ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಹೋರ್ಡಿಂಗ್‌ಗಳ ಪರಿಶೀಲನೆ ನಡೆಯಲಿ

Published 14 ಮೇ 2024, 19:07 IST
Last Updated 14 ಮೇ 2024, 19:07 IST
ಅಕ್ಷರ ಗಾತ್ರ

ಹೋರ್ಡಿಂಗ್‌ಗಳ ಪರಿಶೀಲನೆ ನಡೆಯಲಿ

ಮುಂಬೈನಲ್ಲಿ ಭಾರಿ ಮಳೆ, ಗಾಳಿಗೆ ಹೋರ್ಡಿಂಗ್ ಒಂದು ಧರೆಗೆ ಉರುಳಿ 14 ಜನ ಮೃತಪಟ್ಟು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ದುರದೃಷ್ಟಕರ. ದೇಶದ ಕೆಲವು ನಗರಗಳಲ್ಲಿ ಈ ಹಿಂದೆ ಇಂತಹ ಪ್ರಕರಣಗಳು ನಡೆದಿರುವ ನಿದರ್ಶನಗಳಿವೆ. ಆದರೂ ಹೋರ್ಡಿಂಗ್ ಅಳವಡಿಸುವವರು, ನಿಗದಿಪಡಿಸಿದ ಗಾತ್ರಕ್ಕಿಂತ ದೊಡ್ಡ ಗಾತ್ರದ ಹೋರ್ಡಿಂಗ್ ಅಳವಡಿಸುವುದು ಅಥವಾ ಸುರಕ್ಷಾ ಕ್ರಮವನ್ನು ಸರಿಯಾಗಿ ಪಾಲನೆ ಮಾಡದೇ ಹೋರ್ಡಿಂಗ್ ಹಾಕುವುದು ಇಂತಹ ಅವಘಡಗಳಿಗೆ ಕಾರಣ.

ನಮ್ಮ ರಾಜ್ಯದಲ್ಲೂ ಸಂಬಂಧಪಟ್ಟವರು ತಕ್ಷಣ ಕಾರ್ಯಪ್ರವೃತ್ತರಾಗಿ, ಎಲ್ಲಾ ಹೋರ್ಡಿಂಗ್‌ಗಳ ದೃಢತೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜನರ ರಕ್ಷಣೆಗೆ ಮುಂದಾಗಬೇಕು.

ಲಕ್ಷ್ಮಿಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ಸಹಾಯವಾಣಿಯೇ ನೆರವಿಗೆ ಬಾರದಿದ್ದರೆ...!

ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ನಾನು ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವಾಗ, ಎಸ್‌ಎಸ್‌ಎಲ್‌ಸಿ ರಿಜಿಸ್ಟರ್‌ ನಂಬರ್‌ ದಾಖಲಿಸುವ ಸಮಯದಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿದೆ. ಇಂತಹ ರಿಜಿಸ್ಟರ್‌ ನಂಬರಿನ ಯಾವುದೇ ಅಭ್ಯರ್ಥಿ ಇಲ್ಲ ಎಂಬ ಸಂದೇಶ ಸ್ಕ್ರೀನ್‌ ಮೇಲೆ ಬರುತ್ತಿದೆ. ಈ ತೊಂದರೆಯಿಂದ ಮುಂದಿನ ವಿವರಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಇದೇ 10ರಿಂದ ಮೂರು ದಿನಗಳ ಕಾಲ ಟಿಇಟಿಗೆ ಸಂಬಂಧಿಸಿದಂತೆ ನೀಡಲಾಗಿರುವ ಸಹಾಯವಾಣಿ ಸಂಖ್ಯೆಗಳಿಗೆ ನಿರಂತರವಾಗಿ ಕರೆ ಮಾಡಿದರೂ ಯಾರೂ ಕರೆಯನ್ನು ಸ್ವೀಕರಿಸಲಿಲ್ಲ. ಅರ್ಜಿದಾರರಿಗೆ ತೊಂದರೆಯಾದರೆ ಸಹಾಯಕ್ಕೆ ಬರಬೇಕಾದ ಸಹಾಯವಾಣಿ ಸಂಖ್ಯೆಗಳೇ ಕಾರ್ಯನಿರ್ವಹಿಸದಿದ್ದರೆ ಇನ್ನು ಯಾರನ್ನು ಸಂಪರ್ಕಿಸುವುದು?

ಅರ್ಜಿ ಸಲ್ಲಿಸಲು ಇದೇ 15 ಕೊನೆಯ ದಿನಾಂಕ. ಹೀಗಾಗಿ, ನಾನು ಅರ್ಜಿ ಸಲ್ಲಿಸುವಿಕೆಯಿಂದ ವಂಚಿತಳಾಗಬಹುದು ಎಂಬ ಆತಂಕ ಕಾಡುತ್ತಿದೆ. ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವ ಮೂಲಕ, ಇದೇ ರೀತಿ ತೊಂದರೆಗೆ ಒಳಗಾದ ನನ್ನಂತಹ ಹಲವಾರು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಕೋರುತ್ತೇನೆ.

ಗೌರಿ ಉಪ್ಪಿನ, ಹುಬ್ಬಳ್ಳಿ

ಧಾರ್ಮಿಕ ದಬ್ಬಾಳಿಕೆಗೆ ಬೇಕು ಕಡಿವಾಣ

‘ಗೃಹಲಕ್ಷ್ಮಿ’ ಯೋಜನೆಯಡಿ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಹಣವನ್ನು ಕೆಲವು ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯಗಳಿಗೆ ನೀಡುವಂತೆ ಒತ್ತಾಯಪಡಿಸುತ್ತಿರುವುದರ ಕುರಿತು ಮಲ್ಲಿಕಾರ್ಜುನ ಹೆಗ್ಗಳಗಿ ವಿವರಿಸಿದ್ದಾರೆ (ಸಂಗತ, ಮೇ 14). ಹೌದು, ಬರೀ ಗೃಹಲಕ್ಷ್ಮಿ ಯೋಜನೆಯ ಹಣವನ್ನಷ್ಟೇ ಅಲ್ಲದೆ, ಕೆಲವು ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಊರಿನ ಎಲ್ಲ ಮನೆಯವರೂ ಗ್ರಾಮದ ಮುಖಂಡರು ನಿಗದಿಪಡಿಸಿದಷ್ಟು ಹಣವನ್ನು ನೀಡಲೇಬೇಕೆಂಬ ಷರತ್ತನ್ನು ವಿಧಿಸಲಾಗುತ್ತಿದೆ. ಇದರಿಂದ, ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಬಡವರನ್ನು ಶೋಷಣೆ ಮಾಡಿದಂತೆ ಆಗುತ್ತಿದೆ.

ನಮ್ಮ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಪ್ರಕಾರ, ಗುಡಿ ಗೋಪುರಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಬಡವರಿಂದಲೂ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸಿ ಅವುಗಳನ್ನು ನಿರ್ಮಾಣ ಮಾಡಬೇಕೆಂಬ ಉಲ್ಲೇಖ ಇಲ್ಲ. ಈ ಕುರಿತು ಸರ್ಕಾರ ಶೀಘ್ರವಾಗಿ ಗಮನಹರಿಸಿ, ಕಾನೂನು ಕ್ರಮ ಕೈಗೊಳ್ಳಬೇಕು.

 ಅಂಬಿಕಾ ಬಿ.ಟಿ., ಹಾಸನ

ಸೌಹಾರ್ದದ ಮಾದರಿ ನಡೆ

ಜಮ್ಮು– ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ದೇವಸ್ಥಾನಕ್ಕೆ ಹೋಗಲು ಅಗತ್ಯವಿರುವ ರಸ್ತೆ ನಿರ್ಮಾಣಕ್ಕಾಗಿ ಮುಸ್ಲಿಂ ಸಮುದಾಯದ ಕುಟುಂಬವೊಂದು ಫಲವತ್ತಾದ ಮುಕ್ಕಾಲು ಎಕರೆಯಷ್ಟು ಜಮೀನನ್ನು ದೇಣಿಗೆ ನೀಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 14). ಜಮ್ಮು– ಕಾಶ್ಮೀರಕ್ಕೆ ಸಂಬಂಧಿಸಿದಂತೆ ಹಿಂಸೆ,
ರಕ್ತಪಾತದಂತಹ ಸುದ್ದಿಗಳನ್ನೇ ಹೆಚ್ಚಾಗಿ ಓದುತ್ತಿದ್ದ ನಮಗೆ, ಈ ಸುದ್ದಿ ಓದಿ ಸಂತೋಷವಾಯಿತು. ಇದು, ಆ ಪ್ರದೇಶದಲ್ಲಿ ಎರಡೂ ಧರ್ಮದವರ ಸಾಮರಸ್ಯದ ಜೀವನಕ್ಕೆ ನಿದರ್ಶನವಾಗಿದೆ. ಸೌಹಾರ್ದದ ಈ ಬಗೆಯ ಕೊಂಡಿಗಳನ್ನು ಬೆಸೆಯುವ ಕೆಲಸ ಆಗಬೇಕು. ಸ್ಥಳೀಯರ ಬದುಕನ್ನು ಸಹಜವೂ ಸಹನೀಯವೂ ಆಗಿಸುವ ದಿಸೆಯಲ್ಲಿ ಸರ್ಕಾರ ಹೆಚ್ಚು ಗಮನಹರಿಸಬೇಕು.

 ಎಚ್‌.ಎನ್‌.ಕಿರಣ್ ಕುಮಾರ್‌, ಗೌರಿಬಿದನೂರು 

ಬಳೆ ದೌರ್ಬಲ್ಯದ ಸಂಕೇತವಲ್ಲ

ನಮ್ಮ ರಾಜಕಾರಣಿಗಳು ಬಳೆ ಸಂಸ್ಕೃತಿಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ‘ನಾವು ಬಳೆ ತೊಟ್ಟಿಲ್ಲ, ತೊಡಿಸುತ್ತೇವೆ’, ‘ನಮ್ಮಲ್ಲಿ ಸಾಕಷ್ಟು ಬಳೆ ಇಲ್ಲ’ ಎಂಬಂತಹ ಅವರ ಹೇಳಿಕೆಗಳನ್ನು ಗಮನಿಸಿದರೆ, ನಮ್ಮ ಸಂಸ್ಕೃತಿಯನ್ನು ನಾವೇ ಅಪಮಾನ ಮಾಡುತ್ತಿರುವಂತೆ ತೋರುತ್ತದೆ. ನಮ್ಮ ದೇಶದಲ್ಲಿ ಬಳೆಯನ್ನು ಬಹುಪಾಲು ಮಹಿಳೆಯರು ಧರಿಸುತ್ತಾರೆ. ಬಳೆಯು ನಮ್ಮ ಪರಂಪರೆ, ಸಂಪ್ರದಾಯದ ಭಾಗ ಕೂಡ ಆಗಿದೆ.

ಬಳೆ ತೊಟ್ಟಿಲ್ಲ ಎನ್ನುವುದನ್ನು ನಿಶ್ಶಕ್ತಿ, ದೌರ್ಬಲ್ಯದ ಸಂಕೇತವಾಗಿ ಬಳಸುವ ಮೂಲಕ, ಈ ಆಧುನಿಕ ಕಾಲದಲ್ಲಿ ಲಿಂಗತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ ಪ್ರಭಾವಿ ನಾಯಕರು ತಮ್ಮ ಮಾತಿನ ಮೇಲೆ ನಿಗಾ ವಹಿಸುವುದು ಒಳಿತು.

 ರಾಜೇಶ್ ಆರ್., ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT