ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ದಾರ್‌ಗೆ ಗೌರವ: ಪ್ರಜಾಸತ್ತಾತ್ಮಕ ಭಿನ್ನಮತಗಳಿಗೆ ಸಂಕುಚಿತ ಸಿಂಹಾಸನ...

Last Updated 7 ನವೆಂಬರ್ 2018, 20:29 IST
ಅಕ್ಷರ ಗಾತ್ರ

ಸೂರ್ಯಪ್ರಕಾಶ್ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ನ. 6) ‘ಸರ್ದಾರ್‌ಗೆ ಗೌರವ’ ಕೊಡುವ ಮತ್ತು ‘ಪಟೇಲ್‌ಸದೃಶ’ ಬದ್ಧತೆ ತೋರುವ ಸಹಜ ಗುಣ ಗೌರವದಿಂದ ನೆಹರೂ ಅವರನ್ನು ಟೀಕಿಸಿದ್ದಾರೆ.

ಸರ್ದಾರ್ ಪಟೇಲರ ಕೊಡುಗೆಯನ್ನು ನಾವೆಲ್ಲ ಗೌರವಿಸಲೇಬೇಕು. ಅವರ ದಿಟ್ಟ ನಿಲುವುಗಳು, ಮಂತ್ರಿಮಂಡಲದ ಒಪ್ಪಿಗೆಯನ್ನು ಪಡೆದು ಪರಿಣಾಮಕಾರಿ ಕ್ರಮಗಳಾಗಿ ಮಾರ್ಪಟ್ಟದ್ದು ಚಾರಿತ್ರಿಕ ಸಂಭವಗಳೇ ಸರಿ. ಇಲ್ಲಿ ಸರ್ಕಾರವೊಂದರ ಸಮರ್ಥ ಪ್ರತಿನಿಧಿಯಾಗಿ ಪಟೇಲರು ನಿರ್ವಹಿಸಿದ ಜವಾಬ್ದಾರಿ ಅನನ್ಯ.

ಇಂತಹ ವ್ಯಕ್ತಿತ್ವವನ್ನು ಹೊಗಳಲು ಒಬ್ಬ ‘ವೈರಿ’ಯನ್ನು ಸೃಷ್ಟಿಸುವ ಅಗತ್ಯವೇ ಇಲ್ಲ. ನೆಹರೂ ಅವರನ್ನು ತೆಗಳಿ, ಪಟೇಲರಿಗೆ ಗೌರವ ಕೊಡುವುದು ಗೌರವ ಎನ್ನಿಸುವುದಿಲ್ಲ. ಒಂದರ್ಥದಲ್ಲಿ ವೈರಿಯನ್ನು ಸೃಷ್ಟಿಸಿ ಹೊಗಳುವ ವಿಧಾನವು‍ಪಟೇಲರ ಸ್ವತಂತ್ರ ವ್ಯಕ್ತಿತ್ವಕ್ಕೆ ಮಾಡುವ ಅವಮಾನವೂ ಆಗುತ್ತದೆ.

ಇಷ್ಟಕ್ಕೂ ಭಿನ್ನಾಭಿಪ್ರಾಯಗಳಿಲ್ಲದ ಕ್ಷೇತ್ರ ಯಾವುದಿದೆ? ಭಿನ್ನಾಭಿಪ್ರಾಯಗಳಿಲ್ಲದ ವ್ಯಕ್ತಿಗಳು, ವ್ಯಕ್ತಿತ್ವಗಳು ಎಲ್ಲ ವಲಯದಲ್ಲೂ ಇಲ್ಲವೆ? ಹಾಗೆ ನೋಡಿದರೆ ಗಾಂಧಿಯವರ ಜೊತೆ ಕೆಲವು ವಿಷಯಗಳಲ್ಲಿ ನೆಹರೂ ಅವರನ್ನೂ ಒಳಗೊಂಡಂತೆ ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಭಗತ್‌ ಸಿಂಗ್ ಅವರಿಗೂ ಭಿನ್ನಾಭಿಪ್ರಾಯಗಳಿದ್ದವು.

ಆದರೆ ಅವರು ಯಾರೂ ಪರಸ್ಪರ ಶತ್ರುಗಳಾಗಿರಲಿಲ್ಲ. ಗಾಂಧಿ–ಇರ್ವಿನ್ ಒಪ್ಪಂದವನ್ನು ನೆಹರೂ–‍ಬೋಸ್‌ ಒಟ್ಟಿಗೇ ವಿರೋಧಿಸಿದ್ದರೂ ಗಾಂಧಿಯವರನ್ನು ವೈರಿಸ್ಥಾನದಲ್ಲಿ ಇಟ್ಟಿರಲಿಲ್ಲ. ಆರ್ಥಿಕ ವಿಷಯಗಳಲ್ಲಿ ಗಾಂಧಿಗೆ ನೆಹರೂ ಜೊತೆ ಭಿನ್ನಾಭಿಪ್ರಾಯವಿದ್ದರೂ ಜಾತ್ಯತೀತತೆಯ ಬದ್ಧತೆಗಾಗಿ ನೆಹರೂ ಅವರು‍ಪ್ರಧಾನಿಯಾಗಬೇಕೆಂದು ಬಯಸಿದ್ದು, ಮಾಡಿದ್ದು ಈಗ ಇತಿಹಾಸ.

ಪಟೇಲ್ ಅವರು ನೆಹರೂ ಸಚಿವ ಸಂಪುಟದ ಭಾಗ ಎಂಬುದೂ ಚರಿತ್ರೆಯ ವಾಸ್ತವ. ಆದರೆ ಪಟೇಲರು ಯಾರ ಪಡಿಯಚ್ಚೂ ಅಲ್ಲ. ಆದ್ದರಿಂದ ನೆಹರೂ ಅವರನ್ನು ಟೀಕಿಸಿ ಪಟೇಲ್ ಅವರಿಗೆ ಗೌರವ ತಂದುಕೊಡುವ ದುರ್ಗತಿಗೆ ನಮ್ಮ ಇತಿಹಾಸ ಪ್ರಜ್ಞೆ ಈಡಾಗಬಾರದು.
ಪಟೇಲರ ಘನತೆಗೆ ಚ್ಯುತಿ ತರಬಾರದು. ಪ್ರಜಾಸತ್ತಾತ್ಮಕ ಭಿನ್ನಮತಗಳಿಗೆ ಸಂಕುಚಿತ ಸಿಂಹಾಸನ ಹಾಕಿ ಸಿನಿಕರಾಗಬಾರದು.

-ಬರಗೂರು ರಾಮಚಂದ್ರಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT