ಶಿಕ್ಷಣ: ಇರಲಿ ರಾಜ್ಯ ಸರ್ಕಾರದ ಸುಪರ್ದಿ
ಮಗುವಿನ ಮುಂದಿನ ವರ್ಷದ ಶಾಲಾ ಸಾರಿಗೆಗಾಗಿ ತಕ್ಷಣ ಹಣ ತುಂಬಬೇಕು, ವರ್ಷದ ಶಾಲಾ ಫೀ ಕೂಡಲೇ ಪಾವತಿಸಬೇಕು ಎಂಬಂಥ ಎಚ್ಚರಿಕೆ ಪತ್ರಗಳು ಶಾಲೆಗಳಿಂದ ಬರತೊಡಗಿವೆ. ‘ಸುಶಿಕ್ಷಿತ’ ಅಪ್ಪ-ಅಮ್ಮ, ‘ಜೀ, ಹುಜೂರ್’ ಎಂದು ಶಿರಸಾವಹಿಸುತ್ತಿದ್ದಾರೆ! ನಮ್ಮ ಕಾಲದಲ್ಲಾ
ದರೋ ಮಧ್ಯಮ ವರ್ಗದ ನಮ್ಮ ಕಲಿಕೆಗೆ ಒಂದೇ ಗುರಿ- ಆಯಾಮ ಇರುತ್ತಿತ್ತು. ಅದು ಕಲಿಕೆ. ಆ ಕಲಿಕೆಯ ಉದ್ದೇಶವು ಜೀವನದ ಗುಣಮಟ್ಟ ಸುಧಾರಿಸುವುದಾಗಿತ್ತು. ಜೀವನಮಟ್ಟ ಎಂಬ ವ್ಯಸನ ಮಧ್ಯಮ ವರ್ಗದವರನ್ನು ಆವರಿಸಿಕೊಂಡಾಗ, ಅದನ್ನು ಜೀವನವೆಚ್ಚದಿಂದ ಅಳೆಯಬಹುದೆಂಬ ಭ್ರಮೆ ಕವಿದುಕೊಂಡಾಗ, ಜೀವನಮೌಲ್ಯ ಕಳೆದುಹೋಯಿತು!
ಶಿಕ್ಷಣ ಎನ್ನುವುದು, ಮಕ್ಕಳನ್ನು ಮನುಷ್ಯರನ್ನಾಗಿ ಪರಿವರ್ತಿಸುವ ತಂತ್ರಜ್ಞಾನ. ನಮ್ಮಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಕಡ್ಡಾಯ ಮತ್ತು ಉಚಿತ. ಶಿಕ್ಷಣವು ಸಂವಿಧಾನದ ‘ಉಭಯತ್ರ’ ಪಟ್ಟಿಯಲ್ಲಿ ಬರುವುದಾದರೂ, ಈ ಹಂತದ ಶಿಕ್ಷಣವು ರಾಜ್ಯ ಸರ್ಕಾರಗಳ ಜವಾಬ್ದಾರಿಯಾದರೆ ಒಳಿತು. ಖಾಸಗಿ ಬಂಡವಾಳಗಾರರು ನಿರ್ಮಿಸಿಕೊಂಡಿರುವ ಮೂಲಸೌಕರ್ಯಗಳನ್ನು ರಾಷ್ಟ್ರೀಕರಣಗೊಳಿಸಿ, ರಾಜ್ಯಗಳಿಗೆ ವಹಿಸಿಕೊಟ್ಟು, ಒಂದರಿಂದ ಹತ್ತನೇ ತರಗತಿವರೆಗಿನ ಶಿಕ್ಷಣವು ಪ್ರಾದೇಶಿಕ ಅಥವಾ ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ, ರಾಜ್ಯ ಸರ್ಕಾರಗಳ ಸ್ವಾಮ್ಯದಲ್ಲೇ ನಡೆಯುವಂತಾಗಬೇಕು. ಬೇಕಾದರೆ, ಕೇಂದ್ರ ಸರ್ಕಾರವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬಹುದು. ಸುಶಿಕ್ಷಿತರ ಪ್ರಜಾಪ್ರಭುತ್ವದಲ್ಲಿ ಇದು ಸಾಧ್ಯ, ಜ್ಞಾನಗೆಟ್ಟ ಅಕ್ಷರಸ್ಥರ ಸಮುದಾಯದಲ್ಲಿ ಅಸಾಧ್ಯ!
ಆರ್.ಕೆ.ದಿವಾಕರ, ಎಚ್.ಕೆ.ವಿವೇಕಾನಂದ, ಬೆಂಗಳೂರು
****
ಇದೇನು ‘ಮಾರ್ಜಾಲ ನೀತಿ’ಯೇ?
‘ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒಂದು ಸಲ ವಿಶ್ವಾಸವಿಟ್ಟು ಬಿಜೆಪಿಗೆ ಬಹುಮತ ಕೊಡಿ. ಕರ್ನಾಟಕದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ ಕೊಡುತ್ತೇವೆ’ ಎಂದು ಗೃಹ ಸಚಿವ ಅಮಿತ್ ಶಾ ಅವರು ಭರವಸೆ ನೀಡಿರುವುದು ವರದಿಯಾಗಿದೆ. (ಪ್ರ.ವಾ., ಫೆ. 24). ‘ನಮಗೆ ಬಹುಮತ ಕೊಡಿ, ಭ್ರಷ್ಟಾಚಾರರಹಿತ ಆಡಳಿತ ಕೊಡುತ್ತೇವೆ’ ಎಂದು ವಿರೋಧ ಪಕ್ಷಗಳು ಹೇಳಬಹುದಾದ ಮಾತನ್ನು ಆಡಳಿತ ಪಕ್ಷವೇ ಹೇಳಿದರೆ, ಈ ಮಾತಿನ ಅರ್ಥ ಏನು? ರಾಜ್ಯದ ಜನತೆ ಈ ಹಿಂದೆ ಬಿಜೆಪಿಗೆ ಹೆಚ್ಚು ಸ್ಥಾನ ನೀಡಿ, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಆಡಳಿತ ಏನಾಗಿತ್ತು? ಈಗಿನ ಅವಧಿಯಲ್ಲಿ ಬಹುಮತ ಕೊಟ್ಟಿದ್ದಿದ್ದರೆ, ಆಪರೇಷನ್ ಕಮಲ ಆಗುತ್ತಿರಲಿಲ್ಲ, ಭ್ರಷ್ಟಾಚಾರವೂ ನಡೆಯುತ್ತಿರಲಿಲ್ಲ ಎಂಬುದು ಈ ಮಾತಿನ ಪರೋಕ್ಷ ಅರ್ಥವೇ? ಅಥವಾ ಭ್ರಷ್ಟಾಚಾರಮುಕ್ತ ಆಡಳಿತ ನಡೆಸಲು ಈಗಿನ ಮತ್ತು ಈ ಹಿಂದಿನ ಅವಧಿಗಳಲ್ಲಿ ಆಗಲಿಲ್ಲ, ಬಹುಮತದೊಂದಿಗೆ ಮತ್ತೆ ಅವಕಾಶ ಕೊಡಿ, ಮುಂದಿನ ದಿನಗಳಲ್ಲಿ ಭ್ರಷ್ಟಾಚಾರರಹಿತ ಆಡಳಿತ ನಡೆಸುತ್ತೇವೆ ಎನ್ನುವುದೇ?
ಯಡಿಯೂರಪ್ಪನವರು ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿದ ಮೇಲೂ ಅವರ ಮೇಲೆ ನಂಬಿಕೆ ಇಡುವುದು ಏನಿದೆ? ಜ್ಞಾನೋದಯವಾಯಿತೆಂದು ತನಗೆ ತಾನೇ ನಿರ್ಧರಿಸಿಕೊಂಡ ಬೆಕ್ಕು, ಇನ್ನು ಮುಂದೆ ಹಿಂಸಾ ಮಾರ್ಗವನ್ನು ತ್ಯಜಿಸಿ ಕಾಶಿ ಯಾತ್ರೆ ಮಾಡುತ್ತೇನೆಂದು ತೀರ್ಮಾನಕ್ಕೆ ಬಂದ ‘ಮಾರ್ಜಾಲ ನೀತಿ’ ಇದಾಗಿದೆಯೇ?
-ತಾ.ಸಿ.ತಿಮ್ಮಯ್ಯ, ಬೆಂಗಳೂರು
****
ಮೌಲ್ಯಾಂಕನ ಪರೀಕ್ಷೆ ಮತ್ತು ಸಮಯಾವಕಾಶ
ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ಈಗ ಮೌಲ್ಯಾಂಕನ ಪರೀಕ್ಷೆಯ ಹವಾ. ಕೆಲ ದಿನಗಳ ಹಿಂದಿನವರೆಗೂ ಮಾದರಿ ಪ್ರಶ್ನೆಪತ್ರಿಕೆಗಾಗಿ ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ಮಕ್ಕಳ ಕೈಗೆ ಅಂತೂ ಇಂತೂ ಅವು ಸೇರಿವೆ. ಆದರೆ ಅದರಲ್ಲಿರುವ ಪ್ರಶ್ನೆಗಳನ್ನು ನೋಡಿದರೆ, ಅವನ್ನು ಮಕ್ಕಳು ಅರ್ಥೈಸಿಕೊಂಡು ಬರೆಯಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಎಂಟನೇ ತರಗತಿಯ ಮಕ್ಕಳು ಹೇಗೋ ಬರೆದಾರು ಎಂದುಕೊಳ್ಳೋಣ. ಐದನೇ ತರಗತಿಯ ಮಕ್ಕಳಲ್ಲಿ ಕೆಲವರು ಬರೆದರೂ ಎಲ್ಲ ಮಕ್ಕಳಿಗೂ ಇದು ಸಾಧ್ಯವೇ ಎನಿಸದೇ ಇರದು. ಏಕೆಂದರೆ ಪಠ್ಯಪುಸ್ತಕದಲ್ಲಿರುವ ಪ್ರಶ್ನೆಗಳಿಗಿಂತ ಹೆಚ್ಚಾಗಿ ಯೋಚಿಸಿ ಬರೆಯುವಂತಹ ಪ್ರಶ್ನೆಗಳೇ ಅದರಲ್ಲಿ ಹೆಚ್ಚಾಗಿವೆ. ಕನ್ನಡ ಪ್ರಶ್ನೆ ಪತ್ರಿಕೆಯನ್ನು ನೋಡಿದಾಗ, ಒಬ್ಬ ಕನ್ನಡ ಶಿಕ್ಷಕಿಯಾಗಿ ನನಗೆ ಖುಷಿಯಾಯಿತು. ಆದರೆ ಎಲ್ಲ ಮಕ್ಕಳೂ ಅಷ್ಟರಮಟ್ಟಿಗೆ ಯೋಚಿಸಿ ಬರೆಯಬಲ್ಲರೇ ಅನಿಸಿತು. ಅದರಲ್ಲೂ ಇಂಗ್ಲಿಷ್ ಮಾಧ್ಯಮ ಶಾಲೆಯ ಮಕ್ಕಳಂತೂ ಕನ್ನಡವನ್ನು ಮೊದಲೇ ಕಬ್ಬಿಣದ ಕಡಲೆ ಎಂದುಕೊಂಡುಬಿಟ್ಟಿರುತ್ತಾರೆ. ಕೆಲವು ಮಕ್ಕಳು ಅಕ್ಷರಗಳನ್ನು ಗುರುತಿಸುವುದಕ್ಕೇ ಒದ್ದಾಡುತ್ತಾರೆ. ಇಂತಹವರು ಪ್ರಶ್ನೆಯನ್ನು ಓದಿಕೊಂಡು ಯೋಚಿಸಿ ಸ್ವಂತ ವಾಕ್ಯಗಳಲ್ಲಿ ಬರೆಯುವುದು ಸುಲಭವೇನಲ್ಲ. ಜೂನ್, ಜುಲೈ ತಿಂಗಳಿನಲ್ಲೇ ಈ ಬಗ್ಗೆ ಮಾಹಿತಿ ನೀಡಿದ್ದರೆ ಮಕ್ಕಳಿಗೆ ಅದೇ ಪ್ರಕಾರ ಅಭ್ಯಾಸ ಮಾಡಿಸಬಹುದಿತ್ತೇನೊ.
ಒಟ್ಟಾರೆ, ಪೂರ್ವಸಿದ್ಧತೆ ಮಾಡಿಕೊಳ್ಳಲು, ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲು ಇನ್ನೂ ಹೆಚ್ಚಿನ ಸಮಯಾವ
ಕಾಶದ ಅಗತ್ಯವಿತ್ತು. ಇದರ ನಡುವೆಯೂ ಮಕ್ಕಳು ಎದೆಗುಂದದೆ ಪರೀಕ್ಷೆಯನ್ನು ಎದುರಿಸಬೇಕು. ಶಾಲೆಗಳಲ್ಲಿ ಮಾಡುವ ಕೊನೆಯ ಹಂತದ ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ತಪ್ಪದೇ ಪಾಲ್ಗೊಳ್ಳಬೇಕು. ಬರೆದು ಅಭ್ಯಾಸ ಮಾಡಿದರೆ ತಪ್ಪುಗಳನ್ನು ತಿದ್ದಿಕೊಳ್ಳಲು, ನಿಗದಿತ ಸಮಯದಲ್ಲಿ ಪರೀಕ್ಷೆ ಬರೆಯುವ ಕ್ರಮ ಅರಿಯಲು ಸಾಧ್ಯವಾಗುತ್ತದೆ.
-ರೇಖಾ, ಹೊಸಪೇಟೆ
****
ಮುಳುಗೇಳಿಸೋ ಮಾದಪ್ಪಾ...!
ವಧು ಭಾಗ್ಯಕ್ಕಾಗಿ ಪ್ರಾರ್ಥಿಸಿ
ನಿನ್ನ ಸನ್ನಿಧಿಗೆ ಪಾದಯಾತ್ರೆ
ಬರುತ್ತಿದ್ದಾರಪ್ಪಾ...
ಸಂಸಾರ ಸಾಗರದಲಿ ಅವರನು
ಮುಳುಗೇಳಿಸೋ ಮಲೆಮಾದಪ್ಪಾ...
ಕುಟುಂಬ ಕಟ್ಟಿಕೊಳ್ಳಲು ಬಯಸಿ
ಬರಿಗಾಲಲೇ ಬೆಟ್ಟ ಹತ್ತಿ ಬರುತಿರುವವರಿಗೆ
ಬಾಳಸಂಗಾತಿಯನು ಕರುಣಿಸಪ್ಪಾ...
ಆಮೇಲೆ ಇದ್ದೇ ಇದೆ ವರ್ಷವರ್ಷ
ಮಕ್ಕಳು ಮರಿಗಳೊಂದಿಗೆ ಬಂದು
ಮುಡಿ ಕೊಡುವುದು,
ಅವರಿಗೆ ಅದುಬೇಕು ಇದುಬೇಕೆಂದು
ನುಡಿಕೇಳುವುದು!
ಸಂಸಾರದ ಸಾರಸ್ವರ
ಇಳಿಯತೊಡಗಿದಂತೆಲ್ಲಾ
ಈ ಸಂಸಾರದಿಂದ ಬಿಡುಗಡೆ ನೀಡಪ್ಪಾ
ಎಂದು ನಿನ್ನನೇ ಬೇಡುವುದು!
ನಿನಗೆ ತಿಳಿಯದುದು ಏನುಂಟಪ್ಪಾ
ಸದ್ಯಕ್ಕೆ ವಧು ಭಾಗ್ಯ ನೀಡಪ್ಪಾ...
-ಜೆ.ಬಿ.ಮಂಜುನಾಥ, ಪಾಂಡವಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.