ಮೂವರು ಡಿಸಿಎಂ: ಯಾರ ಹಿತಕ್ಕಾಗಿ?

ಲೋಕಸಭಾ ಚುನಾವಣೆಗೂ ಮೊದಲು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಕೆಲವು ಸಚಿವರು ತಂತ್ರಗಾರಿಕೆ ಹೆಣೆಯುತ್ತಿರುವುದು ವರದಿಯಾಗಿದೆ. ಲಿಂಗಾಯತ, ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸುವ ಮೂವರು ಹಿರಿಯ ಸಚಿವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ಈ ಸಮುದಾಯಗಳ ಓಲೈಕೆ ಸಾಧ್ಯವಾಗಲಿದೆ, ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಪಕ್ಷದ ಗುರಿಗೆ ಈ ನಡೆ ಪೂರಕವಾಗಲಿದೆ ಎಂಬ ವಾದವನ್ನು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಎದುರು ಕೆಲವು ಸಚಿವರುಪ್ರತಿಪಾದಿಸಿದ್ದಾರೆ. ಇದರಿಂದ, ಉಪಮುಖ್ಯಮಂತ್ರಿಗಳ ಆಯ್ಕೆಯು ರಾಜ್ಯದ ಅಭಿವೃದ್ಧಿಯ ಅಗತ್ಯವಲ್ಲ, ಚುನಾವಣೆಯ ಅಗತ್ಯ ಎನ್ನುವುದನ್ನು ಅವರೇ ಈ ಮೂಲಕ ಘೋಷಿಸಿದಂತಾಗಿದೆ. ಚುನಾವಣೆಯ ಗೆಲುವಿಗಾಗಿ ರಾಜ್ಯದ ಜನರ ಮೇಲೆ ಮೂವರು ಉಪಮುಖ್ಯಮಂತ್ರಿಗಳನ್ನು ಹೇರುವುದು ಎಷ್ಟು ಸರಿ? ಇಂತಹ ಹುದ್ದೆಗಳ ಸೃಷ್ಟಿಯು ಯಾವ ಕಾರಣಕ್ಕೂ ಒಂದು ಪಕ್ಷದ ಅಥವಾ ಸರ್ಕಾರದ ಹೆಗ್ಗಳಿಕೆಯಾಗುವುದಿಲ್ಲ. ಅಂತಹ ಸ್ಥಿತಿನಿರ್ಮಾಣವಾಗಿದೆಯೆಂದರೆ, ಆ ಪಕ್ಷದಲ್ಲಿ ಭಿನ್ನಮತ ಅತಿರೇಕಕ್ಕೆ ತಲುಪಿದೆ ಎಂದೇ ಅರ್ಥ.

ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಮಾನ್ಯತೆ ಇಲ್ಲ ಎನ್ನುವುದು ಈ ಸಂಬಂಧ ಲಾಬಿ ಮಾಡುತ್ತಿರುವ ಎಲ್ಲರಿಗೂ ಚೆನ್ನಾಗಿಯೇ ಗೊತ್ತು. ಯಾವುದೇ ಅಧಿಕೃತ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಇವರಿಗೆ ಅವಕಾಶ ಇರದು. ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ಇವರು ಅಧಿಕಾರವನ್ನು ಕೈಗೆತ್ತಿಕೊಳ್ಳಬಹುದೇ ವಿನಾ ಮುಖ್ಯಮಂತ್ರಿ ಇರುವವರೆಗೂ ಇವರದು ಡಮ್ಮಿ ಸ್ಥಾನವಾಗಿರುತ್ತದೆ. ಆದ್ದರಿಂದ ಈ ಸಚಿವರು ಅನಗತ್ಯವಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಗೊಂದಲವನ್ನು ಮೂಡಿಸದೆ, ತಮಗೆ ಸಿಕ್ಕಿರುವ ಖಾತೆಗಳನ್ನೇ ಸರಿಯಾಗಿ ನಿರ್ವಹಿಸುವುದು ಒಳ್ಳೆಯದು.

⇒ಬೇ.ನ.ಶ್ರೀನಿವಾಸಮೂರ್ತಿ, ತುಮಕೂರು

ಈವರೆಗೆ ನಾವು ಸಾಧಿಸಿದ್ದೇನು?!

ದಲಿತರ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದ ವಿಷಯ ಇತ್ತೀಚೆಗೆ ಚರ್ಚೆಗೆ ಬಂದಿದೆ. ಒಂದುವೇಳೆ ದಲಿತರು ಪ್ರವೇಶಿಸಿದರೆ ದೇವಸ್ಥಾನವನ್ನೇ ಮುಚ್ಚುವ ಅಥವಾ ‘ಮೈಲಿಗೆ’ಯಾದ ದೇವಸ್ಥಾನವನ್ನು ಬಿಟ್ಟು ಬೇರೊಂದು ದೇವಸ್ಥಾನವನ್ನೇ ಕಟ್ಟುವಂತಹ ಮಾತುಗಳೂ ಕೇಳಿಬರುತ್ತಿವೆ. ವಾಸ್ತವದಲ್ಲಿ ದೇಶದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿದೇವಸ್ಥಾನಗಳಿಗೆ ಇಂದಿಗೂ ದಲಿತರಿಗೆ ಪ್ರವೇಶವಿಲ್ಲ. ಇದು ಹೊಸ ವಿಷಯವಲ್ಲ, ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವುದು. ಕಾನೂನು ಪ್ರಕಾರ ಬಹುತೇಕ ದೇವಸ್ಥಾನಗಳಿಗೆ ಮುಕ್ತವಾದ ಪ್ರವೇಶವಿದ್ದರೂ ದಲಿತರು ಸ್ವಯಂಪ್ರೇರಿತರಾಗಿ ಅವುಗಳನ್ನು ಪ್ರವೇಶಿಸುವುದು ತೀರಾ ಕಡಿಮೆ. ದೇವರ ಶಾಪ, ನಂಬಿಕೆ, ಸಂಪ್ರದಾಯ, ಮಡಿ ಮೈಲಿಗೆ ಎನ್ನುವುದಕ್ಕಿಂತ ಹೆಚ್ಚಾಗಿ ತಮ್ಮ ಊರಿನ ಅಥವಾ ಗ್ರಾಮದ ಪ್ರಬಲ ವರ್ಗದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ದೇವಸ್ಥಾನವನ್ನು ಪ್ರವೇಶಿಸಲು ಹಿಂಜರಿಯುತ್ತಾರೆ.

ಅಂಬೇಡ್ಕರ್ ಅವರ ಕಾಳರಾಮ ದೇವಸ್ಥಾನ ಪ್ರವೇಶ ಚಳವಳಿಯ ವಿಷಯದಲ್ಲಿಯೂ ಹೀಗೇ ಆಗಿತ್ತು. ಪರ–
ವಿರೋಧದ ಹೋರಾಟಗಳು ನಡೆದು, ಕೊನೆಗೆ ದೇವಸ್ಥಾನವನ್ನು ವರ್ಷಗಟ್ಟಲೆ ಮುಚ್ಚಲಾಗಿತ್ತು. ಅದಾಗಿ ಸುಮಾರುನೂರು ವರ್ಷಗಳ ನಂತರವೂ ಇಂತಹ ವಿಚಾರಗಳಲ್ಲಿ ಅಷ್ಟೇನೂ ಬದಲಾವಣೆ ಆಗಿರುವುದು ಕಂಡುಬರುವುದಿಲ್ಲ. ಹೀಗಿರುವಾಗ, ನಮ್ಮ ರಾಜಕೀಯ ಸ್ವಾತಂತ್ರ್ಯ, ಸಂವಿಧಾನ ಮತ್ತು ವಿವಿಧ ಕಾನೂನುಗಳ ಜಾರಿ, ಶೈಕ್ಷಣಿಕ ಸಾಧನೆ, ಆಧುನಿಕತೆ, ವಿಜ್ಞಾನ– ತಂತ್ರಜ್ಞಾನ ಅಭಿವೃದ್ಧಿಯಿಂದ ಏನು ಸಾಧಿಸಿದಂತಾಗಿದೆ ಎಂಬುದೇ ಅರ್ಥವಾಗುವುದಿಲ್ಲ. ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಆಚರಣೆಯು ಇವೆಲ್ಲಕ್ಕಿಂತ ದೊಡ್ಡವೇ ಎಂಬುದು ಭಾರತೀಯರೆಲ್ಲರೂ ಕೇಳಿಕೊಳ್ಳಬೇಕಾಗಿರುವ ಪ್ರಶ್ನೆ.

