ಕನ್ನಡಕ್ಕೆ ಬೂಕರ್: ಯುವಜನರಿಗೆ ಸ್ಫೂರ್ತಿಯಾಗಲಿ

ದೀಪಾ ಭಾಸ್ತಿ ಅವರು ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಅನುವಾದಿಸಿರುವ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕಥಾ ಸಂಕಲನಕ್ಕೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಬಾನು ಅವರ ಕಥೆಗಳು ಮಾನವೀಯ ಮೌಲ್ಯಗಳನ್ನು ಪಸರಿಸುವುದರ ಜೊತೆಗೆ, ಆಧುನಿಕ ಸಮಾಜಕ್ಕೆ ಸೂಕ್ಷ್ಮವಾದ ಅರಿವನ್ನು ಮೂಡಿಸುತ್ತವೆ.

ದೀಪಾ ಭಾಸ್ತಿ ಅವರು ಮೂಲ ಕೃತಿಯ ಆಶಯಗಳನ್ನು ಸಮರ್ಥವಾಗಿ ಅನುವಾದಿಸಿ ಕನ್ನಡದ ಸೊಗಡನ್ನು ಇಂಗ್ಲಿಷ್ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರ ಸಾಧನೆಯು ಇಂತಹ ಇನ್ನಷ್ಟು ಕನ್ನಡದ ಕೃತಿಗಳನ್ನು ಜಾಗತಿಕವಾಗಿ ಗುರುತಿಸಲು ಮತ್ತು ಅನುವಾದಿಸಲು ಯುವ ಬರಹಗಾರರು ಹಾಗೂ ಅನುವಾದಕರಿಗೆ ಸ್ಫೂರ್ತಿಯಾಗಲಿ.

– ಮಹೇಂದ್ರ ಟಿ.ಎಂ., ಶಂಕರಘಟ್ಟ

ನೆಲಮಾಳಿಗೆ ನಿರ್ಮಾಣ: ನಿರ್ಬಂಧ ಸೂಕ್ತ

ಕೆರೆಗಳ ಹತ್ತಿರ ಹಾಗೂ ತಗ್ಗುಪ್ರದೇಶಗಳಲ್ಲಿ ನೆಲಮಾಳಿಗೆ ನಿರ್ಮಿಸಿ ವಾಹನ ನಿಲ್ದಾಣಕ್ಕೆ ಅವಕಾಶ ನೀಡದಂತೆ ಕಾನೂನು ರೂಪಿಸಲಾಗುವುದು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಸ್ವಾಗತಾರ್ಹ. ಅನೇಕ ಕಟ್ಟಡಗಳಲ್ಲಿ ನೆಲಮಾಳಿಗೆ ಇದ್ದು ಅದನ್ನು ಕಾರ್ ಪಾರ್ಕಿಂಗ್ಗೂ ಬಿಡದೆ ಅಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿರುವುದು ಕಂಡುಬರುತ್ತದೆ. ಅಂತಹ ಮಳಿಗೆಗಳಲ್ಲಿ ನೀರು ನುಗ್ಗಿ ಹಲವರು ಜೀವ ಕಳೆದುಕೊಂಡ ಉದಾಹರಣೆಗಳಿವೆ.

ಇಷ್ಟಕ್ಕೂ ಈ ನೆಲಮಾಳಿಗೆ ಅವಶ್ಯವೇ ಎಂದು ಚಿಂತಿಸಬೇಕಾದ ಕಾಲ ಇದಾಗಿದೆ. ಕಟ್ಟಡದ ಎತ್ತರದ ಮಿತಿಯನ್ನು ಕೊಂಚ ಸಡಿಲಿಸಿದರೆ ನೆಲಮಾಳಿಗೆ ಮಾಡದೆಯೇ ನೆಲ ಅಂತಸ್ತಿನಲ್ಲಿ ವಾಹನಗಳಿಗೆ ಜಾಗ ಮಾಡಬಹುದು. ಅತ್ಯಂತ ಚಿಕ್ಕ ನಿವೇಶನಗಳಲ್ಲಿಯೂ ನೆಲಮಾಳಿಗೆ ಮಾಡಿರುವುದು ಅಪಾಯವೇ ಸರಿ. ಜೊತೆಗೆ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗುವ ಸಂಭವ ಇರುತ್ತದೆ. ಅಂತೆಯೇ ಒಳಚರಂಡಿಯ ನೀರು ಕಟ್ಟಡದ ಸಂಪು ಹಾಗೂ ಅಂತರ್ಜಲವನ್ನು ಸೇರಿ, ನೀರು ಕಲುಷಿತಗೊಂಡು ಜನರ ಆರೋಗ್ಯಕ್ಕೆ ಕುತ್ತು ಬರುವ ಸಂಭವ ಇರುತ್ತದೆ. ಈ ಎಲ್ಲ ಕಾರಣಗಳಿಂದ ದೊಡ್ಡ ದೊಡ್ಡ ಮಾಲ್ಗಳ ಹೊರತಾದ ಇತರ ನಿವೇಶನಗಳಲ್ಲಿ ನೆಲಮಾಳಿಗೆ ಕಟ್ಟುವುದನ್ನು ನಿಷೇಧಿಸುವುದು ಸೂಕ್ತ.

– ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಶಿಕ್ಷಣ ವ್ಯವಸ್ಥೆ: ಅಧ್ಯಯನ ಅಗತ್ಯ

ಸರ್ವರಿಗೂ ಸಮಾನ ಶಿಕ್ಷಣದ ವಿಷಯ ಕುರಿತ ಬರಗೂರು ರಾಮಚಂದ್ರಪ್ಪ ಅವರ ಲೇಖನವು (ಪ್ರ.ವಾ., ಮೇ 22) ಸರ್ಕಾರ, ಸಾರ್ವಜನಿಕರು ಹಾಗೂ ಶಿಕ್ಷಣ ತಜ್ಞರು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವನ್ನು ಹುಟ್ಟುಹಾಕಿದೆ. ಏಕರೂಪ ಕಲಿಕಾ ಕ್ರಮ, ಮಾತೃಭಾಷಾ ಬೋಧನಾ ಪದ್ಧತಿಯನ್ನು ಎಲ್ಲಾ ಶಾಲೆಗಳು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಆಗ ಬಡವರು, ಶ್ರೀಮಂತರೆನ್ನದೆ ಎಲ್ಲ ವರ್ಗಗಳಿಗೆ ಸೇರಿದ ಮಕ್ಕಳಿಗೂ ಸಮಾನ ಬೌದ್ಧಿಕ ಜ್ಞಾನ, ಕಲಿಕೆಯ ಅವಕಾಶ ಸಿಕ್ಕಂತೆ ಆಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಅದರಲ್ಲೂ ಪ್ರಾಥಮಿಕ ಶಿಕ್ಷಣ ನೀತಿ ಅನುಕರಣಾ ಯೋಗ್ಯ ರೀತಿಯಲ್ಲಿದೆ. ಉದಾಹರಣೆಗೆ, ಫಿನ್ಲ್ಯಾಂಡ್ ದೇಶದ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಉಚಿತವಾಗಿದ್ದು, ಅಲ್ಲಿ ಖಾಸಗಿ ಶಾಲೆಗಳೇ ಇಲ್ಲ. ಏಳನೇ ವಯಸ್ಸಿಗೆ ಶಾಲಾ ಪ್ರವೇಶ ಆಗಿ ಹದಿನಾರನೇ ವಯಸ್ಸಿನವರೆಗೂ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಜೊತೆಗೆ ಉಪಾಹಾರ, ಸಾರಿಗೆ ವ್ಯವಸ್ಥೆ ಉಚಿತ. ಇತರ ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಗಳ ಅಧ್ಯಯನ ನಡೆಸಿ, ನಮಗೆ ಒಪ್ಪುವಂತಹ ಪಠ್ಯಕ್ರಮ ಅಳವಡಿಸಿಕೊಳ್ಳಲು ಅನುವಾಗುವ ದಿಸೆಯಲ್ಲಿ ಸರ್ಕಾರ ಶ್ರಮಿಸಬೇಕಾದ ಜರೂರು ಇದೆ.

– ಶಾಂತಕುಮಾರ್, ಸರ್ಜಾಪುರ

ರಾಜ್ಯ ಭಾಷೆ ಅವಜ್ಞೆಗೆ ಒಳಗಾಗದಿರಲಿ

ರಾಷ್ಟ್ರೀಯ ಶಿಕ್ಷಣ ನೀತಿ– 2020 ಮತ್ತು ‘ಪಿಎಂಶ್ರೀ’ ಯೋಜನೆ ಅನುಷ್ಠಾನ ಮಾಡದ ಕಾರಣಕ್ಕೆ ಸಮಗ್ರ ಶಿಕ್ಷಣ ಯೋಜನೆಯಡಿ ಕೇಂದ್ರ ಸರ್ಕಾರ ತಡೆಹಿಡಿದಿರುವ ₹ 2151.59 ಕೋಟಿ ಅನುದಾನವನ್ನು ಬಡ್ಡಿಸಹಿತ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಬಗ್ಗೆ ವರದಿಯಾಗಿದೆ. ತ್ರಿಭಾಷಾ ಸೂತ್ರವನ್ನು ಅನುಸರಿಸಲು ರಾಜ್ಯಗಳಿಗೆ ನಿರ್ದೇಶಿಸಲಾಗದು ಎಂದು ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಹೇಳಿದ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆ ಮಹತ್ವದ್ದು ಎನಿಸುತ್ತದೆ. ನಮ್ಮ ರಾಜ್ಯ ಮೊದಲಿನಿಂದಲೂ ತ್ರಿಭಾಷಾ ಸೂತ್ರವನ್ನು ಅನುಸರಿಸುತ್ತಾ ಬಂದಿದೆ. ಅದರಿಂದ ನಮ್ಮ ರಾಜ್ಯಕ್ಕೆ ದಕ್ಕಿದ ಹೆಚ್ಚಿನ ಪ್ರತಿಫಲವೇನು? ವಿದ್ಯಾರ್ಥಿಗಳಿಗೆ ಮತ್ತೊಂದು ಭಾಷೆಯ ಕಲಿಕೆಯ ಭಾರ, ಅದೂ ನಮ್ಮ ನಾಡ ಭಾಷೆಯ ಕಲಿಕೆಗೆ ಮಾರಕವಾಗಿ. ಆದ್ದರಿಂದ ಸರ್ಕಾರವು ಮಕ್ಕಳ ಮೇಲಿರುವ ಹಿಂದಿ ಭಾಷೆಯ ಭಾರವನ್ನು ತ್ವರಿತವಾಗಿ ತಗ್ಗಿಸಬೇಕು, ಹಿಂದಿ ಭಾಷೆಯ ಕಲಿಕೆಯನ್ನು ಐಚ್ಛಿಕಗೊಳಿಸಬೇಕು. ಶಾಲೆಗಳಿಗೆ ಹೊರೆಯಾಗುವ ಹಿಂದಿ ಶಿಕ್ಷಕರ ವೇತನ ಮತ್ತಿತರ ಖರ್ಚು ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸಬೇಕು. ಹಿಂದಿ, ಸಂಸ್ಕೃತ ಭಾಷೆಗಳ ಪಠ್ಯಕ್ರಮ, ಮೌಲ್ಯಮಾಪನ ಮತ್ತು ಅದರಿಂದ ಕನ್ನಡ ಭಾಷೆ ಕಲಿಕೆಯ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಅವಶ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.

ನಾಡು– ನುಡಿ ಕುರಿತು ನವೆಂಬರ್ ತಿಂಗಳಲ್ಲಿ ಸರ್ಕಾರ ಸ್ವಲ್ಪ ಸದ್ದು ಮಾಡುವುದನ್ನು ಬಿಟ್ಟರೆ ಈ ವಿಷಯದಲ್ಲಿ ನಂತರ ಯಾವುದೇ ಗಮನವನ್ನು ಹರಿಸುತ್ತಿಲ್ಲ. ಶಿಕ್ಷಣ, ಸಂಸ್ಕೃತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರದ ಸ್ಪಂದನ ತೀರಾ ನಕಾರಾತ್ಮಕವಾಗಿದೆ. ರಾಜ್ಯ ಭಾಷೆಯ ಸಮರ್ಪಕ ಕಲಿಕೆ ಮತ್ತು ಬಳಕೆಯನ್ನು ಎಲ್ಲ ಹಂತದಲ್ಲಿ ಖಚಿತಪಡಿಸುವ ಮತ್ತು ಅದು ಇತರ ಭಾಷೆಗಳಿಂದಾಗಿ ಅವಜ್ಞೆಗೆ ಒಳಗಾಗುವುದನ್ನು ತಪ್ಪಿಸುವ ಗ್ಯಾರಂಟಿಯನ್ನು ಸರ್ಕಾರ ನಾಡ ಜನತೆಗೆ ಮೊದಲು ನೀಡಬೇಕು. ಅದಕ್ಕೆ ಅವಶ್ಯಕತೆ ಇರುವ ಎಲ್ಲ ಪೂರಕ ಕ್ರಮಗಳನ್ನೂ ತಕ್ಷಣ ತೆಗೆದು ಕೊಳ್ಳಬೇಕು.

– ವೆಂಕಟೇಶ ಮಾಚಕನೂರ, ಧಾರವಾಡ

ಊರೇ ಕಾಣೆ!

ಬೆಂಗಳೂರಿನಲ್ಲಿ

ಕೃಷ್ಣಾ, ಕಾವೇರಿ...

ಯಾವ ನದಿಯನ್ನೂ

ನಾ ಕಾಣೆ,

ಆದರೆ ಮಳೆ ಬಂದರೆ

ನೆರೆಯಾಗಿ

ಬೆಂಗಳೂರೇ ಕಾಣೆ!

– ಮುಳ್ಳೂರು ಪ್ರಕಾಶ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.