ಶನಿವಾರ, ಜನವರಿ 18, 2020
20 °C

ಜಿಲ್ಲಾವಾರು ರ‍್ಯಾಂಕಿಂಗ್‌ ಸ್ಥಗಿತ: ಸ್ವಾಗತಾರ್ಹ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನೀಡುವ ಜಿಲ್ಲಾವಾರು ರ‍್ಯಾಂಕಿಂಗ್‌ ಪದ್ಧತಿಯನ್ನು ತೆಗೆದುಹಾಕುವ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಚಿಂತನೆ ನಡೆಸಿರುವುದು ಸ್ವಾಗತಾರ್ಹ ವಿಚಾರ. ಏಕೆಂದರೆ ಎಲ್ಲ ಶಾಲೆಗಳಲ್ಲೂ ಶಿಕ್ಷಕರು ಒಂದೇ ಮಟ್ಟದಲ್ಲಿ ಬೋಧಿಸಿರುತ್ತಾರೆಯೇ?

ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ನೀತಿ ನಿಯಮಗಳನ್ನು ಪಾರದರ್ಶಕವಾಗಿಲಿಸಿರುತ್ತಾರೆಯೇ? ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಶಿಕ್ಷಕರೆಲ್ಲಾ ಒಂದೇ ಬಗೆಯ ಮಾನಸಿಕ ಸಾಮರ್ಥ್ಯ ಹೊಂದಿದವರಾಗಿರುತ್ತಾರೆಯೇ? ಈ ಎಲ್ಲ ಪ್ರಶ್ನೆಗಳಿಗೂ ‘ಇಲ್ಲ’ ಎಂಬ ಉತ್ತರ ಸಿಗುತ್ತದೆ.

ರಾಜ್ಯದಾದ್ಯಂತ ಒಂದೇ ಪ್ರಶ್ನೆಪತ್ರಿಕೆ ಎನ್ನುವುದನ್ನು ಬಿಟ್ಟರೆ ಹಲವಾರು ಸಂದರ್ಭಗಳಲ್ಲಿ ವಿಭಿನ್ನ ದೃಷ್ಟಿಕೋನಗಳು ಇರುತ್ತವೆ. ಹೀಗಿದ್ದಾಗ ರ‍್ಯಾಂಕಿಂಗ್‍ಗೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯಗಳು ಸಹಜವೇ. ಅಲ್ಲದೆ ಜಿಲ್ಲಾವಾರು ಮೊದಲ ಸ್ಥಾನ ಬರಲು ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು ಮೊದಲಾದವರು ಉಪನಿರ್ದೇಶಕರ ಮೇಲೆ, ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಮೇಲೆ, ಕೊನೆಗೆ ಶಿಕ್ಷಕರು ಮಕ್ಕಳ ಮೇಲೆ ಒತ್ತಡ ಹಾಕುತ್ತಾರೆ.

ಹೀಗೆ ಒಬ್ಬರ ಮೇಲೆ ಒಬ್ಬರು ಒತ್ತಡ ಹಾಕುವುದರಿಂದ ವಿವಿಧ ಮನೋಸಾಮರ್ಥ್ಯ, ಬುದ್ಧಿಶಕ್ತಿಯನ್ನು ಹೊಂದಿರುವ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ರ‍್ಯಾಂಕಿಂಗ್‌ ಪದ್ಧತಿಯಿಂದ ಜಿಲ್ಲೆಗಳ ನಡುವೆ ಅನಾರೋಗ್ಯಕರ ಸ್ಪರ್ಧೆಯೂ ಏರ್ಪಟ್ಟಿದೆ. ಆದ್ದರಿಂದ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಈ ಪದ್ಧತಿ ನಿಲ್ಲಿಸುವುದು ಸರಿ.

–ಗಿರಿಜಾಶಂಕರ್ ಜಿ.ಎಸ್., ನೇರಲಕೆರೆ, ತರೀಕೆರೆ

ಪ್ರತಿಕ್ರಿಯಿಸಿ (+)