ಮಂಗಳವಾರ, ಅಕ್ಟೋಬರ್ 15, 2019
26 °C

ಯಾವುದು ಸತ್ಯ? ಅರ್ಥ ಪಂಡಿತರೇ ಉತ್ತರಿಸಲಿ!

Published:
Updated:

ವಿಜಯದಶಮಿಯಂದು ನಾಗಪುರದಲ್ಲಿ ಮಾತನಾಡಿದ ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್‌ ಭಾಗವತ್ ಅವರು, ‘ದೇಶದಲ್ಲಿ ಆರ್ಥಿಕ ಹಿಂಜರಿತ ಇಲ್ಲ. ಜಿಡಿಪಿ ಮತ್ತು ದೇಶದ ಅಭಿವೃದ್ಧಿಗೆ ನೇರ ಸಂಬಂಧವಿಲ್ಲ. ಈ ಬಗ್ಗೆ ಅತಿಯಾಗಿ ಚರ್ಚೆ ನಡೆಸುವ ಅವಶ್ಯಕತೆ ಇಲ್ಲ’ ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಅದೇ ದಿನ ಪತ್ರಿಕೆಗಳಲ್ಲಿ, ‘ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು, ದಸರಾ ಆಚರಿಸಿಲ್ಲ. ವಿವಿಧ ಕೈಗಾರಿಕೆಗಳು ತಮ್ಮ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡಿ, ಕೆಲಸದ ದಿನಗಳನ್ನು ಕಡಿಮೆ ಮಾಡುತ್ತಿವೆ. ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ಹಬ್ಬಕ್ಕೆ ಬೋನಸ್ ಕೊಡುತ್ತಿಲ್ಲ’ ಎಂದು ವರದಿಯಾಗಿದೆ. ಇವುಗಳಲ್ಲಿ ಯಾವುದು ಸತ್ಯ?

ಭಾಗವತ್ ಅವರು ಹೇಳಿದಂತೆ ಆರ್ಥಿಕತೆ ಉತ್ತಮವಾಗಿದ್ದರೆ, ಆಟೊಮೊಬೈಲ್ ಕ್ಷೇತ್ರ ಸೇರಿದಂತೆ ಕೈಗಾರಿಕೆಗಳಲ್ಲಿ ಕೆಲಸಗಳೇಕೆ ಕಡಿತವಾಗುತ್ತಿವೆ? ಕೈಗಾರಿಕೆಗಳ ಬೆಳವಣಿಗೆ ಸಕಾರಾತ್ಮಕವಾಗಿದ್ದರೆ, ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆ ಕಡಿತ ಮಾಡಿದ್ದೇಕೆ? ಉದ್ಯಮಿಗಳಿಗೆ ಸಾವಿರಾರು ಕೋಟಿ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡಿದ್ದೇಕೆ? ಉತ್ತಮ ಆರ್ಥಿಕ ಬೆಳವಣಿಗೆ ಇದ್ದರೆ ಕಳೆದ 6 ತಿಂಗಳಿನಿಂದ ಜಿಎಸ್‍ಟಿ ತೆರಿಗೆ ಸಂಗ್ರಹ ಕುಂಠಿತವಾಗಿದ್ದೇಕೆ? ಬಹುಮುಖ್ಯವಾಗಿ, ಸರ್ಕಾರಕ್ಕೆ ಉತ್ತಮ ವರಮಾನ ಬರುತ್ತಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್‍ನಲ್ಲಿ ತೀರಾ ಸಂಕಷ್ಟದ ಸಮಯದಲ್ಲಿ ಬಳಕೆಗೆಂದು ಇದ್ದ ₹ 1.70 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದ್ದೇಕೆ? ಈ ಹಿಂದೆ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದ್ದ ಸಮಯದಲ್ಲೂ ಆರ್‌ಬಿಐನಿಂದ ಹಣ ಪಡೆದ ಉದಾಹರಣೆ ಇಲ್ಲ! ಪತ್ರಿಕಾ ವರದಿಗಳು ಸತ್ಯವಾಗಿದ್ದರೆ, ಭಾಗವತ್‍ ಅವರಿಗೆ ಆರ್ಥಿಕತೆ ಬಗ್ಗೆ ಏನೂ ತಿಳಿವಳಿಕೆ ಇಲ್ಲ ಎಂದು ಭಾವಿಸಬೇಕೇ? ಅರ್ಥ ಪಂಡಿತರೇ ಈ ಬಗ್ಗೆ ಉತ್ತರಿಸಬೇಕು!

– ಆನಂದ್ ಸಿ. ಅಯ್ಯೂರು, ಚಿಕ್ಕ ಅಯ್ಯೂರು, ಕೋಲಾರ
 

Post Comments (+)