ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 01 ಏಪ್ರಿಲ್ 2023 ಶನಿವಾರ

Last Updated 31 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಮನಸೋಇಚ್ಛೆ ಶುಲ್ಕ ಹೆಚ್ಚಳ ಸಲ್ಲ

ಪ್ರಸ್ತುತ ದಿನಮಾನಗಳಲ್ಲಿ ವ್ಯಾಪಾರಿ ಕೇಂದ್ರಗಳಾಗಿರುವ ಶಿಕ್ಷಣ ಸಂಸ್ಥೆಗಳು, ಶಿಕ್ಷಣದ ಹೆಸರಿನಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. 2023-24ನೇ ಸಾಲಿನ ಪ್ರವೇಶಕ್ಕೆ ಗರಿಷ್ಠ ಶೇ 15ಕ್ಕಿಂತ ಜಾಸ್ತಿ ಶುಲ್ಕವನ್ನು ಹೆಚ್ಚಳ ಮಾಡದಂತೆ ‘ಕ್ಯಾಮ್ಸ್’ ಸೂಚನೆ ನೀಡಿತ್ತು. ಆದರೆ ಈ ಸೂಚನೆಯನ್ನು ಲೆಕ್ಕಿಸದೇ ಶಾಲೆಗಳು ತಮಗೆ ಇಷ್ಟ ಬಂದಂತೆ ಶುಲ್ಕ ಹೆಚ್ಚಳ ಮಾಡುತ್ತಿವೆ. ಪ್ರತಿವರ್ಷ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗುತ್ತಿದೆ. ಇದರ ಜೊತೆಗೆ ಶಾಲೆಗಳು ಶೇ 30ರಿಂದ 40ರಷ್ಟು ಶುಲ್ಕ ಹೆಚ್ಚಳ ಮಾಡಿದರೆ ಹೇಗೆ?

ಪೋಷಕರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ’ ಎಂದು ಹೈಕೋರ್ಟ್ ನೀಡಿರುವ ತೀರ್ಪನ್ನೇ ಅಸ್ತ್ರವಾಗಿಟ್ಟುಕೊಂಡಿವೆ. ಈ ಒಂದು ಏಕೈಕ ಕಾರಣಕ್ಕೆ ಖಾಸಗಿ ಶಾಲೆಗಳು ತಮಗೆ ಇಷ್ಟ ಬಂದಂತೆ ಶುಲ್ಕ ಹೆಚ್ಚಳ ಮಾಡುವುದು ಎಷ್ಟು ಸರಿ? ಸರ್ಕಾರ ಕೂಡಲೇ ಗಮನಹರಿಸಿ ಶುಲ್ಕ ಹೆಚ್ಚಳ ಮಾಡದಂತೆ ನೋಡಿಕೊಳ್ಳಬೇಕು.

ರಾಜ ಮುಗಲಳ್ಳಿ, ಉಜ್ಜಯಿನಿ, ವಿಜಯನಗರ

ಅಧಿಕಾರಸ್ಥರ ಪ್ರಶ್ನಿಸಲು ಹಿಂಜರಿಕೆ?

ಈಗ, ಉದ್ಯೋಗಿಗಳು 60 ವಯಸ್ಸಿಗೆ ನಿವೃತ್ತರಾಗುತ್ತಾರೆ. ನ‌ರೇಂದ್ರ ಮೋದಿ ಅವರು ತಮ್ಮ 63ನೇ ವಯಸ್ಸಿನಲ್ಲಿ‌ ಪ್ರಧಾನಿಯಾದರು. ಆಗ, ಪಕ್ಷದಲ್ಲಿ ಇರುವವರು 70 ವಯಸ್ಸಿಗೆ ಅಧಿಕಾರವನ್ನು ತ್ಯಜಿಸಬೇಕೆಂದು ಬಿಜೆಪಿ ವರಿಷ್ಠರು ಅನೌಪಚಾರಿಕವಾಗಿ ಸೂಚನೆ ರವಾನಿಸಿದ್ದರು. ಅದರಂತೆ,‌ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ಅವರು ತಮಗೆ 70 ವರ್ಷ ತುಂಬಿದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆದರೆ, ಕರ್ನಾಟಕದಲ್ಲಿ ಯಡಿಯೂರಪ್ಪನವರು ಅಧಿಕಾರ‌ ತ್ಯಜಿಸಿದ್ದು 78 ವರ್ಷವಾದಾಗ.

ವಿರೋಧ ಪಕ್ಷದಲ್ಲಿ ಇರುವವರಿಗಂತೂ ಈ ನಿವೃತ್ತಿ ವಯಸ್ಸು ಅನ್ವಯವಾಗುವುದಿಲ್ಲ. ಏಕೆಂದರೆ ಈ ಬಗ್ಗೆ ಚರ್ಚಿಸಲೂ ಅವರಿಗೆ ಹೆದರಿಕೆ. ಆರ್‌ಎಸ್‌ಎಸ್‌ನ ಸರಸಂಘ ಚಾಲಕ ಮೋಹನ ಭಾಗವತ್ ಮತ್ತು ಮೋದಿ 72 ವಸಂತಗಳನ್ನು ತಲುಪಿದ್ದಾರೆ. ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ ಅವರು 90ರ ಅಂಚಿನಲ್ಲಿದ್ದಾರೆ. ಹೀಗಿರುವಾಗ, ವಾಕ್ ಸ್ವಾತಂತ್ರ್ಯವಿದ್ದರೂ ಪ್ರತಿಯೊಂದು ಪಕ್ಷದಲ್ಲಿಯೂ ಅಧಿಕಾರಸ್ಥರ ಬಗ್ಗೆ, ಅವರ ನಂತರ ಯಾರು ಎಂಬ ಬಗ್ಗೆ ಪ್ರಶ್ನಿಸಲು ಉಳಿದವರು ಹೆದರುತ್ತಿರುವುದೇಕೆ?

ಕೆ.ಜೆ.ಸುಚಿನ್‌ ಆಸೂರಿ, ಬೆಂಗಳೂರು

ಹೊರೆ ಹೊತ್ತ ಕತ್ತೆಯ ಮೇಲೆ ಇನ್ನಷ್ಟು ಭಾರ!

ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರುವಂತೆ, ಅಗತ್ಯ ಔಷಧಗಳ ಬೆಲೆಯನ್ನು ಶೇ 12.12ರವರೆಗೆ ಏರಿಕೆ ಮಾಡಲು ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರ ಅವಕಾಶ ನೀಡಿರುವುದು, ಹೊರಲಾರದ ಹೊರೆ ಹೊತ್ತಿರುವ ಕತ್ತೆಯ ಮೇಲೆ ಇನ್ನಷ್ಟು ಹೊರೆ ಹೊರಿಸಿದಂತಾಗಿದೆ. ಜನಸಾಮಾನ್ಯರಿಗೆ ಇದನ್ನು ತಡೆಯುವ ಯಾವ ಅಧಿಕಾರ ಇದೆ? ಯಾರ ಬಳಿ ಕಷ್ಟ ತೋಡಿಕೊಳ್ಳುವುದು? ಬೆಳಗಿನಿಂದ ಸಂಜೆಯವರೆಗೆ ದುಡಿಯುವ ಕೂಲಿಕಾರನಿಗೆ, ಇಂತಿಷ್ಟೇ ಕೂಲಿ ಕೊಡಿ ಎನ್ನುವ ಧೈರ್ಯವಿಲ್ಲ, ಕೊಟ್ಟದ್ದನ್ನು ಪಡೆಯಬೇಕು. ತಿಂಗಳೆಲ್ಲಾ ದುಡಿದು ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವ ನೌಕರರು, ಅವರು ಕೊಟ್ಟದ್ದನ್ನೇ ಪಡೆಯಬೇಕು. ರೈತರು ಉತ್ಪಾದನೆ ಮಾಡುವ ರಾಗಿ, ಭತ್ತ, ಜೋಳ, ಕಾಳು, ತರಕಾರಿಗೆ ಬೆಲೆ ನಿರ್ಧರಿಸುವ ಅಧಿಕಾರ ರೈತರಿಗಿಲ್ಲ. ವ್ಯಾಪಾರಿಗಳು ಬೆಲೆ ಕಟ್ಟುತ್ತಾರೆ, ಅದೇ ಬೆಲೆಗೆ ನಾವೇ ಕೊಳ್ಳಬೇಕು ಮತ್ತು ಆ ಬೆಲೆಗೇ ಜಿಎಸ್‌ಟಿ ಕಟ್ಟಬೇಕು.

ವೈದ್ಯರ ಮುಂದೆ ಕುಳಿತುಕೊಳ್ಳುವ ರೋಗಿಗಳಿಗೆ ಯಾವ ಸ್ವಾತಂತ್ರ್ಯ ಇದೆ? ಅವರು ಒಡ್ಡುವ ಎಲ್ಲಾ ಪರೀಕ್ಷೆಗಳಿಗೂ ಒಳಗಾಗಿ, ಔಷಧ ನೀಡುವ ಮೊದಲೇ ಸಾವಿರಾರು ರೂಪಾಯಿಯನ್ನು ತಪಾಸಣೆಗಾಗಿ ಕೊಡಬೇಕು. ಯಾವ ಯಾವ ತಪಾಸಣೆಗೆ ಎಷ್ಟೆಷ್ಟು ಬೆಲೆ ಎಂದು ತಿಳಿಸುವ ಬೋರ್ಡು ಯಾವ ಆಸ್ಪತ್ರೆಗಳಲ್ಲೂ ಇಲ್ಲ. ಇಂತಹ ಎಲ್ಲಾ ಕಡೆಗಳಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಿ ಬೆಲೆ ಇಳಿಸಬೇಕಾಗಿರುವ ಸರ್ಕಾರವೇ ಬೆಲೆ ಏರಿಸುವವರ ಪರ ನಿಂತಿದೆ. ಯಾರದೋ ಸುಖಕ್ಕಾಗಿ ಇನ್ನಾರನ್ನೋ ದುಡಿಸುವ ವ್ಯವಸ್ಥಿತ ಪಿತೂರಿಯಲ್ಲಿ ನಾವಿದ್ದೇವೆ. ನಾವು ಮತ ಕೊಟ್ಟು ಗೆಲ್ಲಿಸಿದ ನಮ್ಮ ಸರ್ಕಾರಗಳೇ ನಮ್ಮ ಕಷ್ಟದ ಸಮಯದಲ್ಲಿ ದೂರ ಉಳಿದರೆ, ಬಡವರ ಬದುಕಿಗೆ ಸಹಾಯ ಮಾಡುವವರು ಯಾರು? ಹರ ಕೊಲ್ಲಲ್, ಪರ ಕಾಯ್ವನೆ?

ತಾ.ಸಿ.ತಿಮ್ಮಯ್ಯ, ಬೆಂಗಳೂರು

ಚುನಾವಣೆಯೆಂಬ ಹಬ್ಬವನ್ನು ಸಂಭ್ರಮಿಸೋಣ...

ರಾಜಕಾರಣಿಗಳು ನುಡಿದಂತೆ ನಡೆಯುವುದಿಲ್ಲ, ಮೋಸ ಮಾಡುತ್ತಾರೆ, ರಾಜಕಾರಣವೇ ಸರಿಯಿಲ್ಲ ಎಂಬಂತಹ ಮಾತುಗಳು ಕೇಳಿಬರುವುದು ಸಾಮಾನ್ಯ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ‘ಮತ’ ಎಂಬ ಬ್ರಹ್ಮಾಸ್ತ್ರ ನಮ್ಮ ಕೈಯಲ್ಲಿ ಇದ್ದರೂ ಅದನ್ನು ಸರಿಯಾಗಿ ಬಳಸದೇ ಇರುವುದು ನಮ್ಮ ತಪ್ಪು ತಾನೇ? ರಾಜಕಾರಣಿಗಳ ಬಗ್ಗೆ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್, ‘ಸದಾ ಒಂದು ಸಮೂಹ ಹಾಗೂ ಸಮಾಜದ ಜನರನ್ನು ಒಂದು ಸಿದ್ಧಾಂತ ಹಾಗೂ ನಂಬಿಕೆಯೆಡೆಗೆ ಕೇಂದ್ರೀಕರಿಸಲು ರಾಜಕಾರಣಿಗಳು ಹೆಣಗುತ್ತಾರೆ. ಎಷ್ಟು ದಿನ ಒಂದು ನಂಬಿಕೆಯನ್ನು ಜೀವಂತವಾಗಿಡಲು ಸಾಧ್ಯವೋ ಅಷ್ಟು ದಿನ ಅದು ಆ ರಾಜಕಾರಣಿಯ ಯಶಸ್ಸು. ಇಲ್ಲಿ ಯಶಸ್ವಿಯಾದವನು ಜನರಿಗೆ ಒಳ್ಳೆಯದು ಮಾಡುತ್ತಾನೆ ಎಂದಲ್ಲ, ತನಗಂತೂ ಖಂಡಿತವಾಗಿಯೂ ಒಳ್ಳೆಯದು ಮಾಡಿಕೊಳ್ಳುತ್ತಾನೆ. ರಾಜಕಾರಣಿಗಳಿಂದ ಜನರಿಗೆ ಒಳ್ಳೆಯದಾಗುತ್ತದೆ ಎಂಬುದು ಭ್ರಮೆ’ ಎಂದು ಬಹಳಷ್ಟು ಹಿಂದೆಯೇ ಹೇಳಿದ್ದ. ಅಂದಿನ ಮಾತು ಇಂದಿಗೂ ನಿಜವೆನಿಸುತ್ತದೆ.

ಇನ್ನು, ನನ್ನ ಒಂದು ಮತದಿಂದ ಏನು ತಾನೇ ಬದಲಾವಣೆ ಸಾಧ್ಯ ಎಂದು ಕೆಲವರು ಮತದಾನವನ್ನೇ ಮಾಡುವುದಿಲ್ಲ. ಈ ಹಿಂದಿನ ಚುನಾವಣೆಯಲ್ಲಿ, ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನವಾಗಿದ್ದು ವರದಿಯಾಗಿತ್ತು. ಇದನ್ನು ಗಮನಿಸಿದಾಗ, ಅಕ್ಷರಸ್ಥರೆಂದು ಕರೆಸಿಕೊಳ್ಳುವ ಯುವಜನತೆ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಂತಹವರು ಮತದಾನ ಮಾಡದಿದ್ದರೆ ಅಕ್ಷರಸ್ಥರಾಗಿಯೂ ಪ್ರಯೋಜನವೇನು? ಈ ಬಾರಿ ಪ್ರತಿಯೊಬ್ಬ ಅರ್ಹ ಪ್ರಜೆಯೂ ಮತದಾನ ಮಾಡುವ ಮೂಲಕ ಚುನಾವಣೆಯೆಂಬ ಹಬ್ಬವನ್ನು ಸಂಭ್ರಮಿಸೋಣ.

ಆನಂದ ಜೇವೂರ್, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT