ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 19 ಜುಲೈ 2023

Published 19 ಜುಲೈ 2023, 1:26 IST
Last Updated 19 ಜುಲೈ 2023, 1:26 IST
ಅಕ್ಷರ ಗಾತ್ರ

ಇತ್ತ...ಮೇರೆ ಮೀರಿದೆ ತಯಾರಿ!
ನುಗ್ಗೆ, ಬೆಂಡೆ, ಸೌತೆ, ಕುಂಬಳ, 
ಹಾಗಲಕಾಯಿಗಳು ಒಗ್ಗೂಡಿ 
ಟೊಮೆಟೊ ಬೆಲೆ ಕುಗ್ಗಿಸಲು 
ನಡೆಸಿವೆ ತಯಾರಿ.

ಅತ್ತ...
ಬೀನ್ಸ್‌, ಕೋಸು, ಕ್ಯಾರೆಟ್,

ಮೆಣಸಿನಕಾಯಿಗಳ ಒಡಗೂಡಿ
ತಾನೇನು ಕಡಿಮೆಯೆಂದು 
ಮೆರೆಯುತಿಹುದು
ಟೊಮೆಟೊ ಮೇರೆ ಮೀರಿ!

– ಮ.ಗು.ಬಸವಣ್ಣ ನಂಜನಗೂಡು

ಅಧಿಕಾರ ದುರ್ಬಳಕೆ ಸಲ್ಲ

ಬಿಜೆಪಿ ವಿರುದ್ಧದ ಮಹಾಮೈತ್ರಿಕೂಟದ ಪಕ್ಷಗಳು ಬೆಂಗಳೂರಿನಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಗಣ್ಯರನ್ನು ಆದರಿಸಲು ರಾಜ್ಯ ಸರ್ಕಾರವು ಸರ್ಕಾರಿ ಅಧಿಕಾರಿಗಳನ್ನು ಉಪಯೋಗಿಸಿಕೊಂಡಿದ್ದು ತಪ್ಪು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕೃತ ಸಭೆಯಾಗಿದ್ದರೆ ಈ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಆದರೆ ಇಲ್ಲಿ ನಡೆದದ್ದು ರಾಜಕೀಯ ಪಕ್ಷಗಳ ಖಾಸಗಿ ಕಾರ್ಯಕ್ರಮ. ಹಾಗೆಯೇ ಸಂಸದರೊಬ್ಬರು ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡುತ್ತಾ, ರಾಜ್ಯಕ್ಕೆ ಬರುವ ಗಣ್ಯರನ್ನು ಸ್ವಾಗತಿಸುವುದು ಪಕ್ಷದ ಹಾಗೂ ಸರ್ಕಾರದ ಕರ್ತವ್ಯ ಎಂದಿದ್ದಾರೆ. ಇಂತಹ ಹೇಳಿಕೆ ಕೊಡುವುದು ಸಹ ತಪ್ಪಾಗುತ್ತದೆ.

– ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು

ಮಹಾಘಟಬಂಧನ: ಉಳಿಯಬೇಕಿದೆ ಒಗ್ಗಟ್ಟು

ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಒಗ್ಗಟ್ಟಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ವಿರೋಧಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು, ಅವುಗಳ ಉತ್ಸಾಹ ಹೆಚ್ಚಾಗಿರುವುದನ್ನು ತೋರಿಸುತ್ತದೆ. ಒಂದೇ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿರುವ ಪಕ್ಷಗಳ ನಾಯಕರಲ್ಲಿ ಪ್ರಭಾವಿಗಳಿದ್ದಾರೆ. ಚುನಾವಣಾ ತಂತ್ರ ಹಾಗೂ ಪ್ರಚಾರದಲ್ಲಿ ಪಳಗಿದವರೂ ಇದ್ದಾರೆ. ಆಡಳಿತದಲ್ಲಿ ಅನುಭವಿಗಳೂ ಹೌದು. ಈ ಎಲ್ಲ ಅಂಶಗಳು ವಿರೋಧಪಕ್ಷಗಳ ವೇದಿಕೆಗೆ ಬಲ ತುಂಬಬಲ್ಲವು ಎಂದೇ ಭಾವಿಸಲಾಗಿದೆ. ಬೆಲೆ ಏರಿಕೆ, ಮಣಿಪುರ ಗಲಭೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾದ ಅವಕಾಶವೂ ಇದೆ. ಆದರೆ ಈ ಮಹಾಘಟಬಂಧನಕ್ಕೆ ಅಷ್ಟೇ ಸವಾಲುಗಳೂ ಇವೆ. ಜನಪ್ರಿಯತೆಯಲ್ಲಿ ಮೋದಿ ಅವರ ವರ್ಚಸ್ಸಿಗೆ ಸರಿಸಮನಾದ ವರ್ಚಸ್ಸು ಹೊಂದಿರುವ ನಾಯಕ ಪ್ರತಿಪಕ್ಷಗಳ ಪಾಳಯದಲ್ಲಿ ಯಾರೊಬ್ಬರೂ ಕಾಣಸಿಗುತ್ತಿಲ್ಲ. ಕೆಲವು ಜನಪ್ರಿಯ ನಾಯಕರಿದ್ದರೂ ಅವರ ಪ್ರಭಾವ ದೇಶದಾದ್ಯಂತ ಒಂದೇ ರೀತಿ ಇಲ್ಲ. ಅಲ್ಲದೆ, ಒಟ್ಟಾಗಲು ಹೊರಟಿರುವ ಕೆಲವು ಪಕ್ಷಗಳಲ್ಲಿ ಆಂತರಿಕ ತಿಕ್ಕಾಟಗಳಿವೆ.

ಲೋಕಸಭೆ ಚುನಾವಣೆಯಲ್ಲಿ ಚರ್ಚೆಯಾಗುವ ವಿಷಯಗಳಿಗೂ ವಿಧಾನಸಭೆ ಚುನಾವಣೆಗಳಲ್ಲಿ ಚರ್ಚೆಯಾಗುವ ವಿಷಯಗಳಿಗೂ ಬಹಳಷ್ಟು ವ್ಯತ್ಯಾಸ ಇರುತ್ತದೆ ಎಂಬುದನ್ನೂ ಮರೆಯಬಾರದು. ಮೋದಿ ಅವರನ್ನು ಮತ್ತು ಬಿಜೆಪಿಯನ್ನು ವಿರೋಧಿಸುವ ಕಾರಣಕ್ಕೆ ಮಾತ್ರವಲ್ಲದೆ ಜನ ತಮ್ಮನ್ನು ಏಕೆ ಬೆಂಬಲಿಸಬೇಕು ಎಂಬುದನ್ನೂ ಈ ಮಹಾಘಟಬಂಧನವು ಜನರ ಮುಂದೆ ಇಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ತಾವೊಂದು ವೇಳೆ ಅಧಿಕಾರಕ್ಕೆ ಬಂದರೆ ಒಟ್ಟಾಗಿ ಮುನ್ನಡೆಯುವುದಾಗಿಯೂ ಜನರಿಗೆ ಮನವರಿಕೆ ಮಾಡಿಕೊಡಬೇಕು.

– ಬೇ.ನ.ಶ್ರೀನಿವಾಸಮೂರ್ತಿ, ತುಮಕೂರು

ದೇಗುಲದಲ್ಲಿ ಮೊಬೈಲ್ ನಿಷೇಧ ಸ್ವಾಗತಾರ್ಹ


ಮನುಷ್ಯನಿಗೆ ನೆಮ್ಮದಿಯ ವಾತಾವರಣವನ್ನು ನಿರ್ಮಿಸುವ ಕೆಲವೇ ಸ್ಥಳಗಳಲ್ಲಿ ದೇವಸ್ಥಾನವೂ ಒಂದು. ಆದರೆ ಪ್ರಸ್ತುತ ನಮ್ಮ ಯುವಜನಾಂಗಕ್ಕೆ ದೇವರ ಬಗ್ಗೆ ಅಥವಾ ದೇವಸ್ಥಾನಗಳ ಬಗ್ಗೆ ಯಾವುದೇ ವಿಶೇಷ ಗೌರವ ಅಥವಾ ಭಕ್ತಿ ಇಲ್ಲವಾಗಿದ್ದು, ಮೊಬೈಲ್ ಫೋನ್‌ಗಳೇ ಅವರಿಗೆ ದೇವರಂತಾಗಿವೆ. ಮೊಬೈಲ್‌ನಲ್ಲಿ ವಾಟ್ಸ್ಆ್ಯಪ್‌, ಇನ್‌ಸ್ಟಾಗ್ರಾಂಗಳಿಗಾಗಿ ಫೋಟೊ ತೆಗೆಯುವುದು, ವಿಡಿಯೊ ಮಾಡುವುದೇ ವೃತ್ತಿಯಾಗಿ ಬದಲಾಗಿದೆ.

ದೇವಸ್ಥಾನಗಳಲ್ಲಿ ಕೆಲವು ಯುವಜನರ ವರ್ತನೆ ಹಿರಿಯರಿಗೆ ಮುಜುಗರ ಉಂಟುಮಾಡುವಂತೆ ಇರುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ದೇವಾಲಯಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಗಳಿಗೆ ಅನ್ವಯವಾಗಲಿರುವ ಈ ಆದೇಶ, ಭಕ್ತರಿಗೆ ದೇವಸ್ಥಾನಗಳಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸುವುದಕ್ಕೆ ಪೂರಕವಾಗಿದೆ.

– ರಾಸುಮ ಭಟ್, ಚಿಕ್ಕಮಗಳೂರು

ಎನ್‌ಡಿಎ ಹೆಸರು ಬದಲಾಗುವುದೇ?

ಕರ್ನಾಟಕದ ರಾಜಧಾನಿಯಲ್ಲಿ ಸಮಾವೇಶಗೊಂಡ ವಿರೋಧ ಪಕ್ಷಗಳ ಒಕ್ಕೂಟಕ್ಕೆ ‘ಇಂಡಿಯಾ’ (ಸಂಕ್ಷಿಪ್ತ ರೂಪ) ಎಂದು ಹೆಸರನ್ನು ಕೊಟ್ಟಿರುವುದು ಅತ್ಯಂತ ಸಮಯೋಚಿತ. ದೇಶದ ಎಲ್ಲ ಪಕ್ಷಗಳೂ ಇದರಲ್ಲಿ ಪಾಲ್ಗೊಂಡಿರುವುದರಿಂದ ಇದೊಂದು ಇಂಡಿಯಾದ ಪ್ರತಿಬಿಂಬವೇ ಆಗಿದೆ. ಈಗ ಇದಕ್ಕೆ ಸಮಾನಾಂತರವಾಗಿ ರಾಷ್ಟ್ರದ ರಾಜಧಾನಿಯಲ್ಲಿ ಆಡಳಿತ ಒಕ್ಕೂಟವಾದ ಎನ್‌ಡಿಎ ಸಭೆ ಜರುಗಿದೆ. ವಿರೋಧ ಪಕ್ಷಗಳ ಒಕ್ಕೂಟದ ‘ಇಂಡಿಯಾ’ ಹೆಸರಿಗೆ ಪ್ರತಿಯಾಗಿ ಬಹುಶಃ ಅದು ‘ಭಾರತ’ ಎಂದು ನಾಮಕಾರಣ ಮಾಡಬಹುದೇ ಎನ್ನುವ ಕುತೂಹಲ ಮೂಡಿದೆ. ಕಾದು ನೋಡಬೇಕು.

– ಸತ್ಯಬೋಧ, ಬೆಂಗಳೂರು


ಎಲ್ಲರ ಸಹಕಾರದಿಂದ ಸರ್ಕಾರಿ ಶಾಲೆಗಳ ಉಳಿವು


ಶಿಕ್ಷಕರು ಶಾಲೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವಂತೆ ದಾನಿಗಳ ಬಳಿ ಹೋಗಿ ಕೇಳುವ ಬದಲು ತಮ್ಮ ಈ ಬೇಡಿಕೆಯನ್ನು ಎಸ್‌ಡಿಎಂಸಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು ಎಂದು ಬಸನಗೌಡ ಮಂಜುನಾಥಗೌಡ ಪಾಟೀಲ ಹೇಳಿದ್ದಾರೆ (ವಾ.ವಾ., ಜುಲೈ 14). ಸರ್ಕಾರಿ ಶಾಲೆ ಉಳಿಯಬೇಕಾದರೆ ಬರೀ ಶಿಕ್ಷಕರಿಂದ ಸಾಧ್ಯವಿಲ್ಲ. ಪೋಷಕರು, ಎಸ್‌ಡಿಎಂಸಿ ಸದಸ್ಯರು, ದಾನಿಗಳು ಹಾಗೂ ಸಮಾಜ ಇವರೆಲ್ಲರ ಸಹಕಾರವಿದ್ದರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಸುಮಾರು 45 ಶಾಲೆಗಳಲ್ಲಿ ‘ಮಕ್ಕಳ ಮನೆ’ ಸ್ಥಾಪನೆಯಾಗಿದ್ದು, ಅವು ದಾನಿಗಳ ಸಹಕಾರದಿಂದಲೇ ನಡೆಯುತ್ತಿವೆ. ಎಲ್‌ಕೆಜಿ, ಯುಕೆಜಿಯ ರೀತಿ ಇಲ್ಲಿಯೂ ಚಟುವಟಿಕೆಗಳು ನಡೆಯುತ್ತಿವೆ.
ಈ ಮಕ್ಕಳ ಮನೆ ಶಿಕ್ಷಕಿಯರ ಸಂಬಳವನ್ನು ಆಯಾ ಗ್ರಾಮದ ದಾನಿಗಳು ಕೊಡುತ್ತಿದ್ದಾರೆ. ಉದಾಹರಣೆಗೆ, ಇದೇ ತಾಲ್ಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲೂ 2022ರಲ್ಲಿ ಮಕ್ಕಳ ಮನೆ ಸ್ಥಾಪನೆಯಾಗಿದ್ದು 20 ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕಿಯ ಸಂಬಳವನ್ನು ಇದೇ ಗ್ರಾಮದ ವೈದ್ಯರೊಬ್ಬರು ಕೊಡುತ್ತಿದ್ದಾರೆ. ಇನ್ನುಳಿದಂತೆ ಮಕ್ಕಳ ಲೇಖನ ಸಾಮಗ್ರಿ, ಕಲಿಕಾ ಸಾಮಗ್ರಿಗಳನ್ನೆಲ್ಲ ಇತರ ದಾನಿಗಳು ನಿರ್ವಹಿಸುತ್ತಿದ್ದಾರೆ. ಇದರಿಂದ ಈ ಶಾಲೆಯ ದಾಖಲಾತಿ ಹೆಚ್ಚಾಗಿದೆ. ಮಕ್ಕಳ ಮನೆಯಲ್ಲಿ 20 ಮಕ್ಕಳು ಇದ್ದರೆ ಒಂದರಿಂದ ಏಳನೇ ತರಗತಿವರೆಗೆ 130 ಮಕ್ಕಳಿದ್ದಾರೆ. ಶಿಕ್ಷಕರು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಇದೆಲ್ಲ ಸುಲಭವಾಗಿ ಕಾರ್ಯಗತವಾಗುತ್ತದೆ. ಇದರಿಂದ ಸರ್ಕಾರಿ ಶಾಲೆಗಳು ಉಳಿಯುತ್ತವೆ.


– ಸಾ.ಮ.ಶಿವಮಲ್ಲಯ್ಯ, ಸಾಸಲಾಪುರ, ಕನಕಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT