ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 27 ಆಗಸ್ಟ್ 2024, 23:30 IST
Last Updated 27 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಕಾರಾಗೃಹ ಸುಧಾರಣೆ ಎಂದರೆ...!

ದರ್ಶನಾತಿಥ್ಯ ಸಂಬಂಧ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದ ಉನ್ನತ ಅಧಿಕಾರಿಗಳು ‘ಕಾರಾಗೃಹಗಳು ಹಾಗೂ ಸುಧಾರಣೆ ಇಲಾಖೆ’ಗೆ ಸೇರಿದವರು. ಸುಧಾರಣೆ ಎಂದರೆ, ಕಾರಾಗೃಹಕ್ಕೆ ಬಲಿಷ್ಠರು ಆರೋಪಿಗಳಾಗಿ ಬಂದಾಗ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ರೀತಿ ರಿವಾಜುಗಳನ್ನು ಲೆಕ್ಕಿಸದೆ, ಅವರಿಗೆ ಮಾತ್ರ ರಾಜೋಪಚಾರ ಮಾಡುವುದು ಎಂದು ಅರ್ಥ ಮಾಡಿಕೊಳ್ಳಬೇಕೆಂದು ಕಾಣುತ್ತದೆ.

-ಎಂ.ಎಸ್.ರಘುನಾಥ್, ಬೆಂಗಳೂರು

ಎಲೆಕ್ಟ್ರಾನಿಕ್ ಸಿಟಿ ರೂವಾರಿ ಕೃಷ್ಣ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಸಿಟಿ ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬೆಂಗಳೂರಿಗೆ ಎಲೆಕ್ಟ್ರಾನಿಕ್ ಸಿಟಿ ಬರಲು ಕಾರಣಕರ್ತರಾದವರು ಎಸ್.ಎಂ.ಕೃಷ್ಣ. ಬೆಂಗಳೂರಿಗೆ ಐ.ಟಿ- ಬಿ.ಟಿ. ತಂದು, ಇಂದು ಲಕ್ಷಾಂತರ ಸಾಫ್ಟ್‌ವೇರ್ ಎಂಜಿನಿಯರ್‌ಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದವರು. ಕೃಷ್ಣ ಅವರು ಹಾಗೆ ಮಾಡದೇ ಹೋಗಿದ್ದರೆ ಬೆಂಗಳೂರು ಇನ್ನೂ 25 ವರ್ಷಗಳಷ್ಟು ಹಿಂದೆಯೇ ಉಳಿದಿರುತ್ತಿತ್ತು. ಹೀಗಾಗಿ, ಅರಸು ಅವರ ಹೆಸರನ್ನು ಬೇರೆ ಯಾವುದಾದರೂ ಪ್ರದೇಶಕ್ಕೆ ನಾಮಕರಣ ಮಾಡಿ, ಎಲೆಕ್ಟ್ರಾನಿಕ್ ಸಿಟಿಗೆ ಎಸ್.ಎಂ.ಕೃಷ್ಣ ಅವರ ಹೆಸರನ್ನೇ ಇಡಲು ಸರ್ಕಾರ ಮುಂದಾಗಬೇಕು.

-ಬೂಕನಕೆರೆ ವಿಜೇಂದ್ರ, ಮೈಸೂರು

ಅನ್ನ, ಇಡ್ಲಿ ಸೇರುತ್ತಿದೆ ಪ್ಲಾಸ್ಟಿಕ್‌

ಸಕ್ಕರೆ, ಉಪ್ಪು ಸೇರಿದಂತೆ ಆಹಾರ ಪದಾರ್ಥಗಳಲ್ಲಿ ಅಪಾಯಕಾರಿ ಮೈಕ್ರೊಪ್ಲಾಸ್ಟಿಕ್‌ ಕಣಗಳು ಕಂಡುಬಂದಿದ್ದು (ಆಳ– ಅಗಲ, ಆ. 26), ಈ ಮೂಲಕ ಅವು ಮಾನವನ ದೇಹ ಸೇರುತ್ತಿರುವುದು ಬಹು ಆತಂಕಕಾರಿ ವಿಚಾರ. ಬದಲಾದ ಜೀವನಶೈಲಿ ಕೂಡ ಇಂತಹ ತ್ಯಾಜ್ಯವು ದೇಹವನ್ನು ಸೇರಲು ಕಾರಣವಾಗಿದೆ. ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ ನೇರವಾಗಿ ಹಾಗೂ ಪರೋಕ್ಷವಾಗಿ ಪ್ಲಾಸ್ಟಿಕ್‌ ಮನುಷ್ಯನ ದೇಹ ಸೇರುವುದನ್ನು ತಪ್ಪಿಸಬಹುದು.

ಕೆಲವರು ಇತ್ತೀಚೆಗೆ ಇಡ್ಲಿ ಮಾಡಲು ಪ್ಲಾಸ್ಟಿಕ್ ಹಾಳೆ ಉಪಯೋಗಿಸುತ್ತಿದ್ದಾರೆ. ಬಿಸಿಯಾದ ಪ್ಲಾಸ್ಟಿಕ್ ತನ್ನ ಕಣಗಳನ್ನು ಇಡ್ಲಿಗೆ ಸೇರಿಸುತ್ತಿದೆ. ಕೂಡಲೇ ಇದನ್ನು ನಿಲ್ಲಿಸಬೇಕು. ರಸ್ತೆಬದಿಯ ಹಾಗೂ ಚಿಕ್ಕ ಚಿಕ್ಕ ಗಾಡಿಗಳಲ್ಲಿ ತಟ್ಟೆಯ ಮೇಲೆ ಪ್ಲಾಸ್ಟಿಕ್ ಹಾಳೆ ಹಾಕಿ ಅದರ ಮೇಲೆ ತುಂಬಾ ಬಿಸಿಯಾದ ಅನ್ನ, ಸಾಂಬಾರನ್ನು ಕೊಡುತ್ತಾರೆ. ಇಲ್ಲಿ ಕೂಡ ಪ್ಲಾಸ್ಟಿಕ್ ಕಣಗಳು ಅನ್ನದೊಂದಿಗೆ ದೇಹವನ್ನು ಸೇರುತ್ತಿವೆ. ವ್ಯಾಪಾರಿಗಳಿಗೆ ತೊಂದರೆ ಕೊಡದೆ, ಪ್ಲಾಸ್ಟಿಕ್‌ ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ಅವರಿಗೆ ಸ್ಪಷ್ಟವಾಗಿ ಮನದಟ್ಟು ಮಾಡಿಕೊಟ್ಟು, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

-ಪಿ.ಎನ್.ಎಂ.ಗುಪ್ತ, ಬೆಂಗಳೂರು

ಅಪಾಯಕಾರಿ ಕೈದಿಗಳನ್ನು ಅಂಡಮಾನ್‌ಗೆ ಕಳಿಸಿ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದರೆ, ಜೈಲು ಅಧಿಕಾರಿಗಳ ಬದಲಿಗೆ ರೌಡಿಗಳು ಆ ಜೈಲನ್ನು ಆಳುತ್ತಿದ್ದಾರೆ ಅನ್ನಿಸುತ್ತದೆ. ಜೈಲಿನಲ್ಲಿ ಬಾಡೂಟ, ಎಣ್ಣೆಪಾರ್ಟಿ, ಮಸಾಜ್‌, ಸಿಗರೇಟ್ ಪೂರೈಕೆ ನಿರಾತಂಕವಾಗಿ ನಡೆಯುತ್ತಿದೆ ಎಂದಾದರೆ, ಅದರಲ್ಲಿ ಜೈಲು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದೇ ಅರ್ಥ. ವಶೀಲಿಯಿಂದಲೊ, ಹಣ ನೀಡಿಯೊ ಆದಾಯ ಬರುವ ಆಯಕಟ್ಟಿನ ಸ್ಥಳಗಳಲ್ಲಿ ಹೋಗಿ ಕುಳಿತುಕೊಳ್ಳುವ ನಮ್ಮ ಅಧಿಕಾರಿಗಳು, ವಸೂಲಿ ದಂಧೆಯನ್ನು ಬಿಟ್ಟು ಇನ್ನೇನು ಮಾಡಿಯಾರು? ಪೊಲೀಸ್ ಅಥವಾ ಜೈಲು ಅಧಿಕಾರಿಗಳ ವರ್ಗಾವಣೆಗೆ ಲಕ್ಷಗಟ್ಟಲೆ ಹಣ ತೆಗೆದುಕೊಳ್ಳುವ ನಮ್ಮ ಜನಪ್ರತಿನಿಧಿಗಳಿಗೆ ಇದೆಲ್ಲ ಗೊತ್ತಿಲ್ಲ ಎಂದಲ್ಲ. ವಿಷಯ ಹೊರಬರುವವರೆಗೆ ಸರ್ಕಾರ ಮೌನವಾಗಿರುತ್ತದೆ. ವಿಷಯ ಹೊರಬಿದ್ದ ಕೂಡಲೇ ಕೆಲವು ಅಧಿಕಾರಿ
ಗಳನ್ನು ಅಮಾನತು ಮಾಡುವ ಪ್ರಹಸನ ನಡೆಯುತ್ತದೆ. ಇದೆಲ್ಲ ಜನರ ಮನಸ್ಸಿನಿಂದ ವಿಷಯ ಮರೆಯಾಗುವವರೆಗೆ ಮಾತ್ರ. ಮತ್ತೆ ಯಥಾಸ್ಥಿತಿ ಮುಂದುವರಿಯುತ್ತದೆ.

ಬ್ರಿಟಿಷರು ತಮಗೆ ತುಂಬ ಅಪಾಯಕಾರಿ ಎನಿಸಿದ ಕೈದಿಗಳನ್ನು ಅಂಡಮಾನ್‌ನ ಸೆಲ್ಯುಲಾರ್ ಜೈಲಿಗೆ ಕಳುಹಿಸುತ್ತಿದ್ದರು. ಆ ಜೈಲಿನಲ್ಲಿ ಕೈದಿಗಳನ್ನು ಉಗ್ರವಾಗಿ ಶಿಕ್ಷಿಸಲಾಗುತ್ತಿತ್ತು. ಸುತ್ತಲೂ ಸಮುದ್ರ ಇದ್ದುದರಿಂದ ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿರಲಿಲ್ಲ. ಈಗ ನಮ್ಮ ಜೈಲುಗಳಲ್ಲಿರುವ ಅಪಾಯಕಾರಿ ಕೈದಿಗಳನ್ನು ಅಂತಹ ಜೈಲುಗಳಿಗೆ ಸಾಗಿಸಬಹುದಲ್ಲವೇ? ಅಪರಿಚಿತ ಸ್ಥಳದಲ್ಲಾದರೂ ಅವರ ಅಟ್ಟಹಾಸ ಕಡಿಮೆಯಾಗಬಹುದೇನೊ. ಅವರ ವಿಚಾರಣೆಯನ್ನು ಸಹ ಅಲ್ಲಿನ ಕೋರ್ಟ್‌ಗೇ ವರ್ಗಾಯಿಸಿದರೆ, ಶಿಕ್ಷೆಯಾದ ನಂತರ ಪುನಃ ಅವರನ್ನು ಇಲ್ಲಿಗೆ ಕರೆತರುವ ಪ್ರಮೇಯವೂ ಇರುವುದಿಲ್ಲ. ಕಾನೂನಿನ ತೊಡಕುಗಳು ಏನಾದರೂ ಇದ್ದರೆ ಅವಕ್ಕೆ ತಿದ್ದುಪಡಿ ಮಾಡಿ ಬಗೆಹರಿಸಬೇಕು.⇒ಮುರಲೀಧರ ಕುಲಕರ್ಣಿ, ಬೀದರ್

-ಜಾಣ ಅರ್ಚಕರ ಮುಂದೆ ಬೆಪ್ಪರಾಗುವ ಭಕ್ತರು

ತಮಿಳುನಾಡಿನ ಮದುರೆಯ ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದ ಅಧಿಕಾರಿಗಳು, ನಟಿ ನಮಿತಾ ಅವರನ್ನು ತಾವು ಹಿಂದೂ ಎನ್ನುವುದಕ್ಕೆ ದಾಖಲೆ ಕೊಡಿ ಎಂದು ಕೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಆ. 27). ಇದೊಂದು ಎಲ್ಲರಿಗೂ ಅನ್ವಯ ಆಗುವ ನೈಜ ಪ್ರಶ್ನೆ. ನಾವು ‘ಹಿಂದೂ’ ಎಂದು ಕರೆದುಕೊಳ್ಳಲು ಏನೇನು ಮಾನದಂಡಗಳಿರಬೇಕು? ಬಹುಶಃ ನಮಿತಾ ಅವರಿಗೆ ಎದುರಾಗಿರುವ ಈ ಪ್ರಶ್ನೆ ಒಂದು ದಿನ ನಮಗೂ ಎದುರಾಗಬಹುದು.

ಭಾರತದಲ್ಲಿ ಇಂತಹ ಪ್ರಶ್ನೆ ಮಾಡುವ, ಮಡಿ ಮೈಲಿಗೆಯನ್ನು ಜೀವಂತವಾಗಿ ಇಟ್ಟುಕೊಂಡಿರುವ ದೇವಸ್ಥಾನಗಳು ಬಹಳಷ್ಟಿವೆ. ಭಕ್ತರು ಯಾವ ದಾಖಲೆಗಳೊಂದಿಗೆ ಒಳಗೆ ಬರಬೇಕು ಎಂಬುದರ ಬಗ್ಗೆ ದೇವಸ್ಥಾನದ ಮುಂದೆ ಕಡ್ಡಾಯವಾಗಿ ಬೋರ್ಡ್ ಹಾಕಬೇಕು. ಆಗ ಭಕ್ತರು ಇಂತಹ ಮುಜುಗರದಿಂದ ಪಾರಾಗಬಹುದು. ಧಾರ್ಮಿಕ ಸ್ವಾತಂತ್ರ್ಯ ಸಿಕ್ಕದ ಇಂತಹ ವಾತಾವರಣದಲ್ಲಿ ನಾವಿದ್ದೇವೆ. ಜಾಣ ಅರ್ಚಕರ ಈ ನಡೆ ಮುಗ್ಧ ಭಕ್ತರಿಗೆ ತಿಳಿಯುವುದು ಯಾವಾಗ?

-ತಾ.ಸಿ.ತಿಮ್ಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT