ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 7 ಮಾರ್ಚ್ 2024, 22:03 IST
Last Updated 7 ಮಾರ್ಚ್ 2024, 22:03 IST
ಅಕ್ಷರ ಗಾತ್ರ

ವಿಚಾರಣೆಗೆ ಹಾಜರಾಗದಿರುವುದು ತರವಲ್ಲ

ಅಬಕಾರಿ ನೀತಿ ಹಗರಣದ ಜತೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗಲು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್ ಜಾರಿ ಮಾಡುತ್ತಲೇ ಬಂದಿದ್ದರೂ ಅವರು ಸತತವಾಗಿ ಎಂಟನೇ ಬಾರಿಯೂ ಹಾಜರಾಗಿಲ್ಲ. ಇದರಿಂದ ಹಗರಣದಲ್ಲಿ ಹುರುಳಿರಬಹುದು ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡುತ್ತದೆ. ಕೇಜ್ರಿವಾಲ್‌ ತಪ್ಪಿತಸ್ಥರಲ್ಲ
ದಿದ್ದರೆ ಇಲಾಖೆಯ ಅಧಿಕಾರಿಗಳ ಮುಂದೆ ಹಾಜರಾಗಿ ಉತ್ತರಿಸಬೇಕು. ಹಾಜರಾಗದೇ ಇರುವುದರಿಂದ ಅನುಮಾನ ಹೆಚ್ಚುತ್ತದೆ ಅಷ್ಟೆ. ಅವರು ಸಹ ಇಲಾಖೆಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು ಎಂಬುದನ್ನು ಮರೆಯಬಾರದು.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ನಡೆದುಕೊಳ್ಳುವುದರಿಂದ ಜನರಿಗೆ ಯಾವ ರೀತಿಯ ಸಂದೇಶ ನೀಡಿದಂತೆ ಆಗುತ್ತದೆ? ಇಲಾಖೆಗಳ ನೋಟಿಸ್‌ಗೆ ಗೌರವ ನೀಡಬೇಕಾದುದು ಪ್ರಧಾನ ಮಂತ್ರಿಯಿಂದ ಜನಸಾಮಾನ್ಯರವರೆಗೂ ಆದ್ಯ ಕರ್ತವ್ಯ ಆಗಬೇಕು.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಸಮಾಜದ ಧೋರಣೆ ಬದಲಾಗಬೇಕು

ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಮನೆ ಮತ್ತು ಕಚೇರಿ ಈ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ತೋರಿಸಿದ್ದಾಳೆ. ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಪಾಲನೆಯಲ್ಲಿ ಮಹಿಳೆಯ ಪಾತ್ರ ಹಿರಿದು. ಹೆಣ್ಣಿನ ಬಹುಮುಖಿ ಸಾಮರ್ಥ್ಯ ಸಾಬೀತಾಗಿದ್ದರೂ ಮಹಿಳೆಯ ಬಗೆಗಿನ ನಮ್ಮ ಪುರುಷಪ್ರಧಾನ ಸಮಾಜದ ದೃಷ್ಟಿಕೋನ ಸಕಾರಾತ್ಮಕ ನೆಲೆಯಲ್ಲಿ, ನಿರೀಕ್ಷಿತ ಮಟ್ಟದಲ್ಲಿ ಇನ್ನೂ ಪೂರ್ತಿ ಬದಲಾಗಿಲ್ಲ ಎಂಬುದು ದುಃಖದ ಸಂಗತಿ.

ಹೆಣ್ಣುಮಕ್ಕಳನ್ನು ಘನತೆ–ಗೌರವದಿಂದ ನಡೆಸಿಕೊಳ್ಳಬೇಕು ಎಂಬ ಮಾತು ಭಾಷಣಗಳಲ್ಲಿ ಕೇಳುತ್ತಲೇ ಇರುತ್ತದೆ. ಆದರೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುವ ಬದಲು ದಿನೇ ದಿನೇ ಹೆಚ್ಚುತ್ತಲೇ ಇರುವುದು ದುರದೃಷ್ಟದ ಸಂಗತಿ. ವರದಕ್ಷಿಣೆ ಹಾವಳಿ ಕಡಿಮೆ ಆಗಿಲ್ಲ. ಲೈಂಗಿಕ ಕಿರುಕುಳ ಪ್ರಕರಣಗಳು ಅಗಿಂದಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಹೆಣ್ಣನ್ನು ಕಾಣುವ ರೀತಿ ಸಂಪೂರ್ಣವಾಗಿ ಬದಲಾಗಬೇಕಾಗಿರುವುದನ್ನು ಈ ವಿದ್ಯಮಾನಗಳು ಸಾರುತ್ತವೆ. ಮನೆಯಿಂದ ಹೊರಗೆ ದುಡಿಯುವ ಮಹಿಳೆಗೆ ಸುರಕ್ಷಿತ ಮತ್ತು ಸೌಹಾರ್ದ ವಾತಾವರಣ ಖಾತರಿಪಡಿಸಬೇಕು.

⇒ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ

ಚಿರತೆ ಸಂಖ್ಯೆ ಹೆಚ್ಚಳ ಸಂತಸ: ಉಪಟಳ...?

ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿರುವುದು ಸಂತೋಷದ ಸಂಗತಿ. ಹೆಚ್ಚಿನ ಆನೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ, ಹುಲಿ ಗಣತಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇದೀಗ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ನಾವು ಮೂರನೇ ಸ್ಥಾನದಲ್ಲಿ ಇದ್ದೇವೆ. ಈ ಮೂಲಕ ನಮ್ಮ ರಾಜ್ಯ ವನ್ಯಜೀವಿಗಳ ಆವಾಸಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  

2022ರಲ್ಲಿ ನಡೆಸಿದ ಗಣತಿ ಪ್ರಕಾರ ದೇಶದಲ್ಲಿ ಸುಮಾರು 13,874 ಚಿರತೆಗಳಿವೆ ಎಂದು ಕೇಂದ್ರ ಪರಿಸರ ಸಚಿವಾಲಯದ ವರದಿ ತಿಳಿಸಿದೆ. ನಮ್ಮ ರಾಜ್ಯದಲ್ಲಿ ಒಟ್ಟಾರೆ 1,879 ಚಿರತೆಗಳಿವೆ. ಮಧ್ಯಪ್ರದೇಶವು 3,907 ಚಿರತೆಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 1,985 ಚಿರತೆಗಳೊಂದಿಗೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಚಿರತೆಗಳ ಸಂಖ್ಯೆ ಹೆಚ್ಚಳದ ಜೊತೆ ಮೈಸೂರು ಭಾಗದಲ್ಲಿ ಮಾನವ- ವನ್ಯಜೀವಿ ಸಂಘರ್ಷವೂ ಹೆಚ್ಚುತ್ತಿದೆ. 2023ರ ಫೆಬ್ರುವರಿ 1ರಂದು ರಾಜ್ಯ ಸರ್ಕಾರವು ಚಿರತೆ ಕಾರ್ಯಪಡೆ ರಚಿಸಿದ ಬಳಿಕದ ಒಂದು ವರ್ಷದಲ್ಲಿ ಮೈಸೂರು– ಮಂಡ್ಯ ಭಾಗದಲ್ಲಿ 69 ಚಿರತೆಗಳನ್ನು ಸೆರೆಹಿಡಿಯಲಾಗಿದೆ. ಚಿರತೆಗಳು ಕಾಡಿನಿಂದ ನಾಡಿಗೆ ಬಂದು ಜನರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸುತ್ತಿವೆ. ಚಿರತೆಗಳ ದಾಳಿಯಿಂದ ಕಾಡಂಚಿನ ಗ್ರಾಮಗಳ ಕೆಲವರು ಪ್ರಾಣ ಕಳೆದುಕೊಂಡಿ
ದ್ದಾರೆ. ಕಾಡಿನಲ್ಲಿ ಅವುಗಳಿಗೆ ಆಹಾರ ದೊರಕದಿರುವುದೇ ಇದಕ್ಕೆ ಪ್ರಮುಖ ಕಾರಣ ಇದ್ದಿರಬಹುದು. ದೇಶದ ಶೇಕಡ 59ರಷ್ಟು ಚಿರತೆಗಳು ಸಂರಕ್ಷಿತ ಪ್ರದೇಶಗಳಿಂದ ಹೊರಗಿವೆ ಎಂದು ವರದಿಗಳು ಹೇಳುತ್ತವೆ. ಇದು, ತೀವ್ರ ಆತಂಕಕಾರಿ ವಿಚಾರ. ಚಿರತೆಗಳ ಉಪಟಳವನ್ನು ನಿವಾರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

⇒ಕೆ.ವಿ.ವಾಸು, ಮೈಸೂರು

ಮಳೆನೀರು ಸಂಗ್ರಹ: ಕಠಿಣ ಕ್ರಮ ಅಗತ್ಯ

ನೀರಿನ ಕೊರತೆ ಇದ್ದರೂ ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಗಳೂರಿನ ನಿವಾಸಿಗಳು ಹೆಚ್ಚಿನ ಆಸಕ್ತಿ ತೋರದಿರುವುದು ಸರಿಯಲ್ಲ. ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದ ಕಾರಣಕ್ಕೆ ಕಳೆದ ತಿಂಗಳ ಅಂತ್ಯದವರೆಗೆ 39,291 ವಸತಿ ಘಟಕಗಳು ಪ್ರತಿ ತಿಂಗಳು ಒಟ್ಟು ₹ 1.94 ಕೋಟಿ ದಂಡ ಪಾವತಿಸಿರುವುದು ಈ ನಿರಾಸಕ್ತಿಯನ್ನು ತೋರುತ್ತದೆ.

ದಂಡ ವಿಧಿಸುವುದು ಅಥವಾ ಪಾವತಿಸುವುದು ನೀರಿನ ಕೊರತೆ ನೀಗಲು ಪರಿಹಾರ ಆಗಲಾರದು. ಮತ್ತಷ್ಟು ಕಠಿಣ ಕ್ರಮಗಳ ಮೂಲಕ, ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಕೆ ನೀತಿಯು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ನೀರು ಮತ್ತು ವಿದ್ಯುತ್ ಪೂರೈಕೆ ಕಡಿತದಂತಹ ಕ್ರಮಗಳ ಬಗೆಗೂ ಸರ್ಕಾರ ಯೋಚಿಸಬೇಕು.

⇒ಎಚ್.ಆರ್. ಪ್ರಕಾಶ್, ಕೆ.ಬಿ. ದೊಡ್ಡಿ, ಮಂಡ್ಯ 

ಭಾವೈಕ್ಯದ ಪ್ರತೀಕ: ಹೀಗೇ ಮುಂದುವರಿಯಲಿ

ಗದಗ ಜಿಲ್ಲೆಯ ನರಗುಂದದ ಐತಿಹಾಸಿಕ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದೇಶ್ವರ ಜಾತ್ರೆಗೆ ಇಮಾಮ್ ಸಾಹೇಬ ಮಹ್ಮದಸಾಬ ಶರಣರ ಸೇವಾ ಟ್ರಸ್ಟ್ ಸದಸ್ಯರು ₹ 30 ಲಕ್ಷ ವೆಚ್ಚದಲ್ಲಿ ನೂತನ ತೇರು ನಿರ್ಮಿಸಿಕೊಟ್ಟಿರುವ ಸುದ್ದಿ (ಪ್ರ.ವಾ., ಮಾರ್ಚ್‌ 6) ಓದಿ ಅತೀವ ಸಂತೋಷವಾಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಎಲ್ಲ ಹಬ್ಬ–ಹರಿದಿನಗಳನ್ನು ಹಿಂದೂ– ಮುಸ್ಲಿಂ ಎಂಬ ಭೇದ ಭಾವ ಇಲ್ಲದೆ ಭಾವೈಕ್ಯದಿಂದ ಆಚರಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಭೇದಭಾವವನ್ನು ಕೆಲವು ರಾಜಕಾರಣಿಗಳು ಹುಟ್ಟುಹಾಕುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಅವರು ಇಂತಹ ಹುನ್ನಾರಗಳಲ್ಲಿ ತೊಡಗಿದ್ದಾರೆ. ಜನಸಾಮಾನ್ಯರು ಇಂಥವರ ಮಾತುಗಳಿಗೆ ಕಿವಿಗೊಡಬಾರದು.

⇒ಎಸ್. ನಾಗರಾಜ ನಾಗೂರ, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT