ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ ಗೃಹ ಯೋಜನೆ: ಸಮಯ ವ್ಯರ್ಥ ಸಲ್ಲದು

Last Updated 13 ಆಗಸ್ಟ್ 2021, 18:55 IST
ಅಕ್ಷರ ಗಾತ್ರ

ಸೌರ ಗೃಹ ಯೋಜನೆಯಡಿ ಗ್ರಾಹಕರು ಸೌರ ವಿದ್ಯುತ್‌ ಚಾವಣಿ ಅಳವಡಿಸಿಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಆ. 9.) ಸೌರ ಗೃಹ ಯೋಜನೆಯು 2020ರ ಮಾರ್ಚ್‌ನಲ್ಲೇ ಆರಂಭವಾಗಿತ್ತು. ಸುಮಾರು 1,200 ಗ್ರಾಹಕರು ಆಗಲೇ ನೋಂದಾಯಿಸಿದ್ದರೂ ಇದುವರೆಗೂ ಗ್ರಾಹಕರಿಗೆ ಇದರ ಪ್ರಯೋಜನ ದಕ್ಕಿಲ್ಲ. ಏಕೆಂದರೆ, ಬೆಸ್ಕಾಂ ‘ಅಡುಗೆಯಿಲ್ಲದೆ ಊಟಕ್ಕೆ ಇಟ್ಟಂತೆ’ ತಯಾರಿಯೇ ಇಲ್ಲದೆ ಗ್ರಾಹಕರನ್ನು ಆಹ್ವಾನಿಸಿ ಒಂದೂವರೆ ವರ್ಷದಿಂದ ಗ್ರಾಹಕರ ಅಪಹಾಸ್ಯಕ್ಕೀಡಾಗಿದೆ. ಸುಮಾರು 250 ಗ್ರಾಹಕರು ಈಗಾಗಲೇ ತಮ್ಮ ಅರ್ಜಿಗಳನ್ನು ವಾಪಸ್ ಪಡೆದಿದ್ದಾರೆ. ಇದಕ್ಕೆ ಕಾರಣ, ಸ್ಥಾಪನಾ ಸಂಸ್ಥೆಗಳ ಆಯ್ಕೆಯ ವಿಚಾರದಲ್ಲಿ ಬೆಸ್ಕಾಂ ಮಾಡಿದ ಎಡವಟ್ಟು.

ಸೌರ ಯೋಜನೆಗಳಿಗೆ 2008ರಲ್ಲೇ ಬೆಸ್ಕಾಂ ಒತ್ತು ಕೊಟ್ಟಿದೆಯೆಂದು ವರದಿ ತಿಳಿಸಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು 2013ರಲ್ಲಿ ಸೌರವಿದ್ಯುತ್ತಿಗೆ ಬೆಲೆ ನಿಗದಿ ಮಾಡಿತು. ರಾಜ್ಯದ ಮೊದಲನೇ ಸೌರಸ್ಥಾವರವನ್ನು ಅಳವಡಿಸಲು ನಾನು ಪಟ್ಟ ಪಾಡು ಹೇಳತೀರದು. 2013ರ ಅಕ್ಟೋಬರ್‌ನಲ್ಲೇ ಬೆಸ್ಕಾಂಗೆ ಅರ್ಜಿ ಕೊಟ್ಟರೂ 2014ರ ನವೆಂಬರ್‌ವರೆಗೂ ಕಾಯಬೇಕಾಯಿತು. ಸರ್ಕಾರವು ಗೃಹ ಸೌರ ಸ್ಥಾವರದ ಅಳವಡಿಕೆಗೆ ಒತ್ತು ಕೊಟ್ಟರೂ ‘ದೇವರು ಕೊಟ್ಟರೂ ಪೂಜಾರಿ ಕೊಡ’ ಎಂಬಂತೆ, ಬೆಸ್ಕಾಂ ಕಚೇರಿಗಳಲ್ಲಿ ಗುಪ್ತಗಾಮಿನಿಯಂತೆ ಸೌರ ಘಟಕಕ್ಕೆ ದಿನನಿತ್ಯವೂ ಸಮಸ್ಯೆಗಳನ್ನು ಅಧಿಕಾರಿಗಳು ಹುಟ್ಟುಹಾಕುತ್ತಿದ್ದಾರೆ. 2020ರ ಮಾರ್ಚ್‌ನಿಂದ ಅಕ್ಟೋಬರ್‌ ವರೆಗೂ ದೊಡ್ಡ ಘಟಕದ ಒಂದೇ ಒಂದು ಸಂಪರ್ಕವನ್ನೂ ಸ್ಥಾಪಿಸಲು ಅನುಮತಿ ಕೊಡದೆ, 20ಕ್ಕೂ ಹೆಚ್ಚು ಸ್ಥಾವರಗಳ ಬಂಡವಾಳಕ್ಕೆ ಧಕ್ಕೆ ತಂದಿದ್ದಲ್ಲದೆ, 2022ಕ್ಕೆ 40 ಗಿಗಾವಾಟ್‌ಗಳ ಗುರಿಯ ನೆನಪೇ ಇಲ್ಲದೆ ಸಮಯ ವ್ಯರ್ಥ ಮಾಡುತ್ತಿರುವುದು ವಿಷಾದನೀಯ.

ರಘುನಂದನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT