ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅನುದಾನ ನೀಡಿಕೆ: ಲೋಪ ಆಗಿದ್ದು ಹೇಗೆ?

Published 17 ಮೇ 2024, 0:36 IST
Last Updated 17 ಮೇ 2024, 0:36 IST
ಅಕ್ಷರ ಗಾತ್ರ

ಅನುದಾನ ನೀಡಿಕೆ: ಲೋಪ ಆಗಿದ್ದು ಹೇಗೆ? 

ಬೆಂಗಳೂರಿನಲ್ಲಿ ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಯೊಂದರ ಮಾನ್ಯತೆಯು 2020ರಲ್ಲೇ ರದ್ದಾಗಿದ್ದರೂ ಅದಕ್ಕೆ ₹ 27 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಆದೇಶ ನೀಡಿರುವುದಾಗಿ ವರದಿಯಾಗಿದೆ. ಶಾಲೆಗೆ ಸಂಬಂಧಿಸಿದ ಕಡತವನ್ನು ಸರಿಯಾಗಿ ಪರಿಶೀಲಿಸದೆ, ಮೂರು ವರ್ಷಗಳ ಅನುದಾನ ಬಿಡುಗಡೆಗೆ ಕಾರ್ಯದರ್ಶಿ ಆದೇಶ ನೀಡಿದ್ದಾದರೂ ಹೇಗೆ? ಕೆಳಹಂತದ ಸಿಬ್ಬಂದಿ ಅವರಿಂದ ವಿಷಯವನ್ನು ಮರೆಮಾಚಿದರೇ? ಸಂಬಂಧಿಸಿದ ಇಲಾಖೆಯ ನಿರ್ದೇಶಕರಾದರೂ ಹಣ ಬಿಡುಗಡೆಗೆ ಮುಂದಾಗದೆ, ವಸ್ತುಸ್ಥಿತಿಯನ್ನು ಕಾರ್ಯದರ್ಶಿಯವರ ಗಮನಕ್ಕೆ ತರಬೇಕಾಗಿತ್ತಲ್ಲವೇ? ಇದು ಸಂಬಂಧಿಸಿದ ಎಲ್ಲರ ಕರ್ತವ್ಯಲೋಪ ಆಗುವುದಲ್ಲವೇ?

ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಪ್ರೋತ್ಸಾಹಧನ ನೀಡಿಕೆ ಸ್ವಾಗತಾರ್ಹ

ಸರ್ಕಾರಿ ಶಾಲೆಯಲ್ಲಿ ಓದಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಅಂಕಿತಾ ಕೊಣ್ಣೂರ ಹಾಗೂ ಮೂರನೇ ಸ್ಥಾನ ಪಡೆದ ಮಂಡ್ಯ ಜಿಲ್ಲೆಯ ಕೆ.ಸಿ.ನವನೀತ್‌ ಅವರಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರೋತ್ಸಾಹಧನ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಇಷ್ಟೇ ಅಲ್ಲದೆ ಇವರು ವ್ಯಾಸಂಗ ಮಾಡಿದ ಮುಧೋಳ ತಾಲ್ಲೂಕು ಹಾಗೂ ಮಂಡ್ಯ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಕ್ರಮವಾಗಿ ತಲಾ ₹ 1 ಕೋಟಿ ಹಾಗೂ ₹ 50 ಲಕ್ಷ ಅನುದಾನ ಘೋಷಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಪೋಷಕರು ತಮ್ಮ ಮಕ್ಕಳಿಗೆ ಅತ್ಯುತ್ತಮ ಅಂಕ ಬರಲೆಂದು ಖಾಸಗಿ ಶಾಲೆಗಳಿಗೆ ಸೇರಿಸಲು ಒಲವು ತೋರುತ್ತಾರೆ. ಇಂತಹ ಸಂದರ್ಭದಲ್ಲಿ, ನಾವು ಸರ್ಕಾರಿ ಶಾಲೆಯಲ್ಲಿ ಓದಿದರೂ ಉತ್ತಮ ಸಾಧನೆ ತೋರಬಲ್ಲೆವು ಎಂಬ ಸಂದೇಶವನ್ನು ಈ ವಿದ್ಯಾರ್ಥಿಗಳು ನೀಡಿದ್ದಾರೆ. 

ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಹತ್ತಾರು ಗಂಟೆ ಅಭ್ಯಾಸ ಮಾಡಲೇಬೇಕೆಂದು ಒತ್ತಡ ಹೇರುತ್ತಾರೆ. ಇದರಿಂದಾಗಿ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಬಳಲುತ್ತಾರೆ. ಪರೀಕ್ಷಾ ಸಮಯದಲ್ಲಿ ಹೆಚ್ಚು ಒತ್ತಡ ಹೇರುವ ಬದಲು, ಶಾಲೆ ಪ್ರಾರಂಭದ ದಿನದಿಂದಲೇ ಇಂತಿಷ್ಟು ಗಂಟೆ ಎಂದು ನಿಗದಿ ಮಾಡಿಕೊಂಡು ವ್ಯವಸ್ಥಿತವಾಗಿ ಕಲಿಯುವುದು ಒಳ್ಳೆಯದು ಎಂಬುದನ್ನು ಅಂಕಿತಾಳ ಹೇಳಿಕೆಯಲ್ಲಿ ಗಮನಿಸಬಹುದು.

ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

ಶಿಕ್ಷಕರು ಶಿಕ್ಷಕರಾಗಿ ಉಳಿಯಲಿ

‘ಶಿಕ್ಷಕರ ಮಕ್ಕಳಿಗೇಕೆ ಸರ್ಕಾರಿ ಶಾಲೆ ವರ್ಜ್ಯ?’ ಎಂದು ಶಿವಕುಮಾರ ಬಂಡೋಳಿ ಎಂಬುವರು ಪ್ರಶ್ನಿಸಿದ್ದಾರೆ (ವಾ.ವಾ., ಮೇ 16). ಸರ್ಕಾರಿ ಶಾಲೆಗಳು ಇಂದು ಶಿಕ್ಷಣ ನೀಡುವ ಕೇಂದ್ರಗಳಾಗಿ ಮಾತ್ರ ಉಳಿದಿಲ್ಲ, ಬದಲಿಗೆ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಮಾಹಿತಿಯನ್ನು ಇಲಾಖೆಗೆ ಪೂರೈಸುವ ಕೇಂದ್ರಗಳಾಗಿವೆ ಎಂಬುದು, ಸರ್ಕಾರಿ ಶಾಲೆಯ ಒಬ್ಬ ಶಿಕ್ಷಕನಾಗಿರುವ ನನ್ನ ಅನಿಸಿಕೆ. ಶಿಕ್ಷಕರನ್ನು ಶಿಕ್ಷಣ ನೀಡುವ ಕಾರ್ಯಕ್ಕಷ್ಟೇ ಸೀಮಿತಗೊಳಿಸಿದರೆ, ಕಲಿಕೆಯಲ್ಲಿ ಅವರು ಪವಾಡಗಳನ್ನೇ ಸೃಷ್ಟಿಸಬಲ್ಲರು. ಆದರೆ ಒಬ್ಬ ಶಿಕ್ಷಕನಿಗೆ ನೀಡುತ್ತಿರುವ ಕೆಲಸಗಳಾದರೂ ಏನು? ಸಂತೆಯಿಂದ ತರಕಾರಿ, ಮೊಟ್ಟೆ, ಚಿಕ್ಕಿ ತರುವುದೆಲ್ಲವನ್ನೂ ಆತ ಮಾಡಬೇಕಾಗಿದೆ.

ನನ್ನ ಮಕ್ಕಳಿಗೆ ಸರ್ಕಾರಿ ಸವಲತ್ತುಗಳಲ್ಲೇ ಶಿಕ್ಷಣ ಕೊಡಿಸುತ್ತಿದ್ದೇನೆ. ನನ್ನಂತೆ ಮಕ್ಕಳಿಗೆ ಮನೆಯಲ್ಲಿ ವೈಯಕ್ತಿಕ ಕಾಳಜಿ ನೀಡಲು ಎಲ್ಲ ಶಿಕ್ಷಕರಿಗೂ ಸಮಯ ಇರುವುದಿಲ್ಲ. ಶಿಕ್ಷಕರ ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಓದಬೇಕೇಕೆ? ಎಲ್ಲ ಸರ್ಕಾರಿ ಅಧಿಕಾರಿಗಳು, ಶಾಸಕರು, ಸಂಸದರ ಮಕ್ಕಳೂ ಸರ್ಕಾರಿ ಶಾಲೆಗಳಲ್ಲಿ ಓದುವಂತೆ ಆಗಬೇಕು. ಹಾಗೆಯೇ ಶಿಕ್ಷಕರ ಮೇಲಿನ ಬೇರೆ ಬೇರೆ ಹೊರೆಗಳನ್ನು ಕಡಿಮೆ ಮಾಡಬೇಕು. ಅವರು ಮುಕ್ತವಾಗಿ ಶಿಕ್ಷಣ ಕೊಡುವುದಕ್ಕೆ ಹೆಚ್ಚು ಒತ್ತು ನೀಡಬೇಕು. ಆಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಮತ್ತು ಎಲ್ಲರೂ ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗಲು ಸಾಧ್ಯ.

⇒ಜಗದೀಶ ಎಲ್.ಎಂ., ಹುಬ್ಬಳ್ಳಿ 

ದೇಣಿಗೆಯಿಂದ ದೇಗುಲ ನಿರ್ಮಿಸಿ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಕುಂಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ ₹ 2,000 ನೀಡುತ್ತಿವೆ. ಈ ಹಣ ಆ ಮಹಿಳೆಯರಿಗೆ ಅಮೂಲ್ಯವಾದುದು ಮತ್ತು ಅವರ ಸಬಲೀಕರಣದತ್ತ ಅದು ಮಹತ್ತರವಾದ ಹೆಜ್ಜೆ. ಮಹಿಳೆಯರು ಆರ್ಥಿಕವಾಗಿ ಮುನ್ನಡೆಯಲು, ಮನೆದೂಗಿಸಲು ಅದು ಸಂಜೀವಿನಿಯಂತಹ ದೊಡ್ಡ ಬಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಈ ಹಣವನ್ನು ಕಿತ್ತುಕೊಂಡು ಗುಡಿ ಕಟ್ಟಲು ಮುಂದಾಗಿರುವುದರ ಹಿಂದೆ ಕೆಲವೇ ಕೆಲವು ಅಜ್ಞಾನಿ ಮುಖಂಡರ ಕೈವಾಡ ಇರಬಹುದು. ಬಡವರನ್ನು ಬಡವರಾಗಿಯೇ ಇರಲು ಮಾಡುವ ಈ ಹುನ್ನಾರ ಖಂಡನೀಯ.

ಮಹಿಳೆಯರಿಗೆ ಕೊಡಮಾಡುವ ಹಣ ಹೀಗೆ ಒತ್ತಾಯದ ಮೂಲಕ ಧರ್ಮದ ಹೆಸರಿನಲ್ಲಿ ದುರ್ಬಳಕೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಜೊತೆಗೆ, ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಉಳ್ಳವರಿಂದ ದೇಣಿಗೆ ಸಂಗ್ರಹಿಸಿ ದೇವಸ್ಥಾನಗಳನ್ನು ಕಟ್ಟಿಸುವ ವ್ಯವಸ್ಥೆ ಆಗಲಿ.

⇒ಗಿರಿಯಪ್ಪ ಕೊಳ್ಳಣ್ಣವರ, ತುಮಕೂರು

ತನಿಖೆಯ ದಿಕ್ಕು ತಪ್ಪಿಸುತ್ತಿರುವ ನಾಯಕರು

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್‌ಡ್ರೈವ್‌ ಪ್ರಕರಣವು ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಕೆಲವು ನಾಯಕರು ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ಈ ಪ್ರಕರಣದಲ್ಲಿ ಸಿಲುಕಿರಬಹುದೆಂಬ ಗುಮಾನಿ ಬಲವಾಗತೊಡಗಿದೆ. ಆದರೂ ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುವ ಕೆಲಸ ಮಾತ್ರ ಎಗ್ಗಿಲ್ಲದೇ ಸಾಗಿದೆ. ಪ್ರತಿನಿತ್ಯ ಇವರು ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು ತನಿಖೆಯ ದಿಕ್ಕು ತಪ್ಪಿಸುವಂತಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯು ಕೆಲವರನ್ನು ಬಂಧಿಸುವ ಮೂಲಕ ತನಿಖೆಯನ್ನು ಚುರುಕುಗೊಳಿಸಿದೆಯಾದರೂ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಇಂತಹ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣಗಳಲ್ಲಿ ರಾಜಕೀಯ ನಾಯಕರು ತಮ್ಮ  ಜವಾಬ್ದಾರಿ ಅರಿತು ಮಾತನಾಡಬೇಕು.

ಕೆ.ವಿ.ವಾಸು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT