ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಳೆ ಹಾಗೂ ಅಪೌಷ್ಟಿಕತೆ

Last Updated 18 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಗ್ರಾಹಕರಿಗೆ ಬಿಸಿ ಮುಟ್ಟಿಸಿತು. ಈಗ  ಬೇಳೆಕಾಳುಗಳು ಸುದ್ದಿ ಮಾಡಿವೆ. ಬೆಲೆ ಹೆಚ್ಚಾಗಲು ಮೂಲ ಕಾರಣ ಕಡಿಮೆ ಇಳುವರಿ, ಹಸಿರುಕ್ರಾಂತಿ ಬೆಂಬಲಿತ ಆಹಾರ ಬೆಳೆಗಳಿಗೆ ಪ್ರೋತ್ಸಾಹ ಹಾಗೂ ದಲ್ಲಾಳಿಗಳ ಹಿಡಿತ. ನಮ್ಮ ದೇಹಕ್ಕೆ ಬೇಕಾದ ಪ್ರೋಟಿನ್ ಅಂಶ ಹೆಚ್ಚಾಗಿ ಬೇಳೆಕಾಳುಗಳಿಂದಲೇ ಸಿಗುತ್ತದೆ. ಇದರ ಹೊರತಾಗಿ ಹಾಲು, ಮೊಟ್ಟೆ ಹಾಗೂ ಮಾಂಸದಿಂದಲೂ ಪ್ರೋಟಿನ್  ಅಂಶ ಸಿಗುತ್ತದೆ. 100 ಗ್ರಾಂ ಬೇಳೆಕಾಳುಗಳಿಂದ 20ರಿಂದ 24 ಗ್ರಾಂ ಸಸಾರಜನಕ ಅಂದರೆ ಪ್ರೋಟಿನ್ ಸಿಗುತ್ತದೆ. ಆದರೆ ಅಷ್ಟೇ ಪ್ರಮಾಣದ ಮಾಂಸದಿಂದ 16ರಿಂದ 18 ಗ್ರಾಂ ಪ್ರೋಟಿನ್  ದೊರಕುತ್ತದೆ.

ಭಾರತದಲ್ಲಿ ಶೇಕಡ 40ರಷ್ಟು ಜನ ಸಸ್ಯಾಹಾರಿಗಳು, ಇದರಲ್ಲಿ ಶೇ 80ರಷ್ಟು ಜನರು ಬಡತನ ರೇಖೆಗಿಂತ ಕೆಳಗಿನವರು. ಕಿತ್ತು ತಿನ್ನುವ ಬಡತನದಲ್ಲಿ ಕೆ.ಜಿ.ಗೆ ₹ 180 ಕೊಟ್ಟು ಬೇಳೆಕಾಳು ಖರೀದಿಸಲು ಕಷ್ಟಸಾಧ್ಯ. ಹಾಗಾಗಿ ಮತ್ತೆ ಅಪೌಷ್ಟಿಕತೆ ಪೆಡಂಭೂತ ಕಾಡುತ್ತದೆ. ರಾಜ್ಯದಲ್ಲಿ ಈ ವರ್ಷ ಸರಾಸರಿಗಿಂತ ಶೇ 8ರಷ್ಟು ಮಳೆ ಕಡಿಮೆ ಆಗಿದೆ. ಆದರೆ ಬೇಳೆಕಾಳು ಬೆಳೆಯುವ ಪ್ರದೇಶದಲ್ಲಿ ಶೇ 33ರಷ್ಟು ಮಳೆ ಕಡಿಮೆ ಆಗಿದೆ. ಆದಕಾರಣ ಇಳುವರಿ ಕಡಿಮೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಹೆಚ್ಚಾಗಿ ಬೇಳೆ ಕಾಳುಗಳನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗಿದೆ. ಬೇಳೆ ಕಾಳುಗಳಲ್ಲಿ ಪ್ರಮುಖವಾದವು ತೊಗರಿ, ಹೆಸರು, ಉದ್ದು, ಕಡಲೆ, ಅಲಸಂದಿ ಹಾಗೂ ಹುರುಳಿ. ಮಳೆಯಾಶ್ರಿತ ಬೆಳೆಗೆ ಸರಿಯಾದ ಕೃಷಿನೀತಿಗಳು ಇಲ್ಲ ಹಾಗೂ ಕೆಲ ಕಾರ್ಯಕ್ರಮಗಳು ಇದ್ದರೂ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಬೇಳೆ ಕಾಳುಗಳ ಕೊರತೆಗೆ ಹಸಿರು ಕ್ರಾಂತಿ ಯೋಜನೆ ಕೂಡ ಒಂದು ಕಾರಣ. ನಮ್ಮ ಬಹುತೇಕ ಕೃಷಿ ಸಂಶೋಧನೆಗಳು ನೀರಾವರಿ ಹಾಗೂ ಬಂಡವಾಳ ಆಧಾರಿತ ಬೆಳೆಗಳಿಗೆ ಸೀಮಿತವಾಗಿವೆ.

ಇದರಿಂದ ಹಸಿರುಕ್ರಾಂತಿ ಬೆಂಬಲಿತ ಬೆಳೆಗಳ ವಿಸ್ತೀರ್ಣ ಅಧಿಕವಾಯ್ತು. ರಾಜ್ಯದಲ್ಲಿ 1960–61ರ  ಸಮಯದಲ್ಲಿ ಭತ್ತದ ಬೆಳೆ ವಿಸ್ತೀರ್ಣ 10.28 ಲಕ್ಷ ಹೇಕ್ಟೇರ್, ಆದರೆ 2010–11ರಲ್ಲಿ 15.36 ಲಕ್ಷ ಹೆಕ್ಟೇರ್‌ಗೆ ಹಿಗ್ಗಿದೆ. ಅದೇ ರೀತಿ ಮೆಕ್ಕೆಜೋಳ ಬೆಳೆಯಲ್ಲಿ 1960–61ರಲ್ಲಿ 0.11 ಲಕ್ಷ ಹೆಕ್ಟೇರ್, 2010–11ರಲ್ಲಿ 12.87 ಲಕ್ಷ ಹೆಕ್ಟೇರ್ ಆಗಿದೆ. ಈ  ಅವಧಿಯಲ್ಲಿ  ಮೇಲೆ ಹೇಳಿದ ಎರಡು ಬೆಳೆಯಲ್ಲಿ 17.87 ಲಕ್ಷ ಹೆಕ್ಟೇರ್‌ನಷ್ಟು ವಿಸ್ತೀರ್ಣ ಹಿಗ್ಗಿದೆ. ಬಹುತೇಕವಾಗಿ ಹಿಗ್ಗಿದ  ಪ್ರದೇಶಗಳು ನಮ್ಮ ಮೂಲ ಬೆಳೆಗಳಾದ ಬೇಳೆಕಾಳುಗಳು ಹಾಗು ಸಿರಿಧಾನ್ಯಗಳು ಬೆಳೆಯುವ ಪ್ರದೇಶಗಳಾಗಿದ್ದವು. 

ಒಂದು ಕಡೆ ಮುಂದಿನ ಐದು ವರ್ಷಕ್ಕೆ ಬೇಕಾದ ಸಕ್ಕರೆ ದಾಸ್ತಾನು ಗೋದಾಮುಗಳಲ್ಲಿ ಕೊಳೆಯುತ್ತಿದೆ. ಇತ್ತ ಕಡೆ ನಮಗೆ ಬೇಕಾಗುವಷ್ಟು ಬೇಳೆಕಾಳುಗಳ ಇಳುವರಿ ಆಗುತ್ತಿಲ್ಲ. ಅಪೌಷ್ಟಿಕತೆಯ ಮೂಲ ಬಡತನ ಅಲ್ಲ. ಬದಲಾಗಿ ಕೆಟ್ಟ ಕೃಷಿ ನೀತಿಗಳು. ಬೆಳೆಗಳ ಅಸಮಾನತೆ ಹೋಗಲಾಡಿಸಬೇಕು. ನಮ್ಮ ಭವ್ಯ ಭಾರತ ಕಟ್ಟಲು ಬೇಕಾದ ಆಹಾರದ ಉತ್ಪಾದನೆ ಸಮಗ್ರವಾಗಿ ಸುಧಾರಿಸಬೇಕು. ಹಸಿರುಕ್ರಾಂತಿ ಬೆಂಬಲಿತ ಆಹಾರ ಬೆಳೆಗಳನ್ನು ಕಡಿಮೆ ಮಾಡಿ, ಬೇಳೆಕಾಳು ಹಾಗೂ ಸಿರಿಧಾನ್ಯಗಳ ಉತ್ಪಾದಕತೆ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕೃಷಿ ನೀತಿಗಳನ್ನು ರೂಪಿಸಬೇಕು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT