ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 4 ಮೇ 2024, 0:38 IST
Last Updated 4 ಮೇ 2024, 0:38 IST
ಅಕ್ಷರ ಗಾತ್ರ

ಸಮರ್ಥನೆ ಅಪರಾಧಕ್ಕೆ ಸಮ

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪೆನ್‌ಡ್ರೈವ್ ಹಂಚಿದ್ದು ಯಾರು ಎಂಬ ಆರೋಪ ಮತ್ತು ಪ್ರತ್ಯಾರೋಪ ತಾರಕಕ್ಕೇರಿ ಪರಾಕಾಷ್ಠೆ ತಲುಪಿದೆ! ಸ್ವಾಮಿ, ಒಬ್ಬ ಆರೋಪಿಯ ಲೈಂಗಿಕ ಕರ್ಮಕಾಂಡವು ಯಾವುದೋ ಒಂದು ರೂಪದಲ್ಲಿ ಹೊರಬಿದ್ದಿದೆ. ಇಲ್ಲದಿದ್ದರೆ ಇಂತಹ ದೌರ್ಜನ್ಯ ಇನ್ನೆಷ್ಟು ದಿನ ಮುಂದುವರಿಯುತ್ತಿತ್ತೋ ಗೊತ್ತಿಲ್ಲ. ಆದರೆ ಈ ಮೂಲಕ ಸಂತ್ರಸ್ತೆಯರ ವಿವರ ಬಹಿರಂಗಗೊಂಡಿದ್ದು ದುರದೃಷ್ಟಕರ. ಇದು ಆಗಬಾರದಿತ್ತು. ಅದರ ವಿರುದ್ಧ ಕ್ರಮ ಅಗತ್ಯ. ಆರೋಪಿಯನ್ನು ಸಮರ್ಥಿಸಿಕೊಳ್ಳುವುದು ಅಪರಾಧಕ್ಕೆ ಸಮ. ಹೆಣ್ಣನ್ನು ಅಪಾರವಾಗಿ ಗೌರವಿಸುವ ನಮ್ಮ ನಾಡು ಇಂದು ಇಡೀ ದೇಶದೆದುರು ತಲೆ ತಗ್ಗಿಸುವಂತಾಗಿದೆ.

ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕಠಿಣ ಕಾನೂನುಗಳಿದ್ದರೂ ಯಾಕೆ ಇಂತಹ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ? ಇವರಿಗೆಲ್ಲ ಕಾನೂನಿನ ಭಯವೇ ಇಲ್ಲವೇ? ಹೆಣ್ಣನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವುದು, ಕೆಟ್ಟದಾಗಿ ಸ್ಪರ್ಶಿಸುವುದು, ಕೆಟ್ಟ ಮಾತುಗಳಲ್ಲಿ ನಿಂದಿಸುವುದು ಕೂಡ ಅಪರಾಧವೇ ಆಗಿದೆ. ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುವವರು ಕ್ಷಮೆಗೆ ಅರ್ಹರೇ ಅಲ್ಲ. ಪ್ರಜ್ವಲ್ ಪ್ರಕರಣದ ಬಗ್ಗೆ ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ, ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ವಿಧಿಸಬೇಕು. ಆಗಮಾತ್ರ ಸಂತ್ರಸ್ತೆಯರಿಗೆ ನ್ಯಾಯ ಸಿಕ್ಕಂತೆ ಆಗುತ್ತದೆ.

⇒ರಾಜು ಬಿ. ಲಕ್ಕಂಪುರ, ಜಗಳೂರು

ಪ್ರಭಾವಿ ನಾಯಕರ ಕೊರತೆ ಕಾಡುತ್ತಿದೆ 

‘ನಾಮಬಲದಿಂದ ಗೆಲ್ಲಬೇಕಾದ ಸವಾಲು’ ಎಂಬ ಲೇಖನದಲ್ಲಿ (ಪ್ರ.ವಾ., ಮೇ 3) ದಿನೇಶ್‌ ಅಮಿನ್ ಮಟ್ಟು ಅವರು ವಿವರಿಸಿರುವಂತೆ, ಪುಲ್ವಾಮದಂತಹ ಆ ಹೊತ್ತಿನ ಕೆಲವು ಘಟನೆಗಳೇ 2019ರಲ್ಲಿ ಬಿಜೆಪಿಯ ಗೆಲುವಿಗೆ ಕಾರಣವಾದವು ಎಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ವಿರೋಧ ಪಕ್ಷಗಳಲ್ಲಿ ದೇಶದಾದ್ಯಂತ ಪ್ರಭಾವ ಬೀರಬಲ್ಲಂಥ ನಾಯಕರ ಕೊರತೆಯೂ ಇದಕ್ಕೆ ಒಂದು ಕಾರಣ ಆಗಿರಬಹುದು. 70ರ ದಶಕದಲ್ಲಿ ಜಯಪ್ರಕಾಶ ನಾರಾಯಣ ಅವರಂತಹ ನಾಯಕರಿದ್ದರು. ಅಪಾರ ಜನಬೆಂಬಲವನ್ನು ಹೊಂದಿದ್ದ ಅವರಂಥ ನಾಯಕರ ಕೊರತೆ ಈಚಿನ ವರ್ಷಗಳಲ್ಲಿ ಕಾಡುತ್ತಿರುವುದನ್ನು ನಾವು ಗಮನಿಸಬೇಕಾಗಿದೆ.

⇒ಗುರು ಜಗಳೂರು, ಹರಿಹರ

ಎಮ್ಮೆಗಳಿಗೆ ಕೂಲರ್‌ ವ್ಯವಸ್ಥೆ!

ಬಾಗಲಕೋಟೆ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಬಿರು ಬಿಸಿಲಿನ ದಗೆಯಿಂದ ರಕ್ಷಿಸಲು ಟಗರುಗಳಿಗೆ ಫ್ಯಾನ್ ವ್ಯವಸ್ಥೆ ಮಾಡಿರುವ ಸುದ್ದಿ ಓದಿ (ಪ್ರ.ವಾ., ಮೇ 2) ಚಕಿತನಾದೆ. ಈ ದಿನಗಳಲ್ಲಿ ಬಿಸಿಲಿನ ತಾಪ ತಾಳದ ನಾವು ಫ್ಯಾನ್, ಕೂಲರ್, ಎ.ಸಿ. ಅಳವಡಿಸಿಕೊಂಡಿದ್ದೇವೆ. ಮೂಕಪ್ರಾಣಿಗಳೂ ನಮ್ಮಂತೆಯೇ ಎಂದು ಬಗೆದು ಅಲ್ಲಿನ ಗ್ರಾಮೀಣ ಜನರು ಅವುಗಳನ್ನು ಮಾನವೀಯ ದೃಷ್ಟಿಯಿಂದ ನೋಡುತ್ತಿರುವುದು ಮೆಚ್ಚುಗೆಗೆ ಅರ್ಹವಾದ ಕಾರ್ಯ.

ಈ ಹಿಂದೆ ಬ್ಯಾಂಕ್ ಕೆಲಸದ ನಿಮಿತ್ತ ಪಂಜಾಬಿನ ಪಟಿಯಾಲದಲ್ಲಿ ಇದ್ದಾಗ, ಹಾಲು ತರುವ ಸಲುವಾಗಿ ಮನೆಯೊಂದಕ್ಕೆ ಹೋಗಿದ್ದೆ. ಆಗ ಅಲ್ಲಿದ್ದ ಎಮ್ಮೆಗಳ ಕೊಠಡಿಯಲ್ಲಿ ಕೂಲರ್ ಅಳವಡಿಸಿದ್ದುದು ನೆನಪಾಯಿತು.

⇒ರಘುನಾಥ ರಾವ್ ತಾಪ್ಸೆ, ದಾವಣಗೆರೆ 

... ಎಂದೂ ಬರಿದಾಗದ ಬಂಡವಾಳ

ಬದಲಾದ ಈ ಕಾಲಘಟ್ಟದಲ್ಲಿ ಕಾರ್ಮಿಕರು ಸಮಾಜದ ಕಡೆಗಣನೆಗೆ ಒಳಗಾಗಿರುವುದಲ್ಲದೆ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಪ್ರತಿವರ್ಷದ ಮೇ 1ರ ಕಾರ್ಮಿಕ ದಿನಾಚರಣೆಯು ಕಾರ್ಮಿಕ ಮುಖಂಡರು, ಸಂಘಟನೆಗಳಿಗೆ ಸೀಮಿತವಾಗುತ್ತಿದೆಯೇ ವಿನಾ ಶ್ರಮಜೀವಿಗಳನ್ನು ಒಳಗೊಳ್ಳುತ್ತಿಲ್ಲ. ಗಾಂಧೀಜಿ ಶ್ರಮಿಕ ಮಿತ್ರರನ್ನು ಕುರಿತು ‘ನಿಮ್ಮ ಸಹಾಯವಿಲ್ಲದೆ ಬಂಡವಾಳಗಾರರು ಅಸಹಾಯಕರು. ನೀವೇ ನಿಜವಾದ ಬಂಡವಾಳ... ಎಂದೂ ಬರಿದಾಗದ ಬಂಡವಾಳ’ ಎಂದಿದ್ದರು. ಕಾರ್ಮಿಕರಿಗೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು, ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಲು ಬೇಕಾದ ಉತ್ತಮ ವೇದಿಕೆ ಸೃಷ್ಟಿಸಬೇಕಾದುದು ಇಂದಿನ ಅಗತ್ಯ.

ಕಾರ್ಮಿಕ ಕಲ್ಯಾಣ ಯೋಜನೆಗಳಿಗೆ ಅರ್ಹರಲ್ಲದವರು ಫಲಾನುಭವಿಗಳಾಗುವುದನ್ನು ತಡೆಯಬೇಕು, ಕೃಷಿ ಕಾರ್ಮಿಕರ ಸಮಸ್ಯೆ ಬಗೆಹರಿಸಿ ಅವರ ವಲಸೆ ತಪ್ಪಿಸಬೇಕು, ವಿವಿಧ ಕ್ಷೇತ್ರಗಳ ಕಾರ್ಮಿಕರ ಮೇಲಾಗುತ್ತಿರುವ ಶ್ರಮದ ಶೋಷಣೆ ನಿಲ್ಲುವಂತಾಗಬೇಕು, ಮಾಲೀಕರಿಂದ ಕಾರ್ಮಿಕರ ಮೇಲಾಗುವ ದೈಹಿಕ ಹಲ್ಲೆ, ಮಾನಸಿಕ ಶೋಷಣೆ, ಕಾರ್ಮಿಕರ ಸಾವುನೋವಿನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಎಲ್ಲಾ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ, ಸೇವಾ ಭದ್ರತೆ, ಆರೋಗ್ಯ ಹಕ್ಕು ಜಾರಿಯಾಗುವಂತೆ ಆಗಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಪೌರಕಾರ್ಮಿಕರಿಗೆ ಘನತೆಯಿಂದ ಕೂಡಿದ ಕೆಲಸದ ವಾತಾವರಣವನ್ನು ಸೃಷ್ಟಿಸುವಂತೆ ಆಗಬೇಕು, ವೃತ್ತಿಯಲ್ಲಿ ಮೇಲು ಕೀಳೆಂಬುದಿಲ್ಲ ಎಂಬ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸಬೇಕು.

⇒ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ನಾವು ತಲೆ ತಗ್ಗಿಸಬೇಕಷ್ಟೆ...

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಗಮನಿಸಿದಾಗ, ಹಿಂದೆ ರಾಜಪ್ರಭುತ್ವದ ಕಾಲದಲ್ಲಿ, ದುಷ್ಟ ರಾಜನೊಬ್ಬ ನಡೆದು ಕೊಳ್ಳುತ್ತಿದ್ದನೆಂದು ಹೇಳಲಾಗುವ ರೀತಿ ನೆನಪಿಗೆ ಬರುತ್ತದೆ. ಅಂದು ಕೂಡ ಸಾಮಾನ್ಯ ಪ್ರಜೆ ಇಂತಹ ಪ್ರಕರಣಗಳ ವಿರುದ್ಧ ಮಾತನಾಡಲಾಗದ ಪರಿಸ್ಥಿತಿ ಇತ್ತು. ಇಂದು ಪ್ರಜಾಪ್ರಭುತ್ವದಲ್ಲಿ ರಾಜನ ಸ್ಥಾನದಲ್ಲಿದ್ದೇನೆ ಎಂದುಕೊಳ್ಳುವ ಜನಪ್ರತಿನಿಧಿ ಪ್ರಬಲನಾಗಿದ್ದಲ್ಲಿ, ತನ್ನನ್ನು ಪ್ರಶ್ನಿಸುವವರು ಯಾರು ಎಂಬಂತೆ ದುರ್ನಡತೆ ತೋರುವುದನ್ನು ಆಗಿಂದಾಗ್ಗೆ ನೋಡುತ್ತಿದ್ದೇವೆ. ಎಷ್ಟೋ ಪ್ರಕರಣಗಳಲ್ಲಿ ಅಮಾಯಕ ವ್ಯಕ್ತಿ ದೂರು ಕೊಡಲಾಗದೇ ಮಾನಸಿಕ ಹಿಂಸೆ
ಅನುಭವಿಸುವಂತಹ ಸಂದರ್ಭ ಬರಬಹುದು. ಈಗ ಪೆನ್‌ಡ್ರೈವ್ ಬಹಿರಂಗಪಡಿಸಿದವರ ವಿರುದ್ಧವೂ ವಿಚಾರಣೆ ನಡೆಸಿ ಕ್ರಮ ಜರುಗಿಸುವ ಸಾಧ್ಯತೆಯಿದೆ. ಅವರು ಈ ಮಟ್ಟದಲ್ಲಿ ಬಹಿರಂಗಪಡಿಸದಿದ್ದಲ್ಲಿ ಬಹುಶಃ ಸರ್ಕಾರ ಇಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವ ಸಂಭವ ಕಡಿಮೆ ಇತ್ತು. ಮೊದಲೇ ಗೊತ್ತಿದ್ದರೂ ಇಂತಹವರಿಗೆ ಟಿಕೆಟ್ ನೀಡಿದ್ದು ನಾಚಿಕೆಗೇಡು. ಒಟ್ಟಿನಲ್ಲಿ ದುರ್ನಡತೆಯುಳ್ಳ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವುದಕ್ಕಾಗಿ ನಾವು ತಲೆತಗ್ಗಿಸಬೇಕಷ್ಟೆ.

⇒ಕೆ.ಎಂ.ನಾಗರಾಜು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT