ ಅಧೀನದಲ್ಲಿದ್ದ ಅರಣ್ಯ ಇಲಾಖೆಯ ವಿಭಾಗದಲ್ಲಿ ತುಳಸಿಗೌಡ ದಿನಗೂಲಿ ನೌಕರರಾಗಿದ್ದರು. ಅಂದು ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಕೆಲಸ ಮಾಡುತ್ತಿದ್ದ ರೀತಿ, ಅವರಲ್ಲಿದ್ದ ವೈಜ್ಞಾನಿಕ ದೃಷ್ಟಿಕೋನ ಮತ್ತು ವೃತ್ತಿಪರ ಕಾಳಜಿ, ಸಾಧನೆಯನ್ನು ಗುರುತಿಸಿದ್ದ ನಾನು, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗೆ ಅವರ ಹೆಸರನ್ನು ಸೂಚಿಸಿದ್ದೆ. ವಾಸ್ತವವಾಗಿ ಅರಣ್ಯಾಧಿಕಾರಿಯಾಗಿದ್ದ ನಾನು ಆ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ತುಳಸಿ ಅದಕ್ಕೆ ಅರ್ಹರು ಎಂಬುದನ್ನು ಗುರುತಿಸಿ ಅವರು ಅದನ್ನು ಪಡೆಯುವಂತೆ ಮಾಡಿದ್ದೆ. ಈಗ ಜೆನೆಟಿಕ್ ಎಂಡೋಮೆಂಟ್ ಕುರಿತಾದ ಕೆಲಸ ಕಾರ್ಯಗಳನ್ನು ಯಂತ್ರಗಳು ನಿರ್ವಹಿಸುತ್ತವೆ. ಆದರೆ ದಶಕಗಳ ಮೊದಲೇ ಅದನ್ನು ತುಳಸಿ ವ್ಯಕ್ತಿಗತವಾಗಿ ಮಾಡುತ್ತಿದ್ದರು ಎಂಬುದೇ ವಿಸ್ಮಯ. ಯಾವುದೇ ಮರದ ಬೀಜವನ್ನು ಕೈಯಲ್ಲಿ ಹಿಡಿದು ಅದರಲ್ಲಿರುವ ವಂಶವಾಹಿ ಅಂಶವನ್ನು ಗುರುತಿಸಬಲ್ಲವರಾಗಿದ್ದರು ಎಂಬುದು ಅಚ್ಚರಿ ಪಡುವಂತಹ ವಿಷಯ. ಅವರಲ್ಲಿದ್ದ ಸುಪ್ತ ಪ್ರತಿಭೆ ಸುಮ್ಮನೆ ದಕ್ಕಿದ್ದಲ್ಲ, ವರ್ಷಾನುಗಟ್ಟಲೆ ಕೆಲಸ ಮಾಡಿದ ನಂತರ ರೂಢಿಗತವಾಗಿ ದಕ್ಕಿದಂಥದ್ದು.

ಹತ್ತಾರು ವರ್ಷಗಳ ಹಿಂದೆಯೇ ಮರಗಳ ಮಹತ್ವವನ್ನು ಅರಿತು, ಗ್ರಹಿಸಿ, ವನದುರ್ಗೆ ಹೇಗೆ ಜೀವರಾಶಿಗಳನ್ನು ಪೊರೆಯುತ್ತಾಳೆ ಎಂಬುದರ ಸಮಗ್ರ ಮಾಹಿತಿಯನ್ನು ತುಳಸಿ ಹೊಂದಿದ್ದರು. ಪರಿಸರ ಮತ್ತು ಆರ್ಥಿಕತೆಯನ್ನು ಸೂಕ್ಷ್ಮವಾಗಿ ಅರಿತು ಗಿಡಮರಗಳನ್ನು ಬೆಳೆಸುವಲ್ಲಿ ಹೇಗೆ ಕೆಲಸ ಮಾಡಿದ್ದರು ಎಂಬುದನ್ನು ಗಮನಿಸಿದಾಗ ಬೆರಗಾಗುತ್ತದೆ. ಅವರು ಇಂದಿನ ಯುಗದ ಶಬರಿ. ಶಬರಿ ಕೂಡ ತಮ್ಮ ಆಶ್ರಮದಲ್ಲಿ ಪ್ರತಿಯೊಂದು ಗಿಡಕ್ಕೆ ಸೃಷ್ಟಿಕರ್ತನ ಕೈಚಳಕವನ್ನು ಪರಿಚಯಿಸುತ್ತಿದ್ದರು. ನನ್ನ ಗ್ರಹಿಕೆಯ ಪ್ರಕಾರ ತುಳಸಿಗೂ ಅದೇ ತೆರನಾದ ಅನುಭವ ಮತ್ತು ಗ್ರಹಿಕೆ ಇತ್ತು. ಒಬ್ಬ ಅರಣ್ಯಾಧಿಕಾರಿ ಖಾಕಿ ದಿರಿಸು ತೊಟ್ಟು ವೇಗವಾಗಿ ಅರಣ್ಯದಲ್ಲಿ ಓಡಾಡಿದಾಗ ಆತನನ್ನು ತಡೆದು ನಿಲ್ಲಿಸಿ “ಏಯ್, ನಿನ್ನ ಕಾಲಡಿಯಲ್ಲಿ ಸಾವಿರಾರು ಎಳೆಯ ಅಪರೂಪದ ಸಸ್ಯಗಳನ್ನು ತುಳಿದು ಧ್ವಂಸ ಮಾಡಿದೆಯಲ್ಲ, ನಿನಗೆ ನಾಚಿಕೆಯಾಗುವುದಿಲ್ಲವೇ” ಎಂದು ಯಾವುದೇ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳಬಲ್ಲ ಮನೋಬಲ ಮತ್ತು ದಾರ್ಷ್ಟ್ಯ ಇದ್ದದ್ದು ತುಳಸಿಗೌಡರಿಗೆ ಮಾತ್ರ ಎಂಬುದು ನನ್ನ ಸ್ಪಷ್ಟ ಅನಿಸಿಕೆ.

ಇಲ್ಲಿ ಒಂದು ಕಥೆ ನೆನಪಾಗುತ್ತದೆ. ಚಕ್ರವರ್ತಿ ನೃಪತುಂಗ ಮತ್ತು ಆತನ ಗುರು ಗಣಭದ್ರಾಚಾರ್ಯರ ನಡುವೆ ನಡೆದ ಘಟನೆಯಿದು. ಒಬ್ಬ ಪ್ರಜ್ಞಾವಂತ ಸೈನ್ಯಾಧಿಕಾರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದು ಅವರಿಬ್ಬರ ನಡುವೆ ಎದ್ದ ಪ್ರಶ್ನೆಯಾಗಿತ್ತು. ಅದಕ್ಕೆ ನೃಪತುಂಗನ ಗುರುಗಳು ಒಂದು ಪರಿಹಾರವನ್ನೂ ಸೂಚಿಸಿದ್ದರು. ಅರ್ಧ ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಸಸಿಗಳ ವನವನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಎಲ್ಲ ಬಗೆಯ ಗೊಬ್ಬರಗಳನ್ನು ಹಾಕಿ ಕಣ್ಣಿಗೆ ಗೋಚರವಾಗುವ ಮತ್ತು ಅಗೋಚರ ರೀತಿಯಲ್ಲಿ ಹಸಿರನ್ನು ಬೆಳೆಸುವುದೆಂದು ತೀರ್ಮಾನವಾಯಿತು. ಅಲ್ಲಿ ಎರಡು ಅಡಿಯಲ್ಲಿ ಅಂಕುಡೊಂಕು ದಾರಿಯನ್ನು ನಿರ್ಮಾಣ ಮಾಡಲಾಯಿತು. ಸೇನಾಧಿಕಾರಿ ಹುದ್ದೆಗೆ ಆಯ್ಕೆಯಾಗಬೇಕಾದ ಎಲ್ಲರೂ ಆ ದಾರಿಯಲ್ಲಿ ಸಾಗಿಬರುವಂತೆ ಸೂಚಿಸಲಾಗಿತ್ತು. ಆದರೆ ಎಲ್ಲರೂ ನಿಜವಾದ ಹಸಿರುಹಾದಿಯನ್ನು ಗಮನಿಸದೇ ನಡೆದುಕೊಂಡು ಬಂದರು. ಒಬ್ಬ ಮಾತ್ರ ಹಸಿರು ಎಲ್ಲೆಲ್ಲಿ ಇದೆ ಎಂಬುದನ್ನು ಗಮನಿಸಿ ಜಾಗೃತೆಯಿಂದ ಹೆಜ್ಜೆಇಟ್ಟು ನಡೆದು ಗುರಿತಲುಪಿ ಸೈನ್ಯಾಧಿಕಾರಿಯಾಗಿ ಆಯ್ಕೆಯಾದ.

ಶತ ಶತಮಾನಗಳಿಂದಲೂ ಮಾನವ ವಿಷಪೂರಿತ ಪದಾರ್ಥಗಳನ್ನು ಮಣ್ಣು, ನದಿ, ಬೆಟ್ಟ, ಸಮುದ್ರಕ್ಕೆ ಉಣಿಸಿ ಅಪರಾಧಗಳನ್ನು ಎಸಗುತ್ತಲೇ ಬಂದಿದ್ದಾನೆ. ಇದರಿಂದಾದ ದುಷ್ಪರಿಣಾಮಗಳಿಗೆ ಯಾವ ನ್ಯಾಯಾಲಯ ಶಿಕ್ಷೆ ಕೊಡಬೇಕು? ಶಿಕ್ಷೆ ಏನು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಜಾಗತಿಕ ಸಮಾವೇಶದಲ್ಲಿ 13-14 ವಯೋಮಾನದ ಗ್ರೇತ್ ಥನ್ಬರ್ಗ್ ಎತ್ತಿದ ಪರಿಸರ ಸಂಬಂಧಿತ ಪ್ರಶ್ನೆಗಳಿಗೆ ಖ್ಯಾತನಾಮರೇ ಉತ್ತರಿಸಲಾಗದೇ ತತ್ತರಿಸಿದ್ದನ್ನು ನಾವು ಕಂಡಿದ್ದೇವೆ.

ಅದೇ ರೀತಿಯಲ್ಲಿ ಪ್ರಾಮಾಣಿಕ, ಮುಗ್ಧರೂ ಆದ ತುಳಸಿ, ತಮ್ಮ ಅಂತರಾಳದಲ್ಲಿದ್ದ ಇಚ್ಛೆಗೆ ತಕ್ಕಂತೆ ಅನುವರ್ತಿಸಿದ್ದಾರೆ. ‘ಪದ್ಮಶ್ರೀ’ ಪ್ರಶಸ್ತಿ ಪಡೆಯಲು ಹೋಗುವ ಮುನ್ನ ನನ್ನನ್ನು ಸಂಪರ್ಕಿಸಿದ್ದರು. ‘ನಿಮ್ಮ ಎಂದಿನ ಉಡುಪು ಧರಿಸಿ ಸಹಜ ರೀತಿಯಲ್ಲಿ ಹೋಗಿ ಪ್ರಶಸ್ತಿ ಸ್ವೀಕರಿಸಿ’ ಎಂದು ಸಲಹೆ ಕೊಟ್ಟಿದ್ದೆ. ಅದನ್ನ ಅವರು ಪಾಲಿಸಿದ್ದರು. ತಾವು ಧರಿಸಿ ಹೋಗಿದ್ದ ಹವಾಯಿ ಚಪ್ಪಲಿಯನ್ನು ರಾಷ್ಟ್ರಪತಿ ಭವನದ ಬಾಗಿಲಯ ಬಳಿ ಬಿಟ್ಟು, ಸ್ಥಿತಪ್ರಜ್ಞರಾಗಿ ಸಹಜ ಉಡುಪಿನಲ್ಲಿ ಪ್ರಶಸ್ತಿ ಸ್ವೀಕರಿಸಿ ವಿಶ್ವದ ಗಮನ ಸೆಳೆದಿದ್ದರು. ದಿಗ್ಗಜರೆಲ್ಲರೂ ಇವರ ನಡೆಯನ್ನು ಮೆಚ್ಚಿದ್ದರು. ಹುಟ್ಟಿದೆಂದಿನಿಂದ ಸಾಯುವವರೆಗೂ ಅವರು ನಡೆದುಬಂದ ಹಾದಿಯಲ್ಲಿ ಯಾವ ಕೃತ್ರಿಮವೂ ಇರಲಿಲ್ಲ. ಎಲ್ಲವೂ ಸಹಜವಾಗಿತ್ತು.

