ಬುಧವಾರ, ಏಪ್ರಿಲ್ 1, 2020
19 °C

ವಿಕೃತ ಭಾಷೆ: ಕಾರಣ ಅರಿಯಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ವಿಕೃತ ಭಾಷೆಯ ಪರಿಣಾಮದ ಬಗ್ಗೆ ಚಿಂತಿಸಬೇಕಿದೆ’ ಎಂಬ ಕಳಕಳಿಯಿಂದ ಕೃಷ್ಣ ಪ್ರಸಾದ್ ಅವರು  ಬರೆದಿರುವ ಲೇಖನ (ಪ್ರ.ವಾ., ಮಾರ್ಚ್‌ 16) ಓದುತ್ತಿದ್ದಂತೆಯೇ, ಪರಿಣಾಮದ ಜತೆಗೆ ಕಾರಣಗಳನ್ನೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎನಿಸಿತು. ಕೆಲವು ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿರುವ ರಾಜಕಾರಣಿಗಳಲ್ಲಿ ಮತ್ತು ಜಾತಿ, ಧರ್ಮ, ದೇವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟದ ಪದಾಧಿಕಾರಿಗಳಲ್ಲಿ ಹಲವರು ಯಾವುದೇ ಬಗೆಯ ನಾಚಿಕೆ, ಮುಜುಗರ, ಹೆದರಿಕೆ ಮತ್ತು ಹಿಂಜರಿಕೆಯಿಲ್ಲದೆ ತಮ್ಮ ಎದುರಾಳಿಗಳನ್ನು ಗುಂಡಿಕ್ಕಿ ಕೊಲ್ಲುವ, ಕೈಕಾಲು ಮುರಿಯುವ ಬೆದರಿಕೆಯ ನುಡಿಗಳನ್ನು ಮತ್ತು ಎದುರಾಳಿಗಳ ವ್ಯಕ್ತಿತ್ವವನ್ನೇ ಅಲ್ಲಗಳೆಯುವ ಬೈಗುಳದ ಮಾತುಗಳನ್ನು ಆಡತೊಡಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ರಾಜಕೀಯವಾಗಿ  ದೊರೆಯುವ ಅಧಿಕಾರ, ಸಂಪತ್ತು. ಇವನ್ನು ಪಡೆಯಲು ಬೇಕಾಗುವ ಬಲಗಳೆಂದರೆ ಜಾತಿಬಲ, ಹಣಬಲ ಮತ್ತು ತೋಳ್ಬಲ.  

ಈ ಬಲಗಳ ಜತೆಗೆ ರಾಜಕೀಯ ಬಲವೂ ಸೇರಿದ್ದರೆ, ಸಂವಿಧಾನದತ್ತವಾಗಿ ಸ್ಥಾಪನೆಗೊಂಡಿರುವ ಕೆಲವು ಸಂಸ್ಥೆಗಳು ಅವರ ಕಣ್ಸನ್ನೆಗೆ ತಕ್ಕಂತೆ ನಡೆದುಕೊಳ್ಳುತ್ತವೆ. ಈ ರೀತಿ ನಾಲ್ಕೂ ಬಲಗಳನ್ನು ಹೊಂದಿರುವ ವ್ಯಕ್ತಿಗಳು ಸಾರ್ವಜನಿಕ ರಂಗದಲ್ಲಿ ಯಾವ ಎಗ್ಗೂ ಇಲ್ಲದೆ ಕೆಟ್ಟ ಭಾಷೆಯನ್ನು ಬಳಸುತ್ತಿದ್ದಾರೆ. ಯಾವುದೇ ಒಂದು ರಾಜ್ಯ ಇಲ್ಲವೇ ದೇಶದಲ್ಲಿ ಜನಸಮುದಾಯ ನೆಮ್ಮದಿಯಿಂದ ಬಾಳಬೇಕಾದರೆ ಜನರಲ್ಲಿ ಮಾನವೀಯ ಗುಣ, ಸಂವಿಧಾನಬದ್ಧ ನಿಯಮಗಳಿಗೆ ಅನುಗುಣವಾಗಿ ನಡೆದು ಕೊಳ್ಳಬೇಕೆಂಬ ಎಚ್ಚರ ಇರಬೇಕು. ಎಲ್ಲಿ ಅದು ಇಲ್ಲವಾಗುತ್ತದೋ ಆಗ ಕೆಟ್ಟ ವರ್ತನೆ ಜತೆಗೆ ಕೆಟ್ಟ ಭಾಷೆಯೂ ಅಡೆತಡೆಯಿಲ್ಲದೆ ಬಳಕೆಯಾಗತೊಡಗುತ್ತದೆ.

ಸಿ.ಪಿ.ನಾಗರಾಜ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)