ಶನಿವಾರ, ಮೇ 8, 2021
27 °C

‘ವರ್ಷ ತೊಡಕು’ ಹಿಂದಿದೆ ರಹಸ್ಯ!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಯುಗಾದಿ ಮರುದಿನದ ‘ವರ್ಷ ತೊಡಕು’ಗಾಗಿ ಮಾಂಸದಂಗಡಿಗಳ ಮುಂದೆ ಕಿ.ಮೀ. ದೂರದಿಂದ ಜನ ಸರದಿಯಲ್ಲಿ ನಿಂತಿದ್ದ ಬಗ್ಗೆ ವರದಿಯಾಗಿದೆ (ಪ್ರ.ವಾ., ಏ. 15). ವರ್ಷ ತೊಡಕು ಎಂಬ ಪದವು ‘ವರ್ಷ ತೊಡಗು’, ‘ಹೊಸ್ತಡಕು’, ‘ವರ್ಷ ತಡಕು’ ಮೊದಲಾದ ರೂಪಗಳಲ್ಲಿ ಬಳಕೆಯಲ್ಲಿದೆ. ಆಡುನುಡಿಯಲ್ಲಿ ಇವುಗಳಿಗೆ ತಮ್ಮದೇ ರೀತಿ ಅರ್ಥ ಸಮರ್ಥನೆಗಳನ್ನೂ ಕೆಲವರು ಕೊಟ್ಟುಕೊಳ್ಳುತ್ತಾರೆ. ಹೊಸ ವರ್ಷದಲ್ಲಿ ತೊಡಗುವುದರಿಂದ ವರ್ಷ ತೊಡಗು ಎಂದೂ ಮರುದಿನವೂ ಹೋಳಿಗೆ ಸಿಕ್ಕೀತೇ ಎಂದು ‘ತಡಕು’ವುದರಿಂದ ವರ್ಷ ತಡಕು ಎಂದೂ ಕೆಲವರು ವಿವರಿಸುವುದುಂಟು. ಆದರೆ ಈ ಯಾವ ರೂಪಗಳೂ ಭಾಷಿಕವಾಗಿ ಸರಿಯಾದುವಲ್ಲ. ರಾಜ್ಯದ ವಿವಿಧ ಸಮುದಾಯ, ಪ್ರದೇಶಗಳ ಆಚಾರ ಸಂಪ್ರದಾಯಾದಿಗಳನ್ನು ಹಲವು ದಶಕಗಳಿಂದ ಅಧ್ಯಯನ ಮಾಡಿದ, ಕಾಲೇಜುಗಳಲ್ಲಿ ಭಾಷೆ, ಸಾಹಿತ್ಯವನ್ನೂ ಬೋಧಿಸಿದ ಅನುಭವದ ನನಗೆ ಅರಿವಾಗಿರುವುದೆಂದರೆ, ಭಾಷೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಇದರ ಸರಿ ರೂಪ ಹೊಸತು + ಅಡಗು ಅಥವಾ ವರ್ಷದಡಗು ಎಂಬುದು.

ಹಳೆಗನ್ನಡದಲ್ಲಿ ಅಡಗು ಎಂದರೆ ಬಾಡು ಅಥವಾ ಮಾಂಸ. ಯುಗಾದಿಯಂದು ಸಿಹಿಯೂಟ ಸವಿದ ಮೇಲೆ ಮಾಂಸಾಹಾರ ಪ್ರಿಯರಿಗೆ ಮಾರನೇ ದಿನ ಮೀಸಲಾಯಿತು. ಸಿಹಿ ಖಾರಗಳೆರಡೂ ವರ್ಷಪೂರ್ತಿ ದೊರಕಲೆಂಬ ಆಶಯ ಇದರದು. ಆದರೆ ಅನೇಕರಿಗೆ ಹಣ ಕೊಟ್ಟು ಮಾಂಸ ಖರೀದಿಯ ಸಾಮರ್ಥ್ಯ ಇರಲಿಲ್ಲ. ಊರೆಲ್ಲಕ್ಕೂ ಮಾಂಸ ಒದಗಿಸಬೇಕಾದ ಅಗತ್ಯವೂ ಕೆಲವೆಡೆ ಇತ್ತು. ಅಂತೆಯೇ ಯುಗಾದಿಯ ಮಾರನೆಯ ಮುಂಜಾನೆ ಊರ ದೇವರ ಹೆಸರಲ್ಲಿ ಪಕ್ಕದ ಕಾಡು ಮೇಡಿಗೆ ಗಂಡಸರೆಲ್ಲಾ ಹೋಗಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ತಂದು, ದೇವರಿಗೂ ಒಪ್ಪಿಸಿ ಎಲ್ಲರೂ ಹಂಚಿಕೊಳ್ಳುವ ಸಂಪ್ರದಾಯ ಬೆಳೆಯಿತು. ಕಾಡುಪ್ರಾಣಿಗಳ ಸಂತತಿ ನಿಯಂತ್ರಣದ ಆಶಯವೂ ಇದರಲ್ಲಿದೆ. ಈಗಲೂ ಅನೇಕ ಊರುಗಳಲ್ಲಿ ಈ ಆಚರಣೆ ಇದೆ. ಅಂದರೆ ಹೊಸ ವರ್ಷದ ಆರಂಭದಲ್ಲಿ ಸೇವಿಸುವ ಅಡಗು ಎಂಬುದೇ ಕಾಲಾಂತರದಲ್ಲಿ ಅವರವರಿಗೆ ತೋಚಿದ ರೂಪದ ಅಪಭ್ರಂಶಗಳಾಗಿವೆ. ಇದು ಮಾಂಸ ಪ್ರಧಾನವಾದುದೆಂಬುದನ್ನು ಗ್ರಹಿಸಿದರೆ ಮಿಕ್ಕದ್ದು ತಾನೇ ಅರ್ಥವಾಗುತ್ತದೆ.

ಬುದ್ಧಿವಂತರು ಎನಿಸಿಕೊಂಡವರು ಇನ್ನಾದರೂ ಈ ಸರಿ ರೂಪ ಬಳಸಿದರೆ ಜನಸಾಮಾನ್ಯರೂ ಅದನ್ನು ಒಪ್ಪಿ ಬಳಸುತ್ತಾರೆ. ಸಾವಿರಾರು ವರ್ಷಗಳ ಹಿಂದಿನ ಹಳಗನ್ನಡದ ಅಪ್ಪಟ ಕನ್ನಡ ಪದವೊಂದು ನಮ್ಮೊಂದಿಗೆ ಜೀವಂತ ಉಳಿಯುವಂತಾಗುತ್ತದೆ ಅಲ್ಲವೇ?

- ಡಾ. ಟಿ.ಗೋವಿಂದರಾಜು, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.