ಸೋಮವಾರ, ಅಕ್ಟೋಬರ್ 18, 2021
23 °C

ಮತಾಂತರಕ್ಕೆ ಕುಮ್ಮಕ್ಕು ಒಳಗಿನದೋ ಹೊರಗಿನದೋ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತಾಂತರ ನಿಷೇಧ ಕಾಯ್ದೆಯ ಅಗತ್ಯವನ್ನು ಪ್ರತಿಪಾದಿಸಿ ತಾವು ಬರೆದಿದ್ದ ಪತ್ರದಲ್ಲಿನ ಅಂಶಗಳನ್ನು ಆಕ್ಷೇಪಿಸಿದ್ದ ನನ್ನ ಪತ್ರಕ್ಕೆ ಬಿ.ಎಸ್.ಜಯಪ್ರಕಾಶ ನಾರಾಯಣ ಪ್ರತಿಕ್ರಿಯಿಸಿದ್ದಾರೆ (ವಾ.ವಾ., ಸೆ. 25). ಈ ಸಂದರ್ಭದಲ್ಲಿ ಅವರು, ಈ ಚರ್ಚೆಗೆ ಸಂಬಂಧಪಡದ ಗಾಂಧೀಜಿಯವರ ಹೆಸರನ್ನು ಎಳೆದುತಂದು ಅವರ ವಿರುದ್ಧ ಅಸಂಬದ್ಧ ಟೀಕೆಗಳನ್ನು ಮಾಡಿರುವುದು ವಿಷಾದಕರ.

ಗಾಂಧಿ ಬಾಲ್ಯದಲ್ಲೇ ಅಸ್ಪೃಶ್ಯತೆಯ ಅರ್ಥಹೀನತೆಯನ್ನು ಹೇಗೆ ಮನಗಂಡಿದ್ದರು ಎಂಬುದು ಅವರ ಆತ್ಮ
ಚರಿತ್ರೆಯಲ್ಲೇ ದಾಖಲಾಗಿದೆ. 1898ರಷ್ಟು ಹಿಂದೆಯೇ ದಕ್ಷಿಣ ಆಫ್ರಿಕಾದಲ್ಲಿ ಅಸ್ಪೃಶ್ಯತೆ ಆಚರಣೆಯ ಕಾರಣದಿಂದ ತಮ್ಮ ಪತ್ನಿಯನ್ನೇ ಮನೆಯಿಂದ ಆಚೆ ನೂಕಲು ಹೊರಡುವ ಆವೇಶಕ್ಕೊಳಗಾಗುವಷ್ಟು ಅಸ್ಪೃಶ್ಯತೆ ನಿವಾರಣೆಗೆ ಬದ್ಧರಾದವರನ್ನು, ಅವರು ಹಿಂದೂ ಸಮಾಜದ ಈ ಪಿಡುಗಿನ ಬಗ್ಗೆ ದೀರ್ಘ ಕಾಲ ಸ್ಪಷ್ಟತೆಯನ್ನು ಹೊಂದಿರಲಿಲ್ಲ ಎಂದು ಹೇಳುವುದನ್ನು ಏನೆಂದು ಕರೆಯಬೇಕು? ಹಾಗೇ, ಅದು ಅಂತರ್ಜಾತಿ ವಿವಾಹವಾಗದ ಹೊರತು ಅದಕ್ಕೆ ತಮ್ಮ ಆಶ್ರಮದಲ್ಲಿ ಜಾಗವಿಲ್ಲವೆಂದೂ ಅಂತಹ ವಿವಾಹಗಳಲ್ಲಿ ವಧು-ವರರಲ್ಲಿ ಒಬ್ಬರು ಅಸ್ಪೃಶ್ಯರಾಗದ ಹೊರತು ಆ ದಂಪತಿಗೆ ತಮ್ಮ ವೈಯಕ್ತಿಕ ಆಶೀರ್ವಾದ ಲಭಿಸದು ಎಂದೂ ಬಹಿರಂಗವಾಗಿ ಘೋಷಿಸಿದ ವ್ಯಕ್ತಿಯನ್ನು, ಅವರ ಯಾವುದೋ ಕಾಲದ ನಂಬಿಕೆಯನ್ನು ಉಲ್ಲೇಖಿಸುತ್ತಾ ಅವರು ವರ್ಣಾಶ್ರಮ ಧರ್ಮದ ಪ್ರತಿಪಾದಕರಾಗಿದ್ದರು ಎಂದು ಪ್ರಚಾರ ಮಾಡುವುದನ್ನು ಏನೆಂದು ಕರೆಯಬೇಕು?

ಗಾಂಧಿಯವರು ಇಂಗ್ಲಿಷ್‌ ಶಿಕ್ಷಣ, ರೈಲು, ಅಂಚೆ, ಆಧುನಿಕ ಆಸ್ಪತ್ರೆಯ ವಿರುದ್ಧವಿದ್ದರು ಎಂದು ಬರೆದಿರುವುದನ್ನು ಗಾಂಧಿ ಕುರಿತ ಅರೆ ಸಾಕ್ಷರತೆ ಎನ್ನಬಹುದು. ಹಿಂದೂಸ್ತಾನದ ಸ್ವಾತಂತ್ರ್ಯಹರಣಕ್ಕೆ ಕಾರಣವೆಂದು ಗಾಂಧೀಜಿ ವಿಶ್ಲೇಷಿಸಿದ್ದ, ಪಶ್ಚಿಮದ ಆಧುನಿಕ ನಾಗರಿಕತೆಯ ಸಾಧನಗಳಾದ ಇವುಗಳಿಗೆ ‘ನಿಮ್ಮ ಬೇರುಗಳು ಕಳಚಿಹೋಗುವಷ್ಟು ಮರುಳಾಗದಿರಿ’ ಎಂದು ಅವರು ನೀಡಿದ್ದ ಎಚ್ಚರಿಕೆಯ ಕ್ರಮ ಅದಾಗಿತ್ತಷ್ಟೆ. ಹೌದು, ಗಾಂಧಿ ಗೋಮಾಂಸ ಸೇವನೆಯ ಪರವಾಗಿರಲಿಲ್ಲ. ಆದರೆ ತಮ್ಮ ಈ ನಂಬಿಕೆಯನ್ನು ಇತರರ ಮೇಲೆ ಹಿಂಸೆಯ ಮೂಲಕ ಹೇರುವುದರ ಪರವಾಗಿಯೂ ಇರಲಿಲ್ಲ. ಅವರು ಗೋ ರಕ್ಷಣೆಗಾಗಿ ಮನುಷ್ಯರನ್ನು ಕೊಲ್ಲುವುದರ ವಿರುದ್ಧವಿದ್ದರು.

ಇನ್ನು ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿನ ಮುಸ್ಲಿಂ ಸಿಬ್ಬಂದಿಯ ಕಿರುಕುಳದಿಂದಾಗಿ ಮುಸ್ಲಿಂ ವಿರೋಧಿಯಾದರೆಂದು ಹೇಳುವುದು, ಒಬ್ಬನದ್ದೋ ಅಥವಾ ಹಲವರದ್ದೋ ಕಿರುಕುಳದಿಂದ ಒಂದು ಇಡೀ ಧರ್ಮದವರ ವಿರುದ್ಧ ಒಂದು ಸಿದ್ಧಾಂತವನ್ನು ಮಂಡಿಸಿ, ಅವರ ವಿರುದ್ಧ ಬರ್ಬರ ಹಿಂಸಾಚಾರವನ್ನು ಪ್ರಚೋದಿಸುವ ವ್ಯಕ್ತಿಯ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ಈ ದೃಷ್ಟಿಯಿಂದ, 1939ರಲ್ಲಿ ಭಾರತವನ್ನು ಬ್ರಿಟಿಷ್ ಪ್ರಭುತ್ವವು ಎರಡನೇ ಮಹಾಯುದ್ಧದಲ್ಲಿ ಭಾಗವಹಿಸುವಂತೆ ಮಾಡಿದ ತೀರ್ಮಾನದ ವಿರುದ್ಧ ಪ್ರತಿಭಟಿಸಲು, ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದ ಪ್ರಾಂತೀಯ ಸರ್ಕಾರಗಳಿಗೆ ರಾಜೀನಾಮೆ ನೀಡಿದಾಗ, ಸಾವರ್ಕರ್ ಅವರ ಹಿಂದೂ ಮಹಾಸಭಾ ಆ ಹೊತ್ತಿಗಾಗಲೇ ಪ್ರತ್ಯೇಕ ರಾಷ್ಟ್ರದ ಸೊಲ್ಲೆತ್ತಿದ್ದ ಜಿನ್ನಾರ ಮುಸ್ಲಿಂ ಲೀಗ್ ಜೊತೆ ಸೇರಿ ಎರಡು ಪ್ರಾಂತ್ಯಗಳಲ್ಲಿ ಸರ್ಕಾರ ರಚಿಸಿ, ಬ್ರಿಟಿಷ್ ಪ್ರಭುತ್ವಕ್ಕೆ ತನ್ನ ನಿಷ್ಠೆ ಪ್ರದರ್ಶಿಸಿದ್ದನ್ನು ಅರ್ಥ ಮಾಡಿಕೊಳ್ಳಲು ಕಷ್ಟವೇನೂ ಆಗದು.

ಇದೆಲ್ಲ ಅಂಬೇಡ್ಕರ್ ಅವರೂ ಸಕ್ರಿಯವಾಗಿ ಭಾಗವಹಿಸಿದ್ದ ಗಾಂಧಿ ವಿರೋಧಿ ರಾಜಕಾರಣದ ಭಾಗವಾಗಿತ್ತು. ಹಾಗಿರುವಾಗ, ಹತ್ತು ಜನ ಸಾವರ್ಕರ್‌ಗಳು ಇದ್ದರೆ ಅಸ್ಪೃಶ್ಯತೆ ಸಂಪೂರ್ಣ ನಾಶವಾಗುವುದೆಂದು ಅಂಬೇಡ್ಕರ್ ಹೇಳಿದ್ದರಲ್ಲಿ ಆಶ್ಚರ್ಯವೇನಿರದು. ಆದರೆ ಭಾರತದ ದುರದೃಷ್ಟವೆಂದರೆ ಸಾವರ್ಕರ್ ಮಾರ್ಗದ ಹಿಂದೂವಾದಿ ಸಂಘಟನೆಗಳು ಬಾಬಾಸಾಹೇಬರು ಈ ಮಾತನ್ನಾಡಿದ ನಂತರದ ಎಂಟು ದಶಕಗಳಲ್ಲಿ ದೇಶದಲ್ಲಿ ಭದ್ರ ಸರ್ಕಾರ ರಚಿಸುವಷ್ಟು ಬೆಳೆದಿದ್ದರೂ ಹತ್ತು ಜನ ಸಾವರ್ಕರರು ತಯಾರಾಗಿ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆ ಮಾಡಲು ಸಾಧ್ಯವಾಗಿಲ್ಲವಲ್ಲ? ಪ್ರತಿದಿನವೂ ದೇಶದ ಒಂದಲ್ಲ ಒಂದು ಮೂಲೆಯಿಂದ ಅಸ್ಪೃಶ್ಯರ ಮೇಲಿನ ಒಂದಲ್ಲ ಒಂದು ರೀತಿಯ ದೌರ್ಜನ್ಯಗಳು ವರದಿಯಾಗುತ್ತಲೇ ಇರುತ್ತವಲ್ಲ? ಮೊನ್ನೆ ತಾನೇ ನಮ್ಮ ಕರ್ನಾಟಕದ ಎರಡು ಹಳ್ಳಿಗಳಿಂದ ಕ್ರಮವಾಗಿ ಒಬ್ಬ ಯುವಕ ಪೂಜೆ ಮಾಡಲೆಂದು ಮತ್ತು ಒಂದು ಮಗು ತನ್ನ ಹುಟ್ಟುಹಬ್ಬದ ಸಂತೋಷದಲ್ಲಿ ದೇವರ ದರ್ಶನಕ್ಕಾಗಿ ದೇವಾಲಯ ಪ್ರವೇಶಿಸಿತೆಂದು, ಅವರಿಬ್ಬರೂ ಅಸ್ಪೃಶ್ಯ ಜಾತಿಗೆ ಸೇರಿದ್ದಕ್ಕಾಗಿ ಊರುಗಳೇ ಒಂದಾಗಿ ದಂಡ ವಿಧಿಸಿದ ವರದಿಗಳು ಇವೆಯಲ್ಲ? ಹಾಗಾದರೆ ಮತಾಂತರಕ್ಕೆ ಕುಮ್ಮಕ್ಕು ಒಳಗಿನಿಂದ ಇದೆಯೋ ಹೊರಗಿನಿಂದ ಇದೆಯೋ?!

- ಡಿ.ಎಸ್‌.ನಾಗಭೂಷಣ, ಶಿವಮೊಗ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು