ಸೋಮವಾರ, ಆಗಸ್ಟ್ 2, 2021
19 °C

ಶೋಭೆ ತಾರದ ನಾಯಕರ ನಡವಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಆಡಳಿತಾರೂಢ ಪಕ್ಷದಲ್ಲಿ ‘ಮುಖ್ಯಮಂತ್ರಿ’ ಕುರ್ಚಿಗಾಗಿ ನಡೆದಿರುವ ಮೇಲಾಟಕ್ಕೆ ಇತಿಶ್ರೀ
ಹಾಡಲು, ಕೋವಿಡ್ ದುರಿತ ಕಾಲದಲ್ಲಿ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್‍ ಸಿಂಗ್ ‘ಬಳೆಗಾರ ಚನ್ನಯ್ಯ’ನಂತೆ ಬೆಂಗಳೂರಿನ ಕುಮಾರಕೃಪಾಕ್ಕೆ ಮೊನ್ನೆ ಬಂದಿಳಿದರು. ಈ ಸಂದರ್ಭದಲ್ಲಿ ನೆರೆದಿದ್ದ ಸಚಿವರು, ಶಾಸಕರು, ಎಲ್ಲಕ್ಕಿಂತ ಹೆಚ್ಚಾಗಿ ‘ಮುಖ್ಯಮಂತ್ರಿ’ ಆಕಾಂಕ್ಷಿಗಳು ಕೋವಿಡ್‌ ನಿಯಮಗಳ ಬಗ್ಗೆ ತಿಳಿವಳಿಕೆ ಇಲ್ಲದವರಂತೆ ವರ್ತಿಸಿದ್ದನ್ನು ಮಾಧ್ಯಮಗಳಲ್ಲಿ ಕಂಡು ಆಶ್ಚರ್ಯವಾಯಿತು. ಕೋವಿಡ್ ಮಾರ್ಗಸೂಚಿಗಳನ್ನು ಹೊರಡಿಸಿದ್ದು ಇದೇ ನೀತಿಯ ಭೀತಿಯಿಲ್ಲದ ಸರ್ಕಾರವಲ್ಲವೇ? ಹಗಲಿನಲ್ಲಿ ಊರಿಗೆಲ್ಲ ‘ಆಚಾರ’ ಹೇಳುವ ಈ ಪ್ರಭುತ್ವ, ರಾತ್ರಿಯ ತೆರೆಮರೆಯಲ್ಲಿ ‘ಬದನೆಕಾಯಿ’ ತಿಂದು ತೇಗಿದಂತೆ ಅಂತರ ಪಾಲಿಸದೆ ‘ಕುಮಾರಕೃಪಾ’ದಲ್ಲಿ ನೆರೆದಿದ್ದುದು ಸರಿಯೇ? ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ಇವರ ಮೇಲೆ ಯಾರು ಪ್ರಕರಣ ದಾಖಲಿಸಬೇಕು? ಇವರ ಈ ನಡೆಯು ‘ಅಧಿಕಾರದ ಲಾಲಸೆಗಾಗಿ ಜೀವದ ಆಸೆಯನ್ನೇ ಬಿಡಬೇಕು’ ಎಂಬ ಸಂದೇಶವನ್ನು ಭವಿಷ್ಯದ ಯುವ ರಾಜಕಾರಣಿಗಳಿಗೆ ನೀಡುವಂತಿದೆ!

ಒಂದೆಡೆ, ನಾಡಿನಲ್ಲಿ ಬದುಕುವುದಕ್ಕಾಗಿ ಹೋರಾಟ ನಡೆಸುತ್ತಿರುವ ಜನರ ಆಕ್ರಂದನ, ಪ್ರೀತಿಪಾತ್ರರನ್ನು ಕಳೆದುಕೊಂಡ ಮುಗ್ಧ ಮಕ್ಕಳ ಕಣ್ಣೀರ ಕೋಡಿ. ಇನ್ನೊಂದೆಡೆ, ಸ್ವಾರ್ಥ ರಾಜಕಾರಣಕ್ಕಾಗಿ ಹಪಹಪಿ. ಕೊರೊನೋತ್ತರ ಜನರ ಸಂಕಟಗಳಿಗೆ ಸ್ಪಂದಿಸಬೇಕಾದ ಹೊತ್ತಿನಲ್ಲಿ ಪ್ರಮುಖ ನಾಯಕರು ಹೀಗೆ ವರ್ತಿಸುತ್ತಿರುವುದು ಶೋಭೆ ತರುವಂತಹದ್ದಲ್ಲ.

- ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.