ಗುರುವಾರ , ಫೆಬ್ರವರಿ 20, 2020
22 °C

ಜೀತ ಪದ್ಧತಿ ನಿರ್ಮೂಲನೆಗೆ ಇನ್ನಷ್ಟು ಕಠಿಣ ಕ್ರಮ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಮಾನವ ಹಕ್ಕುಗಳನ್ನು ರಕ್ಷಿಸುವ ನೂರೆಂಟು ಕಠಿಣ ಕಾನೂನುಗಳು ಜಾರಿಯಲ್ಲಿರುವ ಈ ಕಾಲದಲ್ಲೂ ಕಾರ್ಮಿಕರನ್ನು, ಅದರಲ್ಲೂ ಮಕ್ಕಳನ್ನು ಜೀತಕ್ಕೆ ದುಡಿಸಿಕೊಳ್ಳುವ ಅನಿಷ್ಟ ವ್ಯವಸ್ಥೆ ನಿರ್ಮೂಲನೆಗೊಂಡಿಲ್ಲ ಎನ್ನುವುದು ವಿಷಾದದ ಸಂಗತಿ. ಬೆಂಗಳೂರಿನ ಹೊರವಲಯದ ಹೆಸರಘಟ್ಟ ಬಳಿಯ ಕೊಂಡಶೆಟ್ಟಿಹಳ್ಳಿಯ ಇಟ್ಟಿಗೆ ತಯಾರಿಕಾ ಘಟಕದಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಒಡಿಶಾದ 41 ಮಕ್ಕಳು ಮತ್ತು 163 ಕಾರ್ಮಿಕರನ್ನು ಜಿಲ್ಲಾ ನ್ಯಾಯಾಧೀಶರು ಮತ್ತು ಅಧಿಕಾರಿಗಳ ತಂಡವೊಂದು ರಕ್ಷಿಸಿರುವುದು ಸ್ವಾಗತಾರ್ಹ ಸಂಗತಿ.

ರಾಜಧಾನಿಯ ಮೂಗಿನಡಿಯಲ್ಲೇ ಇಂತಹ ವಿದ್ಯಮಾನ ನಡೆದಿರುವುದು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ. ಈ ಜೀತದುಡಿತದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ವಯಂಸೇವಾ ಸಂಸ್ಥೆಯೊಂದು ಶ್ಲಾಘನೀಯ ಕೆಲಸವನ್ನು ಮಾಡಿದೆ. ಗುತ್ತಿಗೆದಾರರು ಒಡಿಶಾದಿಂದ ಈ ಕೂಲಿಯಾಳುಗಳನ್ನು ಕರೆಸಿಕೊಂಡಿದ್ದರು. ಪ್ರತಿದಿನ 15 ಗಂಟೆಗಳ ಕಾಲ ದುಡಿಸಿಕೊಂಡು ಈ ಕಾರ್ಮಿಕರಿಗೆ ತಲಾ ₹100 ಸಂಬಳ ಮಾತ್ರ ಕೊಡುತ್ತಿದ್ದರು. ಯಾವುದೇ ರಜೆ ಕೊಡುತ್ತಿರಲಿಲ್ಲ. ಇಡೀ ಕುಟುಂಬದ ಸದಸ್ಯರು ದುಡಿದರೆ ಮಾತ್ರ ಸಂಬಳ ನೀಡುತ್ತಿದ್ದರು ಎನ್ನುವ ದಾರುಣ ಸತ್ಯ ಅಧಿಕಾರಿಗಳ ದಾಳಿಯ ಬಳಿಕ ಬೆಳಕಿಗೆ ಬಂದಿದೆ.

ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು ಮಾಹಿತಿಯನ್ನು ನೀಡದೇ ಇದ್ದಿದ್ದರೆ ಈ ಜೀತಪದ್ಧತಿ ಇನ್ನೆಷ್ಟು ಕಾಲ ನಡೆಯುತ್ತಿತ್ತೋ ಗೊತ್ತಿಲ್ಲ. ‘ನಾವು ಸಂಬಳಕ್ಕಿಂತ ಹೆಚ್ಚಾಗಿ ಮೂರು ಹೊತ್ತಿನ ಊಟಕ್ಕಾಗಿ ಇಲ್ಲಿಗೆ ಬಂದಿದ್ದೇವೆ’ ಎಂದು ಬಿಡುಗಡೆಗೊಂಡ ಮಹಿಳೆಯೊಬ್ಬರು ಹೇಳಿರುವುದು ಈ ಕುಟುಂಬಗಳ ದಯನೀಯ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಊಟಕ್ಕೂ ಗತಿಯಿಲ್ಲದ ಲಕ್ಷಾಂತರ ಬಡವರು ಈ ದೇಶದಲ್ಲಿ ಇದ್ದಾರೆ ಎನ್ನುವುದು ಆಳುವವರಿಗೆ ಶೋಭೆ ತರುವ ಸಂಗತಿಯಂತೂ ಅಲ್ಲ. 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜೀತದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಗುತ್ತಿವೆ. 15 ವರ್ಷಗಳಲ್ಲಿ ಈ ಮೂರು ಜಿಲ್ಲೆಗಳಲ್ಲಿ ಒಟ್ಟು 2,371 ಕಾರ್ಮಿಕರನ್ನು ಜೀತ ವ್ಯವಸ್ಥೆಯಿಂದ ರಕ್ಷಿಸಲಾಗಿದೆ. ಕಳೆದ ಒಂದೇ ವರ್ಷದಲ್ಲಿ 276 ಕಾರ್ಮಿಕರನ್ನು ತವಿಮುಕ್ತಿಗೊಳಿಸಲಾಗಿದೆ. ಈಗ ಒಂದೇ ಕಡೆ 41 ಮಕ್ಕಳ ಸಹಿತ 204 ಜೀತದಾಳುಗಳನ್ನು ರಕ್ಷಿಸಿರುವುದು ನೋಡಿದರೆ ಈ ಜಾಲದ ಬೇರು ಬಲವಾಗಿದ್ದಂತಿದೆ. 2015ರಲ್ಲಿ ಸ್ವಯಂಸೇವಾ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲೇ 5.5 ಲಕ್ಷಕ್ಕೂ ಹೆಚ್ಚು ಜೀತಕಾರ್ಮಿಕರಿದ್ದಾರೆ ಎಂದು ವರದಿಯಾಗಿರುವುದು ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.

ಈ ಘಟನೆಯ ಹೊರತಾಗಿಯೂ ಇನ್ನಷ್ಟು ಸ್ಥಳಗಳಲ್ಲಿ ಕಾರ್ಮಿಕರು ಮತ್ತು ಮಕ್ಕಳನ್ನು ಜೀತಕ್ಕೆ ಇಟ್ಟುಕೊಂಡಿರುವ ಸಾಧ್ಯತೆಗಳಿವೆ. ಅಧಿಕಾರಿಗಳು ಇಂತಹ ಜೀತದ ಜಾಲವನ್ನು ಬಯಲಿಗೆಳೆಯಲು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಸ್ವಯಂಸೇವಾ ಸಂಸ್ಥೆಗಳನ್ನು ಸಬಲಗೊಳಿಸಬೇಕಾದ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2016ರ ಮಾರ್ಚ್‌ ಅಂತ್ಯದವರೆಗೆ ಒಟ್ಟು 58,348 ಕಾರ್ಮಿಕರನ್ನು ಜೀತವಿಮುಕ್ತಿಗೊಳಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಅಧಿಕಾರಿಗಳ ಗಮನಕ್ಕೆ ಬರದೆ ಗುಟ್ಟಾಗಿ ನಡೆಯುವ ಶೋಷಣೆಯ ಪ್ರಮಾಣ ಇನ್ನೂ ಎಷ್ಟಿದೆಯೋ?

ಬೆಂಗಳೂರು ಈಗ ವಲಸಿಗರ ನಗರವಾಗಿ ಬದಲಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಕಾರ್ಮಿಕರು ಇಲ್ಲಿಗೆ ವಲಸೆ ಬರುತ್ತಾರೆ. ಅದರಲ್ಲೂ ಒಡಿಶಾ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂನಿಂದ ಕಾರ್ಮಿಕರ ವಲಸೆಯ ಸಂಖ್ಯೆ ಹೆಚ್ಚು. ಗುತ್ತಿಗೆದಾರರು ಇವರಿಗೆ ಕಾನೂನುಬದ್ಧ ರೀತಿಯಲ್ಲಿ ಸಂಬಳ, ಸವಲತ್ತುಗಳನ್ನು ಒದಗಿಸುವುದಿಲ್ಲ. ಸ್ಥಳೀಯ ಭಾಷೆಯೂ ಬಾರದ, ಹೊಟ್ಟೆಗೆ ಊಟ ಸಿಕ್ಕರೆ ಸಾಕು ಎನ್ನುವ ದೈನೇಸಿ ಸ್ಥಿತಿಯಲ್ಲಿರುವ ಈ ಕಾರ್ಮಿಕರು, ಅದನ್ನು ಪ್ರಶ್ನಿಸುವ ಸ್ಥಿತಿಯಲ್ಲೂ ಇರುವುದಿಲ್ಲ. ರೈಲು ನಿಲ್ದಾಣಗಳಲ್ಲಿ ಬಂದಿಳಿಯುವ ಈ ಕಾರ್ಮಿಕರನ್ನು ಕರೆದೊಯ್ಯಲು ಗುತ್ತಿಗೆದಾರರು ಸಿದ್ಧರಾಗಿ ನಿಂತಿರುತ್ತಾರೆ. ಹೊರರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರನ್ನು ನಗರ ಪ್ರವೇಶದ ಸಮಯದಲ್ಲೇ ಗುರುತಿಸಿ, ಅವರ ವಿವರ ದಾಖಲಿಸುವ ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯ ಇದೆ. ಈ ಕಾರ್ಮಿಕರ ಶೋಷಣೆಯಾಗದಂತೆ ಸಾಮಾಜಿಕಉಪಕ್ರಮಗಳನ್ನು ಕೈಗೊಳ್ಳಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು