ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ವಿಮಾನಯಾನ ಕಂಪನಿ ಅನಿವಾರ್ಯವೇ?

Published 3 ಸೆಪ್ಟೆಂಬರ್ 2023, 21:19 IST
Last Updated 3 ಸೆಪ್ಟೆಂಬರ್ 2023, 21:19 IST
ಅಕ್ಷರ ಗಾತ್ರ

ವಿಮಾನಯಾನ ಕಂಪನಿ ಅನಿವಾರ್ಯವೇ?

ರಾಜ್ಯ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಆರಂಭಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ (ಪ್ರ.ವಾ., ಆ. 2). ಈ ಬಗೆಯ ಯೋಚನೆಗಳು ಸರ್ಕಾರಕ್ಕೆ ಹೇಗೆ ಬರುತ್ತವೆ ಎಂಬುದೇ ಆಶ್ಚರ್ಯಕರ. ವಿಮಾನಯಾನ, ನಿಲ್ದಾಣಗಳ ನಿರ್ಮಾಣ, ನಿರ್ವಹಣೆ, ಪ್ರಾಧಿಕಾರ, ವಿಮಾನಗಳ ಖರೀದಿ– ಇವೆಲ್ಲ ಯಾರಿಗಾಗಿ ಸ್ವಾಮಿ?! ರಾಜ್ಯವು ಬರದ ಛಾಯೆಯಲ್ಲಿ ಕಂಗಾಲಾಗಿದೆ. ಸಮಾಜದ ಯಾರ ಹಿತಾಸಕ್ತಿಗಳನ್ನು ಇದು ಪೂರೈಸುತ್ತದೆ? ವಿಮಾನಯಾನ ಕಂಪನಿಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ. ಇದು ಅಭಿವೃದ್ಧಿಯ ಆದ್ಯತೆಯೂ ಅಲ್ಲ. ಸರ್ಕಾರಿ ಅಧಿಕಾರಿಗಳಿಗೆ ಮತ್ತು ಮಂತ್ರಿ ಮಹೋದಯರಿಗೆ ಸರ್ಕಾರಿ ಕೆಲಸವೆಂದು ಹೇಳಿಕೊಂಡು ಉಚಿತವಾಗಿ ಓಡಾಡಲು ಅನುವು ಮಾಡಿಕೊಡುವ ಈ ಉದ್ದೇಶಿತ ಕಂಪನಿಯು ಬಿಳಿ ಆನೆಯಾಗುತ್ತದೆ.

ಸರ್ಕಾರವು ಮಾಡಬೇಕಾದ ತಕ್ಷಣದ ನೂರಾರು ಬೇರೆ ಕೆಲಸಗಳಿವೆ. ಕುಡಿಯುವ ನೀರು ಪೂರೈಕೆ, ಶಾಲೆಗಳು, ಆರೋಗ್ಯ ಕೇಂದ್ರಗಳು, ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣ, ಮಕ್ಕಳು ಮತ್ತು ಮಹಿಳೆಯರಲ್ಲಿನ ತೀವ್ರ ಅಪೌಷ್ಟಿಕತೆ ನಿವಾರಣೆಯಂತಹ ಅಭಿವೃದ್ಧಿ ಆದ್ಯತೆಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ಕೆಲವೇ ಪ್ರತಿಷ್ಠಿತರ ಅಗತ್ಯಗಳು ಸರ್ಕಾರಕ್ಕೆ ಮುಖ್ಯವಾಗಬೇಕೋ ಅಥವಾ ಲಕ್ಷಾಂತರ ರೈತರು, ಕೂಲಿಕಾರರು, ಕಾರ್ಮಿಕರು, ಮಹಿಳೆಯರು, ಮಕ್ಕಳ ಕಲ್ಯಾಣ ಮುಖ್ಯವಾಗಬೇಕೋ? ವಿಮಾನಯಾನ ಕಂಪನಿಯನ್ನು ಆರಂಭಿಸುವ ಪ್ರಸ್ತಾವವನ್ನು ಸರ್ಕಾರ ಮೊದಲು ಕೈಬಿಡಬೇಕು.

–ಟಿ.ಆರ್.ಚಂದ್ರಶೇಖರ, ಬೆಂಗಳೂರು

***

ಮೆಟ್ರೊ ರೈಲು: ಪ್ರವಾಸೋದ್ಯಮಕ್ಕೂ ಪೂರಕವಾಗಲಿ

ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಮೆಟ್ರೊ ರೈಲು ಆಪದ್ಬಾಂಧವನಂತೆ ಹೊರಹೊಮ್ಮಿದೆ. ಪ್ರತಿ ನಿಲ್ದಾಣ ಬರುವ ಮೊದಲೇ ಆ ನಿಲ್ದಾಣದ ಹೆಸರನ್ನು ಹಾಗೂ ಮುಂದಿನ ನಿಲ್ದಾಣದ ಹೆಸರನ್ನು ಮುಂಚಿತವಾಗಿಯೇ ಉದ್ಘೋಷಣೆ ಮಾಡುವುದು ಸಹಸ್ರಾರು ಪ್ರಯಾಣಿಕರಿಗೆ, ಅದೂ ನಿಲ್ದಾಣಗಳ ಪರಿಚಯ ಅಷ್ಟೊಂದು ಇರದವರಿಗೆ ಬಹಳ ಉಪಯುಕ್ತವಾಗಿದೆ. ಈ ರೈಲನ್ನು ಹೊರ ಊರಿನಿಂದ ಬರುವ ಪ್ರಯಾಣಿಕರೂ ಬಹಳಷ್ಟು ಸಂಖ್ಯೆಯಲ್ಲಿ ಬಳಸುವುದರಿಂದ ನಿಲ್ದಾಣಗಳ ಅಕ್ಕಪಕ್ಕದಲ್ಲಿರುವ ಪ್ರವಾಸಿ ತಾಣಗಳ ಬಗ್ಗೆಯೂ ಮಾಹಿತಿಯನ್ನು ಉದ್ಘೋಷಣೆ ಮಾಡುವುದು ಸೂಕ್ತ. ಉದಾಹರಣೆಗೆ, ಮಹಾಲಕ್ಷ್ಮಿ ನಿಲ್ದಾಣ ಬರುವ ಮುಂಚೆ ಹತ್ತಿರದಲ್ಲಿ ಆಂಜನೇಯ ದೇವಸ್ಥಾನ, ಶ್ರೀನಿವಾಸ ದೇವಸ್ಥಾನ, ಇಸ್ಕಾನ್‌ ದೇವಸ್ಥಾನ ಇವೆಯೆಂದು, ಕಬ್ಬನ್‌ ಉದ್ಯಾನ ನಿಲ್ದಾಣ ಬರುವ ಮುಂಚೆ ಚಿನ್ನಸ್ವಾಮಿ ಕ್ರೀಡಾಂಗಣ ಇದೆ ಎಂಬಂತಹ ಮಾಹಿತಿ ನೀಡುವುದರಿಂದ ಅನುಕೂಲವಾದೀತು. ಇದರಿಂದ ಪ್ರವಾಸೋದ್ಯಮಕ್ಕೂ ಬಲ ಬಂದೀತು.

–ಬಿ.ಎನ್.ಭರತ್, ಬೆಂಗಳೂರು

***

ವಿನೋದದ ಸಂಗತಿ, ಆತ್ಮವಂಚನೆಯ ಮಾತು...

ಮತ್ತೆ ಆಪರೇಷನ್ ಕಮಲ ಆರಂಭವಾಗಲಿದೆ ಎಂಬ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆಯಲ್ಲಿ (ಪ್ರ.ವಾ., ಸೆ. 3) ವಿನೋದದ ಜೊತೆಗೆ ಸವಾಲೂ ಇದೆ. ‘ಕಾಂಗ್ರೆಸ್‌ಗೆ ಒಂದು ತಿಂಗಳು ಸಮಯ ಕೊಡುತ್ತೇವೆ, ಬಿಜೆಪಿಯಿಂದ ಒಬ್ಬ ಶಾಸಕನನ್ನಾದರೂ ಕರೆದೊಯ್ಯಲಿ ನೋಡೋಣ’ ಎಂದು ಅವರು ಹೇಳಿರುವುದು ವಿನೋದದ ಸಂಗತಿ. ಸಾಮಾನ್ಯವಾಗಿ ದಿನನಿತ್ಯದ ಒಂದು ವಸ್ತುವನ್ನು ಕೊಂಡೊಯ್ಯಬೇಕೆನಿಸಿದಾಗಲೂ ಅದರ ಗುಣಮಟ್ಟವನ್ನು ಕೂಲಂಕಷವಾಗಿ ಪರಿಶೀಲಿಸಿ ದರ ಖಾತರಿ ಮಾಡಿಕೊಳ್ಳಲು ಹಲವು ನಿಮಿಷ, ಗಂಟೆಗಳೇ ಹಿಡಿಯುತ್ತವೆ. ಹಾಗಿರುವಾಗ, ಒಬ್ಬ ಶಾಸಕನನ್ನು ಅಷ್ಟು ಶೀಘ್ರವಾಗಿ ಕೊಂಡೊಯ್ಯಲು ಸಾಧ್ಯವೇ? ಆ ಶಾಸಕ ದಿನನಿತ್ಯದ ವಸ್ತುವೇ?! ಕಾಂಗ್ರೆಸ್ ಪಕ್ಷ ಬೇರೆ ಪಕ್ಷದ ಶಾಸಕರನ್ನು ಕರೆದೊಯ್ದು ಅಧಿಕಾರ ಉಳಿಸಿಕೊಳ್ಳುವಷ್ಟು ದಯನೀಯ ಸ್ಥಿತಿಯಲ್ಲಿದೆಯೇ ಅಥವಾ ಇತರ ಪಕ್ಷದ ಶಾಸಕರನ್ನು ಸಾಕಿ ಸಲಹುವಷ್ಟು ಕರುಣಾಮಯಿಯೇ?

ಇಷ್ಟಕ್ಕೂ ಬಿಜೆಪಿಯ ನಾಯಕರು ತಾನೆ ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂದು ಆಗಾಗ ಹೇಳುತ್ತಿರುವುದು. ಹಾಗಿದ್ದರೆ ಅದಕ್ಕೆ ಬೇಕಿರುವ ಕಾರಣ ಮತ್ತು ಯೋಜನೆಗಳನ್ನು ಈಶ್ವರಪ್ಪನವರೇ ಬಹಿರಂಗಪಡಿಸಿದರೆ ಒಳಿತು. ಸುಖಾಸುಮ್ಮನೆ ಆತ್ಮವಂಚನೆಯ ಮಾತುಗಳೇಕೆ?!

–ರಮೇಶ್, ಬೆಂಗಳೂರು

***

ಲೈಂಗಿಕ ಅಲ್ಪಸಂಖ್ಯಾತರ ಉಪಟಳಕ್ಕೆ ಕೊನೆಯಿಲ್ಲವೇ?

ಮದುವೆ ಮತ್ತು ಗೃಹ ಪ್ರವೇಶದಂತಹ ಸಮಾರಂಭಗಳಲ್ಲಿ ಕೆಲವು ಲೈಂಗಿಕ ಅಲ್ಪಸಂಖ್ಯಾತರು ಮಾನಸಿಕವಾಗಿ ಕೊಡುವ ಉಪಟಳ ಹೇಳತೀರದಾಗಿದೆ. ಇತ್ತೀಚೆಗೆ ನಮ್ಮ ಸ್ನೇಹಿತರ ಮಗಳ ಮದುವೆಯ ಆರತಕ್ಷತೆಯ ವೇಳೆ ದಿಢೀರನೆ ವೇದಿಕೆಯ ಮೇಲೆ ಬಂದ ಐದು ಮಂದಿ ಲೈಂಗಿಕ ಅಲ್ಪಸಂಖ್ಯಾತರು ಹುಡುಗಿಯ ತಂದೆಯ ಮೈಮುಟ್ಟಿ, ಕೈ ಹಿಡಿದು ‘ಮಗಳ ಮದುವೆ ಮಾಡ್ತೀದ್ದೀಯ, ಹತ್ತು ಸಾವಿರ ಕೊಡು’ ಎಂದು ಮದುವೆಗೆ ಬಂದವರ ಎದುರಿನಲ್ಲೇ ಏಕವಚನದಲ್ಲಿ ಕೇಳಿದರು. ಅವರು ಮರ್ಯಾದೆಗೆ ಅಂಜಿ ಐದು ಸಾವಿರ ರೂಪಾಯಿ ಕೊಟ್ಟು ಸಾಗಹಾಕಿದರು. ಇವರು ಮೈಮುಟ್ಟುವುದು ಒಂದು ರೀತಿಯ ದೈಹಿಕ ಮತ್ತು ಮಾನಸಿಕ ಹಿಂಸಾಚಾರವೆಂದು ಹೇಳಬಹುದು.

ಮತ್ತೊಂದು ಆತಂಕದ ಸಂಗತಿಯೆಂದರೆ, ಸಿಗ್ನಲ್ ದೀಪಗಳ ಬಳಿ ನಿಂತು ಇವರು ಹಣ ಕೇಳುವುದು. ಆಗ ಹಸಿರು ದೀಪ ಬಂದಾಗ ಹೊರಡುವ ಗಡಿಬಿಡಿಯಲ್ಲಿರುವ ಚಾಲಕರ ಜೇಬಿಗೇ ಕೈ ಹಾಕಿ ಇವರು ಹಣ ಎಗರಿಸುತ್ತಾರೆ. ಇನ್ನು ರಾತ್ರಿ ವೇಳೆಯಲ್ಲಾದರೆ ಜೇಬಿಗೇ ಕೈಹಾಕಿ ಮೊಬೈಲ್ ಫೋನ್‌ಗಳನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಅಲ್ಲೇ ನಿಂತಿರುವ ಸಂಚಾರ ಪೊಲೀಸರಿಗೆ ಈ ಬಗ್ಗೆ ದೂರು ಹೇಳಿದರೆ, ‘ನಮಗೂ ಇದಕ್ಕೂ ಸಂಬಂಧವಿಲ್ಲ, ನೀವು ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ಕೊಡಿ’ ಎನ್ನುತ್ತಾರೆ. ಇಂತಹವರಿಂದ ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. 

–ಬೂಕನಕೆರೆ ವಿಜೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT