ಕಲಾವಿದರಿಗೆ ಅಗೌರವ ತರವೇ?
ಹಬ್ಬ, ಜಾತ್ರೆ, ರಥೋತ್ಸವದಂತಹ ಧಾರ್ಮಿಕ ಉತ್ಸವಗಳಲ್ಲಿ ಜಾನಪದ ಕಲಾವಿದರು ಕಲಾ ಪ್ರದರ್ಶನ ಮಾಡುವುದು ನಮ್ಮ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರ ಬರುವಿಕೆಗೆ ಅಥವಾ ಸತ್ಯಾಗ್ರಹ, ಧರಣಿಗಳಿಗೆ ಜಾನಪದ ಕಲಾವಿದರನ್ನು ಕರೆದು ಅವರ ಕಲೆಯನ್ನು ಅವಮಾನಿಸುವಂತಹ ಪ್ರವೃತ್ತಿ ಹೆಚ್ಚುತ್ತಿದೆ. ಇದರ ಅವಶ್ಯಕತೆಯಾದರೂ ಏನಿದೆ? ಜಾನಪದ ಕಲಾವಿದರು ಸಹ ತಾವು ಹೋಗುತ್ತಿರುವಂತಹ ವೇದಿಕೆ ಯಾವುದು, ಅಲ್ಲಿ ಕಲೆಗೆ ಗೌರವ ಸಿಗುತ್ತದೆಯೇ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಸಚಿವರು ಬರುವವರೆಗೂ ಕಲಾವಿದರು ತಮಟೆ, ಡೊಳ್ಳು, ಕಂಸಾಳೆಯಂತಹ ಕಲಾಪ್ರದರ್ಶನಗಳನ್ನು ನೀಡುತ್ತಾ ಇರುತ್ತಾರೆ. ಸಚಿವರು ಬಂದ ತಕ್ಷಣ ಈ ಕಲಾವಿದರನ್ನು ವೇದಿಕೆಯಿಂದ ಅಥವಾ ಸಭಾಂಗಣದಿಂದ ಹೀನಾಯವಾಗಿ ಹೊರಗೆ ಕಳಿಸಲಾಗುತ್ತದೆ. ಇಂತಹ ಅಗೌರವವನ್ನು ನಾವು ನಮ್ಮ ಶಾಸ್ತ್ರೀಯ ಸಂಗೀತ ಅಥವಾ ನೃತ್ಯಕ್ಕೆ ಸಂಬಂಧಿಸಿದಂತೆ ಮಾಡುತ್ತೇವೆಯೇ? ಇಲ್ಲ ಅಲ್ಲವೇ? ಕಲಾವಿದರ ಗೌರವಕ್ಕೆ ಚ್ಯುತಿ ಬಾರದೆ, ಎಲ್ಲ ಕಲಾವಿದರಿಗೂ ಸಮಾನವಾದಂಥ ಗೌರವ ಸಿಗುವಂತೆ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕೆಲವು ನೀತಿ ನಿಯಮಗಳನ್ನು ರೂಪಿಸಬೇಕು. ಜಾನಪದ ಅಕಾಡೆಮಿ, ಜಾನಪದ ಪರಿಷತ್ತು ಅಥವಾ ಜಾನಪದ ವಿಶ್ವವಿದ್ಯಾಲಯದ ಅಧಿಕಾರಿಗಳು ಇತ್ತ ಗಮನಹರಿಸಬೇಕು.
-ಗಿರಿಜಾ ವೀರಪ್ಪ, ಬೆಂಗಳೂರು
ನಾಯಕತ್ವದ ಸಮರಕ್ಕೆ ವೇದಿಕೆ?!
ಮೈಸೂರಿನ ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಸಾರ್ವಜನಿಕರ ಮುಂದೆ ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಮೈಸೂರಿಗೆ ಜೆಡಿಎಸ್ ಹಾಗೂ ಬಿಜೆಪಿ ಪಾದಯಾತ್ರೆ ನಡೆಸುತ್ತಿವೆ. ಆದರೆ ಈಗ ಈ ಪಾದಯಾತ್ರೆಯು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವಿನ ಮಾತಿನ ಸಮರಕ್ಕೆ ವೇದಿಕೆಯಾದಂತಿದೆ.
ಇವೆಲ್ಲವನ್ನೂ ಸಾರ್ವಜನಿಕರು ಗಮನಿಸುತ್ತಿದ್ದಾರೆ. ಇವೆಲ್ಲವೂ ನಡೆಯುತ್ತಿರುವುದು ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಎಂಬುದು ಸಾರ್ವಜನಿಕರಿಗೆ ತಿಳಿದಿದೆ. ಈಗ ಇತರ ಸಮುದಾಯದವರು ಇವರಿಬ್ಬರ ಜಗಳ ನೋಡಿ ಅಣಕಿಸುವಂತಾಗಿದೆ. ಈ ನಾಯಕರಿಗೆ ಸಮುದಾಯದ ಮುಖಂಡರು ಸ್ವಲ್ಪ ಬುದ್ಧಿ ಹೇಳಲಿ.
ಬೂಕನಕೆರೆ ವಿಜೇಂದ್ರ, ಮೈಸೂರು
ಹೌದು, ಇವರೂ ಅವರ ಕೈಗೊಂಬೆಯೇ...
‘ನಮ್ಮ ರಾಜ್ಯಪಾಲರೂ ಕೇಂದ್ರದ ಕೈಗೊಂಬೆಯೇ?’ ಎಂಬ ಪ್ರಶ್ನೆಯನ್ನು ಎಚ್.ಆನಂದರಾಮ ಶಾಸ್ತ್ರೀ ಅವರು ಎತ್ತಿದ್ದಾರೆ. ಅವಕಾಶಗಳನ್ನು ಬೆಂಬತ್ತುವ ಕಲಾಗಾರಿಕೆಯೇ ರಾಜಕೀಯ ಎಂಬುದನ್ನು ಒಪ್ಪಿಕೊಂಡಿರುವ ನಮಗೆ, ಇದು ಅಚ್ಚರಿಯ ಪ್ರಶ್ನೆ ಎನಿಸುವುದೇ ಇಲ್ಲ! ಮೊದಲ ದೋಷವೆಂದರೆ, ರಾಜ್ಯಪಾಲರು, ರಾಷ್ಟ್ರಪತಿಯವರ ವೈಯಕ್ತಿಕ ಅಭಿವ್ಯಕ್ತಿ ಸ್ವಾತಂತ್ರ್ಯಹರಣ! ಅವರು ವಿಧಾನಮಂಡಲ ಮತ್ತು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡುವ ಭಾಷಣಗಳಲ್ಲಿ, ಆಯಾ ಸಂದರ್ಭ, ಸನ್ನಿವೇಶಗಳ ಕುರಿತಂತೆ ಅವರದೇ ನೈಜ ಪರಿವೀಕ್ಷಣೆ, ಸಾಧನೆ ಮತ್ತು ಮುಂಗಾಣ್ಕೆಯ ನಿರ್ದೇಶನ ನೀಡುವುದಕ್ಕೆ ಅವಕಾಶವಾದರೂ ಎಲ್ಲಿರುತ್ತದೆ? ಅಂದಮೇಲೆ, ಕಾರ್ಯಾಂಗ ಮತ್ತು ಶಾಸಕಾಂಗದ ಮುಂದಿನ ನಡಾವಳಿಯ ಬಗ್ಗೆ ವಿಮರ್ಶಿಸಬೇಕಾದ ಪ್ರಸಂಗ ಒದಗಿಬಂದಲ್ಲಿ, ಅವರ ಪ್ರಕ್ರಿಯೆಯು ಈ ಭಾಷಣದ ಆಶಯಕ್ಕೆ ವಿಪರೀತವೂ ವ್ಯತಿರಿಕ್ತವೂ ಆಗಿರುವ ವಿಪರ್ಯಾಸವೇ ಹೆಚ್ಚಾಗಿರುತ್ತದೆ ಅಲ್ಲವೇ?
ರಾಜ್ಯಪಾಲರ ವರದಿಗಳೂ ಶಿಫಾರಸುಗಳೂ ನೇರವಾಗಿ ಮತ್ತು ಸಾರ್ವಜನಿಕವಾಗಿ ರಾಷ್ಟ್ರಪತಿಯವರನ್ನು ಮುಟ್ಟುವ ಸಾಧ್ಯತೆಯೂ ಇರುವುದಿಲ್ಲ. ಸಕ್ರಿಯ ರಾಜಕೀಯದಲ್ಲಿರುವ ಅವರು ಸಹಜವಾಗಿಯೇ ಮೇಲಧಿಕಾರದ ಮುಲಾಜಿನಲ್ಲೇ ಇರಬೇಕಾಗುತ್ತದೆ. ಮುಂದೊಮ್ಮೆ ಅವರಿಗೆ ಮಂತ್ರಿ, ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆಗುವ ಅವಕಾಶ ತೆರೆದುಕೊಂಡೇ ಇರುತ್ತದಲ್ಲವೇ?!
ಆರ್.ಕೆ.ದಿವಾಕರ, ಬೆಂಗಳೂರು
ಗಾಜಾ: ವಿಕೃತ ದಾಳಿ ನಿಲ್ಲಲಿ
ಪ್ಯಾಲೆಸ್ಟೀನಿನ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳು, ಯುದ್ಧದ ಸಂದರ್ಭದಲ್ಲಿ ನಡೆದುಕೊಳ್ಳಬೇಕಾದ ಕನಿಷ್ಠ ನೀತಿ ನಿಯಮಗಳನ್ನೂ ಗಾಳಿಗೆ ತೂರಿದ ವಿಕೃತಿಗಳಾಗಿವೆ. ಸಾಮಾನ್ಯ ನಾಗರಿಕರು ಯುದ್ಧದಿಂದ ಪಾರಾಗಲು ಆಶ್ರಯ ಪಡೆದ ಶಾಲೆಗಳ ಮೇಲೆ, ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯಲು ಸೇರಿದ ಆಸ್ಪತ್ರೆಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ನಿರಾಶ್ರಿತರ ತಾಣಗಳು ಹಾಗೂ ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ಕಾನೂನುಬಾಹಿರ. ಆದರೆ ಇದನ್ನು ಪ್ರಶ್ನಿಸುವವರು ಯಾರು?
ತಾವು ಜಾಗತಿಕ ನಾಯಕರೆಂದು ಬಿಂಬಿಸಿಕೊಳ್ಳುವ ವಿಶ್ವದ ನಾಯಕರೆಲ್ಲ ಈ ಕುರಿತು ಗಮನಹರಿಸ
ಬೇಕಾಗಿದೆ. ಈ ಬಗೆಯ ದಾಳಿಗಳನ್ನು ಕೂಡಲೇ ನಿಲ್ಲಿಸುವಂತೆ ಇಸ್ರೇಲ್‌ನ ಮೇಲೆ ಒತ್ತಡ ಹೇರಿ, ಅಲ್ಲಿನ ನಾಗರಿಕರನ್ನು ರಕ್ಷಿಸಬೇಕಾಗಿದೆ.
ಸರ್ಜಾಶಂಕರ ಹರಳಿಮಠ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.