ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅರಿಯಬೇಕಿದೆ ಬಾಲಕಿಯರ ಸಾಮರ್ಥ್ಯ

Published 10 ಆಗಸ್ಟ್ 2023, 23:32 IST
Last Updated 10 ಆಗಸ್ಟ್ 2023, 23:32 IST
ಅಕ್ಷರ ಗಾತ್ರ

ಅರಿಯಬೇಕಿದೆ ಬಾಲಕಿಯರ ಸಾಮರ್ಥ್ಯ

ಗ್ರಾಮೀಣ ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿ– 2022 ಎಂಬ ಸಮೀಕ್ಷಾ ವರದಿಯೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿ, ದೇಶದ ಗ್ರಾಮೀಣ ಪ್ರದೇಶದ ಬಾಲಕಿಯರ ಪಾಲಕರ ಪೈಕಿ ಶೇ 78ರಷ್ಟು ಮಂದಿ ತಮ್ಮ ಪುತ್ರಿಯರು ಕನಿಷ್ಠಪಕ್ಷ ಪದವಿ ಇಲ್ಲವೇ ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆಯಬೇಕು ಎಂಬ ಬಯಕೆ ಹೊಂದಿರುವ ಅಂಶ ತಿಳಿದುಬಂದಿದೆ. ಇದು ಹೆಮ್ಮೆಪಡುವಂತಹ ಸಂಗತಿ.

ಆದರೆ ಉಳಿದ ಶೇ 22ರಷ್ಟು ಪಾಲಕರ ಕಥೆ ಹೇಗಿರಬಹುದು? ಮಗಳ ಆಸೆ-ಆಕಾಂಕ್ಷೆ ಕೇಳದೆ ಮದುವೆ ಮಾಡಿರಬಹುದು. ಅನ್ಯರ ಉದಾಹರಣೆ ಕೊಟ್ಟು, ತಮ್ಮ ಮಗಳ ಸಾಮರ್ಥ್ಯ ತಿಳಿಯದೆ ಶಾಲೆ ಬಿಡಿಸಿರಬಹುದು. ಹೆಚ್ಚಿಗೆ ಕಲಿಸಿದರೆ ನಮಗೇನು ಲಾಭ, ಗಂಡನ ಮನೆಗೆ ಲಾಭ ಎಂದು ಕೆಟ್ಟದಾಗಿ ಚಿಂತಿಸಿರಬಹುದು. ಇನ್ನೂ ಕಲಿಸಲು ಹಣದ ಅಭಾವ ಕಾಡಿರಬಹುದು. ಶಾಲೆಯಲ್ಲಿ ಸಹಪಾಠಿ ಹುಡುಗನನ್ನು ಮಾತನಾಡಿಸಿದ್ದಕ್ಕೆ ಅಥವಾ ಸಣ್ಣ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಹುಂಬರಂತೆ ರೇಗಿ ಶಾಲೆಯಿಂದ ದೂರ ಮಾಡಿರಬಹುದು. ಹೇಳಲು ಇನ್ನೂ ಅನೇಕ ಕಾರಣಗಳಿವೆ. ಒಟ್ಟಾರೆ, ಗ್ರಾಮೀಣ ಭಾಗದಲ್ಲಿ ಗಂಡಿಗಿಂತ ಹೆಣ್ಣೇ ಹೆಚ್ಚು ಶಿಕ್ಷಣ ವಂಚಿತಳಾಗುತ್ತಿರುವುದು ಸುಳ್ಳಲ್ಲ.

ಬಸನಗೌಡ ಮಂಜುನಾಥಗೌಡ ಪಾಟೀಲ, ಯರಗುಪ್ಪಿ

ಗಿಡ ಪೋಷಣೆ: ಉತ್ತಮ ಸೂತ್ರ

ಕೆರೆ ದಂಡೆಯಲ್ಲಿ ಎರಡು ಗಿಡಗಳನ್ನು ನೆಟ್ಟು, ನಾಲ್ಕು ವರ್ಷ ಉತ್ತಮ ರೀತಿಯಲ್ಲಿ ಪೋಷಿಸುವ ವಿದ್ಯಾರ್ಥಿಗಳಿಗೆ ಪದವಿ ಅಂತಿಮ ಪರೀಕ್ಷೆಯಲ್ಲಿ ಐದು ಅಂಕಗಳನ್ನು ನೀಡಲು ಶಿರಸಿಯ ಅರಣ್ಯ ಮಹಾವಿದ್ಯಾಲಯ ಮುಂದಾಗಿರುವುದು ಉತ್ತಮ ನಿರ್ಧಾರ. ಅಂಕ ಪಡೆಯುವ ಉದ್ದೇಶದಿಂದಾದರೂ ವಿದ್ಯಾರ್ಥಿಗಳು ಗಿಡ ನೆಟ್ಟು ಪೋಷಿಸುತ್ತಾರೆ. ಪರಿಸರದ ಬಗ್ಗೆ ಆಸಕ್ತಿ ಮೂಡಲು ಈ ಉಪಕ್ರಮವು ಸಹಕಾರಿ. ಎಲ್ಲ ವಿಶ್ವವಿದ್ಯಾಲಯಗಳೂ ಈ ರೀತಿಯ ಹೊಸ ಹೊಸ ಆಯಾಮಗಳಿಂದ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿಸುವತ್ತ ಚಿಂತಿಸಬೇಕು. ವಿದ್ಯೆಗೆ ಕೊನೆಯೆಲ್ಲಿ? 

ಬಾಲಕೃಷ್ಣ ಎಂ.ಆರ್., ಬೆಂಗಳೂರು

ಸಾಹಿತ್ಯ ಸಮ್ಮೇಳನ ಆಡಂಬರದ ಜಾತ್ರೆಯಾಗದಿರಲಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತೀಚಿನ ವರ್ಷಗಳಲ್ಲಿ ಆಡಂಬರದ ಜಾತ್ರೆಯಂತೆ ಆಗುತ್ತಿರುವುದು ವಿಷಾದಕರ. ಸಮ್ಮೇಳನದಲ್ಲಿ ನಡೆಯುವ ಭಾಷಣ, ವಿಚಾರ ಸಂಕಿರಣದಲ್ಲಿ ಹೊಸ ವಿಚಾರಗಳಿಲ್ಲದೆ ಅವು
ಚರ್ವಿತಚರ್ವಣದಿಂದ, ನೀರಸ ವಿಚಾರಗಳಿಂದ ಕೂಡಿರುತ್ತವೆ. ಹೀಗಾಗಿ ಜನರು ಅವುಗಳಿಂದ ಪ್ರಭಾವಿತರಾಗಿ ಪುಳಕಿತಗೊಳ್ಳುವುದಿಲ್ಲ. ಇದರಿಂದ ಸಮ್ಮೇಳನಗಳು ಕಾಟಾಚಾರಕ್ಕೆ ಜರುಗುತ್ತವೆ ಎಂಬ ಭಾವನೆ ಮೂಡುತ್ತದೆ. ಕೆಲವು ವರ್ಷಗಳ ಹಿಂದಿನವರೆಗೂ ಸಮ್ಮೇಳನಗಳು ಭಾಷಾಭಿಮಾನ, ನಾಡು ಕಟ್ಟುವ ಅಂತಃಸತ್ವವನ್ನು ಹೊಂದಿದ್ದವು. ಆದ್ದರಿಂದ ಅಂದಿನ ಸಮ್ಮೇಳನಗಳಿಗೆ ಕನ್ನಡಿಗರು ಅಭಿಮಾನಾಸಕ್ತಿಯಿಂದ ಸದಸ್ಯತ್ವವನ್ನು ಪಡೆದು ಭಾಗಿಗಳಾಗಿ ಧನ್ಯರಾಗುತ್ತಿದ್ದರು.

ಇಂದಿನ ಕನ್ನಡಿಗರು ಇಂತಹ ಸಾಹಿತ್ಯ ಸಮ್ಮೇಳನಗಳ ಬಗೆಗೆ ನಿರಾಸಕ್ತಿಯನ್ನು ಹೊಂದಿರುವಂತಿದೆ. ಸಮ್ಮೇಳನದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಇದಕ್ಕೆ ನಿದರ್ಶನ. ಇನ್ನು ಮುಂದೆ ಸಮ್ಮೇಳನಗಳು ಆಡಂಬರದ ಜಾತ್ರೆಯಾಗದಂತೆ ಎಚ್ಚರ ವಹಿಸುವುದು ಎಲ್ಲರ ಆದ್ಯ ಕರ್ತವ್ಯ.

ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ಜನಪ್ರತಿನಿಧಿಗಳಿಗೇಕೆ ಇಷ್ಟೊಂದು ನಿರಾಸಕ್ತಿ?

ಸಂಸದರ ನಿಧಿಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಹಿಂದಿನ ಮೂರು ವರ್ಷಗಳಲ್ಲಿ ನಮ್ಮ ರಾಜ್ಯದವರೂ ಸೇರಿದಂತೆ ಕೆಲವು ಸಂಸದರು ಕೇಂದ್ರಕ್ಕೆ ಯಾವುದೇ ಶಿಫಾರಸು ಸಲ್ಲಿಸದಿರುವ ಕುರಿತ ವರದಿ (ಪ್ರ.ವಾ., ಆ. 10) ಓದಿ ಒಂದು ಕಡೆ ಆಶ್ಚರ್ಯವಾದರೆ, ಮತ್ತೊಂದು ಕಡೆ ಬೇಸರವಾಯಿತು. ಜನಪ್ರತಿನಿಧಿಗಳಲ್ಲಿ ಏಕೆ ಇಷ್ಟೊಂದು ನಿರಾಸಕ್ತಿ? ಜನೋಪಯೋಗಿ ಕಾರ್ಯಗಳನ್ನು ಮಾಡಲು ಆಸಕ್ತಿ ಇಲ್ಲದಿದ್ದರೆ ಚುನಾವಣೆಗೆ ಸ್ಪರ್ಧಿಸುವುದಾದರೂ ಏಕೆ? ಸಾರ್ವಜನಿಕ ಜೀವನವನ್ನು ಬಯಸುವುದಾದರೂ ಏಕೆ? ತಮ್ಮ ತಮ್ಮ ಉದ್ಯೋಗ, ವ್ಯವಹಾರಗಳನ್ನು ನೋಡಿಕೊಂಡು ಇರಬಹುದಲ್ಲವೇ?

ತಮಗೆ ಸಮಯ ಇಲ್ಲದಿದ್ದರೆ, ನಂಬಿಕೆಗೆ ಅರ್ಹರಾದ, ಸಾಮಾಜಿಕ ಕಳಕಳಿಯುಳ್ಳ ತಮ್ಮ ಆಪ್ತ ಅನುಯಾಯಿಗಳಿಗಾದರೂ ಸೂಚಿಸಿದರೆ, ಅವರು ಉಪಯುಕ್ತ ರೀತಿಯಲ್ಲಿ ನಿಧಿ ಬಳಕೆಯಾಗುವಂತೆ ನೋಡಿಕೊಳ್ಳಬಹುದು. ಅದುಬಿಟ್ಟು ಅನುದಾನವನ್ನು ವೃಥಾ ವ್ಯರ್ಥ ಮಾಡುವುದರಲ್ಲಿ ಯಾವ ಪ್ರಯೋಜನವಿದೆ? ಬರೀ ಅನವಶ್ಯಕ ವಿಚಾರಗಳಿಗೆ ತಲೆತೂರಿಸಿ ಕಾಲಹರಣ ಮಾಡುವ ಸಂಸದರಿಗೆ ವಾರ್ಷಿಕ ₹ 5 ಕೋಟಿ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಲು ಸಮಯವಿಲ್ಲವೇ ಅಥವಾ ಮನಸ್ಸಿಲ್ಲವೇ? ಅಂತಹವರಿಗೆ ಮತ್ತ್ಯಾವ ಘನ ಉದ್ದೇಶ ಇರುತ್ತದೆ? ತಮಗೆ ಆಸಕ್ತಿ ಇಲ್ಲದಿದ್ದರೆ ಆಸಕ್ತಿ ಇರುವವರಿಗಾದರೂ ಅವರು ಅವಕಾಶ ಮಾಡಿಕೊಡಲಿ.

ಟಿ.ವಿ.ಬಿ.ರಾಜನ್, ಬೆಂಗಳೂರು

ಶಕ್ತಿ ಯೋಜನೆ: ಮೀಸಲಾತಿ ಪಾಲನೆಯಾಗಲಿ

‘ಶಕ್ತಿ’ ಯೋಜನೆಯನ್ನು ಆರಂಭಿಸುವಾಗ, ಸರ್ಕಾರಿ ಬಸ್‌ಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿರಿಸುವುದಾಗಿ ಸಾರಿಗೆ ಸಚಿವರು ಹೇಳಿದ್ದರು. ಆದರೆ ಅತಿ ಹೆಚ್ಚು ಮಹಿಳೆಯರು ಪ್ರಯಾಣಿಸುತ್ತಿರುವುದರಿಂದ ಈ ಮೀಸಲಾತಿ ಪಾಲನೆಯಾಗದೆ, ಬಹಳಷ್ಟು ಪುರುಷರು ನಿಂತುಕೊಂಡೇ ಪ್ರಯಾಣಿಸಬೇಕಾಗಿದೆ. ಹಿರಿಯ ನಾಗರಿಕರು, ಅಂಗವಿಕಲರಿಗೆ ಮೀಸಲಿರಿಸಿದ ಆಸನಗಳನ್ನೂ ಮಹಿಳಾ ಪ್ರಯಾಣಿಕರೇ ಆಕ್ರಮಿಸಿಕೊಳ್ಳುವುದರಿಂದ, ವಯೋಸಹಜ ಆರೋಗ್ಯ ಸಮಸ್ಯೆಗಳಿರುವ ಹಿರಿಯ ನಾಗರಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಒಂದು ವೇಳೆ ಸೀಟುಗಳು ಖಾಲಿ ಇದ್ದಲ್ಲಿ ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು ಎಂಬ ನಿರ್ದೇಶನವನ್ನು ಇಲಾಖೆಯು ನೀಡಬೇಕಾಗಿದೆ.

ಜಿ.ನಾಗೇಂದ್ರ ಕಾವೂರು, ಸಂಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT