ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಹೊಸ ಮದ್ಯದಂಗಡಿಗಳ ಪ್ರಸ್ತಾವ ಹಿಂಪಡೆಯಿರಿ

Published 27 ಸೆಪ್ಟೆಂಬರ್ 2023, 22:14 IST
Last Updated 27 ಸೆಪ್ಟೆಂಬರ್ 2023, 22:14 IST
ಅಕ್ಷರ ಗಾತ್ರ

ಹೊಸ ಮದ್ಯದಂಗಡಿಗಳ ಪ್ರಸ್ತಾವ ಹಿಂಪಡೆಯಿರಿ

ಈ ಬಾರಿ ತೀವ್ರ ಮಳೆ ಕೊರತೆಯಿಂದಾಗಿ ಕೃಷಿಗಿರಲಿ, ಜನ–ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಸರ್ಕಾರವು ರಾಜ್ಯದ 161 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ನೀರಿಗಾಗಿಯೇ ಕಾವೇರಿ ವಿವಾದವು ಮತ್ತೆ ಭುಗಿಲೆದ್ದಿದೆ. ಬಹುಶಃ ಸರ್ಕಾರವು ನೀರಿನ ಕೊರತೆಯ ಈ ಯಾತನೆ
ಗಳನ್ನೆಲ್ಲಾ ಸಮೃದ್ಧವಾಗಿ ಮದ್ಯ ‘ಕುಡಿಸಿ’ ಮರೆಸಲು ಪ್ರಯತ್ನಿಸುತ್ತಿರಬಹುದೇ? ರಾಜ್ಯದಾದ್ಯಂತ ಹೊಸದಾಗಿ ಸಾವಿರ ಮದ್ಯದಂಗಡಿಗಳ ಪ್ರಾರಂಭಕ್ಕೆ ಅಬಕಾರಿ ಇಲಾಖೆಯಿಂದ ಸಿದ್ಧತೆ ನಡೆದಿರುವ ಸುದ್ದಿ (ಪ್ರ.ವಾ., ಸೆ.25) ಓದಿದ ಮೇಲೆ ಇಂತಹದೊಂದು ಅನುಮಾನ ಮೂಡುತ್ತದೆ.

ಹೊಸದಾಗಿ ಮದ್ಯದಂಗಡಿ ಪ್ರಾರಂಭಿಸಲು ಮುಖ್ಯ ಕಾರಣ ‘ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗುತ್ತಿರುವುದು ಮತ್ತು ಜನಸಂಖ್ಯಾಧಾರಿತವಾಗಿ ಮದ್ಯದಂಗಡಿಗಳು ಇಲ್ಲದಿರುವುದು ಹಾಗೂ ಹೆದ್ದಾರಿಗಳಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಲು ಸಾಧ್ಯವಿಲ್ಲದ್ದರಿಂದ ಅಲ್ಲಿ ಅನಧಿಕೃತವಾಗಿ ಮದ್ಯ ಮಾರಾಟವಾ ಗುತ್ತಿರುವುದು’ ಎಂಬ ಅಬಕಾರಿ ಸಚಿವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೆ ಅದನ್ನು ನಿಯಂತ್ರಿಸುವ ಜವಾಬ್ದಾರಿ ಇಲಾಖೆ ಮೇಲಿದೆ. ಮದ್ಯ ಅಕ್ರಮ ಮಾರಾಟ ನಿಯಂತ್ರಣಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು 2020ರ ಡಿಸೆಂಬರ್‌ನಲ್ಲೇ ಹೈಕೋರ್ಟ್‌ ಆದೇಶಿಸಿದೆ. ಆದರೆ ಅದಕ್ಕೆ ಬದಲಾಗಿ ಅಲ್ಲೆಲ್ಲಾ ಹೆಚ್ಚಿನ ಮದ್ಯದಂಗಡಿಗಳನ್ನು ತೆರೆದು ತಾನೇ ಅದರ ಸಂಪೂರ್ಣ ಲಾಭ ಪಡೆಯುವುದು ಉದ್ದೇಶವೆಂದಾದರೆ, ಸಾಮಾಜಿಕ– ಕೌಟುಂಬಿಕ ಸ್ವಾಸ್ಥ್ಯ, ಜನರ ಆರೋಗ್ಯದ ಕುರಿತು ಸರ್ಕಾರಕ್ಕೆ ಹೊಣೆಗಾರಿಕೆಯೇ ಇಲ್ಲವೆ?

ಈಗಿನ ಸರ್ಕಾರವು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಬಗ್ಗೆ ನಾಡಿನ ಹೆಂಗಳೆಯರು ಹೆಮ್ಮೆಪಡುತ್ತಿದ್ದಾರೆ. ಮದ್ಯವಿರೋಧಿ ಆಂದೋಲನವು ಹಂತಹಂತವಾಗಿ ಮದ್ಯನಿಯಂತ್ರಣಕ್ಕೆ, ನಿಷೇಧಕ್ಕೆ ಮುಂದಾಗಬೇಕೆಂದು ಒಂದು ದಶಕದಿಂದ ರಾಜ್ಯದಾದ್ಯಂತ ಚಳವಳಿಯನ್ನು ರೂಪಿಸಿ ಹೋರಾಟ ಮಾಡುತ್ತಿದೆ. ಆದರೆ ಸರ್ಕಾರವು ಅದಕ್ಕೆ ಬದಲಿಗೆ ಹೊಸದಾಗಿ ಸಾವಿರ ಮದ್ಯದಂಗಡಿಗಳನ್ನು ಪ್ರಾರಂಭಿಸಲು ಮುಂದಾಗಿರುವುದು ಖಂಡನೀಯ. ಸರ್ಕಾರಕ್ಕೆ ನಿಜವಾಗಿ ಸಾಮಾಜಿಕ, ಜನಪರ, ಮಹಿಳಾಪರ ಕಾಳಜಿ ಇದ್ದರೆ ಪ್ರಸ್ತಾವವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು.

-ರೂಪ ಹಾಸನ, ಹಾಸನ, ಸ್ವರ್ಣ ಭಟ್, ಮಂಗಳೂರು, ಶಾರದಾ ಗೋಪಾಲ, ಧಾರವಾಡ
ನಂದಿನಿ ಜಯರಾಂ, ಮಂಡ್ಯ, ಡಿ.ನಾಗಲಕ್ಷ್ಮಿ, ಬಳ್ಳಾರಿ

ಕಾವೇರಿ ನೀರು: ವಿವರಣೆ ನೀಡಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದರ ವಿರುದ್ಧ ಕರ್ನಾಟಕದಲ್ಲಿ ಪ್ರತಿಭಟನೆ, ಬಂದ್
ನಡೆಯುತ್ತಿರುವಾಗಲೇ ಅತ್ತ ಕಾವೇರಿ ನೀರು ನಿಯಂತ್ರಣ ಸಮಿತಿಯು ಮತ್ತೆ 18 ದಿನ ನಿತ್ಯವೂ ತಮಿಳುನಾಡಿಗೆ ಮೂರು ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಶಿಫಾರಸು ಮಾಡಿದೆ. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿನ ತೀವ್ರ ಕೊರತೆಯಿದ್ದಾಗ್ಯೂ ಅದು ಇಂತಹ ಶಿಫಾರಸು ಮಾಡಿದೆ. ಕರ್ನಾಟಕದ ಅಣೆಕಟ್ಟು
ಗಳಲ್ಲಿ ನೀರಿನ ಸಂಗ್ರಹದ ಸ್ಥಿತಿಗತಿ ಗೊತ್ತಿದ್ದರೂ ಸಂಬಂಧಿಸಿದ ಸಮಿತಿ ಮತ್ತು ಪ್ರಾಧಿಕಾರವು ಮತ್ತೆ ಮತ್ತೆ ನೀರು ಹರಿಸಲು ಆದೇಶ ಮಾಡುತ್ತಿರುವುದಕ್ಕೆ ಕಾರಣಗಳೇನು? ಇದಕ್ಕೆ ಸಂಬಂಧಿಸಿದ ವಿವರ ಮಾಧ್ಯಮಗಳಲ್ಲಿ ಸಿಗುತ್ತಿಲ್ಲ. ಹೀಗಾಗಿ ಇವು ಏಕಮುಖ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿವೆ ಎಂಬ ಭಾವನೆ ಕರ್ನಾಟಕದ ಜನರಲ್ಲಿ ಉಂಟಾಗುತ್ತಿದೆ. ನೀರು ಹರಿಸುವ ಪ್ರಾಧಿಕಾರದ ಪ್ರತಿ ನಿರ್ಣಯದ ನಂತರ ಅದು ತನ್ನ ಆದೇಶಕ್ಕೆ ವಿವರವಾದ ಕಾರಣಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು.

ವಸ್ತುಸ್ಥಿತಿಯನ್ನು ಆಮೂಲಾಗ್ರವಾಗಿ ವಿವರಿಸಿ ಹೇಳುವ ಕೆಲಸವನ್ನು ಪ್ರಾಧಿಕಾರವಾಗಲೀ, ಸರ್ಕಾರವಾಗಲೀ, ರಾಜಕೀಯ ಪಕ್ಷಗಳಾಗಲೀ ಮಾಡುತ್ತಿಲ್ಲ. ಜನರ ಭಾವನೆಗಳನ್ನು ಉದ್ರೇಕಿಸಿ ಅವುಗಳೊಂದಿಗೆ ಚೆಲ್ಲಾಟವಾಡುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ. ಕಾವೇರಿ ನೀರು ಹರಿಸಲು ಸಂಕಷ್ಟ ಸೂತ್ರ ಇರದಿದ್ದರೆ ಅದಕ್ಕಾಗಿ ಪಕ್ಷಭೇದ ಮರೆತು ಒಕ್ಕೊರಲಿನಿಂದ ಎಲ್ಲರೂ ಒತ್ತಾಯಿಸಬೇಕು. ಅನುಕೂಲಸಿಂಧು ರಾಜಕೀಯ ಹೇಳಿಕೆಗಳಿಂದ ಯಾವ ಸಾಧನೆಯೂ ಆಗದು. ಬಂದ್‌ನಂತಹ ಕ್ರಮಗಳಿಂದ ನಮಗೆ ನಾವೇ ಹಾನಿ ಮಾಡಿಕೊಂಡಂತೆ ಆಗುತ್ತದೆ.

-ವೆಂಕಟೇಶ ಮಾಚಕನೂರ, ಧಾರವಾಡ

ಸರ್ಕಾರಿ ಜಮೀನು ಕಬಳಿಕೆ: ಕಠಿಣ ಕ್ರಮ ಅಗತ್ಯ

‘ಸರ್ಕಾರಿ ಜಮೀನು ಲೆಕ್ಕಪರಿಶೋಧನೆ ರಾಜ್ಯದಾದ್ಯಂತ ನಡೆಯಲಿ’ ಶೀರ್ಷಿಕೆಯ ಸಂಪಾದಕೀಯ (ಪ್ರ.ವಾ., ಸೆ.27) ಮೌಲಿಕವಾಗಿದೆ. ಅರಣ್ಯ ಪ್ರದೇಶ, ಕೆರೆ ಅಂಗಳ, ಗೋಮಾಳಗಳ ಒತ್ತುವರಿ ಹಲವಾರು ವರ್ಷಗಳಿಂದ ನಡೆದಿದೆ. ಬಲಿಷ್ಠ ಕೈಗಳು ಹಣ ಮತ್ತು ಅಧಿಕಾರ ಬಳಸಿಕೊಂಡು ಬೆಲೆಬಾಳುವ ಆಸ್ತಿಗಳನ್ನು ಕಬಳಿಸಿದ್ದಾರೆ. ‘ಮೂಗು ಹಿಡಿದರೆ ಬಾಯಿ ಬಿಡುವಂತೆ’ ಇವರನ್ನು ನಿಯಂತ್ರಿಸಲು ಕಠಿಣವಾದ ಕ್ರಮಗಳು ಅಗತ್ಯ. ಅದಕ್ಕೆ ಇಚ್ಚಾಶಕ್ತಿ ಇರಬೇಕಷ್ಟೇ.  ಕಾಟಾಚಾರಕ್ಕೆ ಎಂಬಂತೆ ಲ್ಯಾಂಡ್‌ ಆಡಿಟ್‌ ಮಾಡಿದರೆ ಅದರಿಂದ ಏನೂ ಪ್ರಯೋಜನವಿಲ್ಲ! 

-ಎಚ್‌.ಎನ್‌.ಕಿರಣ್‌ಕುಮಾರ್‌ ಹಳೇಹಳ್ಳಿ, ಗೌರಿಬಿದನೂರು

ವಂದೇ ಭಾರತ್‌: ವಿನ್ಯಾಸವೊಂದೇ ಹೆಗ್ಗಳಿಕೆ

ಅಬ್ಬರದ ಪ್ರಚಾರದ ನಡುವೆ ಜನ ಏನೇನೋ ಭ್ರಮಿಸಿಕೊಂಡಿರಲು ಸಾಕು. ಸೆ. 22ರಂದು, ಬೆಂಗಳೂರಿನಿಂದ ಧಾರವಾಡಕ್ಕೆ ನನ್ನ ಶ್ರೀಮತಿಯೊಂದಿಗೆ ‘ವಂದೇ ಭಾರತ್‌’ ಮೂಲಕ ಮರಳಿದೆ. ಆದರೆ ಅನುಭವ ಮಾತ್ರ ಕಹಿಯಾಗಿತ್ತು. ಬೆಳಿಗ್ಗೆ 5.45ಕ್ಕೆ ಹೊರಟ ಈ ಐಷಾರಾಮಿ ರೈಲು ಸೂಪರ್ ಫಾಸ್ಟ್ ಎಂದೇ ಭ್ರಮಿಸಿದ್ದೆ. 490 ಕಿ.ಮೀ. ಅಂತರವನ್ನು ಈ ಮಂದಗಮನೆ ಕ್ರಮಿಸಿದ್ದು ಅಖಂಡ ಆರೂವರೆ ತಾಸು. ಅಂದರೆ, ಸರಾಸರಿ 80 ಕಿ.ಮೀ. ವೇಗ! ಧಾರವಾಡ ತಲುಪಿದಾಗ ಮಧ್ಯಾಹ್ನ 12.10. ಕಣ್ಣಿಗೆ ಹಬ್ಬವೆನಿಸುವ ವಿನ್ಯಾಸವೊಂದೇ ಇದರ ಹೆಗ್ಗಳಿಕೆ. ಮೊದಲೇ ಚಳಿ, ಮೇಲೆ ಥರಗುಟ್ಟುವಷ್ಟು ಎ.ಸಿ. ಗಡಗಡ ನಡುಗುವ ಪಾಡು ವೃದ್ಧರದ್ದು. ಮಾಮೂಲಿ ಚಹಾ, ಕಾಫಿ ವ್ಯವಸ್ಥೆ ಕೂಡಾ ಇಲ್ಲ. ಒಂದಿಷ್ಟು ಬಿಸಿನೀರು, ಜೊತೆಗೆ ಏಲಕ್ಕಿ ಪುಡಿಯ ಸ್ಯಾಸೆ. ಉಪಾಹಾರ ಮತ್ತೊಂದು ಅಧ್ವಾನ. ಕಾಯಿ ಚಟ್ನಿ, ಗಟ್ಟಿ ಐಸ್‌ಕ್ರಿಂ! ತಣ್ಣನೆಯ ನಿಸ್ಸಾರ ಸಾಂಬಾರ್, ರಾಗಿ ಮುದ್ದೆಯಂಥ ಉಪ್ಪಿಟ್ಟು... ಒಟ್ಟಾರೆ ಆರೂವರೆ ತಾಸಿನ ಶಿಕ್ಷೆ! ಟಿಕೆಟ್ ದರ ಮಾತ್ರ ಒಬ್ಬರಿಗೆ ₹ 1,300ಕ್ಕೂ ಹೆಚ್ಚು. ಇಂಥದ್ದೊಂದು ಬಿಳಿಯಾನೆ ನಮಗೆ ಬೇಕಿತ್ತೇ?

 -ರಾಮಚಂದ್ರ ಎಸ್.ಕುಲಕರ್ಣಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT