ಇವರಿಗೇಕೆ ಭೇಟಿ ಸಾಧ್ಯವಾಗುತ್ತಿಲ್ಲ?
‘ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ದಿನಬೆಳಗಾದರೆ ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿದರೆ, ಟೀಕೆ ಮಾಡಿದರೆ ಯಾರು ತಾನೆ ಹತ್ತಿರ ಸೇರಿಸುತ್ತಾರೆ’ ಎಂದು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ಭೇಟಿಗೆ ಅವಕಾಶ ದೊರೆಯದಿರುವ ಬಗೆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಆದರೆ, ಸದಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಅವರ ನೇತೃತ್ವದ ಸರ್ಕಾರವನ್ನು ಹೊಗಳುವವರಿಗೂ ಮೋದಿ ಭೇಟಿ ದೊರಕದಿರುವ ಬಗ್ಗೆ ಅವರು ಮೌನವಾಗಿರುವುದು ಆಶ್ಚರ್ಯ ಎನಿಸುತ್ತದೆ.
ಅದೆಷ್ಟು ಬಾರಿ ಕರ್ನಾಟಕದ ಬಿಜೆಪಿ ಧುರೀಣರು ಮೋದಿ ಭೇಟಿಗಾಗಿ ದೆಹಲಿಗೆ ತೆರಳಿ, ಭೇಟಿ ಮಾಡಲಾಗದೆ ಬರಿಗೈಲಿ ಹಿಂತಿರುಗಲಿಲ್ಲ? ಬಿಜೆಪಿಯ ಹಿರಿಯ ಧುರೀಣ ಸದಾನಂದ ಗೌಡ ಅವರು ಇತ್ತೀಚೆಗೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕರೆಯ ಮೇರೆಗೆ ದೆಹಲಿಗೆ ತೆರಳಿ, ಮೂರು ದಿನ ಕಾಯ್ದರೂ ಭೇಟಿ ಸಾದ್ಯವಾಗದೆ ಸುಸ್ತಾಗಿ ಹಿಂತಿರುಗಿ ಬರಲಿಲ್ಲವೇ? ಇದನ್ನು ಕರ್ನಾಟಕ ಮತ್ತು ಕರ್ನಾಟಕದವರನ್ನು ದೆಹಲಿಯವರು ನಿಕೃಷ್ಟವಾಗಿ ನಡೆಸಿಕೊಳ್ಳುವ ಪರಿ ಎನ್ನಬಹುದೇ?
–ರಮಾನಂದ ಶರ್ಮಾ, ಬೆಂಗಳೂರು
_________________________________________________
ಒಂದೇ ಸಂಘಕ್ಕೆ ಎಷ್ಟು ಬಾರಿ ಪ್ರಶಸ್ತಿ?
ಶಿವಮೊಗ್ಗ ಕರ್ನಾಟಕ ಸಂಘಕ್ಕೆ ಈಗಾಗಲೇ 2007ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಇದೀಗ ಈ ವರ್ಷವೂ ಮತ್ತೊಮ್ಮೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ! ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಘಟಾನುಘಟಿ ಗಣ್ಯ ಸದಸ್ಯರ ಬಹುದೊಡ್ಡ ಪಟ್ಟಿಯೇ ಇದೆ.
ದಾಖಲೆ ಪರಿಶೀಲಿಸಲು ಸಂಸ್ಕೃತಿ ಇಲಾಖೆ ಇದೆ. ಶಿವಮೊಗ್ಗ ಕರ್ನಾಟಕ ಸಂಘದ ಪರಿಚಯ ಪತ್ರದಲ್ಲೇ ಈಗಾಗಲೇ ಪ್ರಶಸ್ತಿ ಪಡೆದ ಬಗ್ಗೆ ತಿಳಿಸಲಾಗಿದೆ. ಗೂಗಲ್‌ನಲ್ಲೂ ಈ ವಿವರ ಕಾಣಿಸುತ್ತದೆ. ಹಾಗಿದ್ದರೂ ಈ ತಪ್ಪು ಹೇಗೆ ಸಂಭವಿಸಿತು? ಈ ತಪ್ಪಿನ ಹೊಣೆ ಯಾರದು?
–ಗಿರಿಧರ ಕಾರ್ಕಳ, ಬೆಂಗಳೂರು
_________________________________________________
ಲೋಕಾಯುಕ್ತ ದಾಳಿ: ಶ್ವೇತಪತ್ರ ಹೊರಡಿಸಿ
ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. 17 ಸರ್ಕಾರಿ ಅಧಿಕಾರಿಗಳ ಕಚೇರಿ, ನಿವಾಸ ಸೇರಿದಂತೆ ಸುಮಾರು 70 ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ನಗದು, ಚಿನ್ನ, ಸ್ಥಿರಾಸ್ತಿ, ಐಷಾರಾಮಿ ವಾಹನಗಳು ಹಾಗೂ ಹೂಡಿಕೆಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ದಾಳಿ ಹೊಸದೇನಲ್ಲ. ಅದು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದ್ದರೂ ಭ್ರಷ್ಟಾಚಾರ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.
ಆರೋಪಕ್ಕೆ ಒಳಗಾದ ಅಧಿಕಾರಿಗಳನ್ನು ಸರ್ಕಾರವೇ ಮತ್ತೆ ಉನ್ನತ ಹುದ್ದೆಯಲ್ಲಿ ಕೂರಿಸಿದ ಉದಾಹರಣೆಗಳು ಬಹಳಷ್ಟಿವೆ. ಹಾಗಾಗಿ, ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಆರೋಪಿ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸುವುದು ಅಗತ್ಯ.
–ಕೆ.ವಿ.ವಾಸು, ಮೈಸೂರು
_________________________________________________
ಕನ್ನಡ ಕಾರ್ಯಕ್ರಮ: ನಡೆಯಲಿ ವಿಮರ್ಶೆ
ಕರ್ನಾಟಕ ಸಂಭ್ರಮ– 50ರ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಸಚಿವರು ಹಾಗೂ ಅಧಿಕಾರಿಗಳು ಕನ್ನಡದ ಅವಗಣನೆ ಮಾಡುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಷ್ಟೆ. ಅದೇ ರೀತಿ ಕನ್ನಡ ಭಾಷೆ, ಸಾಹಿತ್ಯ, ಕಲೆ ಎಲ್ಲವೂ ವಿಶ್ವವ್ಯಾಪಿ ಆಗಬೇಕೆನ್ನುವ ಹಂಬಲ, ಆದರ್ಶ ಒಳ್ಳೆಯವೆ. ಆದರೆ ಕನ್ನಡದ ಹೆಸರಿನಲ್ಲಿ ಸಮ್ಮೇಳನಗಳನ್ನು ಆಯೋಜಿಸಿ, ಯೋಜನೆಗಳನ್ನು ರೂಪಿಸಿ, ಮೂರ್ನಾಲ್ಕು ದಿನಗಳ ಉತ್ಸವ ಮಾಡಿದರೆ ಜಗತ್ತಿನೆಲ್ಲೆಡೆ ಕನ್ನಡದ ಕಹಳೆ ಊದಿದಂತೆ ಆಗುತ್ತದೆಯೇ ಎಂಬುದು ಪ್ರಶ್ನೆ!
ಏಕೆಂದರೆ, ಜನರ ತೆರಿಗೆ ಹಣವನ್ನು ಒಳಗೊಳ್ಳುವ ಕನ್ನಡದ ಕಾರ್ಯಕ್ರಮಗಳು ಒಂದೇ ಕಡೆ ಕೇಂದ್ರೀಕೃತವಾಗಿವೆ ಮತ್ತು ಇವುಗಳಿಗೆ ಬಳಕೆಯಾಗುವ ಹಣ ಸದ್ವಿನಿಯೋಗ ಆಗುತ್ತಿದೆಯೇ ಎಂಬುದರ ಕುರಿತು ನಾಡಪ್ರಜೆ ಹಾಗೂ ಪ್ರಭುತ್ವವು ಪ್ರಾಮಾಣಿಕ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಕನ್ನಡವು ಕರ್ನಾಟಕದಲ್ಲಿ, ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲೇ ಗಟ್ಟಿಯಾಗಿ ಇಲ್ಲ. ಭಾಷಾ ಶುದ್ಧಿಯು ಉತ್ತಮ ಸಂಸ್ಕಾರ, ಪೂರ್ಣತ್ವದ ಸಾಧನೆಯ ಸಂಕೇತ. ಅದು ಒಂದು ಜನಾಂಗದ ಅಭಿವೃದ್ಧಿಯ ಸೂಚಕ. ಅದರ ಅಭ್ಯಾಸ ಸರಿಯಾದರೆ ಸಂವಹನ ಸುಸೂತ್ರ. ಇಲ್ಲವಾದರೆ ಗೊಂದಲ ತಪ್ಪಿದ್ದಲ್ಲ.
–ಆರ್.ವೆಂಕಟರಾಜು, ಬೆಂಗಳೂರು
_________________________________________________
ಕಾತರದಿ ಕಾಯುತಿರುವೆ!
‘ವಿಜಯನಗರದ ವೈಭವ
ಮರಳಿಸುವುದು ಆದ್ಯತೆ’–
ಮುಖ್ಯಮಂತ್ರಿ ಘೋಷಣೆ (ಪ್ರ.ವಾ., ನ. 3).
ನಾನೂ ಕಾತರದಿ ಕಾದಿರುವೆ ಖರೀದಿಸಲು
ಮಾರ್ಗದ ಬದಿಯಲ್ಲಿ ಮುತ್ತು, ರತ್ನ,
ವಜ್ರ, ವೈಢೂರ್ಯ ಯಾವಾಗ
ಮಾರಾಟ ಮಾಡುವರೋ ಎಂದು!
–ನಗರ ಗುರುದೇವ್ ಭಂಡಾರ್ಕರ್, ಹೊಸನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.