ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆಗೂ ಬೇಕು ವಿಲೀನ ಪ್ರಕ್ರಿಯೆ

Last Updated 8 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ವಸತಿ ಶಾಲೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿಲ್ಲವೆಂಬ ಕಾರಣಕ್ಕೆ, ಅರ್ಜಿ ಸಲ್ಲಿಕೆ ದಿನಾಂಕವನ್ನು ಇತ್ತೀಚೆಗೆ ಮುಂದೂಡಲಾಗಿದೆ. ಉಚಿತ ಶಿಕ್ಷಣ ಮತ್ತು ವಸತಿ ಸೌಕರ್ಯ ನೀಡಿದರೂ
ವಿದ್ಯಾರ್ಥಿಗಳೇಕೆ ಇತ್ತ ಮುಖ ಮಾಡುತ್ತಿಲ್ಲ ಎಂದು ಆಲೋಚಿಸಿದಾಗ ಹಲವು ಸಾಧಕ- ಬಾಧಕಗಳು ಕಣ್ಣ ಮುಂದೆ ಬಂದವು. ಪ್ರಸ್ತುತ ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ನವೋದಯ ವಸತಿ ಶಾಲೆ, ಏಕಲವ್ಯ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಮುಂತಾದ ಉಚಿತ ವಸತಿ ಶಾಲೆಗಳಿವೆ.

ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಇವು ನಡೆಯುತ್ತವೆ. ಸರ್ಕಾರದ ಯೋಜನೆಗಳು ಕೆಲವೊಮ್ಮೆ ಪರಸ್ಪರ ಮುಳುವಾಗುತ್ತವೆ. ಈ ವಿಚಾರದಲ್ಲಿ ಹೇಳುವುದಾದರೆ, ಮೊದಲನೆಯದಾಗಿ ಈ ಶಾಲೆಗಳು ಶುರು ವಾಗುವುದೇ ಆರನೇ ತರಗತಿಯಿಂದ. ಸಾಮಾನ್ಯವಾಗಿ ಇವುಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಆಗಿರುತ್ತಾರೆ. ಇವರು ವಸತಿ ಶಾಲೆಗಳಿಗೆ ಹೊರಟುಹೋದರೆ ತಮ್ಮಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ, ಇದರಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವಂತಾದರೆ ಇಲಾಖೆ ವರ್ಗಾವಣೆ ಮಾಡುವ ಕಡೆ ಹೋಗಬೇಕಾಗುತ್ತದೆ ಎನ್ನುವ ಆತಂಕ ಸರ್ಕಾರಿ ಶಾಲೆಗಳ ಶಿಕ್ಷಕರದ್ದು. ಇದು, ಕೆಲವೊಮ್ಮೆ ಅವರು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆಯ ವಿಷಯ ತಿಳಿಸದೇ ಇರಲು ಕೂಡ ಕಾರಣವಾಗಿರುತ್ತದೆ.

ಇನ್ನು, ಮೊದಲೆಲ್ಲಾ ವಸತಿ ಶಾಲೆಯ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಜ್ಜಿ ಸಮಸ್ಯೆ ಈಗಲೂ ಉಳಿದಿದೆ. ಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಸೂಕ್ತ ಸವಲತ್ತು ಆಡಳಿತ ವರ್ಗದ ಬೇಜವಾಬ್ದಾರಿಯಿಂದ ಸಿಗುವುದಿಲ್ಲ. ಶಿಕ್ಷಕರ
ಕೊರತೆ ಕೂಡ ಪ್ರಮುಖ ಸಮಸ್ಯೆಗಳಲ್ಲೊಂದು. ಹಲವು ಹೆಸರಿನಲ್ಲಿರುವ ವಸತಿ ಶಾಲೆಗಳಿಗೆ ಹರಿದು ಹಂಚಿ
ಹೋಗುವ ಸಂಪನ್ಮೂಲವನ್ನು ಕೇಂದ್ರೀಕರಿಸಿ, ಸುಸಜ್ಜಿತ ಕಟ್ಟಡ ಇರುವ ಒಂದೆರಡು ವಸತಿ ಶಾಲೆಗಳ ಜೊತೆ
ಇನ್ನುಳಿದ ಶಾಲೆಗಳನ್ನು ವಿಲೀನಗೊಳಿಸಿದರೆ, ವಿಷಯಕ್ಕನುಗುಣವಾಗಿ ಮತ್ತು ವಿದ್ಯಾರ್ಥಿಗನುಗುಣವಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಿಸಬಹುದು. ಇದರಿಂದ ಸರ್ಕಾರದ ವೆಚ್ಚ ಕೂಡ ಕಡಿಮೆಯಾಗುತ್ತದೆ. ವಸತಿ ಶಾಲೆ ಪ್ರವೇಶಕ್ಕೆ ಯಾವಾಗ ಅರ್ಜಿ ಕರೆಯುತ್ತಾರೆ ಎಂದು ವಿದ್ಯಾರ್ಥಿಗಳು ಕಾಯುವಂತಾಗಬೇಕೆ ವಿನಾ ಯಾವಾಗ ಮಕ್ಕಳು ವಸತಿ ಶಾಲೆಗೆ ಅರ್ಜಿ ಸಲ್ಲಿಸುತ್ತಾರೆ ಎಂದು ಶಿಕ್ಷಕರು ಕಾಯುವಂತೆ ಆಗಬಾರದು.

- ಸೋಮಶೇಖರ ಯು.ಟಿ.ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT