ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 24 ಡಿಸೆಂಬರ್ 2023, 19:00 IST
Last Updated 24 ಡಿಸೆಂಬರ್ 2023, 19:00 IST
ಅಕ್ಷರ ಗಾತ್ರ

ಭ್ರಷ್ಟಾಚಾರರಹಿತ ಮಾರ್ಗ ಇಲ್ಲವೇ?

ಹೊಟ್ಟೆ ಹಸಿದಿದ್ದ ಒಬ್ಬ ವ್ಯಕ್ತಿಗೆ ಹೇಗೋ ತಟ್ಟೆ ತುಂಬಾ ಆಹಾರ ಸಿಕ್ಕಿತಂತೆ. ಅದನ್ನು ತುಂಬಾ ಖುಷಿಯಿಂದ ತಿಂದ ಅವನು, ತಟ್ಟೆ ಖಾಲಿಯಾದ ಮೇಲೆ, ಊಟ ಒಂದು ಚೂರೂ ಸರಿ ಇರಲಿಲ್ಲ ಎಂದು ಹೇಳಿ ಎದ್ದು ಹೋದನಂತೆ. ಹೀಗಿದೆ, ಚಿತ್ರದುರ್ಗದ ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರ ನಡೆ! ಹೌದು, ನಾರಾಯಣ ಸ್ವಾಮಿ ಅವರು ‘ಭ್ರಷ್ಟಾಚಾರದಿಂದ ಬೇಸತ್ತು ರಾಜಕೀಯದಿಂದ ದೂರ ಉಳಿಯುವ ಬಗ್ಗೆ ಆಲೋಚಿಸಿದ್ದೇನೆ’ ಎಂದು ಹೇಳಿದ್ದಾರೆ. ಅವರು ರಾಜಕೀಯಕ್ಕೆ ಬರುವುದಕ್ಕಿಂತ ಮುಂಚಿನಿಂದಲೂ ರಾಜಕೀಯದಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿತ್ತು. ಹೀಗಾಗಿ, ರಾಜಕೀಯಕ್ಕೆ ಪದಾರ್ಪಣೆ ಮಾಡುವ ಮುನ್ನವೇ ಸಚಿವರು ಇಂತಹ ಆಲೋಚನೆಯನ್ನು ಮಾಡಿದ್ದರೆ ಅವರ ಮಾತಿಗೊಂದು ತೂಕ ಬರುತ್ತಿತ್ತು.

ರಾಜಕೀಯದಲ್ಲಿ ಅಪಾರ ಅನುಭವವಿರುವ ನಾರಾಯಣ ಸ್ವಾಮಿ, ಈವರೆಗೆ ಎಲ್ಲ ಸವಲತ್ತುಗಳನ್ನೂ ಅನುಭವಿಸಿ, ಈಗ ರಾಜಕೀಯದಲ್ಲಿ ಭ್ರಷ್ಟಾಚಾರವಿದೆ ಎಂದು ಹೇಗೆ ಹೇಳುತ್ತಾರೆ? ಇದರಲ್ಲಿ ಏನಾದರೂ ಒಂದು ತರ್ಕ ಇರಬಹುದಲ್ಲವೇ? ಬಹುಶಃ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗುವುದಿಲ್ಲ ಎಂಬ ಮಾಹಿತಿ ಅವರಿಗೆ ಸಿಕ್ಕಿರಬಹುದೇ? ಹಾಗೇನಾದರೂ ಆಗಿದ್ದರೆ ಅವರು ಗೌರವಪೂರ್ವಕವಾಗಿ ರಾಜಕೀಯ ನಿವೃತ್ತಿ ಪಡೆಯಬಹುದಿತ್ತು. ಸಚಿವರ ಹೇಳಿಕೆಯ ಪ್ರಕಾರ, ಇನ್ನು ಮುಂದೆ ರಾಜಕೀಯ ಮಾಡುವವರೆಲ್ಲ ‘ಭ್ರಷ್ಟರು’ ಎಂದಂತೆ ಆಗುವುದಿಲ್ಲವೇ? ಸಚಿವರ ಹಿಂದೆ ಒಂದು ದೊಡ್ಡ ಬಣವೇ ಇದೆ. ಅವರು ಭ್ರಷ್ಟಾಚಾರರಹಿತ ರಾಜಕೀಯ ಮಾರ್ಗವನ್ನು ಅನುಸರಿಸಬಹುದಿತ್ತು. ಅದುಬಿಟ್ಟು, ರಾಜಕೀಯವೆಲ್ಲ ಭ್ರಷ್ಟಾಚಾರ ಎಂದರೆ, ಸಜ್ಜನ ರಾಜಕಾರಣಿಗಳೆಲ್ಲ ನಿವೃತ್ತಿ ಪಡೆಯಬೇಕಾಗುತ್ತದೆ. ರಾಜಕೀಯದಲ್ಲೂ ಭ್ರಷ್ಟಾಚಾರರಹಿತ ಆಡಳಿತ ಮಾಡುವವರು ಈಗಲೂ ಇದ್ದಾರೆ. ಅಂತಹವರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರೆ ಸಚಿವರಿಂದ ಇಂತಹ ಮಾತು ಬರುತ್ತಿರಲಿಲ್ಲವೇನೊ.

-ರಾಜು ಬಿ. ಲಕ್ಕಂಪುರ, ಜಗಳೂರು

******

ಹಿಂದಿಯಲ್ಲಿ ಹಿಂದುಳಿಯುವುದೇಕೆ?

ಹಿಂದಿ ಭಾಷೆಯು ರಾಷ್ಟ್ರಭಾಷೆಯಲ್ಲ ಎಂದು ಜಿ.ನಾಗೇಂದ್ರ ಕಾವೂರು ಹೇಳಿದ್ದಾರೆ (ವಾ.ವಾ., ಡಿ. 22). ಹಿಂದಿಯು ರಾಷ್ಟ್ರಭಾಷೆ ಹೌದೋ ಅಲ್ಲವೋ ಎಂಬ ವಾದಗಳ ನಡುವೆ, ಹಿಂದಿ ಭಾಷೆಯನ್ನು ಕಲಿಯುವುದರಿಂದ ಆಗುವ ಅನುಕೂಲಗಳ ಬಗ್ಗೆ ನಾವು ಕುರುಡಾಗಿದ್ದೇವೆ. ವ್ಯಾಪಾರ, ನಿರ್ಮಾಣ ಕೆಲಸ, ಪ್ರವಾಸದಂತಹ ಕಾರ್ಯಗಳಿಗಾಗಿ ನಾವು ಅನ್ಯ ರಾಜ್ಕಕ್ಕೆ ಹೋದಾಗ ಅಥವಾ ಅವರು ನಮ್ಮ ರಾಜ್ಯಕ್ಕೆ ಬಂದಾಗ, ಹಿಂದಿ ಭಾಷೆ ಬರುವುದರಿಂದ ಆಗುವ ಅನುಕೂಲ ಅಪಾರ. ಅಂತಹ ಕಡೆಗಳಲ್ಲಿ ಸ್ಥಳೀಯ ಭಾಷೆ ಹಾಗೂ ಇಂಗ್ಲಿಷ್ ಗೊತ್ತಿಲ್ಲದವರಿಗೆ ಹಿಂದಿ ಆಪದ್ಬಾಂಧವ. ಡಿಎಂಕೆ ದಶಕಗಳಿಂದಲೂ ಹಿಂದಿ ವಿರೋಧಿ ಭಾವನೆಯನ್ನು ಹೊಂದಿದೆ. ಇದು ಒಂದು ರೀತಿ ಭಾಷೆ ಗೊತ್ತಿದ್ದರೂ ಮಾತನಾಡದ ಅಂಧಾಭಿಮಾನ ಅಥವಾ ಅಹಂ.

ರಾಷ್ಟ್ರ ರಾಜಕಾರಣದಲ್ಲಿ ದಕ್ಷಿಣ ಭಾರತೀಯರು ಹಿಂದಿಯಲ್ಲಿ ಹಿಂದುಳಿದು ಹಿನ್ನಡೆ ಕಾಣುತ್ತಿರುವುದು ಕಹಿಯಾದರೂ ಸತ್ಯ. ಹಿಂದಿ ಬಲ್ಲ ಮಾಜಿ ಪ್ರಧಾನಿ ನರಸಿಂಹ ರಾವ್ ಮತ್ತು ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಅಪವಾದವಾಗಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.

-ಗುರು ಜಗಳೂರು, ಹರಿಹರ

******

ಕಡಿಮೆ ದಾಖಲಾತಿ: ಶಿಕ್ಷಕರ ಕೊರತೆ ಕಾರಣ

ರಾಜ್ಯದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿ ನೂರಾರು ಸರ್ಕಾರಿ ಶಾಲೆಗಳನ್ನು ಮುಚ್ಚಿರುವ ಕುರಿತ ವಿಶೇಷ ವರದಿ (ಒಳನೋಟ, ಪ್ರ.ವಾ., ಡಿ. 24) ವಸ್ತುನಿಷ್ಠವಾಗಿದೆ. ಸರ್ಕಾರಿ ಶಾಲೆಗಳ ಇಂತಹ ದುಃಸ್ಥಿತಿ ಕುರಿತು ಎಲ್ಲರೂ ಚಿಂತಿಸುವಂತಾಗಿದೆ. ದಾಖಲಾತಿ ಕಡಿಮೆಯಾಗಲು ಶಿಕ್ಷಕರ ಕೊರತೆಯೂ ಒಂದು ಕಾರಣ. 1ರಿಂದ 7ನೇ ತರಗತಿವರೆಗೆ ಇರುವ ಒಂದು ಶಾಲೆಯಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 50 ಇದ್ದರೆ, ಶಿಕ್ಷಣ ಇಲಾಖೆ ನಿಯಮದ ಪ್ರಕಾರ ಅಲ್ಲಿಗೆ ಹೆಚ್ಚೆಂದರೆ ಮೂವರು ಶಿಕ್ಷಕರನ್ನು ನೀಡಬಹುದು. ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಶಿಕ್ಷಕರ ಸಂಖ್ಯೆ ಸರಿಯಿದೆಯೆಂದು ಯಾರಿಗಾದರೂ ಅನ್ನಿಸಬಹುದು. ಆದರೆ 1ರಿಂದ 7ನೇ ತರಗತಿಯವರೆಗೆ ಆ ಮೂವರು ಶಿಕ್ಷಕರು ಪ್ರತಿದಿನ ತಲಾ 11 ವಿಷಯಗಳನ್ನು ಬೋಧಿಸಬೇಕಾಗುತ್ತದೆ. ಆ ಮೂವರಲ್ಲಿ ಒಬ್ಬರು ಮುಖ್ಯ ಉಪಾಧ್ಯಾಯರಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಪ್ರತಿದಿನ ಇಲಾಖೆ ಕೇಳುವ ಅನೇಕ ಮಾಹಿತಿಗಳನ್ನು ಸಿದ್ಧಗೊಳಿಸಿ ಕಳಿಸಬೇಕಾದ, ಆನ್‌ಲೈನ್‌ನಲ್ಲಿ ಅನೇಕ ಮಾಹಿತಿಗಳನ್ನು ಅಪ್‌ಡೇಟ್ ಮಾಡಬೇಕಾದ ಕೆಲಸಗಳೂ ಇರುತ್ತವೆ. ಅಲ್ಲದೆ ಬಿಸಿಯೂಟ ನಿರ್ವಹಿಸುವ ಕೆಲಸ ಸಹ ಇರುತ್ತದೆ. ಪಠ್ಯಪುಸ್ತಕ, ಸಮವಸ್ತ್ರಗಳನ್ನು ತಾಲ್ಲೂಕು ಕೇಂದ್ರದಿಂದ ತಂದು ಮಕ್ಕಳಿಗೆ ವಿತರಿಸುವ ಜವಾಬ್ದಾರಿ ಇರುತ್ತದೆ. ಇವಲ್ಲದೆ ಇನ್ನೂ ಅನೇಕ ಕೆಲಸಗಳನ್ನು ಈ ಶಿಕ್ಷಕರೇ ನಿಭಾಯಿಸಬೇಕು.

ಇವೆಲ್ಲಕ್ಕೂ ಪರಿಹಾರವೆಂದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೀಡುವ ಬದಲು ಬೋಧನಾ ವಿಷಯಗಳಿಗೆ ಅನುಗುಣವಾಗಿ ಶಿಕ್ಷಕರನ್ನು ನೀಡುವುದು ಸೂಕ್ತ. ಪ್ರತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಬೋಧಕೇತರ ವಿಶೇಷ ಹುದ್ದೆ ಸೃಷ್ಟಿಸಿ, ಅವರಿಗೆ ಕಚೇರಿ ಕೆಲಸ, ಬಿಸಿಯೂಟ ನಿರ್ವಹಣೆ, ಶೌಚಾಲಯ-ಶುಚಿತ್ವ ನಿರ್ವಹಣೆ, ಸಮುದಾಯದ ನಿರ್ವಹಣೆಯಂತಹ ಬೋಧಕೇತರ ಕೆಲಸಗಳನ್ನು ವಹಿಸಿದರೆ, ಶಿಕ್ಷಕರು ಬೋಧನೆಯಲ್ಲಿ ಮಾತ್ರ ತೊಡಗಿ ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಆಸಕ್ತಿ ವಹಿಸುತ್ತಾರೆ. ಆಗ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಇಷ್ಟಪಡುತ್ತಾರೆ.

-ಸುರಹೊನ್ನೆ ಅರವಿಂದ, ಸುರಹೊನ್ನೆ, ನ್ಯಾಮತಿ

******

ಬೆಳಕಿನ ಆಶಾಕಿರಣ ಮೂಡಲಿ

ಕಣ್ಣೀರು ಹಾಕುತ್ತಲೇ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್, ಅವಮಾನದ ನಡುವೆ ಸಮ್ಮಾನ ಬೇಡವೆಂದು ಪದ್ಮ ಪ್ರಶಸ್ತಿ ವಾಪಸಿಗೆ ನಿರ್ಧಾರ ಮಾಡಿದ ಕೆಲವು ಕುಸ್ತಿಪಟುಗಳು, ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ, ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣ, ಸರಕು ಹಡಗಿನ ಮೇಲೆ ಡ್ರೋನ್ ದಾಳಿ, ಮಾನವ ಕಳ್ಳಸಾಗಣೆ ಶಂಕೆ, ಅಮೆರಿಕದಲ್ಲಿ ದೇವಾಲಯ ವಿರೂಪ, ರಷ್ಯಾ– ಉಕ್ರೇನ್ ಯುದ್ಧ, ಗಾಜಾ ಮೇಲೆ ಇಸ್ರೇಲ್ ದಾಳಿಯಂತಹ ವರದಿಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿರುತ್ತವೆ. ಇವನ್ನೆಲ್ಲ ನೋಡುತ್ತಿದ್ದರೆ, ಕೆ.ಎಸ್.ನಿಸಾರ್ ಅಹಮದ್ ಅವರ ‘ಶಿಲುಬೆ ಏರಿದ್ದಾನೆ’ ಕವಿತೆಯ ‘...ಕಾಲರಾಯನ ಗುಜರಿ ಸೇರಿಲ್ಲ, ವೇಷ ಮರೆಸಿವೆ ಅಷ್ಟೆ, ಈ ಎಲ್ಲ ಕೇಡುಗಳು...’ ಎಂಬ ಸಾಲುಗಳು ನೆನಪಾಗುತ್ತವೆ. ಕ್ರೌರ್ಯ ಎಂಬುದು ಕಾಲಾತೀತವಾಗಿ ದೇಶಾತೀತವಾಗಿ ಎಗ್ಗಿಲ್ಲದೆ ನಡೆದು ಬರುತ್ತಿರುವ ಈ ಹೊತ್ತಿನಲ್ಲಿ, ಈ ವರ್ಷದ ಕ್ರಿಸ್ಮಸ್ ಮತ್ತು ಹೊಸ ವರ್ಷವು ಸಕಲ ಜೀವಾತ್ಮಗಳ ಉಳಿವಿಗೆ ಬೆಳಕಿನ ಆಶಾಕಿರಣವನ್ನು ಹೊತ್ತು ತರಲೆಂದು ಆಶಿಸೋಣ.

-ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT