ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 21 ಮೇ 2024, 23:30 IST
Last Updated 21 ಮೇ 2024, 23:30 IST
ಅಕ್ಷರ ಗಾತ್ರ

ಹಣ ಉಳಿಸಿತು ‘ಶಕ್ತಿ’: ಆದರೆ...?

ಮೊನ್ನೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬರುವಾಗ ಮಾರ್ಗಮಧ್ಯದಲ್ಲಿ ರಾತ್ರಿ ಹತ್ತು ಗಂಟೆ ಸುಮಾರಿಗೆ ಹಿರಿಯೂರು ಬಳಿಯ ಹೋಟೆಲೊಂದರ ಹತ್ತಿರ ನಾವಿದ್ದ ಬಸ್ ಊಟಕ್ಕಾಗಿ ನಿಲ್ಲಿಸಿತು. ಅಲ್ಲಿ ಕಲ್ಯಾಣ ಕರ್ನಾಟಕ ನಿಗಮದ ಸಾರಿಗೆ ಬಸ್ಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. ಹೋಟೆಲ್ ಕ್ಯಾಷ್ ಕೌಂಟರ್‌ನಲ್ಲಿ ಪ್ರಯಾಣಿಕರು ಟೋಕನ್ ಪಡೆಯಲು ನಿಂತು ಊಟ, ತಿಂಡಿ ದರ ಕೇಳುತ್ತಿದ್ದಾಗ, ಅನ್ನ–ಸಾಂಬಾರ್‌ಗೆ ನೂರು ರೂಪಾಯಿ ಅಂದದ್ದು ಕೇಳಿ ನನಗೆ ಅಚ್ಚರಿಯಾಯಿತು. ಪ್ರಯಾಣಿಕರಲ್ಲಿ ಹೆಚ್ಚಿನವರು ದೂರದ ಊರುಗಳಿಗೆ ಸುಖಾಸುಮ್ಮನೆ ತೆರಳುವವರಲ್ಲ, ಏನಾದರೂ ಕೆಲಸ ಇದ್ದರಷ್ಟೇ ಪ್ರಯಾಣಿಸುವಂತಹವರು ಎಂಬುದು ತಿಳಿಯುತ್ತಿತ್ತು. ಕೆಲವರು ಒಳಗೆ ಹೋಗಿ ಊಟ ಮಾಡುತ್ತಿದ್ದರೆ, ಮತ್ತೆ ಕೆಲವರು ತಾವು ತಂದಿದ್ದ ಬುತ್ತಿ ಗಂಟನ್ನು ಬಿಚ್ಚಿ ತಿನ್ನುತ್ತಿದ್ದ ದೃಶ್ಯವೂ ಕಂಡುಬಂತು.

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದ ಹೋಟೆಲ್‌ಗಳಲ್ಲಿ ದುಬಾರಿ ದರ ಕೊಟ್ಟು ಊಟ, ಉಪಾಹಾರ ಸೇವಿಸಲು ಮನಸ್ಸು ಒಪ್ಪದಿದ್ದರೂ ಅನಿವಾರ್ಯ ಸಂದರ್ಭ ಅದಾಗಿರುತ್ತದೆ. ‘ಶಕ್ತಿ’ ಯೋಜನೆಯಡಿ ಓಡಾಡಿ ತಮ್ಮ ಕೆಲಸ ಮಾಡಿಕೊಳ್ಳುವಂತಹವರಿಗೆ ಹಸಿವು ನೀಗಿಸಿಕೊಳ್ಳಲು ಇದರಿಂದ ಕಷ್ಟವಾಗಬಹುದು. ಒಂದೇ ಹೋಟೆಲ್‌, ದುಬಾರಿ ದರದಂಥ ಅನಿವಾರ್ಯ ತಪ್ಪಿಸುವುದರತ್ತ ಸರ್ಕಾರ ಚಿತ್ತಹರಿಸಬೇಕಿದೆ. ಅವರವರ ಯೋಗ್ಯತಾನುಸಾರದ ಊಟ, ಉಪಾಹಾರಕ್ಕೆ ಪರ್ಯಾಯಗಳು ಇರುವಂತಹ ವ್ಯವಸ್ಥೆ ಬೇಕಾ‌ಗಿದೆ ಮತ್ತು ಸಾರಿಗೆ ನಿಗಮಗಳ ಬಸ್‌ಗಳನ್ನು ಅಂಥ ಕಡೆ ಊಟ–ಉಪಾಹಾರಕ್ಕೆ ನಿಲ್ಲಿಸುವಂಥ ಕ್ರಮದತ್ತ ಸರ್ಕಾರ ಯೋಚಿಸಬೇಕಾಗಿದೆ.

-ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ 

ಕಿರ್ಗಿಸ್ತಾನ ಪ್ರಕರಣ: ದೇಶವೇ ಹೊಣೆಯಲ್ಲ 

ಕಿರ್ಗಿಸ್ತಾನದಲ್ಲಿ ಈಜಿಪ್ಟ್‌ನ ಕೆಲವು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ನಡೆಸಿದ ಘರ್ಷಣೆ ಸಂಬಂಧ ಭಾರತ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆದಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಹಾಗಿದ್ದರೆ ಕಿರ್ಗಿಸ್ತಾನದ ಯುವಜನರು ದಕ್ಷಿಣ ಏಷ್ಯಾ ದೇಶಗಳಿಗೆ ಸೇರಿದ ವೈದ್ಯಕೀಯ ವಿದ್ಯಾರ್ಥಿಗಳಿಗೆಉದ್ದೇಶಪೂರ್ವಕವಾಗಿ ತೊಂದರೆ ಉಂಟು ಮಾಡುತ್ತಿದ್ದಾರೆಯೇ? ಹಾಗಂತ ಅಪ್ಪಿತಪ್ಪಿಯೂ ಹೇಳಲಾಗದು. ಕಿರ್ಗಿಸ್ತಾನದಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿಮೆ ಇರುವುದರಿಂದ ಭಾರತ, ಪಾಕಿಸ್ತಾನ, ಬಾಂಗ್ಲಾದಂತಹ ದೇಶಗಳಿಂದ ವಿದ್ಯಾರ್ಥಿಗಳು ಸಹಜವಾಗಿಯೇ ಅಲ್ಲಿ ಕಲಿಯಲು ತೆರಳುತ್ತಾರೆ. ಆದರೆ ಈ ದೇಶಗಳ ವಿದ್ಯಾರ್ಥಿಗಳನ್ನು ಈಜಿಪ್ಟ್‌ ವಿದ್ಯಾರ್ಥಿಗಳೆಂದು ತಪ್ಪಾಗಿ ಭಾವಿಸಿ ಅವರ ಮೇಲೂ ಹಲ್ಲೆ ನಡೆಸಿರಬಹುದು. ಇದಕ್ಕೆ ಕಿರ್ಗಿಸ್ತಾನ ದೇಶವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ.

ನಮ್ಮ ದೇಶದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಪುಣೆ ಮತ್ತು ಬೆಂಗಳೂರು ಅಚ್ಚುಮೆಚ್ಚಿನ ತಾಣಗಳಾಗಿವೆ. ಪುಣೆಯಲ್ಲಿ ಹಿಂದೆ ಶಿಕ್ಷಣ ಪಡೆದ ವ್ಯಕ್ತಿಯು ಬಳಿಕ ಒಮನ್ ದೇಶದ ರಾಜರಾಗಿದ್ದರು. ಯಾವ ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಭವಿಷ್ಯದ ದಿಗ್ಗಜರು ಇರುವರೋ ಎಂಬುದು ಗೊತ್ತಿರುವುದಿಲ್ಲ. ಅಚಾನಕ್‌ ಆಗಿ ನಡೆದಿರುವ ಕಿರ್ಗಿಸ್ತಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ದೇಶದ ಮೇಲೆ ಆರೋಪ ಹೊರಿಸಬೇಕಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ಕಿರ್ಗಿಸ್ತಾನ ಸರ್ಕಾರವು ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಸೂಕ್ತ ಗಮನಹರಿಸಿ, ಅವರಿಗೆ ರಕ್ಷಣೆ ಒದಗಿಸಲಿ ಎಂದು ಆಗ್ರಹಿಸೋಣ.

-ಚಂದ್ರಕಾಂತ ನಾಮಧಾರಿ, ಅಂಕೋಲಾ, ಉತ್ತರ ಕನ್ನಡ

ಮೌಲ್ಯಯುತ ಶಿಕ್ಷಣದ ಕೊರತೆ, ನೈತಿಕ ದಿವಾಳಿತನ

ಹಣ, ಅಧಿಕಾರ ಮತ್ತು ಜಾತಿ ಬಲದಿಂದ ಒಬ್ಬ ವ್ಯಕ್ತಿ ಹೇಗೆ ತನ್ನ ವಿವೇಚನೆ ಕಳೆದುಕೊಳ್ಳಬಹುದು, ಸಮಾಜಕ್ಕೆ ಕಂಟಕನಾಗಬಹುದು ಎಂಬುದಕ್ಕೆ, ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಸಂತ್ರಸ್ತೆಯರ ಸಂಕಟವನ್ನು ಬಿಂಬಿಸುವ ಸಂಧ್ಯಾ ಹೆಗಡೆ ಅವರ ಲೇಖನ (ಪ್ರ.ವಾ., ಮೇ 20) ನಿದರ್ಶನ. ಈ ಸಂತ್ರಸ್ತೆಯರು ಸಮಾಜವನ್ನು ಎದುರಿಸಲಾಗದೆ, ತಮ್ಮ ನೋವನ್ನು ಬಹಿರಂಗವಾಗಿ ತೋಡಿಕೊಳ್ಳಲಾಗದೆ ಮೂಕವಾಗಿ ರೋದಿಸುತ್ತಿರುವುದು ಈಗಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇದೆಲ್ಲದರ ಹಿಂದೆ ಕಾಣುವುದು ಆರೋಪಿಯ ನೈತಿಕ ದಿವಾಳಿತನ.

ಮಕ್ಕಳಿಗೆ ಸರಿಯಾದ ಮೌಲ್ಯಯುತ ಶಿಕ್ಷಣ, ಸಂಸ್ಕಾರವನ್ನು ನೀಡದೆ ಅತಿಯಾದ ಕಕ್ಕುಲತೆ ತೋರುವ, ಅವರು ಮಾಡಿದ್ದೆಲ್ಲ ಸೈ ಎಂದು ಬೆನ್ನು ತಟ್ಟುವ ಮನೋಭಾವ ಇರುವವರೆಗೂ ಮಕ್ಕಳು ಸಮಾಜಕ್ಕೆ ಮಾತ್ರ ಕಂಟಕವಲ್ಲ ತಮಗೂ ಸೆರಗಿನ ಕೆಂಡವಾಗುತ್ತಾರೆ ಎಂಬ ಸತ್ಯವನ್ನು ಈ ಪ್ರಕರಣದಿಂದ ಎಲ್ಲ ತಂದೆ ತಾಯಿಯೂ ಮನಗಾಣಬೇಕು.

-ಜಗದೀಶ ಎಲ್‌.ಎಂ., ಹುಬ್ಬಳ್ಳಿ 

ಫಲಿತಾಂಶ ಕುಸಿತ: ಕಾರಣ ಹುಡುಕೋಣ

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ ಆಗಿರುವುದಕ್ಕೆ ಆಕೆಗೆ ಪ್ರೋತ್ಸಾಹಧನ ಮತ್ತು ಆಕೆ ಓದಿದ ಶಾಲೆಯ ಅಭಿವೃದ್ಧಿಗೆ ₹ 1 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಕೊಟ್ಟಿರುವುದು ಶ್ಲಾಘನೀಯ. ಈಗಾಗಲೇ ತಾವು ಓದಿದ ಶಾಲೆಗೆ ಹಳೆಯ ವಿದ್ಯಾರ್ಥಿಗಳು ನೆರವಾಗುವ ‘ನನ್ನ ಶಾಲೆ ನನ್ನ ಜವಾಬ್ದಾರಿ’ ಎನ್ನುವ ಯೋಜನೆ ರೂಪಿಸಿರುವ ಸರ್ಕಾರ, ಸರ್ಕಾರಿ ಶಾಲಾ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸುವ ಘೋಷಣೆಯನ್ನೂ ಮಾಡಿದೆ. ಇದರ ಜೊತೆಗೆ ಸರ್ಕಾರಿ ಶಾಲಾ ಕಾಲೇಜುಗಳ ಫಲಿತಾಂಶದ ಹಿನ್ನಡೆಗೆ, ದಾಖಲಾತಿಯ ಕುಸಿತಕ್ಕೆ ಕಾರಣಗಳನ್ನು ಕಂಡುಕೊಂಡು ಅದಕ್ಕೆ ಪರಿಹಾರಗಳನ್ನು ಸೂಚಿಸಿ, ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಿಗೆ ನಂಬಿಕೆ ಬರುವಂತೆ ಮಾಡಬೇಕಾದುದು ಇಂದಿನ ತುರ್ತು.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಪ್ರಮಾಣ ಕುಸಿದಿರುವುದಕ್ಕೆ ಶಿಕ್ಷಕರು ಕಾರಣರೋ ಬೋಧನೆ ಯಿಂದಾಚೆಯ ಕೆಲಸಗಳಲ್ಲಿ ಶಿಕ್ಷಕರನ್ನು ತೊಡಗುವಂತೆ ಮಾಡಿರುವ ಸರ್ಕಾರದ ಯೋಜನೆಗಳು ಕಾರಣವೋ ಸಾಧಾರಣ ಕಲಿಕಾ ಮಟ್ಟವಿರುವ ವಿದ್ಯಾರ್ಥಿಗಳಷ್ಟೇ ಸರ್ಕಾರಿ ಶಾಲೆಗಳಿಗೆ ದಾಖಲಾಗುವುದು ಕಾರಣವೋ ಮೂಲ ಸೌಕರ್ಯಗಳ ಕೊರತೆ ಕಾರಣವೋ ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ನಂತರ ಸರ್ಕಾರದ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆಯೇ ಎಂಬುದರ ಮೇಲೆ ನಿಗಾ ವಹಿಸಲು, ಈಗ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನುನಡೆಸಿದಂತೆ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇದರ ಜೊತೆಗೆ, ಸರ್ಕಾರದ ಭಾಗವಾಗಿರುವ ರಾಜಕಾರಣಿಗಳು, ಅಧಿಕಾರಿಗಳು, ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಸೇರಿಸುವಂತೆಆಗಬೇಕು. ಇಷ್ಟಾದರೆ ಸರ್ಕಾರಿ ಶಾಲಾ ಕಾಲೇಜುಗಳ ಬಲವರ್ಧನೆ ಆಗಬಲ್ಲದು, ಶಿಕ್ಷಣ ಸರ್ವರ ಸ್ವತ್ತಾಗಬೇಕೆಂಬ ಸಂವಿಧಾನದ ಆಶಯ ಈಡೇರಬಲ್ಲದು.

-ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT