ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ನಕಾರಾತ್ಮಕ ಚಿಂತನೆ ಬಾಲಿಶ

Last Updated 8 ನವೆಂಬರ್ 2021, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು ನಾಲ್ಕು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ಈ ವರ್ಷ ಆರಂಭಿಸುತ್ತಿರುವುದರ ಕುರಿತು, ‘ಆತುರ ಪ್ರಯೋಗಕ್ಕೇ ಮಾರಕ’ ಎಂಬ ಡಾ. ತಾರಕೇಶ್ವರ್ ವಿ.ಬಿ. ಅವರ ಲೇಖನ (ಪ್ರ.ವಾ., ನ. 5) ವಸಾಹತುಶಾಹಿ ಚಿಂತನೆಗೆ ಸಾಕ್ಷಿ ಎಂದೇ ಹೇಳಬೇಕಾಗಿದೆ. ‘ಪ್ರತಿಭಾವಂತರಾಗಿದ್ದೂ ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತನಾಡುವುದಕ್ಕೆ ಕಷ್ಟವಾಗುತ್ತದೆ ಅನ್ನುವ ಕಾರಣಕ್ಕೇ ಕೆಲಸ ಸಿಗದೆ ಇರುವಾಗ, ಪೂರ್ತಿಯಾಗಿ ಕನ್ನಡದಲ್ಲಿ ಕಲಿತ ಕಾರಣಕ್ಕೆ ಕೆಲಸ ಸಿಗದೆ ಹೋದರೆ ಈ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುವ ಸಾಧ್ಯತೆ ಇದೆ’ ಎಂಬ ನಕಾರಾತ್ಮಕ ಚಿಂತನೆ ಬಾಲಿಶ. ತಾಂತ್ರಿಕ ಜ್ಞಾನದ ಪರಿಣತಿ ಕೆಲಸದ ಆಯ್ಕೆಗೆ ಪ್ರಥಮ ಆದ್ಯತೆಯಾಗುತ್ತದೆಯೇ ಹೊರತು ಭಾಷಾ ಪರಿಣತಿ ಅಲ್ಲ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಕೆಲಸದ ಸಂದರ್ಭದಲ್ಲಿ ಅಗತ್ಯವಿರುವ ವ್ಯಾವಹಾರಿಕ ಇಂಗ್ಲಿಷ್ ಜ್ಞಾನ ಪ್ರಾಪ್ತವಾಗಿರುವುದಿಲ್ಲವೇ?

ಕೆಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ, ‘ಪ್ರಾದೇಶಿಕ ಭಾಷೆಯನ್ನು ಬಳಸಬಾರದು’ ಎಂದು ಅಲ್ಲಲ್ಲಿ ಫಲಕಗಳನ್ನು ಹಾಕಿರುತ್ತಾರೆಂದು ನನ್ನ ವಿದ್ಯಾರ್ಥಿಗಳು ನನಗೆ ಹೇಳಿರುವುದುಂಟು (ಪ್ರಸ್ತುತ ಹೇಗೋ ನಾನರಿಯೆ). ಅದು ಆ ಕಂಪನಿಯವರು ಮಾಡುತ್ತಿರುವ ರಾಜ್ಯದ್ರೋಹ ತನ್ಮೂಲಕ ರಾಷ್ಟ್ರದ್ರೋಹವೂ ಹೌದು. ಅದನ್ನು ಸರ್ಕಾರ ಹಾಗೂ ಸಮಾಜ ನಿಯಂತ್ರಿಸಬೇಕು. ಆದರೂ ಅದು ಕೂಡ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಾತ್ರಕ್ಕೆ ಸಮಸ್ಯೆಯಾದೀತು ಎಂಬುದು ವೃಥಾ ಭೀತಿ ಸೃಷ್ಟಿ; ಒಂದು ವರ್ಗದ ಭ್ರಮಾತ್ಮಕ ಚಿಂತನೆಯ ಫಲ. ಪಾರಿಭಾಷಿಕ ಪದಗಳ ಕನ್ನಡ ರೂಪಗಳು ಕ್ಲೀಷೆಯಾದರೆ ಇಂಗ್ಲಿಷ್‌ ಪದವನ್ನೇ ಕನ್ನಡೀಕರಣಗೊಳಿಸಿಕೊಂಡರೆ ಆಗದೆ? ಇಂಗ್ಲಿಷ್‌ನಲ್ಲಿ ಜಗತ್ತಿನ ಎಲ್ಲ ಭಾಷಾ ಪದಗಳು ಸೇರಿಕೊಂಡಿಲ್ಲವೆ?

ಇನ್ನುದ್ವಿಭಾಷಾ ಮಾಧ್ಯಮ; ಇಂದು ಅತ್ಯುತ್ತಮ ಅಂಕ ಗಳಿಕೆಗೆ ಹೆಸರಾದ ಅನೇಕ ಪ್ರೌಢಶಾಲೆಗಳಲ್ಲಿ ಮಾಧ್ಯಮವು ಇಂಗ್ಲಿಷ್ ಆಗಿದ್ದರೂ ಶಿಕ್ಷಕರು ತರಗತಿಯಲ್ಲಿ ಹಾಗೂ ತರಗತಿಯ ಹೊರಗೆ ವಿದ್ಯಾರ್ಥಿಗಳೊಂದಿಗೆ ಕನ್ನಡವನ್ನು ಬಳಸುತ್ತಿರುವುದು ವಾಸ್ತವ ಸತ್ಯವಷ್ಟೇ ಅಲ್ಲ, ಅದು ಆ ಸಂಸ್ಥೆಗಳ ಉತ್ತಮ ಸಾಧನೆಗೆ ಕಾರಣವೂ ಹೌದು. ಒಟ್ಟಿನಲ್ಲಿ ತರಗತಿಗಳಲ್ಲಿ ಬೋಧನೆ ಸರಿಯಾಗಿ ನಡೆದರೆ ಉಳಿದದ್ದೆಲ್ಲ ತನಗೆ ತಾನೆ ಸರಿಹೋಗುತ್ತದೆ. ಅಂದಮಾತ್ರಕ್ಕೆ ಈ ವಿಷಯದಲ್ಲಿ ಚರ್ಚೆ, ಸಂವಾದ, ಸಂಶೋಧನೆ- ಏನೆಲ್ಲ ಎಚ್ಚರಗಳು ಅನಗತ್ಯ ಎಂದು ಯಾರೂ ಅಭಿಪ್ರಾಯಪಡಲಾರರು.

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT