ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಆರೋಗ್ಯ ಸೇವೆಗೆ ಅಲೆದಾಟ - ಓದುಗರ ಪ್ರತಿಕ್ರಿಯೆಗಳು

Last Updated 29 ಜನವರಿ 2023, 10:41 IST
ಅಕ್ಷರ ಗಾತ್ರ

‘ಆರೋಗ್ಯ ಸೇವೆಗೆ ಅಲೆದಾಟ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜನವರಿ 29) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಜನಸಾಮಾನ್ಯರಿಗೆ ಮುಟ್ಟುವಲ್ಲಿ ಸೋಲು’

‘ಯಶಸ್ವಿನಿ’ ಯೋಜನೆಯನ್ನು ಮರುಜಾರಿಗೊಳಿಸುತ್ತಿರುವ ಸರ್ಕಾರದ ನಡೆ ಸ್ವಾಗತಾರ್ಹ. ಇದರಿಂದ ಎಷ್ಟೋ ಕುಟುಂಬಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗುತ್ತದೆ. ಆರೋಗ್ಯ ಕ್ಷೇತ್ರದ ಬಹುಪಾಲು ಯೋಜನೆಗಳು ಜನ ಸಾಮಾನ್ಯರನ್ನು ಮುಟ್ಟುವಲ್ಲಿ ಸೋಲುತ್ತಿವೆ. ಎಷ್ಟೋ ಆಸ್ಪತ್ರೆಗಳು ಸರ್ಕಾರದ ಯೋಜನೆಯ ಹೆಸರು ಹೇಳಿಕೊಂಡು ಬರುವ ಜನರು ಬಳಿಯೂ ಹಣ ಪೀಕುತ್ತಿರುವ ಉದಾಹರಣೆಗಳಿವೆ. ಈ ಮನಸ್ಥಿತಿ ಬದಲಾಗಬೇಕು, ಸರ್ಕಾರ ಇಂತಹ ನಡೆಗೆ ಕಡಿವಾಣ ಹಾಕಲೇಬೇಕು. ಆಗ ಮಾತ್ರ ಜನರಿಗೆ ಇಂತಹ ಯೋಜನೆಗಳ ಬಗ್ಗೆ ಒಲವು ಮೂಡುತ್ತದೆ.

ಪ್ರಮೋದ್ ಕೆ ಬಿ, ಸಂಶೋಧಕ, ಮೈಸೂರು ವಿಶ್ವವಿದ್ಯಾಲಯ

==

‘ಆರೋಗ್ಯ ಸೇವೆ ಒದಗಿಸಲು ಸರ್ಕಾರ ವಿಫಲ’

ಸರ್ಕಾರ ಜನಸಾಮಾನ್ಯರಿಗೆ ನೀಡುವ ಉಚಿತ ಆರೋಗ್ಯ ಸೇವೆ ಸಂಪೂರ್ಣ ವಿಫಲವಾಗಿದೆ. 1995ಕ್ಕಿಂತ ಮುಂಚೆ ಉಚಿತ ಆರೋಗ್ಯ ಸೇವೆ ಸರಿಯಾಗಿ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆ ಬದ್ಧತೆ ಕಡಿಮೆಯಾಗಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಆರೋಗ್ಯ ಯೋಜನೆಗಳು ಚಿಕಿತ್ಸೆ ಪಡೆದುಕೊಳ್ಳಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ.

ಡಾ. ರವಿ ಕುಮಾರ್ ಬಿ. ಸುರಪುರ, ನಿವೃತ್ತ ಆರೋಗ್ಯಾಧಿಕಾರಿ

==

‘ಸರ್ಕಾರ ಜನರ ಆರೋಗ್ಯದೊಂದಿಗೆ ಆಟವಾಡದಿರಲಿ’

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ಯೋಜನೆಗಳು ಹಲ್ಲಿಲ್ಲದ ಹಾವಿನಂತಾಗಿವೆ. ಯೋಜನೆಗಳು ಕೇವಲ ಘೋಷಿಸಿದರೆ ಅಷ್ಟೇ ಸಾಲದು ಅದರ ಜೊತೆಗೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಅರ್ಹ ಫಲಾನುಭವಿಗಳು ಪಾರದರ್ಶಕವಾಗಿ ಯೋಜನೆಯ ಲಾಭ ಪಡೆಯುವಂತಾಗಬೇಕು. ಖಾಸಗಿ ಆಸ್ಪತ್ರೆಗಳ ದುಬಾರಿ ಸೇವೆಗೆ ಮೂಗುದಾರ ಹಾಕಿ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಸರ್ಕಾರ ಕಾರ್ಯಪ್ರವೃತ್ತವಾಗುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಆರೋಗ್ಯವೇ ಭಾಗ್ಯ ಆದರೆ ಯೋಜನೆ ಸಮರ್ಪಕವಾಗಿ ಜಾರಿಗೆ ಬಾರದಿರುವುದು ನಮ್ಮ ದೌರ್ಭಾಗ್ಯ! ಸರ್ಕಾರ ಜನರ ಆರೋಗ್ಯದ ಜೊತೆ ಆಟವಾಡದಿರಲಿ.

–ಸಂತೋಷಕುಮಾರ ಎಸ್ ಲಾಡಮುಗಳಿ , ಗುಲ್ಬರ್ಗಾ

==

‘ಕೈಗೆಟುಕದ ಆರೋಗ್ಯ ಸೇವೆಗಳು’

ಬಡವರಿಗೆ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಯಶಸ್ವಿನಿ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಸೇವೆಗಳು ಜನರ ಕೈಗೆಟುಕದಂತಾಗಿವೆ. ಬಿಪಿಎಲ್ ಕಾರ್ಡ್‌ ಹೊಂದಿದ ಕುಟುಂಬಗಳಿಗೆ ವರ್ಷಕ್ಕೆ ₹5 ಲಕ್ಷದವರೆಗೆ ಆರೋಗ್ಯ ವಿಮಾ ಇದೆ. ಆದರೆ, ಆಸ್ಪತ್ರೆಗಳು ಮಾತ್ರ ಚಿಕಿತ್ಸೆಗಾಗಿ ಅಧಿಕ ಹಣ ಪಡೆಯುತ್ತಿವೆ. ರೋಗಿಗಳು ಯಾವುದೇ ಆಸ್ಪತ್ರೆಗೆ ಹೋದರು ಆಸ್ಪತ್ರೆಗಳು ಹೇಳುವುದು ಒಂದೇ ಆ ಸೇವೆ ನಮ್ಮಲಿಲ್ಲ. ಎಲ್ಲ ಆಸ್ಪತ್ರೆಗಳು ಇದೇ ರೀತಿ ಹೇಳಿದರೆ ಈ ಯೋಜನೆಗಳ ಉದ್ದೇಶವಾದರೂ ಏನೆಂಬುದು ತಿಳಿಯುತ್ತಿಲ್ಲ. ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಅಡಿ ನೊಂದಾಯಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಪೂರ್ಣಪ್ರಮಾಣದ ಚಿಕಿತ್ಸೆ ದೊರೆಯುತ್ತಿಲ್ಲ. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳು, ಆರೋಗ್ಯ ಕಾರ್ಡ್ ಹೊಂದಿದ್ದರೂ, ಆರೋಗ್ಯ ಕೇಂದ್ರಗಳಲ್ಲಿ ಇದನ್ನು ಹೊರತುಪಡಿಸಿ ನೂರೆಂಟು ದಾಖಲೆಗಳನ್ನು ಕೇಳುತ್ತಾರೆ. ಈ ಸಮಸ್ಯೆಯನ್ನು ಸರ್ಕಾರ ಶೀಘ್ರವಾಗಿ ಪರಿಶೀಲಿಸಿ ಜನರಿಗೆ ಆರೋಗ್ಯ ಸೌಲಭ್ಯಗಳು ದೊರೆಯುವಂತೆ ಮಾಡಬೇಕಿದೆ.

ಗಿರೀಶ ಜೆ., ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ ತುಮಕೂರು ವಿಶ್ವವಿದ್ಯಾಲಯ

==

‘ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಿ’

ರಾಜ್ಯದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಬೇಕು. ಆದರೆ, ಸಾರ್ವಜನಿಕರಿಗೆ ಮಾಹಿತಿಯ ಕೊರತೆಯಿಂದ ಈ ಯೋಜನೆಗಳು ವಿಫಲವಾಗುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ರಾಜ್ಯದಲ್ಲಿ ಕಳೆದ 7 ವರ್ಷಗಳಿಂದ ಆರೋಗ್ಯ ನಿರೀಕ್ಷಣಾಧಿಕಾರಿಗಳ ನೇಮಕಾತಿಯಾಗಿಲ್ಲ. ಆರೋಗ್ಯ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುಲ್ಲಿ ವಿಫಲವಾಗುವುದಕ್ಕೆ ಇದು ಒಂದು ಕಾರಣವಾಗಿದೆ.

–ದರ್ಶನ್ ಎಸ್. ಎನ್, ಸರಗೂರು,ಮೈಸೂರು..

==

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT