ಪಾಠವಾದೀತೇ ಈ ಫಲಿತಾಂಶ?

7

ಪಾಠವಾದೀತೇ ಈ ಫಲಿತಾಂಶ?

Published:
Updated:

ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಭಾರತದ ರಾಜಕೀಯ ಸ್ಥಿತಿಯ ಬಗ್ಗೆ ಮಹತ್ವದ ಚರ್ಚೆಗೆ ನಾಂದಿ ಹಾಡಿದೆ. ‘ಇನ್ನು ಮುಂದೆ ಸಮ್ಮಿಶ್ರ ಸರ್ಕಾರಗಳ ಯುಗ’ ಎಂಬ ರಾಜಕೀಯ ವಿಶ್ಲೇಷಣೆಗಳನ್ನು ಮೀರಿ, 2014ರಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿಯ ಜನಪ್ರಿಯತೆಯ ಹೊಳಪು ನಾಲ್ಕೇ ವರ್ಷಗಳಲ್ಲಿ ಮಸುಕಾಗಿದೆ.

ಈ ಬೆಳವಣಿಗೆಗೆ ಮುಖ್ಯವಾಗಿ ಮೂರು ಕಾರಣಗಳನ್ನು ಗುರುತಿಸಬಹುದು. ಮೊದಲನೆಯದು, ಪ್ರಜಾಪ್ರಭುತ್ವದಲ್ಲಿ ಒಂದು ವ್ಯವಸ್ಥೆಯಾಗಿ ವರ್ತಿಸಬೇಕಾದ ರಾಜಕೀಯ ಪಕ್ಷವೊಂದು ವ್ಯಕ್ತಿಕೇಂದ್ರಿತವಾದ ನಿರೂಪಣೆಗಳನ್ನು ಒಪ್ಪಿಕೊಂಡಿದ್ದು ಮತ್ತು ಧರ್ಮ, ರಾಷ್ಟ್ರೀಯತೆ, ಗೋವು, ಮಂದಿರ ಇತ್ಯಾದಿ ಚರ್ಚೆಗಳ ಭರದಲ್ಲಿ, ಜನರ ಅದ್ಯತೆಗಳಾದ ಉದ್ಯೋಗ, ಆಹಾರ, ಆರೋಗ್ಯದಂತಹ ಮಹತ್ವದ ವಿಷಯಗಳನ್ನು ಕಡೆಗಣಿಸಿದ್ದು.

ಎರಡನೆಯದು, ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯ ಒಟ್ಟು ಧೋರಣೆ ಮತ್ತು ಪ್ರಚಾರ ತಂತ್ರ ಮೋದಿ ಅವರನ್ನು ಕೇಂದ್ರೀಕರಿಸಿದ್ದಾಗಿತ್ತು. ಇಲ್ಲಿ ಗಮನಿಸಬೇಕಾದ ಆಸಕ್ತಿಕರ ಅಂಶವೆಂದರೆ, ಆ ಪಕ್ಷ ಕಾಂಗ್ರೆಸ್‌ ಅನ್ನು ಹಾಗೆ ಎಂದುಕೊಂಡು ಚುನಾವಣಾ ತಂತ್ರ ರೂಪಿಸಿದ್ದು.

ಮೂರನೆಯದು ಮತ್ತು ಮಹತ್ವದ್ದು; ನಾಯಕತ್ವ ಎಂಬುದು ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ರೂಪಿಸುವ ಹುಸಿ ವ್ಯಕ್ತಿಚಿತ್ರಣವಲ್ಲ. ನಿಜವಾದ ನಾಯಕತ್ವ ಜನರ ಜೊತೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ನೆಲೆಯಲ್ಲಿ ಇರುತ್ತದೆ ಎಂಬುದನ್ನು ಈ ಚುನಾವಣೆಯು ರಾಜಕೀಯ ಪಕ್ಷಗಳ ಮುಂದಿಟ್ಟಿದೆ. ಆಧುನಿಕ ಸಂವಹನ ಮಾಧ್ಯಮಗಳನ್ನು ಬಹುವಾಗಿ ನಂಬಿಕೊಂಡ ಮೋದಿ ಮತ್ತು ತಂಡವು ‘ಸಮುದಾಯ ಸಂವಹನ’ ಎಂಬ ಮಹತ್ವದ ಸಾಮಾಜಿಕ ರಚನೆಯನ್ನು ಮರೆತಂತಿದೆ. ಅದರ ಒಟ್ಟು ಪರಿಣಾಮವೇ ಈ ಫಲಿತಾಂಶ ಎಂಬುದನ್ನು ಬಿಜೆಪಿ ಗ್ರಹಿಸಬೇಕಿದೆ.

ಕಿರಣ್ ಎಂ. ಗಾಜನೂರು, ಬೆಂಗಳೂರು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !