ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಐಟಿಐ ಅನುದಾನ ಮುಂದುವರೆಯಲಿ

ಅಕ್ಷರ ಗಾತ್ರ

ಕಳೆದ ಫೆಬ್ರುವರಿ ಅಧಿವೇಶನದಲ್ಲಿ ಕಾರ್ಮಿಕ ಸಚಿವರಾದ ಬಿ.ಎನ್. ಬಚ್ಚೇಗೌಡರು 443 ಖಾಸಗಿ ಐಟಿಐಗಳಿಗೆ ವೇತನ ಅನುದಾನ ಮುಂದುವರೆಸಲು ಬದ್ಧವೆಂದು ಹೇಳಿದ್ದು ಇದುವರೆಗೂ ಅದನ್ನು ಈಡೇರಿಸಿಲ್ಲ. ಹೀಗಾಗಿ  ಸುಮಾರು ಎರಡು ಸಾವಿರ ತಾಂತ್ರಿಕ ಹಾಗೂ ತಾಂತ್ರಿಕೇತರ  ಸಿಬ್ಬಂದಿ ಪರಿತಪಿಸುವಂತಾಗಿದೆ. ಏಕೆಂದರೆ  1997ರಲ್ಲಿ ಅಂದಿನ ಸರ್ಕಾರ  ಸುಮಾರು 104 ಐಟಿಐಗಳಿಗೆ ಅನುದಾನವನ್ನು ಕೊಟ್ಟು  ಏಳು ವರ್ಷ ಪೂರೈಸಿ ಮುಂದೆ  ಬರುವಂತಹ ಐಟಿಐಗಳಿಗೂ ಅನುದಾನ  ಕೊಡಲಾಗುವುದೆಂದು ಆದೇಶ ಹೊರಡಿಸಿತ್ತು.

ನಂತರ ಬಂದಂತಹ ಸರ್ಕಾರಗಳು ಕೂಡ 7 ವರ್ಷ ಪೂರೈಸಿದ ಐಟಿಐಗಳಿಗೆ ಆಗಾಗ ಅನುದಾನ ನೀಡುತ್ತ  ಬಂದಿದ್ದವು. ಪ್ರಾರಂಭದಲ್ಲಿ ಶೇ.75ರಷ್ಟು ಸರ್ಕಾರದ ಅನುದಾನವಿದ್ದು 2007ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ  ಶೇ.100ಕ್ಕೆ ಏರಿಸಿ ಐಟಿಐಗಳ ಹತ್ತಾರು ವರ್ಷದ ಬೇಡಿಕೆಯನ್ನು ಈಡೇರಿಸಿದರು.     

ಆದರೆ  2010ರಲ್ಲಿ ಬಿಜೆಪಿ ಸರ್ಕಾರ ಇದನ್ನು ಏಕಾಏಕಿ  ರದ್ದುಪಡಿಸಿತು!  ಖಾಸಗಿ ಐಟಿಐಗಳ ಸುಧಾರಣೆಗಿರುವಂಥ ಥಾಮಸ್ ಆಯೋಗದ ವರದಿಯನ್ನು ಸಹ ನೋಡಲಿಲ್ಲ.  ಐಟಿಐಗಳು  ಉದ್ಯೋಗಾಧಾರಿತ ತಾಂತ್ರಿಕ ತರಬೇತಿಯನ್ನು ನೀಡಿ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ 7ವರ್ಷದ ಬದಲಾಗಿ 5ವರ್ಷಕ್ಕೇ ಅನುದಾನ ಕೊಡುವಂತೆ ಥಾಮಸ್ ಆಯೋಗ ಶಿಫಾರಸು ಮಾಡಿದೆ. ಕಳೆದ ವರ್ಷ ಮಾನವೀಯ ನೆಲೆಗಟ್ಟಿನಲ್ಲಿಯೇ 718 ಪ್ರಾಥಮಿಕ, ಪ್ರೌಢಶಾಲೆಗಳಿಗೆ ಅನುದಾನ ಕೊಟ್ಟಂತಹ ಉದಾಹರಣೆಯಿದ್ದು ಐಟಿಐ ವಿಷಯದಲ್ಲಿ ಮಾತ್ರ ತಾರತಮ್ಯ ಮಾಡಲಾಯಿತು.

ಈ ಹಿಂದೆ ಸಂಘಸಂಸ್ಥೆಗಳು ಐಟಿಐ ಸ್ಥಾಪಿಸಲು, ತಾಂತ್ರಿಕ ಸಿಬ್ಬಂದಿಗಳು ಕೆಲಸ ಮಾಡಲು ಹಿಂದಿನ  ಸರ್ಕಾರದ ಆದೇಶ ಪತ್ರವೇ ಕಾರಣವಾಗಿದೆ. ಪೂರ್ವಾಪರ ಯೋಚಿಸದೇ ಕೈಗೊಂಡ ನಿರ್ಧಾರ ಇದಾಗಿದ್ದರಿಂದ ಮುಂದೆ  ಸದನದಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಕಾರ್ಮಿಕ ಸಚಿವರು ಸದನಕ್ಕೆ ಭರವಸೆ ಕೊಟ್ಟಿದ್ದು ಇಂದಿಗೂ ಭರವಸೆಯಾಗಿಯೇ ಉಳಿದಿದೆ. ಇನ್ನಾದರೂ ಸರ್ಕಾರ ಮೀನಮೇಷ ಎಣಿಸುವುದನ್ನು ಕೈಬಿಟ್ಟು ಅನುದಾನ ಮುಂದುವರೆಸುವಂಥ ತೀರ್ಮಾನ ಕೈಗೊಳ್ಳುವುದು ಸೂಕ್ತ ಹಾಗೂ ನ್ಯಾಯಸಮ್ಮತವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT