ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಾಯಕರನ್ನು ಸೃಷ್ಟಿಸುವ ಸರ್ಕಾರಿ ಶಾಲೆ

Published 8 ಮೇ 2024, 0:30 IST
Last Updated 8 ಮೇ 2024, 0:30 IST
ಅಕ್ಷರ ಗಾತ್ರ

ನಾಯಕರನ್ನು ಸೃಷ್ಟಿಸುವ ಸರ್ಕಾರಿ ಶಾಲೆ

ಚುನಾವಣೆಗೆ ಮತದಾನ ಕೇಂದ್ರಗಳು ಬಹುಮಟ್ಟಿಗೆ ಸರ್ಕಾರಿ ಶಾಲೆಗಳೇ ಆಗಿರುತ್ತವೆ. ಹಲವರಿಗೆ ಮತದಾನದ ಜೊತೆಗೆ ತಾವು ಓದಿದ ಶಾಲೆಗೆ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ಈ ಮೂಲಕ ಲಭಿಸುತ್ತದೆ. ತಾವು ಕಲಿತ ಶಾಲೆಯ ಕೊಠಡಿಗಳು, ಶಾಲೆಯ ವಾತಾವರಣ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಸಾಧ್ಯವಾಗುತ್ತದೆ. ಇಷ್ಟೇ ಅಲ್ಲದೆ, ಸರ್ಕಾರಿ ಶಾಲೆಗಳ ಇಂದಿನ ದುಃಸ್ಥಿತಿ ಕಂಡು ನೋವಾಗುವುದೂ ಸುಳ್ಳಲ್ಲ.

ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಸರ್ಕಾರಿ ಶಾಲೆಗಳಲ್ಲೇ ಇಂದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ನಾಯಕರ ಆಯ್ಕೆ ನಡೆಯುತ್ತಿದೆ ಎಂದಾದರೆ, ಸರ್ಕಾರಿ ಶಾಲೆಗಳ ಮಹತ್ವದ ಅರಿವಾಗುತ್ತದೆ. ತಾವು ಕಲಿತ ಶಾಲೆಯ ಋಣ ತಮ್ಮ ಮೇಲಿದೆ ಎಂಬುದನ್ನು ಈ ಅಭ್ಯರ್ಥಿಗಳು ಅರಿಯಬೇಕು. ಗೆದ್ದ ನಂತರ ರಾಷ್ಟ್ರದ ಏಳ್ಗೆಯೊಂದಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೂ ಹೆಚ್ಚು ಗಮನಹರಿಸಬೇಕಾದ ತಮ್ಮ ಕರ್ತವ್ಯವನ್ನು ಅವರು ಸಮರ್ಪಕವಾಗಿ ನಿರ್ವಹಿಸಬೇಕು.

-ಸುರೇಂದ್ರ ಪೈ, ಭಟ್ಕಳ

****

ಸ್ವಯಂಪ್ರೇರಿತ ರಾಜೀನಾಮೆ ಸೂಕ್ತ

ಪಶ್ಚಿಮ ಬಂಗಾಳ ರಾಜಭವನದ ಮಹಿಳಾ ನೌಕರರೊಬ್ಬರು ದಾಖಲಿಸಿರುವ ಲೈಂಗಿಕ ಕಿರುಕುಳದ ದೂರಿಗೆ ಸಂಬಂಧಿಸಿದಂತೆ, ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರ ವಿರುದ್ಧ ತನಿಖೆ ನಡೆಸಲು ಅಲ್ಲಿನ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರ ವಿರುದ್ಧ ಅದೇ ರಾಜ್ಯದ ಪೊಲೀಸರು ತನಿಖೆ ನಡೆಸಬಹುದೇ ಎಂಬುದು ಜಿಜ್ಞಾಸೆಯ ಪ್ರಶ್ನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೋಸ್ ಅವರು, ಈ ದಿಸೆಯಲ್ಲಿ ಪೊಲೀಸರ ಸಮನ್ಸ್ ಅನ್ನು ನಿರ್ಲಕ್ಷಿಸಬೇಕೆಂದು ರಾಜಭವನದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಸಂವಿಧಾನದ ಅನುಸಾರ ರಾಜ್ಯಪಾಲರ ವಿರುದ್ಧ ಪೊಲೀಸರು ವಿಚಾರಣೆ ಮತ್ತು ತನಿಖಾ ಪ್ರಕ್ರಿಯೆ ನಡೆಸುವಂತಿಲ್ಲ ಎಂಬುದನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

ಇಂತಹುದೇ ಮತ್ತೊಂದು ಪ್ರಕರಣದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಆನಂತರ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ಎನ್.ಡಿ.ತಿವಾರಿ ಅವರ ಹೆಸರು ಕೇಳಿಬಂದಾಗ, ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದನ್ನು ಸ್ಮರಿಸಬಹುದು.‌ ಒಟ್ಟಿನಲ್ಲಿ, ರಾಜ್ಯಪಾಲರ ಹೆಸರು ಇಂತಹ ಪ್ರಕರಣಗಳಲ್ಲಿ ಕೇಳಿಬಂದಾಗ, ಅವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುವುದು ಒಳ್ಳೆಯದು.  

-ಕೆ.ವಿ.ವಾಸು, ಮೈಸೂರು

****

ಸತ್ಯ ಹೊರಹಾಕಿದ ಚುನಾವಣೆ

ಅಂತೂ ಇಂತೂ ರಾಜ್ಯದಲ್ಲಿ ಭಯಂಕರ ದೂಳೆಬ್ಬಿಸಿದ ಲೋಕಸಭಾ ಚುನಾವಣೆ ಮುಗಿಯಿತಾದರೂ ಈ ಬಾರಿ ಕೆಲವು ‘ಜೀರ್ಣಿಸಿಕೊಳ್ಳಲಾಗದ ಸತ್ಯ’ಗಳನ್ನು ಹೊರಹಾಕಿತು. ಮೊದಲನೆಯದಾಗಿ, ರಾಜ್ಯದ ಹಿರಿಯ ರಾಜಕಾರಣಿಗಳು ಎನ್ನಿಸಿಕೊಂಡವರು ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ತೋರಿದ ಆಸ್ಥೆ. ಇದನ್ನು ಅನಿವಾರ್ಯ ಎನ್ನಬೇಕೊ ಉಳ್ಳವರ ದಾಷ್ಟೀಕ ಅನ್ನಬೇಕೊ ತಿಳಿಯದು. ಹಣವೊಂದಿದ್ದರೆ ಇಲ್ಲಿ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎಂಬ ಹುಂಬತನದ ಮುಂದೆ ಸಚ್ಚಾರಿತ್ರ್ಯವುಳ್ಳವರಾರೂ ರಾಜಕಾರಣದತ್ತ ಸುಳಿಯದಂಥ ವಾತಾವರಣ ಸೃಷ್ಟಿಯಾಯಿತು. ಹಾಗಾದರೆ ನಮ್ಮ ದೇಶದಲ್ಲಿ ರಾಜಕಾರಣ ಒಂದು ಆಕರ್ಷಕ ದಂಧೆಯಾಯಿತೇ?

ಎರಡನೆಯದಾಗಿ, ಚುನಾವಣಾ ಪ್ರಚಾರದ ಭರಾಟೆಯಲ್ಲಿ ಎದುರಾಳಿಯ ವ್ಯಕ್ತಿತ್ವ ಹನನವಾಗುವುದಿರಲಿ ತಮ್ಮ ಸ್ಥಾನಮಾನವನ್ನೂ ಲೆಕ್ಕಿಸದೆ ‘ಬಾಯಿ ಬಡಿಯುವ’ ಮೂಲಕ ಸ್ವಯಂ ಬೆತ್ತಲೆಯಾದದ್ದು ಇನ್ನೂ ಮೋಜಿನದಾಗಿತ್ತು.

- ಈರಪ್ಪ ಎಂ. ಕಂಬಳಿ, ಬೆಂಗಳೂರು

****

ಭಿನ್ನ ನಿಲುವು ಪ್ರಜಾಪ್ರಭುತ್ವದ ತಿರುಳು

‘ದೇಶದ ಹಿತ ಮರೆತ ಪ್ರಣಾಳಿಕೆಗಳು’ ಎಂಬ ಲೇಖನದಲ್ಲಿ (ಪ್ರ.ವಾ., ಮೇ 2) ಎ.ಸೂರ್ಯಪ್ರಕಾಶ್ ಅವರು ‘ಇಂಡಿಯಾ’ ಕೂಟದಲ್ಲಿರುವ ಪಕ್ಷಗಳು ಪರಿಣಾಮಗಳನ್ನು ಲೆಕ್ಕಿಸದೆ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ ಎಂದಿದ್ದಾರೆ. ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ಸಹಜವಾಗಿಯೇ ಭಿನ್ನವಾದ ನಿಲುವುಗಳನ್ನು ಹೊಂದಿರುತ್ತವೆ. ಪ್ರಜಾಪ್ರಭುತ್ವದ ತಿರುಳೆಂದರೆ ಇದೇ. ಆದರೆ ಬಿಜೆಪಿ ಪ್ರಣಾಳಿಕೆಯು ‘ಮೋದಿ ಕಿ ಗ್ಯಾರಂಟಿ’ ಮೂಲಕ ವ್ಯಕ್ತಿಯ ಪ್ರಣಾಳಿಕೆ ಆಗಿದೆ. ಎನ್‌ಡಿಎ ಕೂಟದ ಟಿಡಿಪಿ, ಎನ್‌ಸಿಪಿ (ಅಜಿತ್‌ ಪವಾರ್)‌, ಆರ್‌ಎಲ್‌ಡಿಯಂತಹ ಪಕ್ಷಗಳ ಪ್ರಣಾಳಿಕೆಗಳು ಬಿಜೆಪಿ ಪ್ರಣಾಳಿಕೆಯ ಯಥಾಪ್ರತಿಗಳಂತಿವೆ.

ಸಿಪಿಎಂ ಪ್ರಣಾಳಿಕೆಯಲ್ಲಿ ‘ಅಣ್ವಸ್ತ್ರಗಳ ನಿರ್ಮೂಲನಕ್ಕೆ ಬದ್ಧವಾಗಿದ್ದೇವೆ’ ಎಂಬ ಮಾತನ್ನು ದೇಶದ ಭದ್ರತಾ ಹಿತಾಸಕ್ತಿಗೆ ವಿರುದ್ಧವಾದ ಅಂಶ ಎಂದಿದ್ದಾರೆ. ಪಕ್ಷವು ಈ ಅಂಶವನ್ನು ಭಾರತಕ್ಕೆ ಸಂಬಂಧಿಸಿ ಮಾತ್ರ ಹೇಳಿಲ್ಲ. ಮಾನವ ಕುಲವನ್ನು ನಾಶಪಡಿಸುವ ಅಣ್ವಸ್ತ್ರಗಳನ್ನು ಜಗತ್ತಿನ ಎಲ್ಲಾ ದೇಶಗಳು ಸಮಾನ ನೆಲೆಯಲ್ಲಿ ನಾಶಪಡಿಸಬೇಕೆಂಬ ಬೇಡಿಕೆಯಿದು. ಕಾಂಗ್ರೆಸ್, ಆರ್‌ಜೆಡಿ, ಡಿಎಂಕೆಯಂತಹ ಪಕ್ಷಗಳು ಘೋಷಿಸಿರುವ, ಈಗ ‘ಗ್ಯಾರಂಟಿ’ ಎಂದು ಕರೆಯಲಾಗುತ್ತಿರುವ ಹಲವು ಕಲ್ಯಾಣ ಕ್ರಮಗಳನ್ನು ‘ಹೊಣೆಗಾರಿಕೆಯಿಲ್ಲದ ಅಪಾಯಕಾರಿ ಭರವಸೆ’ಗಳು ಎಂದು ಟೀಕಿಸಿದ್ದಾರೆ. ಅಡುಗೆ ಅನಿಲ ಸಿಲಿಂಡರನ್ನು ₹ 500ಕ್ಕೆ ನೀಡುವ ಆರ್‌ಜೆಡಿ ಮತ್ತು ಡಿಎಂಕೆಯ ಭರವಸೆಯು ಅಪಾಯಕಾರಿ ಎನ್ನುವ ಇವರಿಗೆ, ಬಿಜೆಪಿಯು ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬರಲು ಒಂದು ಸಿಲಿಂಡರನ್ನು ₹ 400ಕ್ಕೆ ಕೊಡುವುದಾಗಿ ನೀಡಿದ್ದ ಭರವಸೆ ನೆನಪಿಗೆ ಬರಲಿಲ್ಲವೇಕೆ? ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಸುವ ಭರವಸೆಯು ಆರ್ಥಿಕವಾಗಿ ಅಪಾಯಕಾರಿ ಎಂದಿರುವುದು ಕುಚೋದ್ಯವಲ್ಲವೇ?

ನರೇಂದ್ರ ಮೋದಿ ನೇತೃತ್ವದ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ, ದೇಶದಲ್ಲಿ ಬಡವ-ಶ್ರೀಮಂತರ ನಡುವಿನ ಅಂತರ ಅಪಾರವಾಗಿದೆ. ಮೇಲ್‌ಸ್ತರದ ಶೇ 10ರಷ್ಟು ಜನ ಬರೀ ಶೇ 4ರಷ್ಟು ತೆರಿಗೆಯನ್ನು ಕಟ್ಟಿದರೆ, ಕೆಳಸ್ತರದಲ್ಲಿರುವ ಶೇ 50ರಷ್ಟು ಜನ ದೇಶದ ಶೇ 64ರಷ್ಟು ತೆರಿಗೆಯನ್ನು ಕಟ್ಟುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಜನರಿಂದ ಸಂಗ್ರಹವಾಗುವ ತೆರಿಗೆ ಹಣವನ್ನು ಸ್ವಲ್ಪಮಟ್ಟಿಗೆ ಜನರಿಗೆ ಗ್ಯಾರಂಟಿಗಳ ರೂಪದಲ್ಲಿ ನೀಡಿದರೆ, ಅದು ಹೇಗೆ ದೇಶದ ಆರ್ಥಿಕತೆಗೆ ಅಪಾಯಕಾರಿ ಆಗುತ್ತದೆ? ಸೂರ್ಯಪ್ರಕಾಶ್‌ ಅವರು ಕಾಂಗ್ರೆಸ್ಸಿನ ಬಗ್ಗೆ ಕಾಳಜಿಯ ಮಾತುಗಳನ್ನು ಆಡಿರುವುದು ಲೇಖನದ ಹೈಲೈಟ್.‌ ಸಿಪಿಎಂ ಜೊತೆ ಕಾಂಗ್ರೆಸ್‌ ಪಾಲುದಾರಿಕೆ ಹೊಂದಿರುವುದು ವಿಷಕಾರಿ ಎಂದಿದ್ದಾರೆ. ಅಂದರೆ, ‘ಇಂಡಿಯಾ ಕೂಟ’ ಅಧಿಕಾರಕ್ಕೆ ಬರುವ ಬಗ್ಗೆ ಅವರು ಭವಿಷ್ಯ ನುಡಿದಂತಿದೆ ಮತ್ತು ಮೋದಿ ನೇತೃತ್ವದ ಆಡಳಿತ ಕೊನೆಗೊಳ್ಳಲಿದೆ ಎಂಬ ಆತಂಕಕ್ಕೂ ಅವರು ಒಳಗಾಗಿರುವ ಸಾಧ್ಯತೆ ಇದೆ!

- ಪ್ರಕಾಶ್‌ ಕೆ., ಕಾರ್ಯದರ್ಶಿ ಮಂಡಳಿ ಸದಸ್ಯ, ಸಿಪಿಎಂ ರಾಜ್ಯ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT