ಭಾವನೆಗೆ ಬೆಲೆ ಇಲ್ಲವಾಯಿತೇ?
ಬೆಳಗಾವಿ ಸಮೀಪದ ನಾವಗೆ ಎಂಬ ಗ್ರಾಮದಲ್ಲಿನ ಕಾರ್ಖಾನೆಯೊಂದರಲ್ಲಿ ಘಟಿಸಿದ ಅಗ್ನಿ ಅವಘಡದಲ್ಲಿ ಸಾವಿಗೀಡಾದ ಯುವ ಕಾರ್ಮಿಕನ ದೇಹದ ಅವಶೇಷಗಳನ್ನು ಜಿಲ್ಲಾಡಳಿತವು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಆತನ ತಂದೆಯ ಕೈಗೆ ಕೊಟ್ಟಿರುವ ನಡೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದು. ಒಬ್ಬ ತಂದೆಗೆ ಮಗ ಸರ್ವಸ್ವವೇ ಆಗಿರುತ್ತಾನೆ. ಈ ಪ್ರಕರಣದಲ್ಲಿ ತಂದೆಯ ಭಾವನೆಗೆ ಬೆಲೆಯೇ ಇಲ್ಲದಂತಾಗಿದೆ.
ಕನ್ನಡದ ಕವಿ ರಾಘವಾಂಕನ ಕಾವ್ಯದಲ್ಲಿ, ಚಂದ್ರಮತಿಯು ಸಾವನ್ನಪ್ಪಿದ ಮಗ ಲೋಹಿತಾಶ್ವನ ಶವಸಂಸ್ಕಾರ ಮಾಡಲು ಸ್ಮಶಾನಕ್ಕೆ ಬಂದ ಸಂದರ್ಭದಲ್ಲಿ, ಹರಿಶ್ಚಂದ್ರನು ಸತ್ತ ಮಗುವಿನ ಕಾಲನ್ನು ಹಿಡಿದು ಎಸೆಯಲು ಮುಂದಾಗುತ್ತಾನೆ. ಆಗ ಹರಿಶ್ಚಂದ್ರನನ್ನು ತಡೆಯುವ ಚಂದ್ರಮತಿ, ಹಾಗೆ ಮಾಡಿದರೆ ತನ್ನ ಹಸುಳೆಗೆ ನೋವಾಗಬಹುದು ಎಂದು ಹೇಳುವುದು ಎಂತಹವರ ಕಣ್ಣನ್ನೂ ಆರ್ದ್ರಗೊಳಿಸುತ್ತದೆ. ಅಂತಹದ್ದರಲ್ಲಿ, ಮೊದಲೇ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ತಂದೆಗೆ, ಮಗನ ಮೃತದೇಹಕ್ಕೆ ಕನಿಷ್ಠ ಗೌರವವನ್ನೂ ನೀಡದೆ, ಅದರ ಅವಶೇಷಗಳನ್ನು ಕೈಚೀಲದಲ್ಲಿ ಹಾಕಿಕೊಟ್ಟರೆ ಎಂತಹ ಆಘಾತವಾಗಬಹುದು? ಮನುಷ್ಯರು ಎನ್ನಿಸಿಕೊಂಡ ನಾವು ಎಂತಹ ಸಂದರ್ಭದಲ್ಲೂ ಅಮಾನವೀಯವಾಗಿ ವರ್ತಿಸಬಾರದು ಹಾಗೂ ನಮ್ಮೊಳಗಿನ ಅಂತಃಕರಣ ಬತ್ತಿಹೋಗಬಾರದು ಎಂಬುದನ್ನು ಮರೆಯದಿರೋಣ.
ಲೋಕೇಶ ಬೆಕ್ಕಳಲೆ, ಮಂಡ್ಯ
ಜೋಗ ಜಲಪಾತ: ಪ್ರವಾಸಿಸ್ನೇಹಿ ಆಗಲಿ
ಜೋಗ ಜಲಪಾತವನ್ನು ವೀಕ್ಷಿಸಲು ಇತ್ತೀಚೆಗೆ ಹೋಗಿದ್ದೆ. ನಮ್ಮಂತೆ ಸಾವಿರಾರು ಪ್ರವಾಸಿಗರು ಆ ಅದ್ಭುತ ನಿಸರ್ಗ ನಿರ್ಮಿತ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದರು. ಈಗ ಅಲ್ಲಿ ಜೋಗ ವೀಕ್ಷಣೆ ಸಲುವಾಗಿ ಭರಪೂರ ಕಾಮಗಾರಿಗಳು ನಡೆಯುತ್ತಿವೆ. ಆಗಲಿ ಒಳ್ಳೆಯದು. ಆದರೆ ಪ್ರವಾಸಿಗರಿಗೆ ಇಲ್ಲಿ ತುಂಬಾ ಹಿಂಸೆಯಾಗುವ ಮಟ್ಟಿಗೆ ಅನನುಕೂಲಗಳು ಹಾಸಿ ಹೊದ್ದಿವೆ. ಜಲಪಾತ ವೀಕ್ಷಣೆಯ ಪ್ರದೇಶದಲ್ಲಿ ಸ್ವಚ್ಛತೆ ಲವಲೇಶವೂ ಇಲ್ಲವಾಗಿದೆ. ಪ್ರವಾಸಿಗರು ಎಲ್ಲೆಂದರಲ್ಲಿ ನುಗ್ಗುವ ಮನೋವೃತ್ತಿ ಹೊಂದಿರುವುದರಿಂದ, ಮುಖ್ಯ ವೀಕ್ಷಣಾ ಸ್ಥಳದಲ್ಲಿ ನಿಲ್ಲುವವರು ಇತರರಿಗೆ ಅವಕಾಶ ಮಾಡಿಕೊಡುವುದಿಲ್ಲ. ಹಲವು ಕಡೆ ಜಲಪಾತ ನೋಡಲು ಮರ ಗಿಡಗಳು ಅಡ್ಡಿಯಾಗುತ್ತವೆ. ನೋಡುಗರಿಗೆ ಸಹಕಾರಿ ಆಗುವಂತೆ ಅವುಗಳನ್ನು ಕತ್ತರಿಸಿಲ್ಲ.
ಇತ್ತ ವಿದ್ಯುದಾಗಾರ ವೀಕ್ಷಣಾ ತಾಣದಲ್ಲಿ ಸ್ವಚ್ಛತೆಯ ಮಾತೇ ಇಲ್ಲ. ಆ ಸ್ಥಳವನ್ನು ನೋಡಲು ಪ್ರವಾಸಿಗರು ಹೆಣಗಾಡುವುದನ್ನು ಕಂಡರೆ ಅಯ್ಯೋ ಅನ್ನಿಸುತ್ತದೆ. ಮೇಲ್ಭಾಗದಲ್ಲೂ ಪ್ರವಾಸಿಗರ ದಂಡು ಕಿಕ್ಕಿರಿದು ತುಂಬಿರುತ್ತದೆ. ಪ್ರವಾಸಿಗರ ಸುರಕ್ಷತೆಗೆ ಸೂಕ್ತ ನಿರ್ವಹಣಾ ವ್ಯವಸ್ಥೆ ಅಥವಾ ಆಹಾರ ಸೌಲಭ್ಯ ಇಲ್ಲ. ಮೆಕ್ಕೆ ತೆನೆಗಳನ್ನು ಬರೋಬ್ಬರಿ ₹ 40ಕ್ಕೆ ಮಾರಲಾಗುತ್ತದೆ. ಜಲಪಾತ ವೀಕ್ಷಣೆಗೆ ಸರ್ಕಾರ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಆದಷ್ಟು ಬೇಗ ಕಾಮಗಾರಿಗಳನ್ನು ಮುಗಿಸಿ ಜೋಗವನ್ನು ಪ್ರವಾಸಿಸ್ನೇಹಿ ತಾಣವನ್ನಾಗಿ ಮಾಡಬೇಕಾಗಿದೆ. ಸ್ವಚ್ಛತೆಯನ್ನೂ ಕಾಪಾಡಿಕೊಳ್ಳಬೇಕಾಗಿದೆ.
ತಿರುಪತಿ ನಾಯಕ್, ಆಶಿಹಾಳ ತಾಂಡ, ಲಿಂಗಸುಗೂರು
ಅಂಬಾನಿ ಸಂಬಳ: ವಿನಿಯೋಗ ಆಗಿದ್ದೆಲ್ಲಿ?
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಸತತ ನಾಲ್ಕನೇ ವರ್ಷವೂ ಸಂಬಳ ಪಡೆದಿಲ್ಲ ಎಂದು ಕಂಪನಿ ತಿಳಿಸಿರುವುದಾಗಿ ವರದಿಯಾಗಿದೆ. ಅವರು ಸಂಬಳ ತ್ಯಜಿಸಿದ್ದರ ಹಿಂದಿನ ಪ್ರೇರಣೆ ಏನು? ಯಾರಿಗಾಗಿ ತ್ಯಜಿಸಿದರು? ಆ ಕಂಪನಿಗೆ ಅವರೇ ಮುಖ್ಯಸ್ಥರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೋವಿಡ್ ಸಾಂಕ್ರಾಮಿಕದ ವೇಳೆ (2020– 21) ಸ್ವಯಂಪ್ರೇರಣೆಯಿಂದ ಕಂಪನಿಗೆ ಅವರು ಸಂಬಳ ಬಿಟ್ಟುಕೊಟ್ಟಿದ್ದರು. ಆದರೆ ನಂತರದ ವರ್ಷಗಳಲ್ಲಿ ವಾರ್ಷಿಕವಾಗಿ ಅವರು ತ್ಯಜಿಸಿರುವ ₹ 15 ಕೋಟಿ ವೇತನವನ್ನು ಯಾವುದಕ್ಕೆ ವಿನಿಯೋಗಿಸಲಾಗಿದೆ ಎಂಬುದನ್ನು ಸಹ ಕಂಪನಿ ಬಹಿರಂಗಪಡಿಸುವುದು ಒಳ್ಳೆಯದು. ದೇಶಕ್ಕಾಗಿ, ಜನಕಲ್ಯಾಣಕ್ಕಾಗಿ, ದೇಶದ ಸೈನಿಕರಿಗಾಗಿ, ಪ್ರವಾಹಪೀಡಿತ ಪ್ರದೇಶದ ಜನರಿಗಾಗಿ ಅಥವಾ ಶಿಕ್ಷಣ ಕ್ಷೇತ್ರದಂತಹ ಉದ್ದೇಶಗಳಿಗಾಗಿ ಬಳಸಿದ್ದರೆ ನಿಜಕ್ಕೂ ಅವರ ತ್ಯಾಗ ಆದರ್ಶಪ್ರಾಯವಾದುದೇ ಸರಿ.
ಅಜ್ಜಯ್ಯಮೂರ್ತಿ, ಮೊಳಕಾಲ್ಮುರು
ಬೆಂಗಳೂರಿನ ಕಟ್ಟಡಗಳಿಗೂ ತಪ್ಪಿದ್ದಲ್ಲ ಅಪಾಯ
ಈಗ ವಯನಾಡಿನಲ್ಲಿ ಹಾಗೂ ಈ ಹಿಂದೆ ಕೊಡಗಿನಲ್ಲಿ ಗುಡ್ಡ ಕುಸಿತವುಂಟಾಗಿ ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾದುದು ನಿಜಕ್ಕೂ ಆಘಾತಕಾರಿ. ಅವೈಜ್ಞಾನಿಕವಾಗಿ ಕಟ್ಟಿದ ಹೋಮ್ ಸ್ಟೇಗಳು, ರೆಸಾರ್ಟ್‌ಗಳು ಎಲ್ಲವೂ ಚರ್ಚೆಯ ವಿಷಯಗಳಾಗುತ್ತಿವೆ.
ಬೆಂಗಳೂರಿನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಒಂದೆರಡು ಮಾಳಿಗೆ ಕಟ್ಟಲು ಪರವಾನಗಿ ಪಡೆಯುವ ಸಣ್ಣ ನಿವೇಶನಗಳಲ್ಲೂ ಕಾನೂನುಬಾಹಿರವಾಗಿ ಮೂರು, ನಾಲ್ಕು ಮಹಡಿಗಳು ತಲೆ ಎತ್ತುತ್ತಲೇ ಇವೆ. ಕೆಲವು
ಅಪಾರ್ಟ್‌ಮೆಂಟ್‌ಗಳನ್ನು ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಲಾಗಿದೆ. ದುರ್ದೈವವಶಾತ್ ಇಲ್ಲಿಯೂ ಕೇರಳದ ರೀತಿಯಲ್ಲಿಯೇ ಧಾರಾಕಾರ ಮಳೆ ಸುರಿದರೆ ಇಂತಹ ಕಟ್ಟಡಗಳಿಗೂ ಅಪಾಯ ಕಟ್ಟಿಟ್ಟದ್ದೇ. ಇದರಿಂದ, ಆ ಕಟ್ಟಡಗಳು ಹಾಗೂ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವವರ ಪ್ರಾಣಕ್ಕೂ ಖಂಡಿತ ಅಪಾಯ ಇದ್ದೇ ಇರುತ್ತದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಸರ್ಕಾರ ಈಗಿಂದೀಗಲೇ ಕಾರ್ಯೋನ್ಮುಖವಾಗಬೇಕು.
ಬಿ.ಎನ್.ಭರತ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.