ಜಗದೀಶಚಂದ್ರ ಬೋಸರು ಪ್ರಕೃತಿ ಮತ್ತು ಪರಿಸರದಿಂದ ಯಾವುದೇ ಲಾಭಾಪೇಕ್ಷೆ ಇಟ್ಟುಕೊಳ್ಳಬಾರದು ಎಂದಿದ್ದರು. ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ನಡೆದ ಒಂದು ಸಂವಾದದಲ್ಲಿ ಪಾಶ್ಚಿಮಾತ್ಯರು ರವೀಂದ್ರನಾಥ ಟಾಗೋರರ ಪ್ರಶ್ನಿಸಿ ‘ನಿಮ್ಮ ದೇಶದ ಜನರು ಪರಮ ಅನಾಗರಿಕರು’ ಎಂದು ಜರೆದಿದ್ದರು. ಅದಕ್ಕೆ ಉತ್ತರವಾಗಿ ಟಾಗೋರರು ‘ನಿಮ್ಮದು ನಗರಕೇಂದ್ರಿತ ನಾಗರಿಕತೆ, ಆದರೆ ನಮ್ಮ ನಾಗರಿಕತೆ ಹುಟ್ಟಿದ್ದೇ ಅರಣ್ಯದಲ್ಲಿ’ ಎಂಬ ಸಶಕ್ತ ಉತ್ತರವನ್ನು ಕೊಟ್ಟಿದ್ದರು.

ಇದನ್ನೆಲ್ಲ ಯಾಕೆ ಹೇಳಿದೆನೆಂದರೆ, ತುಳಸಿಗೌಡ ಕೂಡ ಹುಟ್ಟಿ ಬೆಳೆದಿದ್ದು ಅರಣ್ಯ ಪರಿಸರದಲ್ಲಿ. ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಸಿಗುವಂತೆ ಮಾಡಿದ್ದರ ಹಿಂದೆ ಕೆಲಸ ಮಾಡಿದ್ದೇನೆ. ಅವರಿಗೆ ಪದ್ಮಶ್ರೀ ಸಿಕ್ಕಿದ್ದು ನನಗೇ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಗಿತ್ತು. ಆದರೆ ಒಂದು ವಿಷಾದದ ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅವರಿಗೆ ಪ್ರಶಸ್ತಿಗಳೇನೋ ಸಿಕ್ಕವು. ಆದರೆ ಆರ್ಥಿಕವಾಗಿ ಸಿಗಬೇಕಿದ್ದ ಸವಲತ್ತುಗಳು ಕೊನೆತನಕವೂ ಸಿಕ್ಕಿಲ್ಲ. ಇದು ನಮ್ಮ ವ್ಯವಸ್ಥೆಯ ವಿಪರ್ಯಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.