ಗುರುವಾರ , ಮಾರ್ಚ್ 23, 2023
32 °C

ವನ್ಯಜೀವಿ ಬೇಟೆ: ವ್ಯಾಪಕ ಜಾಗೃತಿ ಅಗತ್ಯ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಈಚೆಗೆ ಒಂದು ಮುಂಜಾನೆ ಹೊಲದಲ್ಲಿದ್ದಾಗ, ನೂರಾರು ಕೂಲಿಕಾರ್ಮಿಕರು ದೂರದಲ್ಲಿ ಏನೋ ಗಲಾಟೆ ಮಾಡುತ್ತಿದ್ದರು. ಅದೇನೆಂದು ನೋಡಹೋದರೆ, ಅವರೆಲ್ಲ ಸೇರಿ ಒಂದು ಮೊಲವನ್ನು ಅಟ್ಟಾಡಿಸಿ ಹಿಡಿಯಲು ಪ್ರಯತ್ನಿಸುತ್ತಾ ಆ ಬಡಪಾಯಿಯ ಮೇಲೆ ಹಾರೆ, ಗುದ್ದಲಿಗಳನ್ನು ಎಸೆದು ಕೊಲ್ಲಲು ಪ್ರಯತ್ನಿಸುತ್ತಿದ್ದರು. ಅವರ ರಣಕೇಕೆಯ ನಡುವೆ ‘ನಿಲ್ಲಿ’ ಎಂಬ ನನ್ನ ಸಣ್ಣ ಕೂಗು ಯಾರೊಬ್ಬರಿಗೂ ಕೇಳಲಿಲ್ಲ. ಮೊಲ ಬರ್ಬರವಾಗಿ ಬೇಟೆಯಾಗಿ‌ ಹೋಯಿತು. ಆ ಕೂಲಿಕಾರ್ಮಿಕರಿಗೆ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಿದರೂ ಅವರು ಕೇಳಲಿಲ್ಲ, ಅರಣ್ಯ ಇಲಾಖೆಗೆ ದೂರು‌‌ ಕೊಡುತ್ತೇನೆಂದು ಎಚ್ಚರಿಸಿದರೂ ಜಗ್ಗಲಿಲ್ಲ.

ಇಂತಹ ಹಲವು ಘಟನೆಗಳು ನಮ್ಮ ಸುತ್ತಲೂ ಪ್ರತಿದಿನ ನಡೆಯುತ್ತಲೇ ಇವೆ. ಇವುಗಳನ್ನು ತಡೆಯುವ ಪ್ರಯತ್ನಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ವನ್ಯಜೀವಿಗಳನ್ನು ರಕ್ಷಿಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ, ಅದು ಸಾರ್ವಜನಿಕರೆಲ್ಲರ ಕರ್ತವ್ಯ. ಜೊತೆಗೆ ಗ್ರಾಮೀಣ ಮಟ್ಟದಲ್ಲಿ ವನ್ಯಜೀವಿ ಬೇಟೆಯ ವಿರುದ್ಧ ವ್ಯಾಪಕ ಪ್ರಚಾರ, ಬೇಟೆಗಾರರಿಗೆ ಕಠಿಣ ಶಿಕ್ಷೆಯಾಗಬೇಕಿದೆ. ಈ ಕೆಲಸವನ್ನು ಆಯಾ ಗ್ರಾಮದ ಗ್ರಾಮ ಪಂಚಾಯಿತಿಗಳಿಗೆ ವಹಿಸುವುದು ಸೂಕ್ತ. ‌ಒಂದೆಡೆ ಅಜ್ಞಾನ, ಮತ್ತೊಂದೆಡೆ ಕಾನೂನಿನ ಬಗ್ಗೆ ಅಗೌರವ, ಉದಾಸೀನದಿಂದ ತುಂಬಿರುವವರನ್ನು ಸರಿದಾರಿಗೆ ತರುವ ಪ್ರಯತ್ನಗಳು ನಡೆಯಬೇಕು. ಆಗಮಾತ್ರ ವನ್ಯಜೀವಿಗಳ ಮಾರಣಹೋಮ ನಿಲ್ಲಲು ಮತ್ತು ಆ ಮೂಲಕ ಪರಿಸರ ಸಮತೋಲನ ಸಾಧಿಸಲು ಸಾಧ್ಯ.

- ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.