⇒ಶಿವರಾಜು ಎ.ಆರ್., ಜೆಟ್ಟಿ ಅಗ್ರಹಾರ, ಕೊರಟಗೆರೆ

ಆಯಾ ಪದ್ಧತಿಗೆ ಅನುಗುಣವಾಗಿ ಪೂಜಾರಾಧನೆ

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಗೆ
ಸಂಬಂಧಿಸಿದಂತೆ, ಧಾರ್ಮಿಕ ಪ್ರಮುಖರಾದ ಇಬ್ಬರು ಶಂಕರಾಚಾರ್ಯರು ಅತೃಪ್ತಿ ವ್ಯಕ್ತಪಡಿಸಿದ ಕೂಡಲೇ ಇತರ ಕೆಲವರೂ ಈ ಸಂಬಂಧ ತಮ್ಮ ಅಸಮ್ಮತಿ ಸೂಚಿಸುತ್ತಿದ್ದಾರೆ. ಇದುವರೆಗೂ ಈ ಬಗ್ಗೆ ಮೌನ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ‘... ಶೈವ- ಶಾಕ್ತರಿಗೆ ಅವಮಾನವಾಗಿದೆ’ ಎಂದು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಜ. 12). ಶ್ರೀರಾಮನ ದೇವಾಲಯವು ವೈಷ್ಣವ ಸಂಪ್ರದಾಯದ ಒಂದು ಶ್ರದ್ಧಾ ಕೇಂದ್ರ ಹಾಗೂ ಇಲ್ಲಿನ ಪೂಜಾರಾಧನೆಗಳು ಆ ಪದ್ಧತಿಗೆ ಅನುಗುಣವಾಗಿ ಇರುವುದು ಸಹಜವಾಗಿಯೇ ಇದೆ. ಶಿವ- ಶಕ್ತಿ ದೇವಾಲಯಗಳಿಗೆ ವಿಷ್ಣು ಭಕ್ತರು ತೆರಳಿ ಪೂಜೆ ಸಲ್ಲಿಸಿದರೂ, ಅದರ ಆಡಳಿತ, ಪೂಜಾ ವಿಧಾನಗಳು ಆಯಾ ಸಂಪ್ರದಾಯಕ್ಕೆ ಸೂಕ್ತವಾದ ರೀತಿಯಲ್ಲಿ ಇರುತ್ತವೆ. ತಿರುಮಲೆ, ಚಿದಂಬರಂ, ಕಾಂಚೀ, ಜಗನ್ನಾಥಪುರಿ ದೇವಾಲಯಗಳಲ್ಲಿ ಆಯಾ ಪಂಥಗಳ ಆಡಳಿತ ವ್ಯವಸ್ಥೆ ಇರುತ್ತದೆ. ಇತರರಿಗೆ ಇದರಲ್ಲಿ ಶ್ರದ್ಧೆ, ಅನುಭವ ಇಲ್ಲದಿರುವ ಕಾರಣ ಅವರು ಈ ಆಡಳಿತ ವಿಶ್ವಸ್ಥ ಸಮಿತಿಗಳಲ್ಲಿ ಇರುವುದಿಲ್ಲ. ಆದರೆ, ಪೂಜೆ ಸಲ್ಲಿಸಲು ಬರುವ ಭಕ್ತರು ಯಾರೂ ಆಗಿರಬಹುದು. ತಿರುಮಲೆಯ ಶ್ರೀನಿವಾಸನ ದರ್ಶನದ ಸರತಿ ಸಾಲಿನಲ್ಲಿ ‘ನಮಃ ಶಿವಾಯ’ ಎಂದು ಸಾಮಾನ್ಯ ಭಕ್ತರು ಉಚ್ಚರಿಸುವುದು ಅಚ್ಚರಿಯೇನಲ್ಲ. ‘ಶಿವ- ಕೇಶವ’ ಎರಡೂ ಒಬ್ಬನೇ ದೇವನ ಭಿನ್ನ ಹೆಸರುಗಳು ಎಂದು ನಂಬುವ ಬಹುಸಂಖ್ಯಾತ ಭಕ್ತರು ಇದ್ದಾರೆ. ತಿರುಮಲೆಯಲ್ಲಿ ಶೈವ- ಶಾಕ್ತರಿಗೆ ಪ್ರವೇಶವಿಲ್ಲ, ಅಲ್ಲಿ ಅವರಿಗೆ ಅವಮಾನವಾಗಿದೆ ಎಂದು ಯಾರೂ ಹೇಳಿರುವುದನ್ನು ನಾವು ಕೇಳಿಲ್ಲ.

ಆಸ್ತಿಕತೆ, ನಾಸ್ತಿಕತೆ ಇವು ವೈಯಕ್ತಿಕ ಅಭಿಪ್ರಾಯಗಳು. ಸಾಮಾನ್ಯರಿಗೆ ಇದರಲ್ಲಿ ಆಸಕ್ತಿ ಇರುವುದಿಲ್ಲ. ಯಾರೋ ಒಬ್ಬ ದೇವರಿಂದ ನಮಗೆ ಒಳಿತಾದರೆ ಸಾಕು ಎಂದೇ ಅವರು ದೇವರ ದರ್ಶನ, ಪೂಜೆ ಸಲ್ಲಿಸುತ್ತಾರೆ. ಆದರೆ, ರಾಜಕೀಯ ಪಕ್ಷಗಳ ನಾಯಕರು ಇದರಲ್ಲೂ ಲೋಪ ಹುಡುಕುತ್ತಾರೆ! ಶಂಕರಾಚಾರ್ಯದ್ವಯರು ಅಯೋಧ್ಯೆಯಲ್ಲಿ ಅಪೂರ್ಣ ನಿರ್ಮಾಣದ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅಸಮ್ಮತಿ ಸೂಚಿಸಿದ್ದಾರೆಯೇ ವಿನಾ ಇಲ್ಲಿ ಶೈವರಿಗೆ ಅವಮಾನವಾಗಿದೆ ಎಂದಲ್ಲ

⇒ಪದ್ಮನಾಭ ರಾವ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.