ಸೋಮವಾರ, ಡಿಸೆಂಬರ್ 5, 2022
21 °C

ಪ್ರಜಾವಾಣಿ@75 | ಪ್ರಜಾವಾಣಿ ನನ್ನ ಆಪ್ತ ಗೆಳೆಯ: ಡಾ.ಹಾಲಸ್ವಾಮಿ ಕೆ.ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಪ್ತ ಗೆಳೆಯ
ಪ್ರಜಾವಾಣಿ ನನ್ನ ಆಪ್ತ ಗೆಳೆಯ. 1970 ರ ದಶಕದಲ್ಲಿ ನನ್ನೂರು ದಾವಣಗೆರೆ ತಾಲ್ಲೂಕು ಕಂದಗಲ್ಲಿನಲ್ಲಿ ನನ್ನ ತಂದೆಯವರ ಕೈಯಲ್ಲಿರುತ್ತಿದ್ದ ಪ್ರಜಾವಾಣಿ ನನಗೆ ಪರಿಚಯವಾಗಿದ್ದು 'ಪ್ರಜಾ ಬಸವಣ್ಣ ವಾಣಿ'ಯಾಗಿ.

ಪ್ರಜಾವಾಣಿ ಸಮಾಜದ ಕಣ್ಣು, ಕಿವಿ, ಹೃದಯ ಕೂಡ. ಅಂದಿಗಿಂತ ಇಂದು ಆಕಾರ, ಬಣ್ಣ, ಮುದ್ರಣದಲ್ಲಿ ಬದಲಾವಣೆ ಆಗಿದ್ದರೂ ಸುದ್ದಿ ಮೌಲ್ಯದ ಶ್ರೇಷ್ಠತೆ ಉಳಿಸಿಕೊಂಡಿರುವ ಅಪರೂಪದ ಪತ್ರಿಕೆ. ಪತ್ರಿಕೋದ್ಯಮದ ಪಾವಿತ್ರ್ಯತೆ ಕಾಪಾಡಿಕೊಂಡು ಬಂದಿರುವ ಪ್ರಜಾವಾಣಿ ಸುದ್ದಿ ಮಾಧ್ಯಮಗಳಲ್ಲೇ ಮಾದರಿ ಪತ್ರಿಕೆ. ನಾನು ಆರಂಭದಲ್ಲಿ ನೋಡಿದ ಸುದ್ದಿ ಗತ್ತನ್ನೆ ಇಂದೂ ಉಳಿಸಿಕೊಂಡಿದೆ.

ನಾನು ಮಾಧ್ಯಮ ಮೇಷ್ಟ್ರಾಗಿ ವಿದ್ಯಾರ್ಥಿಗಳಿಗೆ ಸುದ್ದಿ ಮೌಲ್ಯ ಬೋಧಿಸುವಾಗ ಪ್ರಜಾವಾಣಿಯ ಸುದ್ದಿಗಳೇ ಸಾಕ್ಷಿಯಾಗುತ್ತಿದ್ದವು. ಅನ್ಯ ಪತ್ರಿಕೆಗಳ ಸುದ್ದಿ ಅಂಶಗಳನ್ನು ಹೇಳುವಾಗ ವಿದ್ಯಾರ್ಥಿಗಳಿಂದ ಕೆಲ ಸುದ್ದಿಗಳ ಹಿನ್ನೆಲೆಯೊಂದಿಗೆ ಬರುತ್ತಿದ್ದ ಪ್ರತಿಕ್ರಿಯೆಯೇ ಬೇರೆಯಾಗಿರುತ್ತಿತ್ತು. 'ಪತ್ರಿಕೋದ್ಯಮ ಅಂದರೆ ಪ್ರಜಾವಾಣಿ, ಪ್ರಜಾವಾಣಿ ಅಂದರೆ ಪತ್ರಿಕೋದ್ಯಮ'ದಂತೆ ಹೆಮ್ಮರವಾಗಿ ಬೆಳೆಯಲೆಂದು ಮನಸಾರೆ ಪ್ರೀತಿಯಿಂದ ಹಾರೈಸುವೆ. 

–ಡಾ.ಹಾಲಸ್ವಾಮಿ ಕೆ.ಜಿ, ಬೆಂಗಳೂರು

**
ನಾಲ್ಕು ದಶಕಗಳ ನಂಟು
ನಮ್ಮೂರಿಗೆ ಬೆಳಿಗ್ಗೆ 9.30ಕ್ಕೆ ಬರುತ್ತಿದ್ದ ಪತ್ರಿಕೆಯೊಂದಿಗೆ 1985ರಿಂದಲೂ ಕೂಡ ಆತ್ಮೀಯ ಸಂಬಂಧವಿದೆ. ರಾಷ್ಟ್ರೀಯ ರಾಜಕಾರಣ ವಿಮರ್ಶೆ, ಆರ್ಥಿಕ ವ್ಯವಸ್ಥೆ ವಿವರಗಳು, ವಿದೇಶಿ ನೀತಿಯ ವಿಚಾರಗಳು, ವಾಚಕರ ವಾಣಿ, ಛೂ ಬಾಣ, ಭಾನುವಾರದ ‘ಸಾಪ್ತಾಹಿಕ ಪುರವಣಿ’ಯನ್ನು ಓದುತ್ತಾ ಬಂದಿದ್ದೇನೆ. ನಮ್ಮೂರಲ್ಲಿ ನಡೆದ ಕಾರ್ಯಕ್ರಮಗಳ ವರದಿಯನ್ನು ಮಧುಗಿರಿಯ ವರದಿಗಾರರಿಗೆ ನೀಡಿ ಆ ಮೂಲಕ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿ ‘ಪ್ರಜಾವಾಣಿ’ಯಲ್ಲಿ ನನ್ನ ಹೆಸರು ಬಂದಾಗ ಕುಣಿದು ಕುಪ್ಪಳಿಸಿದ ನೆನಪುಗಳನ್ನು ಮರೆಯಲಾರೆ.

ವಾಚಕರ ವಾಣಿಯಲ್ಲಿ ಹತ್ತಾರು ಬರಹಗಳು, ಓದುಗರ ವೇದಿಕೆಯಲ್ಲಿ, ಚರ್ಚೆಗಳು ಸೇರಿ ಪ್ರಕಟವಾದ ಅವುಗಳ ತುಣುಕುಗಳನ್ನು ನನ್ನ ಬಳಿ ಭದ್ರವಾಗಿ ಇಟ್ಟುಕೊಂಡಿದ್ದೇನೆ. ಪ್ರತಿನಿತ್ಯವೂ ‘ಪ್ರಜಾವಾಣಿ’ಯ ಮೇಲೆ ಕಣ್ಣಾಡಿಸಿ ಸಾಗುತ್ತಾ ಬಂದವನು. ನಾನು ಮಧುಗಿರಿ ತಾಲ್ಲೂಕಿನ ನೇರಳೇಕೆರೆಯಿಂದ ರಾಜಧಾನಿ ಬೆಂಗಳೂರಿಗೆ ಬಂದು ಪತ್ರಿಕಾ ಬಳಗದ ಜೊತೆ ಆತ್ಮೀಯ ಒಡನಾಟವನ್ನು ಇಂದು ಸಹ ಮುಂದುವರಿಸಿರುವೆ.‘ಪ್ರಜಾವಾಣಿ’ಯ ಶತಮಾನೋತ್ಸವವನ್ನು ನೋಡುವ ಭಾಗ್ಯ ಸಿಗಲಿ ಎಂಬ ಆಶಯದೊಂದಿಗೆ ಪತ್ರಿಕಾ ಬಳಗಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

–ನೇ.ಭ. ರಾಮಲಿಂಗ ಶೆಟ್ಟಿ, ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು

**
ನನ್ನ ಆತ್ಮಸಂಗಾತಿ
ನಾನು ಚಿಕ್ಕ ವಯಸ್ಸಿನಿಂದಲೇ ಪ್ರಜಾವಾಣಿಯ ಓದುಗ. ಮಾಧ್ಯಮಿಕ ತರಗತಿಗಳಲ್ಲಿ ಓದುವಾಗ ದಿನವೂ ಪ್ರಾರ್ಥನೆಯ ನಂತರ ಒಂದು ಸುದ್ದಿಯನ್ನು ಮಕ್ಕಳ ಎದುರು ಓದುವ ಪರಿಪಾಠವನ್ನು ನನ್ನ ಗುರುಗಳು ಬೆಳೆಸಿದ್ದರು. ಹಾಗೆ ಓದುವವರಲ್ಲಿ ನಾನು ಒಬ್ಬ. ಆ ಪತ್ರಿಕೆ ಪ್ರಜಾವಾಣಿಯೇ ಆಗಿತ್ತು. 1967–68ರ ನನ್ನ ಮಾಧ್ಯಮಿಕ ಶಾಲಾ ದಿನಗಳಲ್ಲಿ ನಾನು ವಾಸವಿದ್ದ ಹಳ್ಳಿಯಲ್ಲಿ ಪ್ರಜಾವಾಣಿ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೆ. ಎಲ್ಲ ಚಂದಾದಾರರು ಬೆಳಗ್ಗೆ ಪತ್ರಿಕೆಗಾಗಿಯೇ ಕಾಯುತ್ತಿದ್ದುದು ಒಂದು ಸುಂದರ ನೆನಪು.

ನನ್ನನ್ನು ಬಹಳವಾಗಿ ಓದುವಂತೆ ಮಾಡುತ್ತಿದ್ದದು ಸಿನಿಮಾ ಸುದ್ದಿಗಳು. ಅದರಲ್ಲೂ ಡಾ.ರಾಜ್‌ಕುಮಾರರ ಛಾಯಾಚಿತ್ರವಿರುವ ಸಿನಿಮಾ ಸುದ್ದಿಯೇನಾದರೂ ಪ್ರಕಟಗೊಂಡಿದ್ದರೆ ಅದನ್ನು ಹಿಗ್ಗಿನಿಂದ ಓದಿ ನನ್ನ ಅನಕ್ಷರಸ್ಥ ತಾಯಿಗೆ ಓದಿ ಹೇಳುವುದು ನನ್ನ ಹವ್ಯಾಸ. ಕ್ರಮೇಣ ಛೂಬಾಣದಂತಹ ಅಂಕಣಗಳು ನನ್ನ ಚಿಂತನೆಗಳಗೆ ಪೋಷಕಾಂಶಗಳಾದವು. ಕನ್ನಡ ನಾಡಿನಲ್ಲಿ ಅನೇಕ ಪತ್ರಿಕೆಗಳನ್ನು ಇಂದು ನಾವು ಕಾಣುತ್ತೇವೆ. ಆದರೆ ಸುದ್ದಿಯನ್ನು ಸುದ್ದಿಯಾಗಿಯೇ ಪ್ರಕಟಿಸುವ ಪ್ರಜಾವಾಣಿ, ವಿಚಾರ ಹೇರಿಕೆ ತಂತ್ರಗಳನ್ನು ಎಲ್ಲಿಯೂ ಬಳಸಿದ್ದು ನನಗೆ ನೆನಪಿಲ್ಲ. ‘ಸಂಪಾದಕೀಯ’ ಬರವಣಿಗೆಗಳು ಇಂದಿಗೂ ಮಾದರಿ.

ಬಾಲ್ಯದಿಂದಲೂ ಪ್ರಜಾವಾಣಿ ನನ್ನ ಆತ್ಮಸಂಗಾತಿ. ಕನ್ನಡದ ಹೆಮ್ಮೆಯ ಈ ಪ್ರಜಾವಾಣಿ ಪತ್ರಿಕೆ ತನ್ನ ಯಾನವನ್ನು ಹೀಗೆಯೇ ಮುಂದುವರಿಸಲಿ ಎನ್ನುವುದು ನನ್ನ ಹಾರೈಕೆ.

–ಕಾಂತೇಶ ಕದರಮಂಡಲಗಿ, ಶಿವಮೊಗ್ಗ

**

ಆತ್ಮಧ್ಯಾನದ ಕಿಟಕಿ
ಅದೊಂದು ಮುಂಜಾನೆ ಅಪ್ಪನನ್ನು ಕರೆತರುವಂತೆ ಅಮ್ಮ ಹೇಳಿದಾಗ ಅಪ್ಪ ಇರಬಹುದಾದ ಹೊಟೇಲಿನ ಅಂದಾಜು ಮಾಡುತ್ತ ಊರಿನ ಬಸ್‌ಸ್ಟ್ಯಾಂಡ್‌ ಹತ್ತಿರದ ಹೋಟೆಲ್‌ಗೆ ಹೋದಾಗ ಅಪ್ಪನ ಕೈಯಲ್ಲಿ ಪತ್ರಿಕೆಯೊಂದಿತ್ತು. ಆತ ಅದನ್ನು ಶತಮಾನಗಳ ಖಜಾನೆ ಇರುವ ಜಾಗದ ನೀಲನಕ್ಷೆ ಏನೋ ಎನ್ನುವಂತೆ ತದೇಕಚಿತ್ತ ಹಾಗೂ ಕುತೂಹಲದಿಂದ ಓದುತ್ತಿದ್ದ. ನಾನೂ 'ಬಾಬಾ... ಏ ಬಾಬಾ.... ಅಮ್ಮಾ ಕರ್ಯಾಕತ್ತಾಳ' ಅಂತ ಎರಡು ಮೂರು ಸಾರಿ ಕೂಗಿದರೂ ಕೂಡ ತಿರುಗಿ ನೋಡಲಿಲ್ಲ. ನಂತರ ಆತನ ಪಕ್ಕದಲ್ಲಿ ನಾನು ನಿಂತೆ. ಆ ಪತ್ರಿಕೆ ‘ಪ್ರಜಾವಾಣಿ’ ಆಗಿತ್ತು. ಅಪ್ಪನಿಂದ ಪರಂಪರೆಯ ಬಳುವಳಿಯಂತೆ ನನಗೆ ‘ಪ್ರಜಾವಾಣಿ’ ಓದು ದೊರೆಯಿತು. ಅಂದಹಾಗೆ ನನ್ನಪ್ಪ ಕಲಿತದ್ದು ಎರಡನೇ ಕ್ಲಾಸು ಮಾತ್ರ. ಆತ ಒಂದೊಂದೆ ಅಕ್ಷರಗಳನ್ನು ಜೋಡಿಸಿ ಓದುತ್ತಿದ್ದರೆ ಹೋಟೆಲ್‌ನಲ್ಲಿರುವ ಇತರೆ ಗೆಳೆಯರು ಸುದ್ದಿಗಳನ್ನು ಅವರ ಮನೆತನದ ಭವಿಷ್ಯವಾಣಿ ಕೇಳುವಂತೆ ಶ್ರದ್ದೆಯಿಂದ ಕೇಳುತ್ತಿದ್ದರು.

ಹೀಗೆ ನಾನು ಮೂರನೇ ತರಗತಿ ಇದ್ದಾಗಿನಿಂದ ‘ಪ್ರಜಾವಾಣಿ’ ಓದು ನನ್ನೊಳಗೆ ಆತ್ಮಧ್ಯಾನದ ಕಿಟಕಿಯಾಗಿ ರೂಪುಗೊಳ್ಳತೊಡಗಿತು. ಅದನ್ನು ಓದಲೆಂದೇ ಪತ್ರಿಕೆ ತರಿಸುತ್ತಿದ್ದ ಶೆಟ್ಟರ, ಕ್ವಾಮಟಿಗರ, ಬಣಕಾರರ ಅಂಗಡಿಗಳಿಗೆ , ಬಸ್‌ಸ್ಟ್ಯಾಂಡ್‌, ಬಜಾರುಗಳಲ್ಲಿನ ಹೊಟೇಲುಗಳಿಗೆ ಹೋಗಿ ಅವರ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿದ್ದೆ. ಪ್ರತಿಯಾಗಿ ಹೃದಯ ಹಾಗೂ ಮೆದುಳಿನ ತುಂಬಾ ‘ಪ್ರಜಾವಾಣಿ’ ಓದುತ್ತಿದ್ದೆ. ನಮ್ಮ ಕಾಂತು ಸರ್ ಟ್ಯೂಷನ್ ರೂಮ್‌ಗೆ ಬರುತ್ತಿದ್ದ ಪಿಯುಸಿ ಪದವಿ ಓದುವ ವಿದ್ಯಾರ್ಥಿಗಳು ತರುತ್ತಿದ್ದ ಪತ್ರಿಕೆಗಾಗಿ ತಿಂಗಳುಗಟ್ಟಲೆ ಹಸಿದವನಂತೆ ಕಾಯುತ್ತಿದ್ದೆ. ‘ಪ್ರಜಾವಾಣಿ’ ಓದು ಎಂಬುದು ನನ್ನನ್ನು ರಚನಾತ್ಮಕವಾಗಿ ರೂಪಿಸಿದೆ.

ನನ್ನ ಜೀವದ ಪತ್ರಿಕೆಗೆ ಶುಭಾಶಯಗಳು.

–ಮೆಹಬೂಬ್ ಮಠದ, ಯುವ ಕವಿ, ಕೊಪ್ಪಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.