ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 21 ಏಪ್ರಿಲ್ 2024, 19:56 IST
Last Updated 21 ಏಪ್ರಿಲ್ 2024, 19:56 IST
ಅಕ್ಷರ ಗಾತ್ರ

ನಮ್ಮ ಯುವಜನ ಕಲಿಯುತ್ತಿರುವುದೇನು?

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಜ್ಞಾವಂತ ಸಮಾಜವನ್ನು ಬೆಚ್ಚಿಬೀಳಿಸಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಲೇಬೇಕು. ಪ್ರೀತಿಯ ಹೆಸರಿನಲ್ಲಿ ಕಾಲೇಜು ಕ್ಯಾಂಪಸ್‌ನಲ್ಲಿಯೇ ನಡೆದಿರುವ ಈ ಕೊಲೆಯು ಕಾಲೇಜು ಶಿಕ್ಷಣದ ನೈತಿಕ ಮೌಲ್ಯಗಳ ಪಾಠವನ್ನು ಪ್ರಶ್ನೆ ಮಾಡುವಂತಿದೆ.

ರಾಜ್ಯದ ಯುವಕ– ಯುವತಿಯರು ಏನನ್ನು ಕಲಿಯುತ್ತಿದ್ದಾರೆ? ಇಂದು ಮೌಲ್ಯಗಳು ಎಲ್ಲಿವೆ? ತಂದೆ– ತಾಯಿ, ಗುರುಹಿರಿಯರು, ಹೆಣ್ಣುಮಕ್ಕಳು, ವೃದ್ಧರು, ಅಂಗವಿಕಲರನ್ನು ಗೌರವಿಸುವ ನೈತಿಕ ಮೌಲ್ಯಗಳ ಪಾಠ ಶಿಕ್ಷಣದಿಂದ ದೂರವಾಗುತ್ತಿದೆ. ಬರೀ ವ್ಯಾವಹಾರಿಕ, ವೃತ್ತಿಪರತೆಯ ಪಠ್ಯಕ್ರಮಗಳು ಶಿಕ್ಷಣದಲ್ಲಿ ಸೇರ್ಪಡೆಯಾಗಿವೆ. ಮೌಲ್ಯಗಳೇ ಇಲ್ಲದ ಅಂಕಗಳ ಯಂತ್ರದಂತಹ ಯುವ ಸಮುದಾಯ ತಯಾರಾಗುತ್ತಿದೆ.  ಇದಕ್ಕೆ ಜ್ವಲಂತ ಉದಾಹರಣೆ, ನೇಹಾ ಕೊಲೆ.

–ಅಂಬರೀಷ್ ಎಸ್. ಪೂಜಾರಿ, ವಿಜಯಪುರ

***

ಪಠ್ಯೇತರ ಪ್ರಶ್ನೆ: ಮರುಪರೀಕ್ಷೆ ಸೂಕ್ತ

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಇತ್ತೀಚೆಗೆ ನಡೆದ ಸಿಇಟಿಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಲಕ್ಷ್ಯದಿಂದ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿ ವಿದ್ಯಾರ್ಥಿಗಳು ಪರದಾಡಬೇಕಾಗಿ ಬಂದದ್ದು ಬಹಳ ಬೇಸರದ ಸಂಗತಿ. ಸಿಇಟಿಯಲ್ಲಿ ಬರೀ ಒಂದೆರಡು ಅಂಕಗಳ ವ್ಯತ್ಯಾಸದಿಂದಲೇ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರಿ ಬದಲಾವಣೆ ಆಗುತ್ತದೆ. ಹೀಗಾಗಿ, ವಿದ್ಯಾರ್ಥಿಗೆ ಸಿಇಟಿಯ ಪ್ರತಿ ಅಂಕವೂ ಮುಖ್ಯವಾಗಿರುತ್ತದೆ.

ಕೆಲವು ವರ್ಷಗಳ ಹಿಂದಿನಿಂದಲೂ ಇಂತಹ ತಪ್ಪುಗಳು ನಡೆಯುತ್ತಲೇ ಇವೆ. ಇದಕ್ಕೆ ಕಾರಣವೇನು, ಯಾರು ಹೊಣೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಪಣಕ್ಕಿಟ್ಟು ಅದರೊಂದಿಗೆ ಚೆಲ್ಲಾಟವಾಡುತ್ತಿರುವವರು ಮತ್ತು ಪ್ರಶ್ನೆಪತ್ರಿಕೆಗಳನ್ನು ಈ ರೀತಿ ಸಿದ್ಧಪಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗಳು ಎದುರಾಗಿವೆ. ಈಗ ಕೃಪಾಂಕ ನೀಡುವ ಮಾತು ಕೇಳಿಬಂದಿದೆ. ಇದರ ಬದಲು ಮರುಪರೀಕ್ಷೆ ನಡೆಸುವುದೇ ಸರಿಯಾದ ಕ್ರಮ.

–ಬೂಕನಕೆರೆ ವಿಜೇಂದ್ರ, ಮೈಸೂರು

***

ಮಾತಿನ ಮರ್ಮ ಜನರಿಗೆ ಅರ್ಥವಾಗದೇ?

‘ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದು ಮೋದಿ’ ಎಂದಿದ್ದಾರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ. ‘ಚೊಂಬು ಹಿಡಿದು ಪ್ರಧಾನಿ ಎದುರು ಭಿಕ್ಷೆ’ ಎಂದಿದ್ದಾರೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (ಪ್ರ.ವಾ., ಏ. 22). ದೇವೇಗೌಡರು ಈ ಹಿಂದೆ ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಿದ್ದವರು. ಅದಕ್ಕಿಂತ ಮಿಗಿಲಾಗಿ ತಾವು ‘ಮಣ್ಣಿನ ಮಗ’ ಎಂದೇ ರಾಜಕೀಯ ಮಾಡಿದವರು. ಈ ಇಬ್ಬರೂ ಮುಖ್ಯಮಂತ್ರಿಗಳಾಗಿದ್ದಾಗ ಹಲವು ಸಲ ನಮ್ಮ ರಾಜ್ಯದ ಪಾಲಿಗಾಗಿ ಕೇಂದ್ರ ಸರ್ಕಾರದ ಮುಂದೆ ಹಕ್ಕು ಮಂಡಿಸಿದ್ದುಂಟು. ಅಂದರೆ ನಮ್ಮ ದೇಶದ ಒಕ್ಕೂಟ ಸರ್ಕಾರದಲ್ಲಿ ರಾಜ್ಯಗಳ ಹಕ್ಕು ಮತ್ತು ಅಧಿಕಾರ ಏನೆಂಬುದು ಅವರಿಗೂ ಚೆನ್ನಾಗಿ ಗೊತ್ತು. ಅಂಥವರೇ ಈ ರೀತಿ ಮಾತನಾಡಿದರೆ ಅದರ ಮರ್ಮ ಏನೆಂಬುದು ಜನರಿಗೆ ಅರ್ಥವಾಗುವುದಿಲ್ಲ ಅಂದುಕೊಂಡರೆ ಏನು ಹೇಳುವುದು?

ಅದರಲ್ಲೂ ಮತದಾರರು ಚುನಾವಣೆಯ ಸಂದರ್ಭದಲ್ಲಿ ತುಂಬಾ ಜಾಗೃತರಾಗಿ ರಾಜಕಾರಣಿಗಳ ಮಾತನ್ನು ಆಲಿಸುತ್ತಾರೆ. ಹೀಗಾಗಿ, ಇಂತಹ ತಳಬುಡವಿಲ್ಲದ ಮಾತುಗಳು ಅರ್ಥ ಕಳೆದುಕೊಳ್ಳುತ್ತವೆ.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

***

ಶಿಕ್ಷಣದ ಗುಣಮಟ್ಟ: ಆತ್ಮವಿಮರ್ಶೆ ನಡೆಯಲಿ

‘ಭಾರತದಲ್ಲಿ ಸಾಧಾರಣ ವಿದ್ಯಾರ್ಥಿಗಳಲ್ಲಿ ಅನೇಕರು ಕಾಲೇಜು ಪ್ರಾಧ್ಯಾಪಕರಾಗುತ್ತಾರೆ’ ಎಂದು ಅಕ್ಷತ್‌ ಶ್ರೀವಾಸ್ತವ ಎಂಬುವರು ಹೇಳಿರುವುದು ‘ಕಿಡಿನುಡಿ’ಯಲ್ಲಿ (ಪ್ರ.ವಾ., ಏ. 20) ಪ್ರಕಟವಾಗಿದೆ. ಅಕ್ಷತ್‌ ಅವರು ತಮ್ಮ ಹೆಸರಿನಲ್ಲಿರುವ ಶ್ರೀವಾಸ್ತವ ಎಂಬುದನ್ನು ಸಾರ್ಥಕಪಡಿಸಿಕೊಂಡಂತೆ ಕಟು ವಾಸ್ತವವನ್ನೇ ನುಡಿದಿದ್ದಾರೆ. ‘ಅನೇಕರು’ ಎನ್ನುವುದಕ್ಕಿಂತ ಅಲ್ಲಿ ‘ಬಹುತೇಕರು’ ಎಂದಿದ್ದರೂ ಆಗುತ್ತಿತ್ತು. ಇತ್ತೀಚಿನ ದಶಕಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ಆತಂಕದಲ್ಲಿರುವ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಉಲ್ಲೇಖ ಇದು. ಪಠ್ಯೇತರ ಓದು ಒತ್ತಟ್ಟಿಗಿರಲಿ, ಸರಿಯಾದ ಕಾಗುಣಿತವೂ ಗೊತ್ತಿಲ್ಲದ ಭಾಷಾ ಪಂಡಿತರು ಕಾಲೇಜು ಪ್ರಾಧ್ಯಾಪಕರಾಗಿರುವುದು, ಕೋಚಿಂಗ್ ಶಿಶುಗಳೇ ಸರ್ಕಾರದ ಅಧಿಕಾರಿಗಳಾಗಿ ಆಯ್ಕೆಯಾಗುತ್ತಿರುವುದು ನಮ್ಮ ವರ್ತಮಾನದ ದುರವಸ್ಥೆ.

–ಈರಪ್ಪ ಎಂ. ಕಂಬಳಿ, ಬೆಂಗಳೂರು

***

ನೋಟನ್ನು ಕತ್ತರಿಸಬಹುದೇ?

ಭಾನುವಾರದ (ಏ. 21) ಪ್ರಮುಖ ದಿನಪತ್ರಿಕೆಗಳ ಮುಖಪುಟಗಳಲ್ಲಿ ಕಾಂಗ್ರೆಸ್ ಪಕ್ಷದ ಜಾಹೀರಾತು ಪ್ರಕಟವಾಗಿದೆ. ಇದು, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತೆರಿಗೆಯ ಪಾಲನ್ನು ಸರಿಯಾಗಿ ಹಂಚದೆ ಅನ್ಯಾಯ ಮಾಡುತ್ತಿರುವ ಕುರಿತಾಗಿದೆ. ಕೇಂದ್ರದಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಬೇಕು ಮತ್ತು ಜನರಿಗೆ ತಿಳಿಸಬೇಕು ಎಂಬುದನ್ನು ಒಪ್ಪಬಹುದು. ಆದರೆ, ಆ ಜಾಹೀರಾತಿನಲ್ಲಿ ಒಂದು ಚೊಂಬಿನ ಚಿತ್ರ ಇದೆ. ಅದರ ಮೇಲೆ ನೂರು ರೂಪಾಯಿ ನೋಟಿದ್ದು, ಅದು ನಾವು ಕಟ್ಟುವ ತೆರಿಗೆಗೆ ದ್ಯೋತಕ. ಅಂತೆಯೇ ಅದರಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಶೇಕಡ 13ರಷ್ಟು ಅತ್ಯಲ್ಪ ಮೊತ್ತ ಎಂಬುದನ್ನು ಉದಾಹರಣೆಯಾಗಿ ತೋರಿಸಲು, ಅಷ್ಟು ಭಾಗವನ್ನು ಕತ್ತರಿಸಿ ಚೊಂಬಿನಲ್ಲಿ ಬೀಳುವಂತೆ ತೋರಿಸಲಾಗಿದೆ. ಆದರೆ ನೋಟನ್ನು ಈ ರೀತಿ ಕತ್ತರಿಸುವುದು ಸರಿಯೇ?

ನೋಟುಗಳನ್ನು ಮಡಚಲೂಬಾರದು ಎಂದು ಹಿರಿಯರು ಹೇಳುತ್ತಿದ್ದುದು ನೆನಪಾಗುತ್ತದೆ. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ನೋಟನ್ನೇ ಕತ್ತರಿಸಿ ಜಾಹೀರಾತು ನೀಡಿದೆ ಎಂದರೆ, ಅದು ಜನರಿಗೆ ಯಾವ ರೀತಿಯ ಸಂದೇಶವನ್ನು ನೀಡುತ್ತದೆ? ಇದರಿಂದ ನೋಟಿಗೆ ಅಪಮಾನ ಮಾಡಿದಂತೆ ಅಲ್ಲವೇ? ತೆರಿಗೆ ಅನುದಾನದ ತಾರತಮ್ಯ ಕುರಿತ ವಿಚಾರವನ್ನು ಜನರಿಗೆ ತಿಳಿಸಲು ಅನ್ಯಮಾರ್ಗ ಬಳಸಬಹುದಿತ್ತು.

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT