ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹೆಸರಿನಲ್ಲಿ ವಿರೋಧ ತರವೇ?

Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಕರ್ನಾಟಕದ ಕರಾವಳಿಯಲ್ಲಿ ಕೋಮುದ್ವೇಷದ ಹೊಸ ವರಸೆ ಶುರುವಾಗಿದೆ. ಮೊದಲೆಲ್ಲ ಕರಾವಳಿಯ ಹಿಂದೂ ದೇವಸ್ಥಾನಗಳ ವಾರ್ಷಿಕ ಜಾತ್ರೆಯಲ್ಲಿ ಎಲ್ಲ ಜಾತಿ, ಧರ್ಮದವರೂ ತಿಂಡಿ ತಿನಿಸು, ಆಟಿಕೆಗಳ ಸಣ್ಣಪುಟ್ಟ ಅಂಗಡಿಗಳನ್ನು ನೆಲೆಗೊಳಿಸುತ್ತಿದ್ದರು. ಮುಸ್ಲಿಂ ಸಮುದಾಯದ ಅಲೆಮಾರಿಗಳೂ ಇವರಲ್ಲಿ ಸೇರಿರುತ್ತಿದ್ದರು. ಆದರೆ ಎರಡು–ಮೂರು ವರ್ಷಗಳಿಂದ ಹಿಂದೂ ದೇವಸ್ಥಾನದ ಜಾತ್ರೆಗಳಲ್ಲಿ ಹಲವೆಡೆ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಅಂಗಡಿ ಹಾಕಲು ಸ್ಥಳೀಯ ಹಿಂದುತ್ವ ಪಡೆಗಳು ಬಿಡುತ್ತಿಲ್ಲ. ಹಿಂದೂಗಳನ್ನು ಹೊರತುಪಡಿಸಿ ಅನ್ಯಕೋಮಿನವರು ಈ ಜಾತ್ರೆಯಲ್ಲಿ ಅಂಗಡಿ ಹಾಕಬಾರದು ಎಂದು ದೊಡ್ಡ ಫ್ಲೆಕ್ಸ್‌ ಅನ್ನೇ ರಾಜಾರೋಷವಾಗಿ ದೇವಸ್ಥಾನದ ಗೋಡೆಗೆ ತಗುಲಿ ಹಾಕುವ ಪರಿಪಾಟ ಶುರುವಾಗಿದೆ.

ಸಾರ್ವಜನಿಕ ರಸ್ತೆ ಹಾಗೂ ಮೈದಾನಗಳಲ್ಲಿ ಬಡವರು ಅಂಗಡಿ ಹಾಕುವುದನ್ನು ಧರ್ಮದ ಆಧಾರದಲ್ಲಿ ತಡೆಯಲು ಇಂತಹವರಿಗೆ ಅಧಿಕಾರ ಇದೆಯೇ? ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾಕೆ ಕಣ್ಣು– ಕಿವಿ ಮುಚ್ಚಿ ಕುಳಿತಿವೆ?

ಹೀಗೆ ಎಲ್ಲದರಲ್ಲಿಯೂ ಜಾತಿ, ಧರ್ಮವನ್ನು ನೋಡುತ್ತಾ ಹೋದರೆ ಕರಾವಳಿಯ ಯಾವುದೇ ಹಿಂದೂ ದೇವರಿಗೆ ಮಲ್ಲಿಗೆ ಹೂವಿನ ಅಲಂಕಾರ ಮಾಡುವುದು ಸಾಧ್ಯವೇ ಇಲ್ಲ.ಕಾರಣ, ಕರಾವಳಿಯಲ್ಲಿ ಶೇ 90ರಷ್ಟು ಮಲ್ಲಿಗೆ ಕೃಷಿ ಮಾಡಿ, ಮಾಲೆ ಕಟ್ಟಿಕೊಡುವವರು ಕ್ರೈಸ್ತರು. ಈ ಮಲ್ಲಿಗೆ ಹೂವನ್ನು ಊರೂರಿಗೆ ಕೊಂಡು ಹೋಗಿ ಮಾರುವವರಲ್ಲಿ ಹೆಚ್ಚಿನವರು ಮುಸ್ಲಿಂ ಹುಡುಗರು. ನಮ್ಮ ಜಿಲ್ಲೆಗೆ ಮಂಡಕ್ಕಿ, ಅವಲಕ್ಕಿ ತಯಾರಾಗಿ ಬರುವುದು ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಿಂದ. ದಾವಣಗೆರೆಯಲ್ಲಿದ್ದಾಗ ನಾನೇ ನೋಡಿರುವಂತೆ, ಅಲ್ಲಿ ಹೆಚ್ಚಿನ ಪಾಲು ಮಂಡಕ್ಕಿ ತಯಾರಿಸುವ ಭಟ್ಟಿಗಳು ಮುಸ್ಲಿಮರವು. ಅವಲಕ್ಕಿ ತಯಾರಿಸುವವರಲ್ಲೂ ಬಹುತೇಕರು ಮುಸ್ಲಿಮರು. ಹೀಗಿರುವಾಗ ಕರಾವಳಿಯ ಹಿಂದೂ ದೇವರ ಪ್ರಸಾದಕ್ಕೆ ಬಳಸುವ ಮತ್ತು ಜಾತ್ರೆಗಳಲ್ಲಿ ಮಾರುವ ದಾವಣಗೆರೆ ಮುಸ್ಲಿಮರ ಮಂಡಕ್ಕಿ, ಅವಲಕ್ಕಿ ಕರಾವಳಿಯ ಹಿಂದೂ ಭಕ್ತವೃಂದಕ್ಕೆ ನಿಷಿದ್ಧವೇ?
ಕಬ್ಬಿನ ಹಾಲು, ಕಾಟನ್ ಕ್ಯಾಂಡಿ, ಐಸ್‌ಕ್ಯಾಂಡಿ, ಕುಲ್ಫಿ, ತಂಪು ಪಾನೀಯ ತಯಾರಿಸುವವರಲ್ಲೂ ಬಡ ಅಲೆಮಾರಿ ಮುಸ್ಲಿಮರೇ ಹೆಚ್ಚು. ಹೀಗಿರುವಾಗ, ಈ ಶ್ರಮಜೀವಿಗಳ ಬದುಕಿನ ಆಧಾರವನ್ನು ಧರ್ಮದ ಹೆಸರಿನಲ್ಲಿ ಕಸಿದುಕೊಳ್ಳುವುದು ಸರಿಯೇ?

–ಪ್ರಕಾಶ್ ಗಾಂಭೀರ್,ಮೂಡುಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT