ಮಂಗಳವಾರ, ಮಾರ್ಚ್ 9, 2021
31 °C

ಪರಿಷತ್‌ ಘನತೆ ಉಳಿಸಿ, ಇಲ್ಲವಾದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಪರಿಷತ್‌ನಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳನ್ನು ಉಲ್ಲೇಖಿಸಿ ಪರಿಷತ್‌ನ ಮಾಜಿ ಸಭಾಪತಿ ಪ್ರೊ. ಬಿ.ಕೆ.ಚಂದ್ರಶೇಖರ್ ಪತ್ರ ಬರೆದಿದ್ದಾರೆ (ವಾ.ವಾ., ಡಿ. 22). ಇಡೀ ಘಟನೆಯನ್ನು ವಿಷಾದದ ಛಾಯೆಯಲ್ಲಿ ವಿಶ್ಲೇಷಿಸಿರುವ ಅವರು, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ಈ ಬಗ್ಗೆ ಕ್ಷಮೆ ಯಾಚಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇಲ್ಲಿರುವ ವಿಷಯವು ಘಟನೆಯ ಬಗ್ಗೆ ವಿಷಾದ ಅಥವಾ ಕ್ಷಮೆಯಾಚನೆ ಅಲ್ಲ. ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್ ಆಧಾರದಲ್ಲಿ ರಚನೆಯಾಗಿರುವ ಮೇಲ್ಮನೆ ಅರ್ಥಾತ್ ಪರಿಷತ್‌ಗೆ ಯಾರನ್ನು ಆಯ್ಕೆ ಮಾಡುತ್ತೇವೆ, ಅವರ ಕರ್ತವ್ಯಗಳೇನು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲಿನ ಸದಸ್ಯರನ್ನು ಆಯ್ಕೆ ಮಾಡುವುದು ವಿಧಾನಸಭೆಯ ಸದಸ್ಯರು, ಶಿಕ್ಷಕರು, ಪದವೀಧರರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು. ಇದನ್ನು ಹೊರತುಪಡಿಸಿ ಸರ್ಕಾರದ ನಾಮನಿರ್ದೇಶಿತರು ಸದಸ್ಯರಾಗಿರುತ್ತಾರೆ. ಇದರ ಆಧಾರದಲ್ಲಿ ನೋಡಿದರೆ, ಈವರೆಗಿನ ಹಲವಾರು ಸದಸ್ಯರು ಮೇಲ್ಮನೆಯ ಘನತೆ, ಗೌರವವನ್ನು ಎತ್ತಿಹಿಡಿದಿದ್ದರು. ಇವರ ಅವಧಿಯಲ್ಲಿನ ಕಲಾಪವು ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಬೇಕಾದ ಸಂಗತಿ.

ಇಂತಹ ಗೌರವಯುತರು, ಮುತ್ಸದ್ದಿಗಳು ಆಯ್ಕೆಯಾಗುತ್ತಿದ್ದ ಪರಿಷತ್‌ಗೆ ಈಗ ರಿಯಲ್ ಎಸ್ಟೇಟ್ ಉದ್ಯಮಿಗಳು, ಹಣವುಳ್ಳವರು, ಪ್ರಭಾವಿಗಳು ಆಯ್ಕೆಯಾಗುತ್ತಿದ್ದಾರೆ. ಇವರಿಗೆ ಪರಿಷತ್ ಸದಸ್ಯತ್ವ ಎನ್ನುವುದು ಕೇವಲ ಪ್ರತಿಷ್ಠೆ, ಇನ್ನುಳಿದವರಿಗೆ ರಾಜಕೀಯ ಪುನರ್ವಸತಿ ಕೇಂದ್ರ. ಹೀಗಿರುವಲ್ಲಿ ಮೇಲ್ಮನೆಯ ಘನತೆ ಕಾಯ್ದುಕೊಳ್ಳುವ, ನಿಯಮಾವಳಿ ಪಾಲಿಸುವ ನಿರೀಕ್ಷೆಯನ್ನು ಹೇಗೆ ಮಾಡಲು ಸಾಧ್ಯ?

ಈಗ ಮಾಡಬೇಕಿರುವುದು ಮೊನ್ನೆ ನಡೆದ ಘಟನೆಗಳ ಪೋಸ್ಟ್‌ಮಾರ್ಟಂ ಅಲ್ಲ, ಬದಲಿಗೆ ರಾಜಕೀಯ ಪಕ್ಷಗಳು ತಾವು ಯಾರನ್ನು ಮೇಲ್ಮನೆ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಚಿಂತಿಸಬೇಕು. ಹಾಗೆಯೇ ಸುಶಿಕ್ಷಿತ ಮತದಾರರಾದ ಶಿಕ್ಷಕರು, ಪದವೀಧರರು ತಮ್ಮ ಮತ ಮಾರಾಟಕ್ಕಿಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಈ ಹಿಂದೆ ಕೇವಲ ಕರಪತ್ರದಲ್ಲಿ ಚುನಾವಣೆ ನಡೆಯುತ್ತಿತ್ತು. ಈಗ ರೆಸಾರ್ಟ್‌ಗಳಲ್ಲಿ ಪಾರ್ಟಿ, ಭರಪೂರ ಉಡುಗೊರೆಗಳ ಮೂಲಕ ನಡೆಯುತ್ತಿದೆ. ಇಂತಹ ಸ್ಥಿತಿ ಬದಲಾದರೆ ಮಾತ್ರ ವಿಧಾನಪರಿಷತ್‌ನ ಘನತೆ, ಗೌರವ ಉಳಿಯುತ್ತದೆ. ಇಲ್ಲವಾದಲ್ಲಿ ಜನಸಾಮಾನ್ಯರ ತೆರಿಗೆ ಹಣ ಉಳಿಸುವ ದಿಕ್ಕಿನಲ್ಲಿ ಯೋಚಿಸಬೇಕು. ನೆರೆಯ ರಾಜ್ಯಗಳ ಮಾದರಿಯಲ್ಲಿ ಪರಿಷತ್ ವ್ಯವಸ್ಥೆಗೆ ಮಂಗಳ ಹಾಡಬೇಕು.
-ಆರ್.ಎಚ್.ನಟರಾಜ್, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು