ಮಾದರಿ ನಡೆ

7

ಮಾದರಿ ನಡೆ

Published:
Updated:

ಮಕ್ಕಳ ಜೊತೆ ಬಿಸಿಯೂಟ ಸವಿದ ಶಿಕ್ಷಣ ಸಚಿವ ಎನ್. ಮಹೇಶ್ (ಪ್ರ.ವಾ., ಆ. 10) ಅವರ ನಡೆ ನಿಜಕ್ಕೂ ಮಾದರಿಯಾದುದು.

ಶಾಲೆಯಲ್ಲಿ ಬಿಸಿಯೂಟ ಸವಿಯಲು ಹಲವು ಶಿಕ್ಷಕರೇ ಹಿಂದು ಮುಂದು ನೋಡುತ್ತಾರೆ. ಶಾಲೆಯಲ್ಲಿ ಊಟ ಲಭ್ಯವಿದ್ದರೂ ಬಹುತೇಕರು ಮನೆಯಿಂದಲೇ ಊಟ ತರುತ್ತಾರೆ. ಅಕ್ಕಿ ಸರಿ ಇರಲ್ಲ, ಬೇಳೆ ಸರಿ ಇರಲ್ಲ, ಎಣ್ಣೆ ಚೆನ್ನಾಗಿಲ್ಲ, ಅನ್ನ ಬೆಂದಿರುವುದಿಲ್ಲ... ಅಡುಗೆ ಮಾಡುವವರು ನಮ್ಮವರಲ್ಲ, ಅಕಸ್ಮಾತ್ ಅಡುಗೆ ಮಾಡುವವರು ಅಥವಾ ಸಹಾಯಕರು ದಲಿತರಾಗಿದ್ದರೆ,
‘ಅವರು ಮಾಡಿದ ಅಡುಗೆಯನ್ನು ನಾವು ಊಟ ಮಾಡುವುದೇ?’ಎಂಬ ಮನೋಭಾವ. ಒಟ್ಟಿನಲ್ಲಿ ವಿವಿಧ ಕಾರಣಗಳಿಗಾಗಿ ಹಲವು ಶಿಕ್ಷಕರು ಶಾಲೆಯಲ್ಲಿ ಬಿಸಿಯೂಟ ಸೇವಿಸುವುದಿಲ್ಲ. ಕೆಲವು ಮಕ್ಕಳೂ ಇಂಥ ಶಿಕ್ಷಕರನ್ನು ಅನುಸರಿಸುತ್ತಾರೆ.

ಶಾಲೆ ಎಂಬುದು ಮಿನಿ ಸಮಾಜ. ಎಲ್ಲರೂ ಒಂದೇ ಎನ್ನುವ ಆಶಯದ, ಸಮಾನತೆಯನ್ನು ಸಾರುವ ದೇಗುಲ ಅದು. ಕ್ಷುಲ್ಲಕ ಕಾರಣ ಹೇಳಿ, ಶಾಲೆಯಲ್ಲಿ ಬಿಸಿಯೂಟ ಸವಿಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಿಲುವು ಸಮಾನತೆ ಮತ್ತು ಸಹೋದರತೆಯ ತತ್ವಕ್ಕೆ ಭಂಗ ತರುವಂಥದ್ದು.
ಇಂಥ ಮನಸ್ಥಿತಿಯ ಜನರ ನಡುವೆ ಶಿಕ್ಷಣ ಸಚಿವರು ಮಕ್ಕಳ ಜತೆ ಕುಳಿತು ಊಟ ಮಾಡಿರುವುದರಿಂದ ಶಾಲೆಗಳೆಂಬ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಸಚಿವರ ಈ ನಡೆಯು ಇತರರಿಗೆ ಮಾದರಿಯಾಗಲಿ

ರಘೋತ್ತಮ ಹೊ.ಬ., ಆಲನಹಳ್ಳಿ

***

ಕೋಳಿ ಕೇಳಿ ಮಸಾಲೆ...?

‘ಚುನಾವಣೆಯಲ್ಲಿ ಸ್ಪರ್ಧಿಸಲು ಅಪರಾಧಿಗಳಿಗೆ ಟಿಕೆಟ್ ನೀಡುವ ರಾಜಕೀಯ ಪಕ್ಷಗಳ ಮಾನ್ಯತೆಯನ್ನು ರದ್ದುಪಡಿಸುವಂತೆ ಚುನಾವಣಾ ಆಯೋಗಕ್ಕೆ ನಾವುನಿರ್ದೇಶನ ನೀಡಬಹುದೇ’ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ (ಪ್ರ.ವಾ., ಆ 10). ಇದನ್ನು ಓದಿದ ಕೂಡಲೇ ‘ಕೋಳಿಯನ್ನು ಕೇಳಿ ಮಸಾಲೆ ಅರೆಯಲಾಗುವುದೇ’ ಎಂಬ ಜನಜನಿತ ಗಾದೆಮಾತು ನೆನಪಾಯಿತು.

ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳಲು ಯಾವ ರಾಜಕೀಯ ಪಕ್ಷ ತಾನೆ ತಯಾರಾಗಿರುತ್ತದೆ? ಯಾರ ಅನುಮತಿಗೂ ಕಾಯದೆ ಕೋರ್ಟ್‌ ಇಂತಹ ವಿಚಾರಗಳ ಬಗ್ಗೆ ಆದೇಶಗಳನ್ನು ನೀಡಬೇಕು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

***

ಕಾನೂನು ಯಾರಿಗಾಗಿ?

ಆದಾಯ ತೆರಿಗೆ ವಿವರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31. ವಿಳಂಬ ಮಾಡಿದರೆ ₹ 5000 ದಂಡ, ಮತ್ತೂ ವಿಳಂಬ ಮಾಡಿದರೆ ₹ 10,000 ವರೆಗೂ ದಂಡ. ಆರ್ಥಿಕ ಶಿಸ್ತನ್ನು ತರುವುದರ ಸಲುವಾಗಿ ಕೇಂದ್ರ ಸರ್ಕಾರವು
ಇಂಥ ಕಟ್ಟುನಿಟ್ಟಿನ ಕಾನೂನು ರೂಪಿಸಿರುವುದು ಸ್ವಾಗತಾರ್ಹ.

ಅದೇ ದಿನ ಪ್ರಕಟವಾದ ‘ಇನ್ನೂ ಅಸ್ತಿ ವಿವರ ಸಲ್ಲಿಸದ ನೂತನ ಚುನಾಯಿತ ಜನಪ್ರತಿನಿಧಿಗಳು’ ಎನ್ನುವ ವರದಿ ಓದಿ ಮುಜುಗರಕ್ಕೆ ಒಳಗಾಗಬೇಕಾಯಿತು. ತಾವೇ ರೂಪಿಸಿದ ಕಾನೂನನ್ನು ಉಲ್ಲಂಘಿಸುವುದೇ ಪ್ರತಿಷ್ಠೆಯ ಸಂಕೇತ ಎಂದುಕೊಂಡಿರುವ ನಮ್ಮ ಜನಪ್ರತಿನಿಧಿಗಳು, ‘ಕಾನೂನು ಇರುವುದು ಜನಸಾಮಾನ್ಯರಿಗೆ,
ಅವರು ಅದನ್ನು ಪಾಲಿಸದಿದ್ದರೆ ದಂಡ ತೆರಬೇಕು’ ಎಂದು ಭಾವಿಸಿದ್ದಾರೆಯೇ? ಕಾನೂನನ್ನು ಯಾರೇ ಉಲ್ಲಂಘಿಸಿದರೂ ಅದು ಶಿಕ್ಷಾರ್ಹ ಅಪರಾಧವಲ್ಲವೇ? ಕಾನೂನಿಗೆ ಗೌರವ ಕೊಡುವುದನ್ನು ನಮ್ಮ ಜನ ಮತ್ತು ಜನಪ್ರತಿನಿಧಿಗಳು ಇನ್ನಾದರೂ ರೂಢಿಸಿಕೊಳ್ಳಲಿ.

ಶ್ರೀನಿವಾಸ ಜಿ. ಕೊಪ್ಪ, ಬಾಗಲಕೋಟೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !